ಸಿಇಟಿಗೂ ಹಿಜಾಬ್, ಕೇಸರಿ ಶಾಲು ಸೇರಿದಂತೆ ಯಾವುದೇ ಧಾರ್ಮಿಕ ವಸ್ತ್ರಗಳನ್ನು ಧರಿಸುವಂತಿಲ್ಲ: ಕೆಇಎ

Update: 2022-05-25 15:06 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 25: ರಾಜ್ಯದ ಪಿಯು ಕಾಲೇಜುವೊಂದರಲ್ಲಿ ಸೃಷ್ಟಿಯಾದ ಹಿಜಾಬ್ ವಿವಾದವು ಎಸೆಸೆಲ್ಸಿ, ಪಿಯುಸಿ ಪರೀಕ್ಷೆಗೂ ಅನ್ವಯವಾಗಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(ಕೆಇಎ) ನಡೆಸುವ ಸಿಇಟಿಗೂ ಅನ್ವಯವಾಗುತ್ತಿದೆ. ಜೂ.16, 17 ಮತ್ತು 18ರಂದು ಈ ವರ್ಷದ ಸಿಇಟಿ ಪರೀಕ್ಷೆಗಳು ನಡೆಯುತ್ತಿದ್ದು, ಪರೀಕ್ಷೆಗೆ ಹಿಜಾಬ್ ಧರಿಸುವುದನ್ನು ನಿರಾಕರಿಸಲಾಗಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜೂನ್ 16, 17 ಹಾಗೂ 18 ರಂದು ಈ ವರ್ಷದ ಸಿಇಟಿ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ಆದೇಶ ಪಾಲನೆ ಮಾಡುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಿಇಟಿ ಪರೀಕ್ಷೆಗೆ ವಿದ್ಯಾರ್ಥಿಗಳು ಹಿಜಾಬ್ ಸೇರಿದಂತೆ ಧಾರ್ಮಿಕ ಭಾವನೆಗಳ ಉಡುಪುಗಳನ್ನು ಧರಿಸದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪಷ್ಟನೆ ನೀಡಿದೆ.

ಸಿಇಟಿ ಪರೀಕ್ಷೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಲವು ನಿಯಮಗಳನ್ನು ಜಾರಿ ಮಾಡಿದೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ನಿಯಮ ಪಾಲನೆ ಮಾಡಬೇಕು ಎಂದು ಸೂಚನೆ ನೀಡಿದೆ. ಸಿಇಟಿ ಪರೀಕ್ಷೆಗೆ ವಿದ್ಯಾರ್ಥಿಗಳು ಹಿಜಾಬ್, ಕೇಸರಿ ಶಾಲು ಸೇರಿದಂತೆ ಯಾವುದೇ ಧಾರ್ಮಿಕ ವಸ್ತ್ರಗಳನ್ನು ಧರಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪರೀಕ್ಷಾ ಕೇಂದ್ರಗಳಿಗೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸಂಪೂರ್ಣ ನಿಷೇಧ ಮಾಡಲಾಗಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ವಾಚ್ ನಿಷೇಧ (ಕೈ ಗಡಿಯಾರ) ಮಾಡಲಾಗಿದೆ. ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಆಭರಣಗಳನ್ನು ಧರಿಸುವುದಕ್ಕೂ ನಿಷೇಧ ಹಾಕಲಾಗಿದೆ. ಮೊಬೈಲ್ ಸೇರಿದಂತೆ ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಿಷೇಧಿಸಿದ್ದು, ಪ್ರತಿ ಕೇಂದ್ರದಲ್ಲೂ ಗಡಿಯಾರ ಅಳವಡಿಕೆ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News