ಸಾಹಿತಿ, ಚಿಂತಕರು ಹಾಗೂ ಶಿಕ್ಷಣ ತಜ್ಞರ ಸಭೆ: ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ರದ್ದುಗೊಳಿಸಲು ಒಕ್ಕೊರಲಿನ ಕೂಗು

Update: 2022-05-25 14:05 GMT
ಸಾಹಿತಿ, ಚಿಂತಕರು ಹಾಗೂ ಶಿಕ್ಷಣ ತಜ್ಞರ ಸಭೆ

ಬೆಂಗಳೂರು, ಮೇ 25: ಪಠ್ಯ ಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ರದ್ದುಗೊಳಿಸಿ, ಈ ಹಿಂದಿನ ಪಠ್ಯವನ್ನೆ ಮುಂದುವರೆಸಬೇಕು ಎಂದು ನಾಡಿನ ಚಿಂತಕರು, ಹೋರಾಟಗಾರರು, ಶಿಕ್ಷಣ ತಜ್ಞರು ಒಕ್ಕೊರಲಿನಿಂದ ಆಗ್ರಹಿಸಿದರು.

ಬುಧವಾರ ನಗರದಗಾಂಧಿ ಭವನ ಸಭಾಂಗಣದಲ್ಲಿ ಪಠ್ಯ ಪುಸ್ತಕ ರಚನೆ, ಪರಿಷ್ಕರಣೆ ಮರು ಪರಿಷ್ಕರಣೆ ಕುರಿತು ಶಿಕ್ಷಣ ತಜ್ಞರು ಚಿಂತಕರೊಂದಿಗೆ ನಡೆದ ಸಮಾಲೋಚನೆ ಚರ್ಚೆಯಲ್ಲಿ ಚಿಂತಕರು ತಮ್ಮ ಹಕ್ಕೊತ್ತಾಯ ಮಂಡಿಸಿ, ರೋಹಿತ್ ಚಕ್ರತೀರ್ಥ ಸಮಿತಿ ವಿವಾದ, ಗೊಂದಲಗಳನ್ನು ಹುಟ್ಟು ಹಾಕಿರುವುದರಿಂದ ಈ ಪಠ್ಯಗಳನ್ನು ಯಾವುದೇ ಕಾರಣಕ್ಕೂ ಜಾರಿ ಮಾಡದೆ ಈ ಹಿಂದಿನ ಪಠ್ಯ ಪುಸ್ತಕಗಳನ್ನು ಮುಂದುವರಿಸಬೇಕು ಎಂದರು.

ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ಕಾರಣದಿಂದಾಗಿ ಮಕ್ಕಳ ಕಲಿಕೆಯ ಅಂತರ ಹೆಚ್ಚಾಗಿದೆ. ಇದರಿಂದ ಕಲಿಕೆಯ ನಷ್ಟವಾಗಿದೆ. ಇಂತಹ ಬಿಕ್ಕಟ್ಟಿನಲ್ಲಿ ಪಠ್ಯಕ್ರಮ ಮರುರಚನೆಯಂತಹ ಯಾವುದೇ ಬಗೆಯ ಅನಗತ್ಯ ಪ್ರಯೋಗಗಳಿಗೆ ಕೈ ಹಾಕದೆ ಮತ್ತು ಆ ಮೂಲಕ ಇನ್ನಷ್ಟು ಕಲಿಕೆಯ ನಷ್ಟಕ್ಕೆ ಕಾರಣವಾಗದೆ ಈ ಒಂದು ವರ್ಷ ಯಥಾಸ್ಥಿತಿಯನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಒತ್ತಾಯಿಸಿದರು.

ಅದೇರೀತಿ, ಸಾಮಾಜಿಕ ಸಂಘಟನೆಗಳು, ಶಿಕ್ಷಣ ತಜ್ಞರ ಮೇಲೂ ಜವಾಬ್ದಾರಿ ಇದ್ದು, ಇವರೆಲ್ಲಾ ಒಗ್ಗೂಡಿ ರಾಜ್ಯವ್ಯಾಪಿ ಈ ಮರು ಪರಿಷ್ಕರಣಾ ಸಮಿತಿಯ ಅರ್ಹತೆಯನ್ನು ವಿವಿಧ ನೆಲೆಯಲ್ಲಿ ಪ್ರಶ್ನಿಸಬೇಕು. ಅನಗತ್ಯವಾಗಿ ಮರು ಪರಿಷ್ಕರಣೆಗೆ ಅವಕಾಶ ಕಲ್ಪಿಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‍ರನ್ನು ವಜಾಗೊಳಿಸಬೇಕು ಎಂದು ಉಲ್ಲೇಖಿಸಿದರು.

ಪೋಷಕರ ಜೊತೆ, ಸ್ಥಳೀಯ ಸಂಸ್ಥೆಗಳ ಜೊತೆ, ಎಸ್‍ಡಿಎಂಸಿಗಳ ಜೊತೆ, ಶಿಕ್ಷಣದ ಭಾಗೀದಾರರ ಜೊತೆಗೆ ನಿರಂತರವಾಗಿ ಸಮಾಲೋಚನೆ, ಚರ್ಚೆ, ಸಂವಾದ ನಡೆಸಬೇಕು. ಅವರಿಗೆ ಈ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿಯ ಶಿಫಾರಸ್ಸುಗಳ ಅಪಾಯಗಳನ್ನು ಮನವರಿಕೆ ಮಾಡಿಕೊಡಬೇಕು ಮತ್ತು ಇವರೆಲ್ಲರೂ ಮುಂದಾಗಿ ಈ ಪರಿಷ್ಕರಣೆಯನ್ನು ಕೈ ಬಿಡಬೇಕೆಂದು ಒತ್ತಾಯಿಸುವಂತಾಗಬೇಕು ಎಂದು ಸೂಚನೆ ನೀಡಲಾಗಿದೆ.

