ಮಕ್ಕಳ ಆರೋಗ್ಯಕ್ಕೆ ಮಾರಕವಾದ ವಿಷಗಾಳಿ

Update: 2022-05-29 07:48 GMT

ಎಪ್ರಿಲ್ ಕೊನೆಯವಾರ ಒಂದು ದಿನ ಸಂಜೆ ಹೊಸಪೇಟೆಯಿಂದ ಮರಿಯಮ್ಮನಹಳ್ಳಿ ಕಡೆಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದೆ. ಹೊಸಪೇಟೆ ದಾಟಿ 5 ಕಿ.ಮೀ. ಬಂದ ನಂತರ ಇದ್ದಕ್ಕಿದ್ದಂತೆ ಜೋರಾಗಿ ಗಾಳಿ ಪ್ರಾರಂಭವಾಯಿತು. ಮುಂಗಾರಿನ ಸಮಯವಾದ್ದರಿಂದ ಗಾಳಿಯ ತೀವ್ರತೆ ಹೆಚ್ಚಾಗಿತ್ತು. ಆಗ ಇದ್ದಕ್ಕಿದ್ದಂತೆ ಆ ಪ್ರದೇಶವೆಲ್ಲ ದಟ್ಟವಾದ ಕಪ್ಪುಧೂಳಿನಿಂದ ಆವರಿಸಿಕೊಂಡಿತು. ಸುಮಾರು ಹತ್ತು ಅಡಿ ದೂರದಲ್ಲಿರುವ ಯಾವುದೇ ವಸ್ತು, ವಾಹನಗಳು ಕಾಣದಂತೆ ದಟ್ಟವಾದ ಕಪ್ಪುಧೂಳು ಆವರಿಸಿಕೊಂಡಿತು. ಬಸ್‌ನೊಳಗಿನ ಪ್ರಯಾಣಿಕರು ಕಿಟಕಿಗಳನ್ನು ಮುಚ್ಚಿಕೊಳ್ಳುವ ವೇಳೆಗೆ ಬಸ್‌ನೊಳಕ್ಕೂ ಕಪ್ಪುಧೂಳು ನುಸುಳಿತ್ತು. ಪ್ರಯಾಣಿಕರೆಲ್ಲರ ಮುಖ, ಬಟ್ಟೆಯ ಮೇಲೆ ಕಪ್ಪು ಚುಕ್ಕೆಗಳ ಸ್ಪ್ರೇ ತುಂಬಿಕೊಂಡಿತ್ತು. ಮರಿಯಮ್ಮನಹಳ್ಳಿಗೆ ಬರುವ ವೇಳೆಗೆ ಗಾಳಿಯ ರಭಸ ಮತ್ತು ಧೂಳು ಕಡಿಮೆಯಾಗಿತ್ತು. ಬಸ್‌ನ ಕಿಟಿಕಿಗಳನ್ನು ತೆರೆದು ಪ್ರಯಾಣಿಕರೆಲ್ಲರೂ ಜೋರಾಗಿ ಉಸಿರಾಡುವಂತಾಯಿತು. ಹತ್ತಾರು ನಿಮಿಷಗಳ ಪ್ರಯಾಣ ಪ್ರಯಾಸವೆನಿಸಿತ್ತು. ಇದಕ್ಕೆ ಕಾರಣವೂ ಸ್ಪಷ್ಟ. ಈ ಪ್ರದೇಶದಲ್ಲಿ ಕೆಲವು ಗಣಿ ಕೈಗಾರಿಕೆಗಳಿವೆ. ಜೋರಾಗಿ ಗಾಳಿ ಬೀಸಿದಾಗ ಧೂಳಿನ ಮೋಡ ಏರ್ಪಡುವುದು ಇಲ್ಲಿ ಸರ್ವೇ ಸಾಮಾನ್ಯ ಎಂಬುದು ನಿತ್ಯವೂ ಓಡಾಡುವ ಪ್ರಯಾಣಿಕರ ಅಭಿಮತ.

