ರೋಹಿತ್ ಚಕ್ರತೀರ್ಥ ಪರಿಷ್ಕರಿಸಿದ ಪಠ್ಯ ಅಳವಡಿಸಿದರೆ ಸಿಎಂ ಮನೆಗೆ ಘೇರಾವ್: ಮಾವಳ್ಳಿ ಶಂಕರ್ ಎಚ್ಚರಿಕೆ

Update: 2022-05-26 17:28 GMT
ಮಾವಳ್ಳಿ ಶಂಕರ್ 

ಬೆಂಗಳೂರು, ಮೇ 26: ರೋಹಿತ್ ಚಕ್ರತೀರ್ಥ ಅವರ ಅಧ್ಯಕ್ಷತೆಯಲ್ಲಿ ನಡೆದ ವಿವಾದಿತ ಪಠ್ಯಕ್ರಮವನ್ನು ಜಾರಿಗೊಳಿಸದಂತೆ ಮೇ 31ಕ್ಕೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಯನ್ನು ಪರಿಗಣನೆಗೆ ತೆಗೆದುಕೊಳ್ಳದೆ, ಪರಿಷ್ಕೃತ ಪಠ್ಯಕ್ರಮವನ್ನು ಅಳವಡಿಸಿದಲ್ಲಿ, ಮುಖ್ಯಮಂತ್ರಿ ಮನೆಗೆ ಘೇರಾವ್ ಹಾಕಲಾಗುವುದು ಎಂದು ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ಶಾಲೆಗಳು ಆರಂಭವಾಗಿದ್ದರೂ, ಶಾಲೆಗಳಿಗೆ ಪಠ್ಯಪುಸ್ತಕ ರವಾನೆ ಆಗಿಲ್ಲ. ಇದು ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಅವಾಂತರವೇ ಆಗಿದೆ. ಸರಕಾರವು ಸಮಿತಿಯನ್ನು ಸಮರ್ಥನೆ ಮಾಡಿಕೊಳ್ಳಲು ಮುದ್ರಿಸಿದ ಪಠ್ಯವನ್ನು ಹಿಂಪಡೆದು 2 ಕೋಟಿ ರೂ.ಗಳಿಂತ ಅಧಿಕ ಹಣವನ್ನು ವ್ಯರ್ಥ ಮಾಡಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ ಎಂದು ಆರೋಪಿಸಿದರು.

ವಿಧಾನಸೌಧದಲ್ಲಿರುವ ಜನಪ್ರತಿನಿಧಿಗಳು ಆಳ್ವಿಕೆಯನ್ನು ಮಾಡುತ್ತಿಲ್ಲ. ಬದಲಾಗಿ ಕೇಶವ ಕೃಪಾದಲ್ಲಿರುವ ಮುಖಂಡರು ಆಳ್ವಿಕೆ ಮಾಡುತ್ತಿದ್ದಾರೆ ಎಂದು ಅವರು ಅನುಮಾನ ವ್ಯಕ್ತಪಡಿಸಿದರು.

ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಪಠ್ಯಪರಿಷ್ಕರಣೆ ಸರಿಯೇ ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಸಮಿತಿಯಲ್ಲಿ 176 ಜನರಿದ್ದರು. ಆದರೆ ಬಿಜೆಪಿ ಸರಕಾರವು ರಚಿಸಿರುವ ಸಮಿತಿಯಲ್ಲಿ 7 ಜನರಿದ್ದರೂ, ಎಲ್ಲರೂ ಬ್ರಾಹ್ಮಣರೇ ಆಗಿದ್ದಾರೆ. ಈ ಸಮಿತಿಯು ಸೇರಿಸಿದ 10 ಪಠ್ಯಗಳಲ್ಲಿ 9 ಪಠ್ಯಗಳು ಬ್ರಾಹ್ಮಣ ಲೇಖಕರದ್ದೇ ಆಗಿದೆ. ಹಾಗಾಗಿ ಈ ಸಮಿತಿಯ ಪಠ್ಯಕ್ರಮವನ್ನು ರದ್ದುಗೊಳಿಸಿ, ಹಿಂದಿನ ಪಠ್ಯವನ್ನು ಅಳವಡಿಸಬೇಕು ಎಂದರು. 

ದಲಿತ ಮುಖಂಡ ಗುರುಪ್ರಸಾದ್ ಕೆರಗೋಡು ಅವರು ಮಾತನಾಡಿ, ಸಚಿವ ಬಿ.ಸಿ. ನಾಗೇಶ್ ಅವರು ರೋಹಿತ್ ಚಕ್ರತೀರ್ಥ ಅವರನ್ನು ಐಐಟಿ-ಸಿಇಟಿ ಪ್ರೊಪೆಸರ್ ಎಂದು ಮಾಧ್ಯಮಗಳಿಗೆ ಹೇಳಿ ನಗೆಪಾಟಲಿಗೀಡಾಗಿದ್ದಾರೆ. ಅವರ ವಿದ್ಯಾರ್ಹತೆಯನ್ನಾಗಲೀ, ಎಲ್ಲಿನ ಐಐಟಿಯಲ್ಲಿ ಕೆಲಸ ಮಾಡಿದ್ದಾರೆ ಎನ್ನುವುದನ್ನಾಗಲೀ ಇದುವರೆಗೂ ತಿಳಿಸಿಲ್ಲ ಎಂದು ಹೇಳಿದರು. 

ದಲಿತ ಮುಖಂಡ ವಿ. ನಾಗರಾಜ್ ಅವರು ಮಾತನಾಡಿ, ಇಷ್ಟೆಲ್ಲಾ ಅವಾಂತರಗಳು ಸೃಷ್ಟಿಯಾಗಿದ್ದರೂ, ಮುಖ್ಯಮಂತ್ರಿಗಳು ಮಾತನಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ಚುನಾವಣೆ ನಡೆದಾಗ ತಕ್ಕ ಉತ್ತರವನ್ನು ನೀಡಲಾಗುತ್ತದೆ ಎಂದು ಎಚ್ಚರಿಸಿದರು. 

ರಾಜ್ಯ ಬಿಜೆಪಿ ಸರಕಾರವು ದಲಿತರಿಗೆ ಅನ್ಯಾಯ ಮಾಡುತ್ತಿದೆ. ಎಸ್ಸಿಪಿ ಹಾಗೂ ಟಿಎಸ್‍ಪಿ ಯೋಜನೆಯಲ್ಲಿ ಮೀಸಲಿಟ್ಟ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದ್ದು, ಪರಿಶಿಷ್ಟ ಸಮುದಾಯಗಳನ್ನು ಮತಾಂತರ ಮಾಡಿದರೆ, ವಿಶೇಷ ಶಿಕ್ಷೆಯನ್ನು ನೀಡಲಾಗುತ್ತದೆ. ದಲಿತರಿಗೆ ಮನಸ್ಥಿತಿ ಸರಿಯಿಲ್ಲ ಎಂಬ ಅರ್ಥದಲ್ಲಿ ಸರಕಾರ ಮಾತನಾಡುತ್ತಿರುವುದು ಸರಿಯಲ್ಲ.

-ಗುರುಪ್ರಸಾದ್ ಕೆರಗೋಡು, ದಲಿತ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News