ಮತಾಂತರ ನಿಷೇಧ ಕಾಯಿದೆ ವ್ಯಾಪಕ ಲೋಪ ದೋಷಗಳಿಂದ ಕೂಡಿದೆ: ಸಮಾನ ಮನಸ್ಕರು ಮಂಗಳೂರು

Update: 2022-05-26 07:43 GMT

ಮಂಗಳೂರು, ಮೇ 26:  ಕರ್ನಾಟಕ ರಾಜ್ಯ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದಿರುವ ಕರ್ನಾಟಕ ಧಾರ್ಮಿಕ ಸ್ವತಂತ್ರ ಹಕ್ಕು ಸಂರಕ್ಷಣಾ ಅಧಿನಿಯಮ-2021 ಮತಾಂತರ ನಿಷೇಧ ಕಾಯಿದೆ ವ್ಯಾಪಕ ಲೋಪ ದೋಷಗಳಿಂದ ಕೂಡಿದೆ ಮತ್ತು ಇದರ ಉದ್ದೇಶ ನಿರ್ದಿಷ್ಟ ಸಮುದಾಯ ಹಾಗೂ ಸೇವಾ ಸಂಸ್ಥೆಗಳಿಗೆ ಕಿರುಕುಳ ನೀಡುವಂತೆ ತೋರುತ್ತಿದೆ ಎಂದು ಸಮಾನ ಮನಸ್ಕರು ಮಂಗಳೂರು ತಿಳಿಸಿದೆ.

ಈ ಕಾನೂನನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು, ಕಾನೂನು ತಜ್ಞರ ಹಾಗೂ ಸಾರ್ವಜನಿಕ ಸಂವಾದಕ್ಕಿಡಬೇಕು  ಎಂದು ಒತ್ತಾಯಿಸಿದೆ.

ಸುದ್ದಿಗೋಷ್ಟಿಯಲ್ಲಿಂದು ಸಮಾನ ಮನಸ್ಕರ ಪರವಾಗಿ ಮಾತನಾಡಿದ ಮಾಜಿ ಶಾಸಕ ಜೆ. ಆರ್. ಲೋಬೊ, ಈ ಹೊಸ ಕಾಯಿದೆಯ ಪ್ರಕಾರ ಶಿಕ್ಷಣ / ಆರೋಗ್ಯ/ ಸೇವೆಯ ಹೆಸರಿನಲ್ಲಿ ಆಮಿಷ ತೋರಿ ಮತಾಂತರ ಮಾಡಬಾರದು ಎಂದಿದೆ. ಮೇಲ್ನೋಟಕ್ಕೆ ಎಲ್ಲರೂ ಒಪ್ಪುವಂತದ್ದೆ, ಆದರ, ರಾಜ್ಯದಲ್ಲಿ ಸಾವಿರಾರು ಸಂಸ್ಥೆಗಳು (ಹಿಂದೂ ಮುಸ್ಲಿಂ ಕ್ರೈಸ್ತ ಜೈನ್ ಇತ್ಯಾದಿ ಸಮುದಾಯದವರು ನಡೆಸುವಂತದ್ದು.) ಕಾರ್ಯ ನಿರ್ವಹಣೆ ಮಾಡುತ್ತಿದೆ. ಇಲ್ಲಿ ಅನಾಥಾಶ್ರಮ, ವೃದ್ಧಾಶ್ರಮಗಳು ಉಚಿತ ಸೇವೆ ಸಲ್ಲಿಸುತ್ತಿವೆ. ಅದೇ ರೀತಿ ಕಲವು ಸಂಸ್ಥೆಗಳು ಶಿಕ್ಷಣ ಶುಲ್ಕದಲ್ಲಿ ಬಡವರಿಗೆ ರಿಯಾಯಿತಿ, ಉಚಿತ ಆರೋಗ್ಯ ಸೇವೆ ಕೂಡಾ ಮಾಡುತ್ತಿವೆ. ಹೀಗೆ ಮಾಡುವಾಗ ಜಾತಿ, ಧರ್ಮಗಳನ್ನು ನೋಡದೇ ಮಾಡುತ್ತಾರೆ. ಆದರೆ ಈ ಕಾಯಿದೆಯಡಿ ಮತಾಂತರ ಆರೋಪದಲ್ಲಿ  ದೂರು ನೀಡಬಹುದಾಗಿದೆ. ಇದು ಬಿಜೆಪಿ ಸರಕಾರದ ಹಿಡೆನ್ ಅಜೆಂಡಾ ಆಗಿದ್ದು, ಧರ್ಮ ಜಾತಿ ಹೆಸರಿನಲ್ಲಿ ಸಮಾಜ ಒಡೆಯುವ ಯತ್ನ ಎಂದು ಆರೋಪಿಸಿದರು.