ಈ ಘಟನೆ ಮನದಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿತು. ಅದರಲ್ಲಿ ಕೆಲವು ಪ್ರಶ್ನೆಗಳು ನನ್ನನ್ನು ಬಹುವಾಗಿ ಕಾಡಿದವು. ಇಲ್ಲಿನ ಪರಿಸರ ಮಾಲಿನ್ಯ, ಜನರ ಜೀವನ, ಮೂಲಭೂತ ಸೌಲಭ್ಯಗಳಾದ ಶುದ್ಧ ಕುಡಿಯುವ ನೀರು ಹಾಗೂ ಸ್ವಚ್ಛ ಗಾಳಿ ಇವೆಲ್ಲವೂ ಮರಿಚಿಕೆಯೇ?. ಇವೆಲ್ಲವುಗಳಿಗಿಂತ ಅತೀವವಾಗಿ ಕಾಡಿದ ಪ್ರಶ್ನೆ ಎಂದರೆ ಮಕ್ಕಳ ಆರೋಗ್ಯ. ಈ ಘಟನೆ ನಿತ್ಯವೂ ನಡೆಯುವುದಿಲ್ಲ ನಿಜ. ಆದರೆ ಆಗಾಗ ನಡೆಯುತ್ತಲೇ ಇರುತ್ತದೆ. ಜೋರಾಗಿ ಗಾಳಿ ಬೀಸಿದಾಗಲೆಲ್ಲ ಗಣಿ ಕಾರ್ಖಾನೆಗಳ ಧೂಳು ಇಲ್ಲಿನ ಪ್ರದೇಶವನ್ನು ಆವರಿಸಿಕೊಳ್ಳುತ್ತದೆ. ಆಗ ಆ ಧೂಳು ಖಂಡಿತವಾಗಿ ಅಲ್ಲಿ ವಾಸಿಸುವ ಜನರನ್ನು ಬಾಧಿಸುತ್ತದೆ. ದೊಡ್ಡವರೇ ಇಂತಹ ವಿಷಯುಕ್ತ ವಾತಾವರಣಕ್ಕೆ ಹೈರಾಣಾಗಿರುವಾಗ ಮುಪ್ಪಾವಸ್ಥೆಯವರ ಗತಿಯೇನು? ಮತ್ತು ಮಕ್ಕಳ ಗತಿಯೇನು? ಎಂದು ನೆನೆದಾಗ ಆತಂಕ ಶುರುವಾಯಿತು. ಇದು ಕೇವಲ ಈ ಪ್ರದೇಶದ ಮಕ್ಕಳ ಹಾಗೂ ಜನರ ಸಮಸ್ಯೆಯಲ್ಲ. ಜಾಗತಿಕವಾದ ಸಮಸ್ಯೆಯಾಗಿದೆ. ಎಲ್ಲೆಲ್ಲಿ ಗಣಿ ಕಾರ್ಖಾನೆಗಳು ಹಾಗೂ ಗಣಿ ಬಾಧಿತ ಪ್ರದೇಶಗಳಿವೆಯೋ ಅಲ್ಲೆಲ್ಲ ಇಂತಹ ಅನಾರೋಗ್ಯ ಪರಿಸ್ಥಿತಿ ಸಹಜ.

