ಗ್ಯಾನವಾಪಿ ಮಸೀದಿಯನ್ನು ʼದೇವಸ್ಥಾನʼ ಎಂದು ಗೂಗಲ್‌ಮ್ಯಾಪ್‌ ನಲ್ಲಿ ಗುರುತಿಸುವಂತೆ ಸೂಚಿಸಿದ ಬೆಂಗಳೂರಿನ ಶಾಲೆ

Update: 2022-05-24 11:01 GMT

ಬೆಂಗಳೂರು: ಗೂಗಲ್ ಮ್ಯಾಪ್ಸ್ ಗೆ ಹೋಗಿ ಅಲ್ಲಿ ಗ್ಯಾನವಾಪಿ ಮಸೀದಿಯು ಹೆಸರನ್ನು ಗ್ಯಾನವಾಪಿ ದೇವಸ್ಥಾನವೆಂದು ಬದಲಾಯಿಸಬೇಕೆಂದು ಬೆಂಗಳೂರಿನ ಖಾಸಗಿ ಶಾಲೆಯಾಗಿರುವ ನ್ಯೂ ಹೊರೈಝಾನ್ ಪಬ್ಲಿಕ್ ಸ್ಕೂಲ್ ತನ್ನ ಎಲ್ಲಾ ಹಳೆವಿದ್ಯಾರ್ಥಿಗಳಿಗೆ ಇಮೇಲ್ ಕಳುಹಿಸಿ ವಿವಾದಕ್ಕೀಡಾಗಿದೆ. ಮೇ 20ರಂದು ಈ ಇಮೇಲ್ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

Photo: Special Arrangement/ The Quint

"ಗೂಗಲ್ ಈ ಬದಲಾವಣೆಗಳನ್ನು ಅಪ್‍ಡೇಟ್ ಮಾಡುವ ತನಕ ನೀವು ಹಾಗೆ ಮಾಡಿ ಹಾಗೂ ಹಿಂದು ಸಹೋದರ ಸಹೋದರಿಯರಿಗೂ ಅಂತೆಯೇ ಮಾಡುವಂತೆ ಸೂಚಿಸಬೇಕು" ಎಂದು ಇಮೇಲ್‍ನಲ್ಲಿ ಬರೆಯಲಾಗಿದೆ. ಈ ಇಮೇಲ್ ಶೀರ್ಷಿಕೆಯಲ್ಲಿ ಕೂಡ "ಗ್ಯಾನವಾಪಿ ಮಸೀದಿ ಬದಲು ಗ್ಯಾನವಾಪಿ ದೇವಸ್ಥಾನ" ಎಂದು ಬರೆಯಲಾಗಿದೆ. ಉತ್ತರ ಪ್ರದೇಶದ ವಾರಣಾಸಿಯ ಗ್ಯಾನವಾಪಿ ಮಸೀದಿ ಸುತ್ತ ಇತ್ತೀಚೆಗೆ ಹುಟ್ಟಿಕೊಂಡಿರುವ ವಿವಾದದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಇನ್ನಷ್ಟು ಕುತೂಹಲ ಕೆರಳಿಸಿದೆ.

ಆದರೆ ಈ ಇಮೇಲ್ ಸ್ವೀಕರಿಸಿದ ಶಾಲೆಯ ಹಲವು ಹಳೆವಿದ್ಯಾರ್ಥಿಗಳು ಆಘಾತ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.

ಈ ಶಾಲೆ ಈ ಹಿಂದೆ ರಾಮ ಮಂದಿರ ಟ್ರಸ್ಟ್ ಗೆ ದೇಣಿಗೆ ನೀಡಿತ್ತಲ್ಲದೆ,  ರಾಮ ಮಂದಿರಕ್ಕೆ ಭೂಮಿಪೂಜೆ ನಡೆದಾಗ ಶಾಲೆಯಲ್ಲೂ ಒಂದು ಸಮಾರಂಭ ಏರ್ಪಡಿಸಿತ್ತು. ವಿವಾದಿತ ಕಾಶ್ಮೀರ್ ಫೈಲ್ಸ್ ಚಿತ್ರದ ಪ್ರದರ್ಶನಕ್ಕೆ ಹಾಜರಾಗುವುದನ್ನೂ ಈ ಶಾಲೆ ತನ್ನ ಸಿಬ್ಬಂದಿಗಳಿಗೆ ಕಡ್ಡಾಯಗೊಳಿಸಿತ್ತು ಎಂದು Thequint.com ವರದಿ ಮಾಡಿದೆ.

ಶಾಲೆಯ ಲೇಟೆಸ್ಟ್ ಇಮೇಲ್‍ಗೆ ಹಳೆ ವಿದ್ಯಾರ್ಥಿಗಳಿಂದ ಆಕ್ರೋಶ ವ್ಯಕ್ತವಾದ ನಂತರ ಶಾಲೆ ತನ್ನ ಇನ್‍ಸ್ಟಾಗ್ರಾಂ ಪುಟದಲ್ಲಿ ಹೇಳಿಕೆ ನೀಡಿ "ಇಮೇಲ್ ಅನ್ನು ಸೂಕ್ತ ಸ್ಕ್ರೀನಿಂಗ್ ಪ್ರಕ್ರಿಯೆಗಳಿಲ್ಲದೆ ಕಳುಹಿಸಲಾಗಿದೆ ಎಂದು ಸ್ಪಷ್ಟಪಡಿಸುತ್ತಿದ್ದೇವೆ" ಎಂದು ಹೇಳಿದೆ.