ಈ ಕಾನೂನು ನಿರ್ದಿಷ್ಟ ಸಂಸ್ಥೆಯ ಮೇಲೆ ದ್ವೇಷದಿಂದ, ಅಸೂಯೆಯಿಂದ ಅಥವಾ ರಾಜಕೀಯ/ ಸೈದ್ಧಾಂತಿಕ ಕಾರಣದ ಭಿನ್ನಾಭಿಪ್ರಾಯದಿಂದ ಉಚಿತ ಸೇವೆಯನ್ನೇ ಆಮಿಷವೆಂದೂ ಬಿಂಬಿಸಿ, ಮತಾಂತರ ಯತ್ನ ಎಂದು ದೂರು ನೀಡಬಹುದು. ಅಂದರೆ ಯಾವುದಾರೂ ದ್ವೇಷ ಅಥವಾ ಪೂರ್ವಾಗ್ರಹದಿಂದ ಇಂತಹ ದೂರುಗಳನ್ನು ಯೋಚಿತವಾಗಿ ದಾಖಲಿಸಲು ಈ ಕಾನೂನು ಅವಕಾಶ ನೀಡುತ್ತದೆ. ತಮಗೆ ಅಗದ ಸಂಸ್ಥೆಯ ವಿರುದ್ಧ ಒಂದು ದೂರು ದಾಖಲಿಸಿ, ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡಬಹುದಾಗಿದೆ.

ಸೇವೆಯ  ದೃಷ್ಟಿಯಿಂದ ಕಾರ್ಯ ಮಾಡುವ ಸಂಸ್ಥೆಗಳು, ಅದನ್ನು ಕೈಬಿಡಬೇಕಾಗುತ್ತದೆ. ಆಗ ಎಲ್ಲಾ ಸಮುದಾಯದ ಬಡವರಿಗೆ ನಿರ್ಗತಿಕರಿಗೆ ಅನ್ಯಾಯವಾಗುತ್ತದೆ ಎಂದು‌ ಅವರು ಹೇಳಿದರು.

ಇದರಿಂದ ತೊಂದರೆಗೊಳಗಾಗುವವರು ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಹಾಗೂ ಪರಿಶಿಷ್ಟ ಜಾತಿ ಅಥವ ಪಂಗಡದವರು. ಇವರು ಈ ಹಿಂದೆ ಕೂಡ ಶಿಕ್ಷಣದಿಂದ ವಂಚಿತರಾದವರು ಇಂತಹ ಕಾನೂನನ್ನು ಜಾರಿ ಮಾಡಿ ಈ ವರ್ಗದವರನ್ನು ಶಿಕ್ಷಣ, ಆರೋಗ್ಯ ಹಾಗೂ ಇತರ ಸಹಾಯ ಸೌಲಭ್ಯದಿಂದ ವಂಚಿತ ಮಾಡುವ ಉದ್ದೇಶವಾಗಿದೆ. ಬಿಜೆಪಿ ಸರಕಾರ ಮೇಲ್ವರ್ಗದವರ ಆಸೆ ಆಕಾಂಕ್ಷೆಗಳನ್ನು ಈಡೇರಿಸುವ ಸರಕಾರವಾಗಿದೆ ಎಂದು ಅವರು ಹೇಳಿದರು.

ಕರ್ನಾಟಕ ರಾಜ್ಯದಲ್ಲಿ 18% ಕ್ರೈಸ್ತ ಜನಸಂಖ್ಯೆ ಇರುವುದು ಕರ್ನಾಟಕದಲ್ಲಿ ಎಷ್ಟೋ ಶಾಲೆ ಕಾಲೇಜುಗಳನ್ನು ಹಾಗೂ ಆಶ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಇದರಲ್ಲಿ ಸಹಾಯ ಪಡೆದ, ಆಶ್ರಯ ಪಡೆದ ಎಲ್ಲರೂ ಕ್ರೈಸ್ತ ಮತಕ್ಕೆ ಮತಾಂತರ ಗೊಂಡಿದ್ದರೆ ಇವತು ಕ್ರೈಸ್ತ ಜನಸಂಖ್ಯೆ 75 ಶೇಖಡದಷ್ಟು ಆಗಿರಬೇಕಿತ್ತು. ಅಂತಹ ಯಾವುದೇ ಸನ್ನಿವೇಶ ಕೂಡ ಉದ್ಭವಿಸಿಲ್ಲ. ಆದುದ್ದರಿಂದ ಬಿಜೆಪಿ ಸರಕಾರವು ರಾಜಕೀಯ ಉದ್ದೇಶದಿಂದ ಒಂದು ಧರ್ಮವನ್ನು ಇನ್ನೊಂದು ಧರ್ಮದ ವಿರುದ್ಧ ಎತ್ತಿ ಕಟ್ಟುವ ಷಡ್ಯಂತ್ರದ ಭಾಗ ಎಂದು  ಅವರು‌ ಆರೋಪಿಸಿದರು.