ವಿಷಗಾಳಿ ಸೇವಿಸುವ ಮಕ್ಕಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯು ಕಳವಳ ವ್ಯಕ್ತಪಡಿಸಿದೆ. ಪ್ರತಿದಿನ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರಪಂಚದ ಸುಮಾರು ಶೇ. 93 ಮಕ್ಕಳು (1.8 ಶತಕೋಟಿ ಮಕ್ಕಳು) ವಿಷಗಾಳಿಯನ್ನು ಉಸಿರಾಡುತ್ತಾರೆ. ಅದು ಅವರ ಆರೋಗ್ಯ ಮತ್ತು ಬೆಳವಣಿಗೆಯನ್ನು ಗಂಭೀರ ಅಪಾಯಕ್ಕೆ ತಳ್ಳಿದೆ. ದುರಂತವೆಂದರೆ, ಹಲವಾರು ಮಕ್ಕಳು ವಿಷಗಾಳಿ ಸೇವನೆಯಿಂದಲೇ ಸಾಯುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ವಿಷಗಾಳಿಯು ಕೇವಲ ಮಕ್ಕಳನ್ನು ಮಾತ್ರ ಬಾಧಿಸುತ್ತಿಲ್ಲ. ಗರ್ಭಿಣಿಯರನ್ನೂ ಬಾಧಿಸುತ್ತದೆ. ಗರ್ಭಿಣಿಯರು ಕಲುಷಿತ ಗಾಳಿಯ ಸಂಪರ್ಕಕ್ಕೆ ಒಳಗಾಗುವುದರಿಂದ, ಅವರು ಅಕಾಲಿಕವಾಗಿ ಜನ್ಮ ನೀಡುವ ಸಾಧ್ಯತೆಯಿದೆ ಮತ್ತು ಕಡಿಮೆ ತೂಕದ ಮಕ್ಕಳಿಗೆ ಜನ್ಮ ನೀಡುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬಹಿರಂಗಪಡಿಸಿದೆ. ವಾಯು ಮಾಲಿನ್ಯವು ಮಕ್ಕಳ ನರಗಳ ಬೆಳವಣಿಗೆ ಮತ್ತು ತಿಳುವಳಿಕೆಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಆಸ್ತಮಾ ಮತ್ತು ಬಾಲ್ಯದ ಕ್ಯಾನ್ಸರ್‌ಗೂ ಕಾರಣವಾಗಬಹುದು. ಹೆಚ್ಚಿನ ಪ್ರಮಾಣದ ವಾಯು ಮಾಲಿನ್ಯಕ್ಕೆ ಒಡ್ಡಿಕೊಂಡ ಮಕ್ಕಳು ಭವಿಷ್ಯದ ಜೀವನದಲ್ಲಿ ಹೃದಯ ಮತ್ತು ರಕ್ತನಾಳದ ಕಾಯಿಲೆಯಂತಹ ದೀರ್ಘಕಾಲದ ಕಾಯಿಲೆಗಳಿಗೆ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.

‘‘ಕಲುಷಿತ ಗಾಳಿಯು ಲಕ್ಷಾಂತರ ಮಕ್ಕಳನ್ನು ವಿಷಪೂರಿತಗೊಳಿಸುತ್ತಿದೆ ಮತ್ತು ಅವರ ಜೀವನವನ್ನು ಹಾಳುಮಾಡುತ್ತಿದೆ’’ ಎಂದು WHO ಡೈರೆಕ್ಟರ್ ಜನರಲ್ ಡಾ. ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಹೇಳುತ್ತಾರೆ. ಮಕ್ಕಳು ವಿಶೇಷವಾಗಿ ವಾಯು ಮಾಲಿನ್ಯದ ಪರಿಣಾಮಗಳಿಗೆ ಗುರಿಯಾಗಲು ಒಂದು ಕಾರಣವೆಂದರೆ ಅವರು ವಯಸ್ಕರಿಗಿಂತ ಹೆಚ್ಚು ವೇಗವಾಗಿ ಉಸಿರಾಡುತ್ತಾರೆ ಮತ್ತು ಆದ್ದರಿಂದ ಹೆಚ್ಚು ಹೆಚ್ಚು ಮಾಲಿನ್ಯಕಾರಕಗಳನ್ನು ಹೀರಿಕೊಳ್ಳುತ್ತಾರೆ.

