ರಸ್ತೆಗುಂಡಿ ಮುಚ್ಚಲು ಹತ್ತು ದಿನ ಗಡುವು ಕೇಳಿದ ಬಿಬಿಎಂಪಿ

Update: 2022-05-25 16:45 GMT

ಬೆಂಗಳೂರು, ಮೇ 25: ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್‍ಅನ್ನು ಆಧರಿಸಿ, ಮುಂದಿನ ಹತ್ತು ದಿನಗಳಲ್ಲಿ ನಗರದ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಭರವಸೆ ನೀಡಿದರು.

ಬುಧವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ರಸ್ತೆ ಗುಂಡಿ ಮುಚ್ಚುವ ಕಡೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಮಳೆಯಿಂದಾಗಿ ಮಧ್ಯೆ ತೊಡಕಾಗಿತ್ತು. ಆದರೂ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ನೆರವಿನಿಂದ 11 ಸಾವಿರ ರಸ್ತೆಗುಂಡಿಗಳನ್ನು ಪತ್ತೆ ಹಚ್ಚಿ 5500 ರಸ್ತೆಗುಂಡಿ ಮುಚ್ಚುವ ಕೆಲಸ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.

ಇನ್ನು ಲೈನಡ್ ಏರಿಯಾದಲ್ಲಿ ಅಭಿವೃದ್ಧಿ ಕಾರ್ಯ ಹೂಳು ತೆಗೆಯುವ ವಿಚಾರದಲ್ಲಿ ಅಲ್ಪಾವಧಿ ಟೆಂಡರ್ ನೀಡಲಾಗಿದೆ. ಇನ್ನೊಂದು ತಿಂಗಳಲ್ಲಿ ಪ್ರಮುಖ ಪ್ರದೇಶಗಳಲ್ಲಿ ಹೂಳು ತೆಗೆಯಲಾಗುವುದು. ಲೈನಡ್ ಏರಿಯಾದಲ್ಲಿ ಅಭಿವೃದ್ದಿ ಕಾರ್ಯ ನಡೆಯುತ್ತಿದ್ದು, ಗುತ್ತಿಗೆದಾರರಿಂದಲೇ ಹೂಳು ತೆಗೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಕಾಳಿದಾಸ ಲೇಔಟ್‍ನಲ್ಲಿ ರಾಜಕಾಲುವೆ ಅನಾಹುತ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ಕೊಟ್ಟಿದ್ದು, ವರದಿ ಪಡೆಯುತ್ತಾರೆ. ಓರ್ವರನ್ನು ಹೊರತುಪಡಿಸಿ ಉಳಿದವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಗಾಯಾಳುಗಳ ಅಕೌಂಟ್ ಗುತ್ತಿಗೆದಾರರಿಂದಲೇ ಹಣ ಜಮಾವಣೆ ಮಾಡಿಸಲಾಗುತ್ತದೆ. ಗುತ್ತಿಗೆದಾರರಿಗೆ ಒಂದು ಲಕ್ಷ ದಂಡ ವಿಧಿಸಲು ಸೂಚನೆ ನೀಡಲಾಗಿದೆ. ವಾರ್ಡ್ ಇಂಜಿನಿಯರ್‍ಗೆ ನೋಟಿಸ್ ನೀಡಲಾಗುವುದು ಎಂದು ಹೇಳಿದರು.

ವರದಿಯನ್ನು ಆಧರಿಸಿ ಮಾತ್ರ ಗುತ್ತಿಗೆದಾರನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುವುದು. ಬಿಬಿಎಂಪಿಯಲ್ಲಿ ವಿಜಿಲೆನ್ಸ್ ಸೆಲ್ ಇದ್ದು, ಒಟ್ಟಾರೆ ಕಾಮಗಾರಿಯ ಶೇ.10 ರಷ್ಟು ಕಾಮಗಾರಿ ಪರಿಶೀಲನೆ ಮಾಡಬೇಕಿದೆ. ಆದರೆ ವಿಜಿಲೆನ್ಸ್ ಸೆಲ್ ಆ ಕೆಲಸ ಮಾಡುತ್ತಿರಲಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News