2022ರ ಮೊದಲ ತ್ರೈಮಾಸಿಕದಲ್ಲಿ ಜಗತ್ತಿನಲ್ಲಿ 11.2 ಕೋಟಿ ಉದ್ಯೋಗ ನಾಶ

Update: 2022-05-26 07:11 GMT

2021ರ ಕೊನೆಯ ತ್ರೈಮಾಸಿಕದಲ್ಲಿ ಉದ್ಯೋಗ ಪರಿಸ್ಥಿತಿ ಗಣನೀಯವಾಗಿ ಸುಧಾರಿಸಿತ್ತಾದರೂ, 2022ರ ಮೊದಲ ತ್ರೈಮಾಸಿಕದಲ್ಲಿ ಜಾಗತಿಕ ಕೆಲಸದ ಗಂಟೆಗಳ ಸಂಖ್ಯೆಯು ಕೊರೋನ ದಾಳಿಗೆ ಮುನ್ನ ಇದ್ದ ಸಂಖ್ಯೆಯ ಶೇ. 3.8ರಷ್ಟು ಕೆಳಗೆ ಇಳಿದಿದೆ.

ಒಂದರ ನಂತರ ಒಂದರಂತೆ ಬರುತ್ತಿರುವ ಬಿಕ್ಕಟ್ಟುಗಳಿಂದ ‘ಉದ್ಯೋಗ ಜಗತ್ತು’ ನಿರಂತರವಾಗಿ ತತ್ತರಿಸಿದೆ ಎಂದು ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಘಟನೆ(ಐಎಲ್‌ಒ) ಮೋನಿಟರ್‌ನ ಒಂಭತ್ತನೇ ಆವೃತ್ತಿ ಹೇಳಿದೆ. 2021ರ ಕೊನೆಯ ತ್ರೈಮಾಸಿಕದಲ್ಲಿ ಉದ್ಯೋಗ ಪರಿಸ್ಥಿತಿ ಗಣನೀಯವಾಗಿ ಸುಧಾರಿಸಿತ್ತಾದರೂ, 2022ರ ಮೊದಲ ತ್ರೈಮಾಸಿಕದಲ್ಲಿ ಜಾಗತಿಕ ಕೆಲಸದ ಗಂಟೆಗಳ ಸಂಖ್ಯೆಯು ಕೊರೋನ ದಾಳಿಗೆ ಮುನ್ನ ಇದ್ದ ಸಂಖ್ಯೆಯ ಶೇ. 3.8ರಷ್ಟು ಕೆಳಗೆ ಇಳಿದಿದೆ. ಈ ಅವಧಿಯಲ್ಲಿ ಸುಮಾರು 11.2 ಕೋಟಿ ಉದ್ಯೋಗಗಳು ನಾಶವಾಗಿರಬಹುದು ಎಂದು ವರದಿ ಹೇಳಿದೆ.

‘ಉದ್ಯೋಗ ಜಗತ್ತಿ’ನ ವರದಿಯಲ್ಲಿ ಭಾರತದ ಉದ್ಯೋಗ ಕ್ಷೇತ್ರದಲ್ಲಿ ಚಾಲ್ತಿಯಲ್ಲಿರುವ ಲಿಂಗ ತಾರತಮ್ಯವೂ ಪ್ರಸ್ತಾಪಗೊಂಡಿದೆ. 2020ರ ಎರಡನೇ ತ್ರೈಮಾಸಿಕದಲ್ಲಿ ಭಾರತ ಸೇರಿದಂತೆ ಕೆಳ ಮಧ್ಯಮ ಆದಾಯದ ದೇಶಗಳಲ್ಲಿ ಕೆಲಸದ ಗಂಟೆಗಳಲ್ಲಿನ ಲಿಂಗ ತಾರತಮ್ಯವು ಮತ್ತಷ್ಟು ಹದಗೆಟ್ಟಿದೆ ಎಂದು ವರದಿ ತಿಳಿಸಿದೆ. ‘‘ಭಾರತದಲ್ಲಿ ಆರಂಭಿಕ ಹಂತದಲ್ಲೇ ಮಹಿಳೆಯರು ಕೆಲಸ ಮಾಡಿದ ಗಂಟೆಗಳ ಪ್ರಮಾಣ ಕಡಿಮೆಯಾಗಿತ್ತು. ಹಾಗಾಗಿ, ಭಾರತದಲ್ಲಿ ಮಹಿಳೆಯರು ಕೆಲಸ ಮಾಡಿದ ಗಂಟೆಗಳಲ್ಲಿ ಆಗಿರುವ ಕಡಿತವು ಕೆಳ ಮಧ್ಯಮ ಆದಾಯದ ದೇಶಗಳ ಸರಾಸರಿಯ ಮೇಲೆ ಹೆಚ್ಚಿನ ಪರಿಣಾಮ ಬೀರಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಭಾರತದಲ್ಲಿ ಪುರುಷರು ಕೆಲಸ ಮಾಡಿದ ಗಂಟೆಗಳಲ್ಲಿನ ಕಡಿತವು ಈ ಸರಾಸರಿಯ ಮೇಲೆ ದೊಡ್ಡ ಪರಿಣಾಮ ಬೀರಿದೆ’’ ಎಂದು ವರದಿ ಹೇಳುತ್ತದೆ.