WHOಅಲ್ಲದೆ ಮಕ್ಕಳು ಹೆಚ್ಚಿನ ಸಮಯ ನೆಲಕ್ಕೆ ಹತ್ತಿರದಲ್ಲಿ ವಾಸಿಸುತ್ತಾರೆ. ಅಲ್ಲಿ ಕೆಲವು ಮಾಲಿನ್ಯಕಾರಕಗಳು ಗರಿಷ್ಠ ಸಾಂದ್ರತೆಯನ್ನು ತಲುಪುತ್ತವೆ. ಅವರ ಮೆದುಳು ಮತ್ತು ದೇಹ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ಸಮಯದಲ್ಲಿ ಇಂತಹ ಮಾಲಿನ್ಯಕಾರಕಗಳು ಅವರನ್ನು ಸೇರುವುದರಿಂದ ಹೆಚ್ಚಿನ ತೊಂದರೆಗಳಿಗೆ ಒಳಗಾಗುತ್ತಾರೆ. ನವಜಾತ ಶಿಶುಗಳು ಮತ್ತು ಚಿಕ್ಕ ಮಕ್ಕಳು ಮನೆಗಳಲ್ಲಿ ಮನೆಯ ವಾಯುಮಾಲಿನ್ಯಕ್ಕೆ ಹೆಚ್ಚು ಒಳಗಾಗುತ್ತಾರೆ. ಎಳೆಯ ಮಕ್ಕಳು ನಿಯಮಿತವಾಗಿ ಮಾಲಿನ್ಯಕಾರಕ ಇಂಧನಗಳು, ವಿಷಗಾಳಿ ಮತ್ತು ಇನ್ನಿತರ ಮಾಲಿನ್ಯಕಾರಕಗಳ ಜೊತೆಗೆ ಬೆಳೆಯುವುದರಿಂದ ಬಹುಬೇಗನೆ ಅವರ ಆರೋಗ್ಯ ಹದಗೆಡುತ್ತದೆ. ‘‘ವಾಯು ಮಾಲಿನ್ಯವು ನಮ್ಮ ಮಕ್ಕಳ ಮೆದುಳನ್ನು ಕುಂಠಿತಗೊಳಿಸುತ್ತಿದೆ, ನಾವು ಅನುಮಾನಿಸುವುದಕ್ಕಿಂತ ಹೆಚ್ಚಿನ ರೀತಿಯಲ್ಲಿ ಅದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಅಪಾಯಕಾರಿ ಮಾಲಿನ್ಯಕಾರಕಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಹಲವು ನೇರವಾದ ಮಾರ್ಗಗಳಿವೆ. ಆದರೆ ದೊಡ್ಡವರಾದ ನಾವು ಅವುಗಳನ್ನು ಅನುಷ್ಠಾನಕ್ಕೆ ತರುತ್ತಿಲ್ಲ’’ ಎಂದು WHO ನ ಸಾರ್ವಜನಿಕ ಆರೋಗ್ಯ, ಪರಿಸರ ಮತ್ತು ಸಾಮಾಜಿಕ ನಿರ್ಧಾರಕಗಳ ಇಲಾಖೆಯ ನಿರ್ದೇಶಕಿ ಡಾ. ಮರಿಯಾ ನೀರಾ ಹೇಳುತ್ತಾರೆ.

