ಜೆಪಿ ಭವನದಲ್ಲಿ ಬ್ರಹ್ಮ ಕಳಸ ಪ್ರತಿಷ್ಠಾಪನೆ, 10 ಅಡಿ ಎತ್ತರದ, 500 ಲೀಟರ್ ಸಾಮಥ್ರ್ಯದ ಬ್ರಹ್ಮ ಕಳಸ: ಕುಮಾರಸ್ವಾಮಿ

Update: 2022-05-25 17:43 GMT

ಬೆಂಗಳೂರು, ಮೇ 25: ರಾಜ್ಯದ 15 ಜೀವನದಿ ಹಾಗೂ ಉಪ ನದಿಗಳಿಂದ ಸಂಗ್ರಹ ಮಾಡಿದ ಪವಿತ್ರ ಗಂಗಾ ಜಲದ ಕಳಸ ಪ್ರತಿಷ್ಠಾಪನೆಯ ಮಹಾಪೂಜಾ ಕಾರ್ಯಕ್ರಮ ಹಾಗೂ ಕಳಸ ಪ್ರತಿಷ್ಠಾಪನೆ ನಾಳೆ(ಮೇ 26) ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ನಡೆಯಲಿದೆ ಎಂದು ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಮಾತನಾಡಿದ ಅವರು, ‘10 ಅಡಿಯ ಎತ್ತರದ 500 ಲೀಟರ್ ಜಲ ತುಂಬಲಿರುವ ಕಳಸವನ್ನು ಸ್ಥಾಪನೆ ಮಾಡಲಾಗುವುದು. ಕಳಸದ ಸುತ್ತಾ ತೂಗು ದೀಪಾ ಅಲಂಕಾರ ಮಾಡಲಾಗಿದೆ. ಜತೆಗೆ ದೇಶದ ಏಳು ಮಹಾನದಿಗಳ ಹೆಸರಿನಲ್ಲಿ ಪುಟ್ಟ ಕಳಸಗಳನ್ನು ಇಟ್ಟು ಪೂಜೆ ನೆರವೇರಿಸಲಾಗುವುದು. ನಾಳೆ ಬೆಳಗ್ಗೆ 9 ಗಂಟೆಯಿಂದ ಗಂಗಾಪೂಜೆ ಸಂದರ್ಭದಲ್ಲಿ ಪರ್ಜನ್ಯ ಹೋಮ, ಗಣ ಹೋಮ, ನವಗ್ರಹ ಹೋಮ ಸೇರಿದಂತೆ ಹಲವು ಪೂಜೆ ಕಾರ್ಯಕ್ರಮವನ್ನು ಪುರೋಹಿತರು ನೆರವೇರಿಸಲಿದ್ದಾರೆ. ಈ  ಕಳಸಕ್ಕೆ ಮುಂದಿನ ಚುನಾವಣೆಯ ವರೆಗೆ ನಿತ್ಯ ಗಂಗಾಪೂಜೆ ನಡೆಯುತ್ತದೆ' ಎಂದು ತಿಳಿಸಿದರು.

ಪರಂಪರೆಯ ಮಂಟಪ: ಕಳಸ ಪ್ರತಿಷ್ಟಾಪನೆ ಮಾಡಲಿರುವ ಮಂಟಪವನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಕರ್ನಾಟಕದ ಪರಂಪರೆಯನ್ನು ಬಿಂಬಿಸುವ ವಾಸ್ತುಶಿಲ್ಪ ಉಳ್ಳ ಮಂಟಪ ವಿಶೇಷ ಆಕರ್ಷಣೆಯಾಗಿದೆ. ಇಡೀ ಆವರಣ ಮಂಟಪ ಕಲಾ ಆರ್ಟ್‍ನ ಕಲಾವಿದರು ಸಿದ್ಧಪಡಿಸಿದ್ದಾರೆ. ಈ ಮಂಟಪದಲ್ಲಿ ನಿರಂತರವಾಗಿ ಜಪ, ಮಂತ್ರ, ಮಂಗಳ ನಾದ ಮೊಳಗುತ್ತಿರುತ್ತದೆ.

ನೀರು ಶುದ್ಧೀಕರಣಕ್ಕೆ ವಿಶೇಷ ವ್ಯವಸ್ಥೆ: ಪವಿತ್ರ ಗಂಗಾಜಲವು ಸುಮಾರು ಒಂದು ವರ್ಷ ಕಾಲ ಈ ಕಳಸದಲ್ಲಿ ಇರಲಿದೆ. ನೀರು ಕೆಡದಂತೆ ನೋಡಿಕೊಳ್ಳಲು ವಿಶೇಷ ಯುವಿ-ಓಜೋನೈಶನ್ ವ್ಯವಸ್ಥೆ ಮಾಡಲಾಗಿದೆ. ಇದು ಆಮ್ಲಜನಕಯುಕ್ತ ಆಗಿರುತ್ತದೆ. ಎಪ್ರಿಲ್ 16ರಂದು ಹನುಮ ಜಯಂತಿ ದಿನ 15 ಕಡೆ ಜಲ ಸಂಗ್ರಹ ಮಾಡುವ ಮೂಲಕ ಯಾತ್ರೆಗೆ ಚಾಲನೆ ನೀಡಲಾಗಿತ್ತು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News