ಈ ಅಂಕಿ-ಸಂಖ್ಯೆಗಳನ್ನು ಐಎಲ್‌ಒದ ಅಧಿಕಾರಿ ಯೊಬ್ಬರು ಹೀಗೆ ವಿವರಿಸುತ್ತಾರೆ: ‘‘ಸಾಂಕ್ರಾಮಿಕಕ್ಕೆ ಮೊದಲು ಕೆಲಸ ಮಾಡುತ್ತಿದ್ದ ಪ್ರತಿ 100 ಮಹಿಳೆಯರ ಪೈಕಿ 12.3 ಮಂದಿ ವರದಿಯಲ್ಲಿ ಪ್ರಸ್ತಾಪಿಸಲಾಗಿರುವ ಇಡೀ ಅವಧಿಯಲ್ಲಿ ಸರಾಸರಿಯಾಗಿ ಕೆಲಸ ಕಳೆದುಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ, ಪ್ರತಿ 100 ಪುರುಷರಿಗೆ ಸಂಬಂಧಿಸಿ ಈ ಸಂಖ್ಯೆಯು 7.5 ಆಗಿರಬಹುದು’’. ‘‘ಹಾಗಾಗಿ, ಭಾರತೀಯ ಉದ್ಯೋಗ ಕ್ಷೇತ್ರದಲ್ಲಿ ಮೊದಲೇ ಇದ್ದ ಗಣನೀಯ ಪ್ರಮಾಣದ ಲಿಂಗ ತಾರತಮ್ಯವನ್ನು ಸಾಂಕ್ರಾಮಿಕವು ಉಲ್ಬಣಿಸಿದಂತೆ ಕಂಡುಬರುತ್ತದೆ’’.

ಚೀನಾದಲ್ಲಿ ಹೊಸದಾಗಿ ಹೇರಲಾಗುತ್ತಿರುವ ಲಾಕ್‌ಡೌನ್‌ಗಳು, ಯುಕ್ರೇನ್ ಮೇಲೆ ರಶ್ಯ ನಡೆಸಿರುವ ದಾಳಿ ಹಾಗೂ ಇಂಧನ ಮತ್ತು ಆಹಾರದ ಬೆಲೆಗಳಲ್ಲಿ ಆಗಿರುವ ಜಾಗತಿಕ ಏರಿಕೆಯು ಇವುಗಳಿಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಮಾನವೀಯ ವಿಧಾನವನ್ನು ಅನುಸರಿಸುವಂತೆ ಐಎಲ್‌ಒ ತನ್ನ ಸದಸ್ಯ ದೇಶಗಳನ್ನು ಒತ್ತಾಯಿಸಿದೆ. ಆರ್ಥಿಕ ವಿಪ್ಲವಗಳು, ಸಂಭಾವ್ಯ ಸಾಲದ ಹೊರೆ ಮತ್ತು ಜಾಗತಿಕ ಪೂರೈಕೆ ಸರಪಣಿಯಲ್ಲಿನ ವ್ಯತ್ಯಯಗಳ ಹಿನ್ನೆಲೆಯಲ್ಲಿ, 2022ರಲ್ಲಿ ಕೆಲಸದ ಗಂಟೆಗಳ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು. ಅದೂ ಅಲ್ಲದೆ, ಈ ಅಂಶಗಳು ಮುಂದಿನ ತಿಂಗಳುಗಳಲ್ಲಿ ಜಾಗತಿಕ ಕಾರ್ಮಿಕ ಮಾರುಕಟ್ಟೆಗಳ ಮೇಲೂ ವ್ಯಾಪಕ ಪರಿಣಾಮಗಳನ್ನು ಬೀರಬಹುದು ಎಂದು ವರದಿ ಹೇಳಿದೆ.

