×
Ad

ಬೆಂಗಳೂರು: ಕೈ-ಕಾಲು ಕಟ್ಟಿ ಎಲೆಕ್ಟ್ರಿಕಲ್ಸ್ ಅಂಗಡಿ ಮಾಲಕನ ಹತ್ಯೆ, ಮನೆಯಲ್ಲಿದ್ದ ಚಿನ್ನಾಭರಣ ದರೋಡೆ

Update: 2022-05-25 22:10 IST
ಜಗ್ಗುರಾಜ್ ಜೈನ್- ಕೊಲೆಯಾದ ವೃದ್ಧ

ಬೆಂಗಳೂರು, ಮೇ 25: ಎಲೆಕ್ಟ್ರಿಕಲ್ಸ್ ಅಂಗಡಿಯ ಮಾಲಕರೊಬ್ಬರನ್ನು ಕೊಲೆಗೈದು ಲಕ್ಷಾಂತರ ರೂ. ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚಾಮರಾಜಪೇಟೆಯ ನಾಲ್ಕನೆ ಕ್ರಾಸ್, 4ನೆ ಮುಖ್ಯರಸ್ತೆಯಲ್ಲಿನ ಅಪಾರ್ಟ್‍ಮೆಂಟ್ 3ನೆ ಮಹಡಿಯಲ್ಲಿ ವಾಸವಾಗಿದ್ದ ಜಗ್ಗುರಾಜ್ ಜೈನ್(75) ಕೊಲೆಯಾಗಿರುವ ಅಂಗಡಿ ಮಾಲಕ ಎಂದು ಪೊಲೀಸರು ಹೇಳಿದ್ದಾರೆ.

ಇಲ್ಲಿನ ಚಿಕ್ಕಪೇಟೆಯಲ್ಲಿ ದೀಪಂ ಎಲೆಕ್ಟ್ರಿಕಲ್ಸ್ ಅಂಗಡಿ ಮಾಲಕ ಜಗ್ಗುರಾಜ್ ಜೈನ್, ತನ್ನ ಪುತ್ರ ಆನಂದ್‍ಕುಮಾರ್ ಮತ್ತು ಸೊಸೆ ಜತೆ ವಾಸವಾಗಿದ್ದರು. ನಿನ್ನೆ ರಾತ್ರಿ ಮನೆಯಲ್ಲಿ ಒಬ್ಬರೇ ಇದ್ದರು.

ಸುಮಾರು 10:30 ಗಂಟೆ ಸುಮಾರಿನಲ್ಲಿ ಜಗ್ಗುರಾಜ್ ಜೈನ್ ಅವರ ಕೈ-ಕಾಲು ಕಟ್ಟಿದ ದುಷ್ಕರ್ಮಿಗಳು ಮುಖಕ್ಕೆ ಖಾರದ ಪುಡಿ ಹಾಕಿ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ಬುಧವಾರ ಬೆಳಗ್ಗೆ ಆನಂದ್‍ಕುಮಾರ್ ಅವರು ತನ್ನ ತಂದೆಗೆ ಫೋನ್ ಮಾಡಿದ್ದಾರೆ. ಅವರು ಕರೆ ಸ್ವೀಕರಿಸಿರಲಿಲ್ಲ. ಬೆಂಗಳೂರಿನಲ್ಲೇ ವಾಸವಾಗಿರುವ ತನ್ನ ಅಣ್ಣನ ಮಗನಿಗೆ ವಿಷಯ ತಿಳಿಸಿದ್ದಾರೆ. ಅಣ್ಣನ ಮಗ ಮನೆಗೆ ಬಂದು ನೋಡಿದಾಗ ಕೊಲೆಯಾಗಿರುವುದು ಕಂಡುಬಂದಿದೆ. 

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮನೆ ಪರಿಶೀಲನೆ ನಡೆಸಿ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News