ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯಿಂದ ರೋಹಿತ್ ಚಕ್ರತೀರ್ಥ ಕೈಬಿಡಲು ಕಾಂಗ್ರೆಸ್‌ ಒತ್ತಾಯ

Update: 2022-05-26 06:30 GMT

ಮಂಗಳೂರು, ಮೇ  26: ಸರಕಾರಕ್ಕೆ ತಾಕತ್ತಿದ್ದರೆ ಶಾಲಾ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯಿಂದ ರೋಹಿತ್ ಚಕ್ರತೀರ್ಥರನ್ನು ಬದಲಾಯಿಸಲಿ. ಎಲ್ಲರಿಂದಲೂ ವಿರೋಧ ಬರುತ್ತಿರುವಾಗ ಮೊಂಡುವಾದ ಯಾಕೆ ಸರಕಾರಕ್ಕೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಾಲಾ ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿ ಸರಕಾರ ಗೊಂದಲ ಸೃಷ್ಟಿ ಮಾಡಿದೆ. ಸರಕಾರದ ವೆಬ್ಸೈಟ್ ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಷಯ ಕೈ ಬಿಟ್ಟಿರುವುದು ಬಹಿರಂಗಗೊಂಡಿತ್ತು. ಆದರೆ ಶಿಕ್ಷಣ  ಸಚಿವರು, ಜಿಲ್ಲೆಯ ಸಚಿವರು ಕೂಡಾ ಕೈಬಿಟ್ಟಿಲ್ಲ ಎಂದು ಹೇಳಿದ್ದರು. ಈಗ ಕನ್ನಡ ಪಠ್ಯ ದಲ್ಲಿ‌ ಸೇರಿಸುವುದಾಗಿ ಹೇಳಿದ್ದಾರೆ. ತೆಗೆಯದಿದ್ದಲ್ಲಿ ಸೇರಿಸುವುದು ಯಾಕೆ? ಯಾಕೆ ಇಂತಹ ಗೊಂದಲ ಸೃಷ್ಟಿ. ಬಿಜೆಪಿ ನಾಯಕರು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ಮೊದಲು ಪಠ್ಯಪುಸ್ತಕದಲ್ಲಿ ಭಗತ್ ಸಿಂಗ್, ನಾರಾಯಣ ಗುರು ಪಠ್ಯ ಕೈ ಬಿಟ್ಟಿದ್ದರು. ವಿರೋಧ ವ್ಯಕ್ತವಾಗುತ್ತಲೇ ಪಠ್ಯವನ್ನು ಕನ್ನಡ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ. ಆಗಿದ್ದರೆ ಸಮಾಜ ವಿಜ್ಞಾನದಿಂದ ಪಠ್ಯ ತೆಗೆದಿದ್ದು ಸತ್ಯ ಎಂದು ಒಪ್ಪಿಕೊಳ್ಳಲಿ. ನಾರಾಯಣ ಗುರುಗಳ ಅನುಯಾಯಿಗಳು ಎಂದೆನಿಸುವ ಸಚಿವರು ಕೂಡಾ ಇದನ್ನು ಸಮರ್ಥಿಸುತ್ತಾರೆ. ಈ ಹಿಂದಿನ ಪಠ್ಯದಲ್ಲಿ ಯಾವುದೇ ಗೊಂದಲ ಇರಲಿಲ್ಲ. ಮಕ್ಕಳಿಗೆ ಸಂವಿಧಾನಬದ್ಧ ಪ್ರಜಾಸತ್ತಾತ್ಮಕ ಶಿಕ್ಷಣ ನೀಡಬೇಕು, ಬದಲಿಗೆ ಕೇಸರೀಕರಣವನ್ನು ತಲೆಗೆ ತುಂಬಬಾರದು. ಕೆಲವು ಲೇಖಕರು ತಮ್ಮ ಪಠ್ಯ ಅಳವಡಿಕೆಗೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಹೊಸತಾಗಿ‌ ಸಮಿತಿ‌ ರಚಿಸಿ ಶಿಕ್ಷಣ ತಜ್ಞರನ್ನು ಸೇರಿಸಬೇಕು ಎಂದು‌ ಅವರು‌ ಆಗ್ರಹಿಸಿದರು.