ಸಾಂಕ್ರಾಮಿಕದ ಬಳಿಕದ ಚೇತರಿಕೆಯ ಹಾದಿಯಲ್ಲಿ ಶ್ರೀಮಂತ ಮತ್ತು ಬಡ ದೇಶಗಳ ಆರ್ಥಿಕತೆಗಳ ನಡುವಿನ ಕಂದರವು ಹೆಚ್ಚುತ್ತಾ ಹೋಗುತ್ತಿದೆ ಎಂಬುದಾಗಿಯೂ ವರದಿ ಹೇಳಿದೆ. ‘‘ಅಧಿಕ ಆದಾಯದ ದೇಶಗಳಲ್ಲಿ ಕೆಲಸದ ಗಂಟೆಗಳ ಸಂಖ್ಯೆಯಲ್ಲಿ ಸುಧಾರಣೆ ಕಂಡುಬಂದರೆ, ಕಡಿಮೆ ಆದಾಯ ಹಾಗೂ ಕೆಳ ಮಧ್ಯಮ ಆದಾಯಗಳನ್ನು ಹೊಂದಿದ ದೇಶಗಳು 2022ರ ಮೊದಲ ತ್ರೈಮಾಸಿಕದಲ್ಲಿ ತೀವ್ರ ಹಿನ್ನಡೆಯನ್ನು ಅನುಭವಿಸಿವೆ’’ ಎಂದು ವರದಿ ಹೇಳಿದೆ.

ಈ ವರದಿಗೆ ಪ್ರತಿಕ್ರಿಯಿಸಿರುವ ಕಾರ್ಮಿಕ ಸಂಘಟನೆಗಳು, ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿವೆ.

‘‘ಕೋವಿಡ್-19 ಸಾಂಕ್ರಾಮಿಕದ ಬಳಿಕ, ಭಾರತದಲ್ಲಿ, ಅದರಲ್ಲೂ ಮುಖ್ಯವಾಗಿ ಆರೋಗ್ಯ ಕ್ಷೇತ್ರದಲ್ಲಿ ಮಹಿಳಾ ಉದ್ಯೋಗ ಪ್ರಮಾಣವು ಕಡಿಮೆಯಾಗಿದೆ. ಕಾರ್ಮಿಕರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಬೇಕು ಎಂದು ಐಎಲ್‌ಒ ವರದಿ ಹೇಳುತ್ತದೆ. ಜನರಿಗೆ ಉತ್ತಮ ಉದ್ಯೋಗ ಮತ್ತು ಉತ್ತಮ ವೇತನ ನೀಡಬೇಕೆಂದು ಐಎಲ್‌ಒ ಪ್ರತಿಪಾದಿಸುತ್ತಿದೆ. ಭಾರತದಲ್ಲಿ ಉತ್ತಮ ಉದ್ಯೋಗಗಳು ಲಭ್ಯವಿಲ್ಲ. ಹೆಚ್ಚಿನ ಜನರು ಯಾವುದೇ ಸಾಮಾಜಿಕ ಭದ್ರತೆಯಿಲ್ಲದೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಉತ್ತಮ ವೇತನವಿಲ್ಲದಿದ್ದರೆ ಖರೀದಿ ಸಾಮರ್ಥ್ಯವೂ ಕಡಿಮೆಯಾಗುತ್ತಿದೆ. ವೇತನಕ್ಕೆ ಸಂಬಂಧಿಸಿದ ಮಸೂದೆಯನ್ನು 2019ರಲ್ಲಿ ಅಂಗೀಕರಿಸಲಾಗಿದೆ. ಆದರೆ ಅದು ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. 1948ರಲ್ಲಿ ವೇತನ ಸಮಿತಿಯು, ಕನಿಷ್ಠ ವೇತನ, ಬದುಕಲು ಬೇಕಾಗುವಷ್ಟು ವೇತನ ಮತ್ತು ಉತ್ತಮ ವೇತನವನ್ನು ಅನುಷ್ಠಾನಗೊಳಿಸುವಂತೆ ಸರಕಾರವನ್ನು ಒತ್ತಾಯಿಸಿತ್ತು. ಆದರೆ, ಕೈಗಾರಿಕೋದ್ಯಮಿಗಳ ಒತ್ತಡದಿಂದಾಗಿ ಕನಿಷ್ಠ ವೇತನವನ್ನು ಜಾರಿಗೊಳಿಸಲೂ ನಮಗೆ ಸಾಧ್ಯವಾಗಿಲ್ಲ’’ ಎಂದು ಭಾರತೀಯ ಮಜ್ದೂರ್ ಸಂಘ (ಬಿಎಮ್‌ಎಸ್)ದ ಪ್ರಧಾನ ಕಾರ್ಯದರ್ಶಿ ಬಿನೊಯ್ ಕುಮಾರ್ ಸಿನ್ಹಾ ಹೇಳಿದ್ದಾರೆ.