ಸಿಪಿಐ ಮುಖಂಡ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಇದು ಬಿಜೆಪಿ ಸರಕಾರ ಅಲ್ಪ ಸಂಖ್ಯಾಂತರನ್ನು ಗುರಿಯಾಗಿಸಿ ನಡೆಸುತ್ತಿರುವ ರಾಜಕೀಯ. ಇದು ಕೇವಲ ಕ್ರೈಸ್ತ ಸಮುದಾಯದ ಸಂಸ್ಥೆಗಳಿಗೆ ಮಾತ್ರ ಅನ್ವಯವಾಗುವುದಲ್ಲ. ಆಶ್ರಯ, ಶಿಕ್ಷಣ, ಸೇವೆ ನೀಡುವ  ಮೇಲೂ ಪರಿಣಾಮ ಬೀರಲಿದೆ. ದ.ಕ. ಜಿಲ್ಲೆಯಲ್ಲಿ ಶೇ. 2ರಿಂದ ಶೇ. 1.7ಕ್ಕೆ ಕ್ರೈಸ್ತರ ಜನಸಂಖ್ಯೆ ಇಳಿಕೆಯಾಗಿದೆ. ಆದರೆ ನೂರಾರು ವರ್ಷಗಳಿಂದ ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯ ಸೇವೆಯಲ್ಲಿ ಕ್ರೈಸ್ತ ಸಂಸ್ಥೆಗಳು ತೊಡಗಿಕೊಂಡಿರುವ ಕಾರಣದಿಂದ ದಲಿತರು, ಹಿಂದುಳಿದ ವರ್ಗಗಳವರು ಪ್ರಯೋಜನ ಪಡೆಯಲು ಸಾಧ್ಯವಾಗಿದೆ. ಈ ಕಾನೂನಿನಲ್ಲಿ ಮತಾಂತರಕ್ಕೆ ಅವಕಾಶ ಇಲ್ಲ ಎನ್ನಲಾಗಿದ್ದು ಮರು ಮತಾಂತರಕ್ಕೆ ಅವಕಾಶ ನೀಡಿರುವುದು ನಿಜಕ್ಕೂ ಖೇದಕರ ಎಂದರು.

ಜೆಡಿಎಸ್ ನ ಎಂ.ಬಿ.ಸದಾಶಿವ ಮಾತನಾಡಿ, ಸರಕಾರ  ತನ್ನ ವೈಫಲ್ಯ ಮರೆಮಾಚಲು ಕೋಮು ಸಂಘರ್ಷಕ್ಕೆ ಅವಕಾಶ ಆಗುವ ಕೋಮು ಧ್ರುವೀಕರಣ ಯತ್ನ ಇದಾಗಿದೆ ಎಂದರು.

ಸಾಮಾಜಿಕ ಕಾರ್ಯಕರ್ತ ಎಂ.ಜಿ. ಹೆಗಡೆ ಮಾತನಾಡಿ, ಕಾನೂನಿನ ಪರಿಭಾಷೆಗೆ ಸೂಕ್ತವಾಗದ, ಅವೈಜ್ಞಾನಿಕ ಕಾನೂನು ಎಂದರು.

ಗೋಷ್ಠಿಯಲ್ಲಿ ನ್ಯಾಯವಾದಿ ಕಳ್ಳಿಗೆ ತಾರನಾಥ ಶೆಟ್ಟಿ, ಹೊನ್ನಯ್ಯ, ಮುಹಮ್ಮದ್, ಸವದ್, ಪ್ರಕಾಶ್ ಸಾಲಿಯಾನ್, ವಿಶ್ವಾಸ್ ಕುಮಾರ್ ದಾಸ್, ರಮಾನಂದ ಪೂಜಾರಿ, ಪ್ರೇಮ್,  ಟಿ.ಕೆ. ಸುಧೀರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News