ಮ.ಪ್ರ:‌ ಮೂವರು ಮುಸ್ಲಿಮರ ಎನ್ ಕೌಂಟರ್‌ಗಳ ಕುರಿತು ಪೊಲೀಸ್ ಹೇಳಿಕೆಯನ್ನು ಪ್ರಶ್ನಿಸಿದ ಸತ್ಯಶೋಧನಾ ಸಮಿತಿ

Update: 2022-05-28 15:34 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಮೇ 28: ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಕೃಷ್ಣಮೃಗಗಳು ಮತ್ತು ನವಿಲುಗಳನ್ನು ಬೇಟೆಯಾಡುತ್ತಿದ್ದ ಆರೋಪದಲ್ಲಿ ಪೊಲೀಸ್ ಎನ್ ಕೌಂಟರ್‌ ಗಳಲ್ಲಿ ಮೂವರು ಮುಸ್ಲಿಮರ ಹತ್ಯೆಗಳನ್ನು ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಒಳಗೊಂಡ ಸತ್ಯಶೋಧನಾ ಸಮಿತಿಯು ಪ್ರಶ್ನಿಸಿದೆ.

ನೌಷಾದ್, ಆತನ ಸೋದರ ಶಹಜಾದ್ ಮತ್ತು ಛೋಟು ಪಠಾಣ ಅಲಿಯಾಸ್ ಝಹೀರ್ ಖಾನ್ ಎನ್ನುವವರನ್ನು ಪೊಲೀಸರು ಎನ್ಕೌಂಟರ್ಗಳಲ್ಲಿ ಕೊಂದಿದ್ದರು. ಪೊಲೀಸರು ತಿಳಿಸಿರುವಂತೆ ಸಾಗಾ ಬರ್ಖೇಡಾ ಗ್ರಾಮದ ಸಮೀಪದ ಅರಣ್ಯದಲ್ಲಿ ಕೆಲವು ವ್ಯಕ್ತಿಗಳು ಕೃಷ್ಣಮೃಗಗಳು ಮತ್ತು ನವಿಲುಗಳನ್ನು ಬೇಟೆಯಾಡುತ್ತಿದ್ದಾರೆ ಎಂಬ ಮಾಹಿತಿ ಪಡೆದಿದ್ದ ಪೊಲೀಸ್ ತಂಡವು ಮೇ 14ರ ನಸುಕಿನಲ್ಲಿ ಸ್ಥಳವನ್ನು ತಲುಪಿತ್ತು.

ಈ ವೇಳೆ ಒಂದು ಕುಟುಂಬದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಕಳ್ಳ ಬೇಟೆಗಾರರು ಗುಂಡು ಹಾರಿಸಿದ್ದರಿಂದ ಮೂವರು ಪೊಲೀಸ್ ಅಧಿಕಾರಿಗಳು ಮೃತಪಟ್ಟಿದ್ದರು. ಪೊಲೀಸರು ಪ್ರತಿದಾಳಿ ನಡೆಸಿದಾಗ ನೌಷಾದ್ ಕೊಲ್ಲಲ್ಪಟ್ಟಿದ್ದ. ಆ ವೇಳೆ ಸ್ಥಳದಿಂದ ತಪ್ಪಿಸಿಕೊಂಡಿದ್ದ ಶಹಜಾದ್ನನ್ನು ಮೇ 14ರಂದು ಸಂಜೆ ಎನ್ಕೌಂಟರ್ನಲ್ಲಿ ಕೊಲ್ಲಲಾಗಿತ್ತು. ನಂತರ ಛೋಟು ಪಠಾಣ ಕೂಡ ಪೊಲಿಸ್ ಎನ್ಕೌಂಟರ್ಗೆ ಬಲಿಯಾಗಿದ್ದ.

