ಉಡುಪಿ : ಬಿಜೆಪಿಯಿಂದ ಸೇವೆ, ಸುಶಾಸನ, ಬಡವರ ಕಲ್ಯಾಣ ಅಭಿಯಾನ

Update: 2022-05-26 14:44 GMT

ಉಡುಪಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ೮ನೇ ವರ್ಷದ ಸಾಧನೆಗಳನ್ನು ಆಚರಿ ಸುವ ಸಲುವಾಗಿ ಜಿಲ್ಲೆಯಾದ್ಯಂತ ಮೇ ೩೦ರಿಂದ ಜೂನ್ ೧೪ರವರೆಗೆ ನಡೆಯಲಿರುವ ‘ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣ’ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಕರೆ ನೀಡಿದ್ದಾರೆ.

ಕಡಿಯಾಳಿಯಲ್ಲಿರುವ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ‘ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣ’ ಅಭಿಯಾನದ ವಿವಿಧ ಕಾರ್ಯಕ್ರಮಗಳ ಜಿಲ್ಲಾ ಮತ್ತು ಮಂಡಲಗಳ ಸಂಚಾಲಕರು ಮತ್ತು ಸಹ ಸಂಚಾಲಕರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ, ಜಿಲ್ಲಾ ಮತ್ತು ಮಂಡಲಗಳ ತಂಡದ ಪ್ರಮುಖರ ಪಟ್ಟಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು. 

ಸೇವೆಯು ಸಾಂಕ್ರಾಮಿಕ ಸಮಯದಲ್ಲಿ ರಾಷ್ಟ್ರದ ಸೇವೆಗಾಗಿ ಪ್ರಧಾನಿ ಮೋದಿಯವರ ಅವಿರತ ಪ್ರಯತ್ನಗಳನ್ನು ಸೂಚಿಸುತ್ತದೆ. ಸುಶಾಸನ ಉತ್ತಮ ಆಡಳಿತವನ್ನು ಖಾತ್ರಿಪಡಿಸಿಕೊಳ್ಳಲು ಪ್ರಧಾನಿ ಮೋದಿ ಸರಕಾರದ ವಿವಿಧ ಉಪಕ್ರಮಗಳನ್ನು ಸಂಕೇತಿಸುತ್ತದೆ. ಬಡವರ ಕಲ್ಯಾಣ ಬಡವರ ಪರವಾದ ಕಟ್ಟ ಕಡೆಯ ವ್ಯಕ್ತಿಗೆ ಯೋಜನೆ ಗಳನ್ನು ತಲುಪಿಸಲು ಮತ್ತು ಬಡವರನ್ನು ಮುಖ್ಯವಾಹಿನಿಗೆ ತರಲು ಪ್ರಧಾನಿ ಮೋದಿಯವರ ಬದ್ಧತೆಯನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ನೂರಾರು ಜನಪರ ಯೋಜನೆಗಳು ಮತ್ತು ವಿಶಿಷ್ಟ ಸಾಧನೆ ಗಳೊಂದಿಗೆ ಯಶಸ್ವೀ ೮ ವರ್ಷಗಳನ್ನು ಪೂರೈಸಿರುವ ಸಂಭ್ರಮಾಚರಣೆಯ ಪ್ರಯುಕ್ತ ಹಮ್ಮಿಕೊಂಡಿರುವ ಅಭಿಯಾನದ ಎಲ್ಲಾ ವಿಭಾಗಗಳ ಕಾರ್ಯಕ್ರಮಗಳು ಜಿಲ್ಲೆಯಾದ್ಯಂತ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವಂತೆ ಜಿಲ್ಲಾ ಮತ್ತು ಮಂಡಲಗಳ ತಂಡಗಳು ಬದ್ಧತೆಯಿಂದ ಶ್ರಮವಹಿಸಿ, ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕುಯಿಲಾಡಿ ತಿಳಿಸಿದರು.

ಸಭೆಯಲ್ಲಿ ಬೂತ್ ಸಶಕ್ತೀಕರಣದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಡುಪಿ ಜಿಲ್ಲಾ ವ್ಯಾಪ್ತಿಯ ೧೫ ಮಂದಿ ಪ್ರಮುಖರ ತಂಡವನ್ನು ಘೋಷಿಸಲಾಯಿತು. ಅಭಿಯಾನದ ಜಿಲ್ಲಾ ಸಹ ಸಂಚಾಲಕ ಸದಾನಂದ ಉಪ್ಪಿನಕುದ್ರು ಅಭಿಯಾನದ ಜಿಲ್ಲಾ ಮತ್ತು ಮಂಡಲಗಳ ತಂಡದ ಜವಾಬ್ದಾರಿ ನಿರ್ವಹಣೆಯ ಬಗ್ಗೆ ವಿಸ್ತ್ರತ ಮಾಹಿತಿ ನೀಡಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಅಭಿಯಾನದ ಕಾರ್ಯಕ್ರಮಗಳ ಬಗ್ಗೆ ವಿಭಾಗ ವಾರು ಸಂಚಾಲಕರಿಂದ ಮಾಹಿತಿ ಪಡೆದರು. ಪೂರ್ವಭಾವಿ ಸಭೆಯಲ್ಲಿ ಅಭಿಯಾನದ ಜಿಲ್ಲಾ ಹಾಗೂ ಮಂಡಲಗಳ ಸಂಚಾಲಕರು ಮತ್ತು ಸಹ ಸಂಚಾಲಕರು, ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News