ಅದೇರೀತಿ, ಮುಖ್ಯವಾಗಿ ಸರಕಾರಗಳು ಬದಲಾದಂತೆ ಆಯಾ ಪಕ್ಷಗಳ ಸಿದ್ಧಾಂತಕ್ಕೆ ಅನುಗುಣವಾಗಿ ಪಠ್ಯಗಳು ಸಹ ಬದಲಾಗುತ್ತಿರುವುದು ಆತಂಕದ ಸಂಗತಿಯಾಗಿದ್ದು, ಇದು ಅಂತ್ಯಗೊಳ್ಳಬೇಕಾಗಿದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಹ ಈ ಪಠ್ಯಕ್ರಮಗಳನ್ನು ಮನಸೋಇಚ್ಛೆ ಬದಲಾಯಿಸದಂತೆ ಒಂದು ವ್ಯವಸ್ಥೆ ಕುರಿತು ನಾವೆಲ್ಲರೂ ಯೋಚಿಸಬೇಕಾಗಿದೆ ಎಂದು ಹೇಳಿದರು.

ಜನತೆಗೆ ನಿಜಾರ್ಥದಲ್ಲಿ ಸಂವಿಧಾನದ ಆಶಯಗಳನ್ನುಳ್ಳ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಒಪ್ಪಿಕೊಂಡ, ಸಾಮಾಜಿಕ ನ್ಯಾಯವನ್ನು ಪಾಲಿಸುವ, ಲಿಂಗ ಸಮಾನತೆಯನ್ನು ಗೌರವಿಸುವ, ಬಹುಸಂಸ್ಕøತಿಯನ್ನು, ಕನ್ನಡದ ಅಸ್ಮಿತೆಯನ್ನು ಒಳಗೊಂಡ ಒಂದು ಮಾದರಿ ಪರ್ಯಾಯ ಪಠ್ಯಕ್ರಮವನ್ನು ರೂಪಿಸಬೇಕಾಗಿದೆ. ಇದರಲ್ಲಿ ಈ ಬಿಜೆಪಿ ಸರಕಾರ ಯಾವರೀತಿ ತಪ್ಪುಗಳನ್ನು ಮಾಡಿದೆ ಎಂಬುದನ್ನು ಸಹ ವಿವರಿಸಬೇಕು. ಈ ಕಾರ್ಯಯೋಜನೆಗಾಗಿ ಒಂದು ತಜ್ಞರ ಸಮಿತಿ ರಚಿಸಬೇಕು. ನಿರ್ದಿಷ್ಟ ಕಾಲಮಿತಿಯೊಳಗಡೆ ಈ ‘ಮಾದರಿ ಪರ್ಯಾಯ ಪಠ್ಯಕ್ರಮ’ವನ್ನು ಅಂತಿಮಗೊಳಿಸಿ ಸಾರ್ವಜನಿಕ ಚರ್ಚೆಗೆ ಬಿಡಬೇಕು ಎಂದು ಚಿಂತಕರು ಸರಕಾರಕ್ಕೆ ಆಗ್ರಹಿಸಿದರು.

ಸಭೆಯಲ್ಲಿ ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ, ಸಾಹಿತಿಗಳಾದ ಪ್ರೊ.ಕೆ.ಮರುಳಸಿದ್ದಪ್ಪ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ.ಬಂಜಗೆರೆ ಜಯಪ್ರಕಾಶ್, ಪ್ರೊ.ರಾಜೇಂದ್ರ ಚೆನ್ನಿ, ಪ್ರೊ.ಎಚ್.ಎಸ್.ರಾಘವೇಂದ್ರರಾವ್, ಡಾ.ಟಿ.ಆರ್.ಚಂದ್ರಶೇಖರ್, ದಸಂಸ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಹಿರಿಯ ಪತ್ರಕರ್ತರಾದ ಇಂದೂಧರ ಹೊನ್ನಾಪುರ, ಡಾ.ವಿಜಯಾ, ಲೇಖಕಿ ಡಾ.ವಸುಂಧರಾ ಭೂಪತಿ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಸಾಮಾಜಿಕ ಸಂಘಟಕ ಶ್ರೀಪಾದ ಭಟ್, ಬರಹಗಾರ ಶಿವಸುಂದರ್, ರುದ್ರಪ್ಪ ಹನಗವಾಡಿ ಬಿ.ರಾಜಶೇಖರ ಮೂರ್ತಿ, ಕೆ.ಎಸ್.ವಿಮಲಾ, ಪ್ರಜ್ವಲ್ ಶಾಸ್ತಿ, ಟಿ.ಎಂ.ಕುಮಾರ್, ಕುಮಾರಸ್ವಾಮಿ ಬೆಜ್ಜವಳ್ಳಿ, ಡಾ.ಎನ್.ಗಾಯತ್ರಿ ಸೇರಿದಂತೆ ಪ್ರಮುಖರು ಮಂಡಿಸಿದ ಹಕ್ಕೊತ್ತಾಯ ಪ್ರಸ್ತಾವನೆಗೆ ಸಹಮತ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News