ಮಾನವ ಹಕ್ಕುಗಳ ಸಂಘಟನೆಗಳ ರಾಷ್ಟ್ರೀಯ ಒಕ್ಕೂಟ (ಎನ್ಸಿಎಚ್ಆರ್ಒ)ವು ಮೇ 25ರಂದು ಬಿಡುಗಡೆಗೊಳಿಸಿರುವ ಸತ್ಯಶೋಧನಾ ವರದಿಯು,ಮೂವರು ಮುಸ್ಲಿಮರ ಹತ್ಯೆಗಳ ಬಗ್ಗೆ ಪ್ರಶ್ನೆಗಳನ್ನೆತ್ತಿದ್ದು,ಅವು ನಕಲಿ ಎನ್ಕೌಂಟರ್ಗಳಾಗಿದ್ದವು ಎಂದು ಬಣ್ಣಿಸಿದೆ.
ಸೇಡು ತೀರಿಸಿಕೊಳ್ಳಲು ಮತ್ತು ಕಳ್ಳಬೇಟೆಯ ನಿಜವಾದ ದುಷ್ಕರ್ಮಿಗಳನ್ನು ರಕ್ಷಿಸಲು ಈ ಎನ್ಕೌಂಟರ್ಗಳನ್ನು ನಡೆಸಲಾಗಿದೆ ಎಂದು ವರದಿಯು ಹೇಳಿದೆ.

ಈ ಘಟನೆಯಲ್ಲಿ ಬೇಟೆಗಾರರಂತೆ ಮೃತ ಪೊಲೀಸರೂ ಅಪರಾಧಕ್ಕೆ ಹೊಣೆಯಾಗಿದ್ದಾರೆ. ಆರೋಪಿಗಳು ರಾಜ್ಯದ ರಾಜಕಾರಣಿಗಳೊಂದಿಗೆ ಸಂಬಂಧ ಹೊಂದಿದ್ದಾರೆ. ರಾಜಕಾರಣಿಗಳೊಂದಿಗೆ ಅವರ ಚಿತ್ರಗಳೂ ವೃತ್ತಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ಹೈ ಪ್ರೊಫೈಲ್ ಕಿಮಿನಲ್ಗಳನ್ನು ರಕ್ಷಿಸಲು ಪೊಲೀಸರು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಜನರನ್ನು ಕೊಲ್ಲುತ್ತಿದ್ದಾರೆ ಎಂದು ವರದಿಯು ಬೆಟ್ಟು ಮಾಡಿದೆ.

ಹತ ಶಹಜಾದ್ನ ಕರೆ ವಿವರಗಳನ್ನು ಪಡೆದಿದ್ದರೆ ಅದು ಘಟನೆಗೆ ಸಂಬಂಧಿಸಿದ ಹಲವು ವಿಷಯಗಳನ್ನು ಬಹಿರಂಗಗೊಳಿಸುತ್ತಿತ್ತು. ಆದರೆ ಪೊಲೀಸರು ಹಾಗೆ ಮಾಡಲು ಸಿದ್ಧರಿಲ್ಲ. ಹೈ ಪ್ರೊಫೈಲ್ ಮಾಫಿಯಾ ಮತ್ತು ಕಳ್ಳಸಾಗಾಣಿಕೆದಾರರನ್ನು ರಕ್ಷಿಸಲು ಸರಕಾರ ಮತ್ತು ಆಡಳಿತ ಕ್ರಿಯಾಶೀಲವಾಗಿವೆ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಅಮಾಯಕರನ್ನು ಕೊಲ್ಲಲಾಗುತ್ತಿದೆ ಎಂದು ವರದಿಯು ತಿಳಿಸಿದೆ.

ಮೇ 20ರಂದು ಹತ ಆರೋಪಿಗಳು ವಾಸವಿದ್ದ ಗುನಾ ಜಿಲ್ಲೆಯ ವಿದುರಿಯಾ ಗ್ರಾಮಕ್ಕೆ ಭೇಟಿ ನೀಡಿದ್ದ ಸತ್ಯಶೋಧನಾ ತಂಡವು ಅವರ ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಮಾಹಿತಿಗಳನ್ನು ಸಂಗ್ರಹಿಸಿತ್ತು.
ಛೋಟು ಪಠಾಣ್ ಪ್ರಕರಣದಲ್ಲಿ ಪೊಲೀಸರು ಆತ ಪರಾರಿಯಾಗುತ್ತಿದ್ದನೆಂದು ಹೇಳಿದ್ದರೆ, ಪೊಲೀಸರು ಆತನನ್ನು ಮನೆಯಿಂದ ವಶಕ್ಕೆ ಪಡೆದುಕೊಂಡಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ ಎಂದು ವರದಿಯು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News