ಶಿಕ್ಷಣ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಸರಕಾರದ ಪ್ರಯತ್ನದ ವಿರುದ್ಧ ಧ್ವನಿ‌ ಎತ್ತಿ: ಡಿಕೆಶಿ ಕರೆ

Update: 2022-05-27 06:58 GMT

ಬೆಂಗಳೂರು, ಮೇ 27: ರಾಜ್ಯದಲ್ಲಿ ಶಾಲಾ ಪಠ್ಯಪುಸ್ತಕಗಳ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ. ಪಠ್ಯ ಪರಿಷ್ಕರಣೆಯ ಬಗ್ಗೆ ಪರ-ವಿರೋಧಗಳು ಕೇಳಿ ಬರುತ್ತಿವೆ. ಈ ಕುರಿತಂತೆ ಟ್ವೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಜೆಪಿ ಸರಕಾರವು ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಮಾಡುತ್ತಿರುವುದನ್ನು ಖಂಡಿಸಿದ್ದಾರೆ.

"ದೇಶ ಹಾಗೂ ಉತ್ತಮ ಸಮಾಜದ ನಿರ್ಮಾಣಕ್ಕೆ ಶಿಕ್ಷಣ ಅಡಿಪಾಯ. ಆದರೆ ಪ್ರಸಕ್ತ ಬಿಜೆಪಿ ಸರಕಾರವು ಶಿಕ್ಷಣ ಕ್ಷೇತ್ರದಲ್ಲೂ ರಾಜಕೀಯ ಮಾಡಲು ಹೊರಟಿದೆ. ನೈಜ ಇತಿಹಾಸವನ್ನು ತಿರುಚಿ, ಮುಂದಿನ ಪೀಳಿಗೆಗೆ ಹೊಸ ಇತಿಹಾಸವನ್ನು ನೀಡುವ ಕಾರ್ಯದಲ್ಲಿ ಮಗ್ನವಾಗಿದೆ.ಆರೆಸ್ಸೆಸ್‌ ತತ್ವವನ್ನು ಮಕ್ಕಳ ತಲೆಗೆ ತುಂಬಲು ಹೊರಟಿರುವ ರಾಜ್ಯ ಸರಕಾರದ ನಿರ್ಧಾರ ಖಂಡನೀಯ." ಎಂದು ಡಿ.ಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.

ಪಠ್ಯ ಪರಿಷ್ಕರಣೆಯ ಕುರಿತು ಮಾತನಾಡಿರುವ ಅವರು, "ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲೂ ಬಿಜೆಪಿ ಎಲ್ಲರ ವಿರೋಧವನ್ನು ಎದುರಿಸುತ್ತಿದೆ. ಬಿಸಿಯೂಟ ಯೋಜನೆ ಹಳ್ಳ ಹಿಡಿದಿದೆ, ಶಾಲೆಗಳಲ್ಲಿ ಮೂಲ ಸೌಕರ್ಯವಿಲ್ಲ. ಇದರ ನಡುವೆ ಎನ್.ಇ.ಪಿ. ಹೆಸರಿನಲ್ಲಿ 'ನಾಗ್ಪುರ ಶಿಕ್ಷಣ ನೀತಿ' ಜಾರಿಗೆ ತರುವ ಧಾವಂತಕ್ಕೆ ರಾಜ್ಯ ಸರಕಾರ ಬಿದ್ದಿದೆ." ಎಂದು ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ.

"ಶಿಕ್ಷಣ ಕ್ಷೇತ್ರವನ್ನು ಮತ್ತೆ ಸರಿಯಾದ ದಾರಿಗೆ ತರುವ ನಿಟ್ಟಿನಲ್ಲಿ ಶಿಕ್ಷಣ ತಜ್ಞರು, ಸಾಹಿತಿಗಳು, ಚಿಂತಕರು ಸೇರಿದಂತೆ ಸಂಬಂಧಪಟ್ಟ ಎಲ್ಲ ವರ್ಗದವರೂ ಧ್ವನಿಗೂಡಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆ." ಎಂದಿರುವ ಡಿ.ಕೆ.ಶಿವಕುಮಾರ್, "ಶಿಕ್ಷಣವು ಮಕ್ಕಳ ಭವಿಷ್ಯಕ್ಕೆ ಒಂದು ಭದ್ರ ಅಡಿಪಾಯ. ಆ ಅಡಿಪಾಯವು ಎಂದಿಗೂ ಅಲುಗಾಡದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ." ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News