ವಿಷಗಾಳಿ ಸೇವನೆಯು ಮಕ್ಕಳ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮಗಳನ್ನು ಬೀರುತ್ತದೆ ಎಂಬುದು ಅನೇಕ ಸಂಶೋಧನೆಗಳಿಂದ ದೃಢಪಟ್ಟಿದೆ. ಅದರಲ್ಲಿ ಕೆಲವು ಪರಿಣಾಮಗಳು ಹೀಗಿವೆ. ವಾಯು ಮಾಲಿನ್ಯವು ನರಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಮಕ್ಕಳಲ್ಲಿ ಕಡಿಮೆ ಅರಿವಿನ ಪರೀಕ್ಷೆಯ ಫಲಿತಾಂಶಗಳಿಗೆ ಕಾರಣವಾಗುತ್ತದೆ. ಮಾನಸಿಕ ಮತ್ತು ದೈಹಿಕ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ವಾಯುಮಾಲಿನ್ಯವು ಮಕ್ಕಳ ಶ್ವಾಸಕೋಶದ ಕಾರ್ಯಚಟುವಟಿಕೆಯನ್ನು ಹಾನಿಗೊಳಿಸುತ್ತಿದೆ. ಜಾಗತಿಕವಾಗಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ.93 ಮಕ್ಕಳು WHO ಸೂಚಿತ ವಾಯು ಗುಣಮಟ್ಟದ ಮಾರ್ಗಸೂಚಿಗಳನ್ನು ಮೀರಿದ ಪ್ರಮಾಣಕ್ಕಿಂತ ಹೆಚ್ಚಿನ ಸೂಕ್ಷ್ಮ ಕಣಗಳ (ಪಿಎಂ2.5) ಮಟ್ಟದಲ್ಲಿ ವಾಸಿಸುತ್ತಿದ್ದಾರೆ. ಇದರಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ 630 ಮಿಲಿಯನ್ ಮಕ್ಕಳು ಮತ್ತು 15 ವರ್ಷದೊಳಗಿನ 1.8 ಶತಕೋಟಿ ಮಕ್ಕಳು ಇದ್ದಾರೆ. ಅಂದರೆ ಪ್ರಪಂಚದಾದ್ಯಂತ 5 ವರ್ಷದೊಳಗಿನ ಶೇ. 52 ಮಕ್ಕಳು WHO ಗಾಳಿಯ ಗುಣಮಟ್ಟದ ಮಾರ್ಗಸೂಚಿಗಳಿಗಿಂತ ಹೆಚ್ಚಿನ ಪ್ರಮಾಣದ ವಿಷಗಾಳಿ ಸೇವಿಸುತ್ತಿದ್ದಾರೆ. 15 ವರ್ಷದೊಳಗಿನ 1 ಶತಕೋಟಿ ಮಕ್ಕಳು ಅಂದರೆ ವಿಶ್ವದ ಜನಸಂಖ್ಯೆಯ ಶೇ. 40ಕ್ಕಿಂತ ಹೆಚ್ಚು ಪ್ರಮಾಣದ ಮಕ್ಕಳು ಮುಖ್ಯವಾಗಿ ಮಾಲಿನ್ಯಕಾರಕ ತಂತ್ರಜ್ಞಾನಗಳು ಮತ್ತು ಇಂಧನಗಳೊಂದಿಗೆ ವಾಯು ಮಾಲಿನ್ಯದ ಪ್ರದೇಶಗಳಲ್ಲಿ ವಾಸಿಸುತ್ತಾರೆ.