ಮಳಲಿ ಮಸೀದಿಯಲ್ಲಿ ತಾಂಬೂಲ ಪ್ರಶ್ನೆ ವಿಚಾರ

ಇದೊಂದು ಕೋರ್ಟ್ ನಲ್ಲಿರುವಂತಹ ಸೂಕ್ಷ್ಮ ವಿಚಾರ. ಶಿಕ್ಷಣ, ಜಾತಿ, ಧರ್ಮ ಎಲ್ಲದರಲ್ಲೂ ರಾಜಕಾರಣ ಕಾಣುವಂತಾಗಿದೆ. ಇದರಿಂದ ದೇಶಕ್ಕೆ ಒಳ್ಳೆಯದಾಗಲ್ಲ. ಧರ್ಮ, ಜಾತಿ, ಮನಸ್ಸು ವಿಭಜನೆ ಅಪಾಯಕಾರಿ. ಈ ದೇಶದ ಪರಂಪರೆ ಧರ್ಮ ಸಮನ್ವಯತೆ ನೇಲೆ ನಿಂತಿದೆ ಎಂದು ಸುದ್ದಿಗಾರರ ಪ್ರಶ್ನೆ ಯೊಂದಕ್ಕೆ ಅವರು ಪ್ರತಿಕ್ರಿಯೆ ನೀಡಿದರು.

ಇತಿಹಾಸದಲ್ಲಾದ ಘಟನೆಯನ್ನು ಕೆದಕುವುದರಿಂದ ಸಮಾಜ ಒಡೆಯುತ್ತದೆ. ವಿವಾದ ಕೋರ್ಟ್ ನಲ್ಲಿರುವಾಗ ತಾಂಬೂಲ ಪ್ರಶ್ನೆ ಸರಿಯೇ? ನಾಳೆ ಮುಸ್ಲಿಮರು ಅದೇ ರೀತಿ ಚಿಂತನೆಗೆ ಮುಂದಾದರೆ ಸಂಘರ್ಷ ಉಂಟಾಗುತ್ತದೆ. ಸರಕಾರದ ವೈಫಲ್ಯವೇ ಇದಕ್ಕೆಲ್ಲ ಕಾರಣ ಎಂದು‌ ಅವರು‌ ಹೇಳಿದರು.

ಧ್ವನಿವರ್ಧಕ ಬಳಕೆಗೆ ಅನುಮತಿ ಕಡ್ಡಾಯ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಯಾರಿಗೋ ಒಬ್ಬರಿಗೆ ತೊಂದರೆ ಮಾಡಲು ಹೋಗಿ ಎಲ್ಲಾ ಜನರಿಗೆ ಅನ್ಯಾಯವಾಗಿದೆ. ಯಕ್ಷಗಾನ, ನಾಟಕ, ಭೂತಕೋಲಗಳಿಗೆ ಇನ್ಮುಂದೆ ಅನುಮತಿಗೆ ಹರಸಾಹಸ ಪಡಬೇಕಿದೆ.

ಸುಪ್ರೀಂ ಕೋರ್ಟ್ ಹೇಳಿದ ಎಲ್ಲ ಆದೇಶ ಅನುಷ್ಠಾನ ಆಗಿದೆಯೇ? ಹೆದ್ದಾರಿ ಬದಿ ಇರುವ ಧಾರ್ಮಿಕ ಕೇಂದ್ರಗಳನ್ನು  ಧ್ವಂಸ ಮಾಡಲು ಕೋರ್ಟ್ ಈ ಹಿಂದೆಯೇ ಹೇಳಿತ್ತು. ಅದನ್ನು  ಅನುಷ್ಠಾನ ಮಾಡಲಾಗಿದೆಯೇ? ಸರಕಾರ ಸಾಧಕ ಬಾಧಕ ನೋಡಿ ಕ್ರಮಕ್ಕೆ ಮುಂದಾಗಬೇಕು. ಜಿ.ಪಂ ಚುನಾವಣೆ  ವಿಚಾರದಲ್ಲಿಯೇ ಸುಪ್ರೀಂ ಕೋರ್ಟ್ ಆದೇಶ ಪಾಲನೆಯಾಗಿಲ್ಲ. ಇಂತಹ ದ್ವಿಮುಖ ಧೋರಣೆ ಆಡಳಿತ ಸರಿಯಲ್ಲ. ಆಝಾನ್ ಶಬ್ದ ಕಡಿಮೆ ಮಾಡಲು ಮುಸ್ಲಿಮರು ಒಪ್ಪಿಕೊಂಡಿದ್ದಾರೆ. ಸರಕಾರ ಇಂತಹ ವಿಚಾರಗಳನ್ನು ಸೌಹಾರ್ದತೆಯಿಂದ ಬಗೆಹರಿಸಬಹುದಿತ್ತು. ಆದರೆ ಸರಕಾರದಲ್ಲಿ ಬದ್ಧತೆ ಇಲ್ಲ ಎಂದವರು‌ ಹೇಳಿದರು.

ಗೋಷ್ಠಿಯಲ್ಲಿ ಮುಖಂಡರಾದ ಸದಾಶಿವ ಉಳ್ಳಾಲ್, ವಿಶ್ವಾಸ್ ಕುಮಾರ್ ದಾಸ್, ಶುಬೋದಯ ಆಳ್ವ, ಸಿ.ಎಂ. ಮುಸ್ತಪಾ, ಅಬ್ದುಲ್ ಸಲೀಂ ಪಾಂಡೇಶ್ವರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News