ನ್ಯೂ ಹೊರೈಝಾನ್ ಶಾಲೆಯನ್ನು ಮೋಹನ್ ಮಂಘ್ನಾನಿ ಎಂಬವರು ನಡೆಸುತ್ತಿದ್ದು, ಅವರು 2015ರಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕೆ ರೂ 5 ಕೋಟಿ ದೇಣಿಗೆ ನೀಡಿದಾಗ ಅವರ ಹಾಗೂ ಪ್ರಧಾನಿ ಮೋದಿಯ ಚಿತ್ರವನ್ನು ಪಿಐಬಿ ಇಂಡಿಯಾದ ಟ್ವಿಟ್ಟರ್ ಹ್ಯಾಂಡಲ್ ಪ್ರಕಟಿಸಿತ್ತು.

ಈ ಶಾಲೆ 2019ರಲ್ಲಿ ವಿಹಿಂಪಗೆ ರೂ. 5 ಲಕ್ಷ ಹಾಗೂ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಗೆ ರೂ. 5 ಕೋಟಿ  ದೇಣಿಗೆ ನೀಡಿದೆ ಎಂದೂ ತಿಳಿದು ಬಂದಿದೆ. ನ್ಯೂ ಹೊರೈಝಾನ್ ಸಂಸ್ಥೆಯು ಶಾಲೆ, ಪದವಿಪೂರ್ವ ಮತ್ತು ಪದವಿ ಕಾಲೇಜು ಹಾಗೂ ಇಂಜಿನಿಯರಿಂಗ್ ಕಾಲೇಜುಗಳನ್ನು ನಡೆಸುತ್ತಿದೆ.

ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ʼದಿ ಕಾಶ್ಮೀರ್ ಫೈಲ್ಸ್ʼ ಪ್ರದರ್ಶನಕ್ಕೆ ಹಾಜರಾಗುವುದನ್ನು ಸಂಸ್ಥೆ ಕಡ್ಡಾಯಗೊಳಿಸಿತ್ತು. ಅಯೋಧ್ಯೆ ರಾಮ ಮಂದಿರಕ್ಕೆ ಆಗಸ್ಟ್ 5, 2020ರಂದು ಭೂಮಿಪೂಜೆ ನಡೆದಾಗ ಶಾಲೆ ಕೂಡ ತನ್ನ ಆವರಣದಲ್ಲಿ ಭೂಮಿಪೂಜೆ ನೆರವೇರಿಸಿತ್ತು.

ರಾಮ ಜನ್ಮಭೂಮಿ ಆಂದೋಲನದ ಕುರಿತು ಮಾಹಿತಿ ನೀಡುವ "ದಿ ಸ್ಟೋರಿ ಆಫ್ ರಾಮ್ ಮಂದಿರ್: ಎ ಟೈಮ್‍ಲೈನ್" ಎಂಬ  ಪೋಸ್ಟ್ ಅನ್ನು ಶಾಲೆಯ ಇನ್‍ಸ್ಟಾಗ್ರಾಂ ಹ್ಯಾಂಡಲ್‍ನಲ್ಲಿ ಹಾಕಲಾಗಿತ್ತು.

ಈ ಸಂಸ್ಥೆ ಇತ್ತೀಚೆಗೆ ಬಲಪಂಥೀಯತೆಯತ್ತ ಹೆಚ್ಚು ವಾಲುತ್ತಿದೆ ಎಂದು ಅಲ್ಲಿನ ಹೆಸರು ಹೇಳಲಿಚ್ಛಿಸದ ಕೆಲ  ಸಿಬ್ಬಂದಿ ಹೇಳುತ್ತಿದ್ದಾರೆಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ತನ್ನ ಲೇಟೆಸ್ಟ್ ಇಮೇಲ್ ಬಗ್ಗೆ ಶಾಲೆಯ ಆಡಳಿತ ಮಂಡಳಿ ಸಾಮಾಜಿಕ ತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದು, "50 ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿರುವ ಈ ಸಂಸ್ಥೆಯು ತನ್ನ ವಿದ್ಯಾರ್ಥಿಗಳಿಗೆ ಸ್ವಯಂ ನಿರ್ಧಾರವನ್ನು ಕೈಗೊಳ್ಳುವ ಸ್ವಾತಂತ್ರ್ಯ ನೀಡಿದೆ. ಧಾರ್ಮಿಕ ಭಾವನೆಯನ್ನು ಕದಡುವ ಈಮೈಲ್‌ ನಮ್ಮ ಸಂಸ್ಥೆಯಿಂದ ಕಳಿಸಲಾಗಿರುವ ವರದಿಯು ನಮ್ಮ ಗಮನಕ್ಕೆ ಬಂದಿದ್ದು, ಅತೀವ ಮುತುವರ್ಜಿ ವಹಿಸಿ ಅದನ್ನು ನಿರ್ವಹಿಸಲಾಗುತ್ತಿದೆ. ಈ ಇಮೈಲ್‌ ಅನ್ನು ಸರಿಯಾಗಿ ಪರಿಶೀಲನೆ ಮಾಡದೇ ಕಳಿಸಲಾಗಿತ್ತು" ಎಂದು ಸ್ಪಷ್ಟನೆ ನೀಡಿದ್ದಾರೆ.

ಕೃಪೆ: Thequint.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News