×
Ad

ಮೈಕ್ ಹಿಡಿದು ಭಾಷಣ ಮಾಡಿದರೆ ದೇಶ ಪ್ರೇಮ ಬರುವುದಿಲ್ಲ: ಯು.ಟಿ.ಖಾದರ್

Update: 2022-05-26 22:39 IST

ಕಾಪು : ದೇಶ ಪ್ರೇಮ ಎಂದರೆ ಮೈಕ್ ಹಿಡಿದು ಭಾಷಣ ಮಾಡಿದರೆ ದೇಶ ಪ್ರೇಮ ಬರುವುದಿಲ್ಲ. ಯಾರಿಗಾದರೂ ಬೈದರೆ ದೇಶ ಪ್ರೇಮ ಬರುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ದೇಶದ ಸತ್ಪಜೆಯಾಗಿ ವಿದ್ಯಾರ್ಥಿಗಳನ್ನು ರೂಪಿಸುವುದೇ ನಿಜವಾದ ದೇಶಪ್ರೇಮ ಎಂದು ಯು.ಟಿ.ಖಾದರ್ ಅಭಿಪ್ರಾಯಪಟ್ದಿದ್ದಾರೆ.

ಅವರು ಉಡುಪಿ ಜಿಲ್ಲೆಯ ಕಾಪುವಿನ ಚಂದ್ರನಗರದಲ್ಲಿರುವ ಕ್ರೆಸೆಂಟ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಬೀದರ್‌ನ ಶಾಹೀನ್ ಶಿಕ್ಷಣ ಸಂಸ್ಥೆಯು ಕರಾವಳಿಯ ಕರ್ನಾಟಕದ ಮೊದಲ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ದೇಶವು ಬಲಿಷ್ಠವಾಗಬೇಕಾದರೆ ಶಿಕ್ಷಣದ ಅಗತ್ಯತೆ ಇದೆ. ಜನಪ್ರತಿನಿಧಿಗಳು, ಅಧಿಕಾರಿಗಳಿಂದ ದೇಶ ಬಲಿಷ್ಠವಾಗಲು ಸಾಧ್ಯವಿಲ್ಲ. ಉತ್ತಮ ಜನಾಂಗವನ್ನು ನಿರ್ಮಾಣ ಮಾಡಬೇಕು. ಪ್ರತಿಯೊಬ್ಬರಿಗೂ ಶಿಕ್ಷಣ ಸಿಗುವಂತಾಗಬೇಕು. ಭವಿಷ್ಯದಲ್ಲಿ ದೇಶವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಯಾರೆಲ್ಲಾ ಶಿಕ್ಷಣಕ್ಕೆ ಒತ್ತು ನೀಡಿ ಶಿಕ್ಷಣಕ್ಕಾಗಿ ಸೇವೆ ಸಲ್ಲಿಸುತ್ತಾರೆ ಅವರು ನಿಜವಾದ ದೇಶ ಪ್ರೇಮಿಗಳಾಗುತ್ತಾರೆ ಎಂದರು.

ಉದ್ಘಾಟಿಸಿದ ಶಾಹೀನ್ ಶಿಕ್ಷಣ ಸಂಸ್ಥೆಯ ಸ್ಥಾಪಕ ಡಾ. ಅಬ್ದುಲ್ ಖದೀರ್, ಮಕ್ಕಳಿಗಿಂತ ದೊಡ್ಡ ಆಸ್ತಿ ಬೇರೆ ಏನೂ ಇಲ್ಲ. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು.  ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಣ ಸಂಸ್ಥೆಗಳು ದೇಶ ಪ್ರೇಮ ಹಾಗೂ ಸೌಹಾರ್ದತೆಯನ್ನು ಕಲಿಸುವ ಕೇಂದ್ರಗಳಾಗಬೇಕು. ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ದೊಂದಿಗೆ, ದೇಶ ಪ್ರೇಮವನ್ನು ವೃದ್ಧಿಸುವ ಮತ್ತು ಸೌಹಾರ್ದಯುತ ಪರಿಸರ ನಿರ್ಮಿಸುವ ಶಿಕ್ಷಣವೂ ಅಗತ್ಯ ಇದೆ. ಆಗ ಮಾತ್ರ ಶಿಕ್ಷಣದ ನಿಜವಾದ ಮೌಲ್ಯ ವಿದ್ಯಾರ್ಥಿಗಳಿಗೆ ದೊರಕುತ್ತವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕ್ರೆಸೆಂಟ್ ಶಿಕ್ಷಣ ಸಂಸ್ಥೆಯ ಶಂಶುದ್ದೀನ್ ಯೂಸುಫ್ ಸಾಹೇಬ್, ದೇಶದ ಅತ್ಯುನ್ನದ ಶಿಕ್ಷಣ ಸಂಸ್ಥೆಯನ್ನು ನಮ್ಮ ಸಂಸ್ಥೆಯಲ್ಲಿ ಜೋಡಿಸಿಕೊಂಡು ಪ್ರತ್ಯೇಕ ವಸತಿ ಸಹಿತ ಶಿಕ್ಷಣ ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ. ತಮ್ಮ ಮಕ್ಕಳ ಉತ್ತಮ ಭವಿಷ್ಯವನ್ನು ರೂಪಿಸಲು ಬಯಸುವವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ, ಗುರ್ಮೆ ಫೌಂಡೇಶನ್‍ನ ಸುರೇಶ್ ಶೆಟ್ಟಿ ಗುರ್ಮೆ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ, ಡಿಸಿಸಿ ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ, ನಮ್ಮ ನಾಡ ಒಕ್ಕೂಟದ ಕಾರ್ಕಳ ತಾಲ್ಲೂಕು ಅಧ್ಯಕ್ಷ ರಿಝ್ವಾನ್ ಕಾರ್ಕಳ, ಮೂಳೂರು ಅಲ್ ಇಹ್ಸಾನ್ ಶಿಕ್ಷಣ ಸಂಸ್ಥೆಯ ಮ್ಯಾನೇಜರ್ ಮೌಲಾನಾ ಮುಸ್ತಫಾ ಸಅದಿ,  ಕ್ರೆಸೆಂಟ್  ಶಿಕ್ಷಣ ಸಂಸ್ಥೆಯ ಶಹನಾಝ್ ಬೇಗಂ, ಮುಹಮ್ಮದ್‌ ಆಸೀಫ್ ಶಂಶುದ್ದೀನ್, ಮೆಹಬೂಬ್ ಉಪಸ್ಥಿತರಿದ್ದರು.

ಕ್ರೆಸೆಂಟ್ ಶಿಕ್ಷಣ ಸಂಸ್ಥೇಯ ಅರುಣಾ ಐತಾಳ್ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೇಯ  ನಿರ್ದೆಶಕರಾದ ಜೆ.ಎಸ್. ನವಾಬ್ ಹಸನ್ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News