ಐಎಲ್‌ಒದ ಮುನ್ನೋಟಗಳು ಭಾರತದ ನೈಜ ಚಿತ್ರಣವನ್ನು ಗೌಣವಾಗಿಸಿವೆ ಎಂದು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಅಮರ್‌ಜೀತ್ ಕೌರ್ ಹೇಳುತ್ತಾರೆ. ‘‘ನಮ್ಮ ಲೆಕ್ಕಾಚಾರದ ಪ್ರಕಾರ, ಲಾಕ್‌ಡೌನ್ ವೇಳೆ ಕೆಲಸ ಕಳೆದುಕೊಂಡವರ ಪೈಕಿ ಶೇ. 30ರಿಂದ 60 ಮಂದಿ ಮತ್ತೆ ಯಾವುದೇ ಕೆಲಸಕ್ಕೆ ಸೇರಿಕೊಂಡಿಲ್ಲ. ಎಮ್‌ಎಸ್‌ಎಮ್‌ಇ (ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳು)ಗಳ ಪೈಕಿ ಮೂರನೇ ಒಂದು ಭಾಗ ಮರುಚೈತನ್ಯ ಕಂಡಿಲ್ಲ ಎಂದು ಎಮ್‌ಎಸ್‌ಎಮ್‌ಇಗಳ ಸಂಘ ನಡೆಸಿರುವ ಸಮೀಕ್ಷೆ ತಿಳಿಸಿದೆ. ಹಣ್ಣುಗಳು ಮತ್ತು ತರಕಾರಿಗಳ ಅಧಿಕ ಬೆಲೆಗಳಿಂದಾಗಿ ಬೀದಿ ಬದಿ ಮಾರಾಟಗಾರರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮೊದಲ ಲಾಕ್‌ಡೌನ್ ಬಳಿಕ, ಶೇ. 50ರಷ್ಟು ಮಹಿಳಾ ಕೆಲಸಗಾರರು ನಗರಗಳಿಗೆ ಹಿಂದಿರುಗಿದ್ದಾರೆ ಎನ್ನುವುದನ್ನು ಕೇಂದ್ರ ಸರಕಾರ ಒಪ್ಪಿಕೊಂಡಿದೆ. ಒಟ್ಟಾರೆಯಾಗಿ, ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಪ್ರಾತಿನಿಧ್ಯ ಕಡಿಮೆಯಾಗಿದೆ. ನಮಗೆ ಹೆಚ್ಚಿನ ಉದ್ಯೋಗಗಳು ಬೇಕು. ಸರಕಾರಗಳು ಈ ನಿಟ್ಟಿನಲ್ಲಿ ಹೆಚ್ಚೆಚ್ಚು ಕೆಲಸಗಳನ್ನು ಮಾಡುವ ಅಗತ್ಯವಿದೆ. ಉದ್ಯೋಗ ಕಡಿತ ಆಗದಂತೆ ಅವರು ನೋಡಿಕೊಳ್ಳಬೇಕಾಗಿದೆ’’ ಎಂದು ಕೌರ್ ಹೇಳುತ್ತಾರೆ.

 ಕೃಪೆ: thehindu.com

Writer - ಎಮ್. ಜಿಗೀಶ್

contributor

Editor - ಎಮ್. ಜಿಗೀಶ್

contributor

Similar News