ಸಿ.ಎಂ.ಇಬ್ರಾಹೀಂ ಕ್ಷಮೆಯಾಚನೆಗೆ ಆಗ್ರಹ

Update: 2022-05-26 08:35 GMT

ಬೆಂಗಳೂರು, ಮೇ 25: ಲೈಂಗಿಕ ಅಲ್ಪಸಂಖ್ಯಾತರ ಕುರಿತು ಅವಹೇಳನಕಾರಿ ಆಗಿ ಮಾತನಾಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹೀಂ ಈ ಕೂಡಲೇ ರಾಜೀನಾಮೆ ನೀಡಬೇಕೆಂದು ಪ್ರತಿಭಟನೆ ನಡೆಸಲಾಯಿತು.

ಬುಧವಾರ ಇಲ್ಲಿನ ಫ್ರೀಡಂ ಪಾರ್ಕಿನ ಮೈದಾನದಲ್ಲಿ ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ನೇತೃತ್ವದಲ್ಲಿ ಜಮಾಯಿಸಿದ ಲಿಂಗತ್ವ ಅಲ್ಪಸಂಖ್ಯಾತ ಸದಸ್ಯರು, ಹೋರಾಟಗಾರರು, ಸಿ.ಎಂ.ಇಬ್ರಾಹೀಂ ಅವರು ಪ್ರಚಾರಕ್ಕಾಗಿ ಶೋಷಿತ ಸಮುದಾಯ ಲೈಂಗಿಕ ಅಲ್ಪಸಂಖ್ಯಾತರನ್ನು ನಿಂದಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯ ಮಾಡಿದರು.

ರಾಜ್ಯದಲ್ಲಿರುವುದು ಮಂಗಳಮುಖಿ ಸರಕಾರ ಎಂಬ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹೀಂ ಹೇಳಿಕೆಯೂ ಲೈಂಗಿಕ ಅಲ್ಪಸಂಖ್ಯಾತರನ್ನು ನಿಂದಿಸಿದಂತೆ ಇದೆ. ರಾಜಕೀಯ ಲಾಭ ಅಥವಾ ಪ್ರಚಾರಕ್ಕಾಗಿ ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ಇದು ಹೀಗೆ ಮುಂದುವರೆದರೆ ನಾವು ಕಾನೂನು ಹೋರಾಟ ನಡೆಸಲಾಗುವುದು ಎಂದು ಹೋರಾಟಗಾರರು ಎಚ್ಚರಿಕೆ ನೀಡಿದರು.

ಲೈಂಗಿಕ ಅಲ್ಪಸಂಖ್ಯಾತ ಮಲ್ಲು ಮಾತನಾಡಿ, ಇವತ್ತು ನಿಮ್ಮನ್ನು ಗಂಡು, ಹೆಂಗಸು ಎಂದು ಗುರುತಿಸಿದ್ದು ಯಾರು. ಅಲ್ಲದೆ, ಶೋಷಿತ ಸಮುದಾಯವನ್ನು ಬಳಸಿಕೊಂಡು ರಾಜಕೀಯ ಮಾಡುವುದಾದರೆ, ಯಾವ ಸಂವಿಧಾನದಡಿ ಇಂತಹ ಹೇಳಿಕೆಗಳಿಗೆ ಅವಕಾಶ ನೀಡಲಾಗಿದೆ ಎನ್ನುವುದನ್ನು ಬಹಿರಂಗಪಡಿಸಬೇಕು. ಮತ್ತೊಂದೆಡೆ ಜೆಡಿಎಸ್ ದಲಿತ, ಅಲ್ಪಸಂಖ್ಯಾತ, ಶೋಷಿತರ ಪರವಾಗಿದೆ ಎನ್ನುತ್ತಿದೆ. ಇದೀಗ ಇಬ್ರಾಹೀಂ ಹೇಳಿಕೆಗಳಿಂದ ಅವರ ನಿಜಬಣ್ಣ ಬಯಲಾಗಿದೆ ಎಂದು ಹೇಳಿದರು.

ಮತ್ತೋರ್ವ ಲೈಂಗಿಕ ಅಲ್ಪಸಂಖ್ಯಾತ ಸದಸ್ಯೆ ಮಾಲಾಭಾಯಿ ಮಾತನಾಡಿ, ನಮ್ಮನ್ನು ಸರಕಾರ ಕೈಹಿಡಿದಿಲ್ಲ. ಆದರೂ, ನಮ್ಮ ಸ್ವತಃ ಬಲದ ಮೇಲೆ ನಾವು ಜೀವನ ಸಾಗಿಸುತ್ತಿದ್ದೇವೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ನಮ್ಮ ಸಮುದಾಯ ಕುರಿತು ಅಸಭ್ಯವಾಗಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಜತೆಗೆ, ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ, ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News