ವಾಯುಮಾಲಿನ್ಯದಿಂದಾಗಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 10 ರಲ್ಲಿ 1 ಮಗುವಿನ ಸಾವು ಸಂಭವಿಸುತ್ತದೆ. ವಾಯುಮಾಲಿನ್ಯದ ಪರಿಣಾಮಗಳು ಒಂದು ರೀತಿಯಾದರೆ ಗಣಿಗಾರಿಕೆಯ ಪರಿಣಾಮಗಳು ಅದಕ್ಕಿಂತ ಗಂಭೀರವಾಗಿವೆ. ಗಣಿಗಾರಿಕೆಯು ನೇರವಾಗಿ ಪರಿಸರದ ಮೇಲೆ ಪರಿಣಾಮಗಳನ್ನು ಬೀರುತ್ತದೆ. ಗಣಿಗಾರಿಕೆ ಚಟುವಟಿಕೆಗಳು ನೆಲ, ಜಲ, ವಾಯು, ಅಲ್ಲದೆ ಇಡೀ ಜೀವಿಗಳ ಮೇಲೆ ಅಹಿತಕರ ಪರಿಣಾಮ ಬೀರುತ್ತದೆ. ಗಣಿಗಾರಿಕೆ ಕಾರ್ಯಾಚರಣೆಗಳಿಂದ ಗಾಳಿಯ ಗುಣಮಟ್ಟವು ಪ್ರತಿಕೂಲ ಪರಿಣಾಮ ಬೀರುತ್ತದೆ. ಖನಿಜ ನಿಕ್ಷೇಪಗಳು ಗಣಿಗಾರಿಕೆಯ ಮೂಲಕ ಮೇಲ್ಮೈಯಲ್ಲಿ ತೆರೆದಾಗ ಸಂಸ್ಕರಿಸದ ವಿಷವಸ್ತುಗಳು ಬಿಡುಗಡೆಯಾಗುತ್ತವೆ. ಗಾಳಿಯ ಬೀಸುವಿಕೆ ಮತ್ತು ವಾಹನಗಳ ದಟ್ಟಣೆಯು ಅಂತಹ ಸಂಸ್ಕರಿಸದ ವಿಷವಸ್ತುಗಳನ್ನು ವಾಯುಗಾಮಿಯಾಗುವಂತೆ ಮಾಡುತ್ತದೆ. ಸೀಸ, ಆರ್ಸೆನಿಕ್, ಕ್ಯಾಡ್ಮಿಯಮ್ ಮತ್ತು ಇತರ ವಿಷಕಾರಿ ಅಂಶಗಳು ಅಂತಹ ಕಣಗಳಲ್ಲಿ ಹೆಚ್ಚಾಗಿ ಇರುತ್ತವೆ. ಈ ಮಾಲಿನ್ಯಕಾರಕಗಳು ಗಣಿಗಾರಿಕೆ ಸ್ಥಳದ ಬಳಿ ವಾಸಿಸುವ ಜನರ ಆರೋಗ್ಯವನ್ನು ಹಾನಿಗೊಳಿಸುತ್ತವೆ. ಅಂತಹ ವಾಯುಗಾಮಿ ಕಣಗಳ ಸೇವನೆಯು ಉಸಿರಾಟದ ವ್ಯವಸ್ಥೆ ಮತ್ತು ಅಲರ್ಜಿಯ ರೋಗಗಳನ್ನು ಪ್ರಚೋದಿಸುತ್ತದೆ.

