ರೋಹಿತ್ ಚಕ್ರತೀರ್ಥ ನೇತೃತ್ವದ ವಿವಾದಿತ ಪಠ್ಯಕ್ರಮವನ್ನು ಅಳವಡಿಸಿಕೊಂಡರೆ ಉಗ್ರ ಹೋರಾಟ: ದಲಿತ ಒಕ್ಕೂಟಗಳ ಎಚ್ಚರಿಕೆ

Update: 2022-05-24 13:23 GMT
ರೋಹಿತ್ ಚಕ್ರತೀರ್ಥ 

ಬೆಂಗಳೂರು, ಮೇ 24: ರಾಜ್ಯ ಬಿಜೆಪಿ ಸರಕಾರವು ಪಠ್ಯ ಪರಿಷ್ಕರಣೆಯ ಹೆಸರಿನಲ್ಲಿ ಮಕ್ಕಳನ್ನು ಕೋಮುವಾದಿಗಳನ್ನಾಗಿಸುವ ಕೆಲಸ ನಡೆಯುತ್ತಿದೆ. ರೋಹಿತ್ ಚಕ್ರತೀರ್ಥ ಅವರ ಪಠ್ಯ ಪರಿಷ್ಕರಣೆಯನ್ನು ಅಳವಡಿಸಿಕೊಂಡರೆ ಉಗ್ರ ಹೋರಾಟಕ್ಕೆ ಕರೆ ನೀಡಲಾಗುವುದು ಎಂದು ದಲಿತ ಸಂಘಟನೆಗಳ ಒಕ್ಕೂಟ ಸರಕಾರಕ್ಕೆ ಎಚ್ಚರಿಕೆ ನೀಡಿದೆ. 

ಮಂಗಳವಾರ ಪ್ರೆಸ್‍ಕ್ಲಬ್‍ನಲ್ಲಿ ದಲಿತ ಸಂಘರ್ಷ ಸಮಿತಿ(ಭೀಮವಾದ)ದ ರಾಜ್ಯಾಧ್ಯಕ್ಷ ಮೋಹನ್ ರಾಜ್ ಅವರು ಮಾತನಾಡಿ, ರಾಜ್ಯ ಸರಕಾರವು ಮಕ್ಕಳ ಜೀವನದಲ್ಲಿ ಚಲ್ಲಾಟವಾಡುತ್ತಿದೆ. ಶಿಕ್ಷಣದಲ್ಲಿ ಬಲವಂತವಾಗಿ ಪುರೋಹಿತಶಾಹಿಯನ್ನು ತರಲು ಪ್ರಯತ್ನಿಸಲಾಗುತ್ತಿದೆ. ಪಠ್ಯಪರಿಷ್ಕರಣೆಯ ವಿವಾದ ಹೆಚ್ಚಾದಂತೆಲ್ಲ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಪರಿಷ್ಕøತ ಪಠ್ಯವನ್ನು ಅಳವಡಿಸಿದರೆ, ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಲಾಗುತ್ತದೆ ಎಂದು ಹೇಳಿದರು.

ಡಿಎಚ್‍ಎಸ್‍ನ ಮುಖಂಡ ಗೋಪಾಲಕೃಷ್ಣ ಹರಳಹಳ್ಳಿ ಅವರು ಮಾತನಾಡಿ, ವಿವಾದ ಸೃಷ್ಟಿಸಿದ ಪಠ್ಯ ಪರಿಷ್ಕರಣೆಯ ಕುರಿತು ಮೇ 28ರಂದು ದಲಿತ ಸಂಘಟನೆಗಳ ಸಭೆಯನ್ನು ಆಯೋಜಿಸಲಾಗಿದೆ. ಸಭೆಯಲ್ಲಿ ಹೋರಾಟಕ್ಕೆ ರೂಪುರೇಷೆಗಳನ್ನು ಸಿದ್ಧಗೊಳಿಸಲಾಗುವುದು. ಹಾಗೆಯೇ ಮೇ 30ರಂದು ನಗರದ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು. 

ದಲಿತ ಮಾನವ ಹಕ್ಕುಗಳ ವಿಮೋಚನಾ ವೇದಿಕೆಯ ಮುಖಂಡ ಬಸವರಾಜ್ ಕೌತಾಳ್ ಅವರು ಮಾತನಾಡಿ, ಪಠ್ಯ ಪರಿಷ್ಕರಣೆಯ ವಿವಾದವನ್ನು ಗಮನಿಸುತ್ತಿದ್ದರೆ, ರಾಜ್ಯದಲ್ಲಿ ಗುರುಕುಲ ಪದ್ಧತಿಯನ್ನು ಜಾರಿಗೊಳಿಸುವ ಹುನ್ನಾರ ನಡೆಯುತ್ತಿರಬಹುದು ಎಂದು ಅನುಮಾನವಾಗುತ್ತಿದೆ. ರಾಜ್ಯ ಸರಕಾರವು ಆಂತರಿಕ ಅಜೆಂಡಾಗಳನ್ನು ಇಟ್ಟುಕೊಂಡಿರುವುದು ಸ್ಪಷ್ಟವಾಗುತ್ತಿದೆ. ವಿವಾದಿತ ಪಠ್ಯ ಪರಿಷ್ಕರಣೆಯನ್ನು ಶಿಕ್ಷಣ ಸಚಿವರು ಒಪ್ಪಿಕೊಂಡ ಕಾರಣ, ಮುಖ್ಯಮಂತ್ರಿಗಳು ಮಧ್ಯೆ ಪ್ರವೇಶಿಸಿ, ರೋಹಿತ್ ಚಕ್ರತೀರ್ಥ ವರದಿಯನ್ನು ತಿರಸ್ಕರಿಸಬೇಕು ಎಂದರು.

ಅಸಂಬದ್ಧ ಸಮರ್ಥನೆ

ಪಠ್ಯದಲ್ಲಿ ಹೆಡಗೆವಾರ್ ಭಾಷಣ ಸೇರಿಸಿದ್ದು ಸಮಂಜಸವಲ್ಲ. ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರಲ್ಲ. ಹಾಗಾಗಿ ಅವರ ಪಠ್ಯವನ್ನು ತೆಗೆಯಬೇಕು ಎಂದು ದಲಿತ ಮುಖಂಡರು ಒತ್ತಾಯಿಸಿದರೆ, ದೇವನೂರ ಮಹಾದೇವ ಅವರ ಪಠ್ಯವನ್ನು ಸೇರಿಸಿದ್ದೇವೆ ಎಂದು ಅಸಂಬದ್ಧ ಸಮರ್ಥನೆ ನೀಡುತ್ತಿದೆ. ಆದರೆ ವಾಸ್ತವವಾಗಿ ಅರವಿಂದ ಮಾಲಗತ್ತಿ ಅವರ ಪಠ್ಯವನ್ನು ಕೈ ಬಿಟ್ಟಿದ್ದಾರೆ. ಮಹಿಳಾ ಶಿಕ್ಷಣದಲ್ಲಿ ಅಪಾರ ಸಾಧನೆಗೈದ ಸಾವಿತ್ರಿ ಬಾಯಿ ಫುಲೆ ಅವರ ವಿಚಾರವನ್ನು ಕೈ ಬಿಟ್ಟಿದ್ದಾರೆ. 

-ಮೋಹನ್ ರಾಜ್, ದಸಂಸ(ಭೀಮವಾದ) ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News