ಗಣಿಗಾರಿಕೆಯು ನೀರಿನ ಮಾಲಿನ್ಯವನ್ನು ಉಂಟುಮಾಡುತ್ತದೆ. ಗಣಿ ಕಾರ್ಖಾನೆಗಳಲ್ಲಿ ಉತ್ಪನ್ನವಾದ ಕಲುಷಿತ ತ್ಯಾಜ್ಯವನ್ನು ನೇರವಾಗಿ ನದಿಗಳಿಗೆ ಹರಿಸುವ ಮೂಲಕ ಜಲ ಮಾಲಿನ್ಯ ಉಂಟಾಗುತ್ತದೆ. ಕಾರ್ಖಾನೆಗಳಿಂದ ಬಿಡುಗಡೆಯಾಗುವ ಮಾಲಿನ್ಯಕಾರಕಗಳು ಜಲ ಮಾಲಿನ್ಯದ ಪ್ರಮುಖ ಮೂಲಗಳಾಗಿ ಕಾರ್ಯನಿರ್ವಹಿಸುತ್ತವೆ. ಮಣ್ಣಿನ ಸವೆತದ ಮೂಲಕ ಬಿಡುಗಡೆಯಾಗುವ ಕೆಸರು ನದಿಗಳಲ್ಲಿ ಹೂಳಿನ ಹಾಸಿಗೆಯನ್ನು ನಿರ್ಮಿಸುತ್ತದೆ. ಇದರಿಂದ ಜಲಚರಗಳಿಗೆ ತೊಂದರೆಯಾಗುವ ಜೊತೆಗೆ ಆಣೆಕಟ್ಟುಗಳ ಜಲ ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗುತ್ತದೆ. ಅಲ್ಲದೆ ಇದು ನೀರಾವರಿ, ಮೀನುಗಾರಿಕೆ, ದೇಶೀಯ ನೀರು ಸರಬರಾಜು ಮತ್ತು ಅಂತಹ ಜಲಮೂಲಗಳನ್ನು ಅವಲಂಬಿಸಿರುವ ಇತರ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಜಲಮೂಲಗಳಲ್ಲಿನ ವಿಷಕಾರಿ ರಾಸಾಯನಿಕಗಳ ಹೆಚ್ಚಿನ ಸಾಂದ್ರತೆಯು ಜಲಚರ ಸಸ್ಯ ಮತ್ತು ಪ್ರಾಣಿ ಮತ್ತು ಆಹಾರಕ್ಕಾಗಿ ಅವುಗಳ ಮೇಲೆ ಅವಲಂಬಿತವಾಗಿರುವ ಭೂಮಿಯ ಜೀವಿಗಳಿಗೆ ಬದುಕುಳಿಯುವ ಅಪಾಯವನ್ನುಂಟುಮಾಡುತ್ತದೆ. ಲೋಹದ ಗಣಿಗಳಿಂದ ಅಥವಾ ಕಲ್ಲಿದ್ದಲು ಗಣಿಗಳಿಂದ ಬಿಡುಗಡೆಯಾಗುವ ಆಮ್ಲೀಯ ನೀರು, ಜಲಸಂಗ್ರಹಗಾರಗಳ ಜಲವನ್ನು ಹಾಗೂ ಅಂತರ್ಜಲವನ್ನು ಆಮ್ಲೀಕರಣಗೊಳಿಸುತ್ತದೆ. ಗಣಿಗಾರಿಕೆಯ ಕಾರ್ಯಾಚರಣೆಗಳಿಂದಾಗಿ ತೆರೆದ ಹೊಂಡಗಳು ಮತ್ತು ತ್ಯಾಜ್ಯ ಬಂಡೆಗಳ ರಾಶಿಗಳಂತಹ ಭೂದೃಶ್ಯದ ಬ್ಲಾಟ್‌ಗಳ ರಚನೆಯು ಗಣಿಗಾರಿಕೆ ಸ್ಥಳದಲ್ಲಿ ಭೂಮಿಯ ಭೌತಿಕ ಮಣ್ಣಿನ ನಾಶಕ್ಕೆ ಕಾರಣವಾಗುತ್ತವೆ. ಅಂತಹ ತೊಂದರೆೆಗಳು ಆ ಪ್ರದೇಶದ ಸಸ್ಯ ಮತ್ತು ಪ್ರಾಣಿಗಳ ಅವನತಿಗೆ ಕಾರಣವಾಗುತ್ತವೆ. ಗಣಿಗಾರಿಕೆ ಚಟುವಟಿಕೆಗಳ ಮೊದಲು ಇದ್ದ ಅನೇಕ ಮೇಲ್ಮೈ ವೈಶಿಷ್ಟ್ಯಗಳು ಗಣಿಗಾರಿಕೆ ನಂತರ ನಾಶವಾಗುತ್ತವೆ. ಮಣ್ಣಿನ ಪದರಗಳನ್ನು ತೆಗೆಯುವುದು ಮತ್ತು ಆಳವಾದ ಭೂಗತ ಅಗೆಯುವಿಕೆಯು ನೆಲವನ್ನು ಅಸ್ಥಿರಗೊಳಿಸುತ್ತದೆ. ಇದು ಆ ಪ್ರದೇಶದ ರಸ್ತೆಗಳು ಮತ್ತು ಕಟ್ಟಡಗಳ ಭವಿಷ್ಯವನ್ನು ಹಾಳುಮಾಡುತ್ತದೆ. ಸಾಮಾನ್ಯವಾಗಿ, ಗಣಿಗಾರಿಕೆ ಪ್ರಕ್ರಿಯೆಯು ಸ್ಥಗಿತಗೊಂಡ ನಂತರ ಗಣಿಗಾರಿಕೆ ಚಟುವಟಿಕೆಗಳ ಕೆಟ್ಟ ಪರಿಣಾಮಗಳು ಕಂಡುಬರುತ್ತವೆ. ಗಣಿಗಾರಿಕೆ ಮೊದಲಿನ ಭೂದೃಶ್ಯದ ವಿನಾಶ ಅಥವಾ ತೀವ್ರ ಮಾರ್ಪಾಡು ಆ ಪ್ರದೇಶದ ಜೀವವೈವಿಧ್ಯದ ಮೇಲೆ ದುರಂತದ ಪರಿಣಾಮವನ್ನು ಬೀರುತ್ತದೆ.

ಗಣಿಗಾರಿಕೆಯು ಮಣ್ಣಿನ ಸೂಕ್ಷ್ಮಾಣುಜೀವಿಗಳಿಂದ ಹಿಡಿದು ದೊಡ್ಡ ಸಸ್ತನಿಗಳವರೆಗಿನ ಸಸ್ಯ ಮತ್ತು ಪ್ರಾಣಿಗಳ ವೈವಿಧ್ಯದ ಬೃಹತ್ ಆವಾಸಸ್ಥಾನದ ನಷ್ಟಕ್ಕೆ ಕಾರಣವಾಗುತ್ತದೆ. ಸ್ಥಳೀಯ ಪ್ರಭೇದಗಳು ಹೆಚ್ಚು ತೀವ್ರವಾಗಿ ಪರಿಣಾಮ ಬೀರುತ್ತವೆ. ಏಕೆಂದರೆ ಅವುಗಳ ಆವಾಸಸ್ಥಾನದಲ್ಲಿನ ಸಣ್ಣದೊಂದು ಅಡಚಣೆಗಳು ಸಹ ಅಳಿವಿನಂಚಿಗೆ ಕಾರಣವಾಗಬಹುದು ಅಥವಾ ಅವುಗಳನ್ನು ನಾಶಪಡಿಸುವ ಹೆಚ್ಚಿನ ಅಪಾಯವನ್ನು ಉಂಟುಮಾಡಬಹುದು. ಗಣಿಗಾರಿಕೆಯ ಮೂಲಕ ಬಿಡುಗಡೆಯಾಗುವ ಟಾಕ್ಸಿನ್‌ಗಳು ಜೀವಸಂಕುಲದ ನಾಶಕ್ಕೆ ಕಾರಣವಾಗುತ್ತವೆ. ಇದಲ್ಲದೆ ಗಣಿಗಾರಿಕೆಯ ದೀರ್ಘಾವಧಿಯ ದುಷ್ಪರಿಣಾಮಗಳು ಮತ್ತಷ್ಟು ಗಂಭೀರವಾಗಿರುತ್ತವೆ. ಗಣಿಗಾರಿಕೆಯಿಂದ ಪ್ರಭಾವಿತವಾಗಿರುವ ಭೂದೃಶ್ಯವು ಗುಣವಾಗಲು ಬಹಳ ಸಮಯ ತೆಗೆದುಕೊಳ್ಳಬಹುದು, ಇಲ್ಲವೇ ಅದು ಚೇತರಿಸಿಕೊಳ್ಳಲು ಸಾಧ್ಯವಾಗದೆ ಇರಬಹುದು. ಪರಿಹಾರದ ಪ್ರಯತ್ನಗಳು ಯಾವಾಗಲೂ ಪ್ರದೇಶದ ಜೀವವೈವಿಧ್ಯವನ್ನು ಪುನಃಸ್ಥಾಪಿಸುವುದನ್ನು ಖಚಿತಪಡಿಸುವುದಿಲ್ಲ. ಜೀವವೈವಿಧ್ಯತೆ ಅಲ್ಲಿ ಶಾಶ್ವತವಾಗಿ ನಾಶವಾಗುತ್ತದೆ. ಇದು ಮಕ್ಕಳ ಭವಿಷ್ಯದ ಮೇಲೆ ಗಂಭೀರವಾದ ಪರಿಣಾಮಗಳನ್ನು ಬೀರುತ್ತದೆ. ಭವಿಷ್ಯದಲ್ಲಿ ಮಕ್ಕಳು ಬಹುತೇಕ ಜೀವಿಗಳೊಂದಿಗಿನ ಸಂಬಂಧವನ್ನೇ ಕಡಿದುಕೊಳ್ಳುತ್ತಾರೆ. ಒಟ್ಟಾರೆಯಾಗಿ ಗಣಿಗಾರಿಕೆಯಂತಹ ಚಟುವಟಿಕೆಗಳು ಮಕ್ಕಳ ಭವಿಷ್ಯವನ್ನು ಅತಂತ್ರಗೊಳಿಸುತ್ತಿವೆ. ಇದಕ್ಕೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳದಿದ್ದರೆ ಇನ್ನಿತರ ಜೀವಿಗಳಂತೆ ನಮ್ಮ ಮಕ್ಕಳನ್ನು ಕಳೆದುಕೊಳ್ಳುವ ದಿನಗಳು ದೂರವಿಲ್ಲ. ಈ ಬಗ್ಗೆ ಎಲ್ಲರೂ ಗಂಭೀರವಾಗಿ ಚಿಂತಿಸಿ ದೇಶದ ಹಾಗೂ ಪ್ರಪಂಚದ ಭವಿಷ್ಯದ ಮಾನವ ಸಂಪನ್ಮೂಲವನ್ನು ಉಳಿಸಿಕೊಳ್ಳಬೇಕಾಗಿದೆ.

Writer - ಆರ್. ಬಿ. ಗುರುಬಸವರಾಜ

contributor

Editor - ಆರ್. ಬಿ. ಗುರುಬಸವರಾಜ

contributor

Similar News