ಸಂಘಪರಿವಾರ ಮೌನ ತಾಳಿರುವ ʼಉರ್ದು ಕವಿ ಸಾವರ್ಕರ್ʼ !

Update: 2022-05-30 10:20 GMT

ಭಾರತದಲ್ಲಿ ಟಿವಿ ಸುದ್ದಿ ವೀಕ್ಷಕರ ಗಮನಸೆಳೆದಿದ್ದಂತಹ ಈ ಘಟನೆ ನಿಮಗೆ ನೆನಪಿದೆಯೇ?

ಕೆಲ ಸಮಯದ ಹಿಂದೆ ಸುದರ್ಶನ್ ನ್ಯೂಸ್‌ನ ವರದಿಗಾರ್ತಿಯೋರ್ವರು 'ಹಲ್ದಿರಾಮ್ ಸ್ಟೋರ್ಸ್‌' ಮಳಿಗೆಯ ಮ್ಯಾನೇಜರ್ ಮುಂದೆ "ಉರ್ದುವಿನಲ್ಲಿ ಬರೆಯುವ ಮೂಲಕ ನೀವು ಏನನ್ನು ಬಚ್ಚಿಡಲು ಯತ್ನಿಸುತ್ತಿದ್ದೀರಿ ?" ಎಂದು ಕಿರುಚಾಡಿದ್ದರು. ಆ ಘಟನೆ ಉರ್ದು ಭಾಷೆಯನ್ನು ಮತ್ತೊಮ್ಮೆ ವಿವಾದಗಳ ಸುಳಿಗೆ ಸಿಲುಕಿಸಿತ್ತು. ಹಲ್ದೀರಾಮ್ ಉತ್ಪನ್ನಗಳ ಪ್ಯಾಕೆಟ್ ಮೇಲೆ ಕೆಲವು ಮಾಹಿತಿಗಳನ್ನು ಇಂಗ್ಲಿಷ್ ಜೊತೆ ಅರಬಿ ಭಾಷೆಯಲ್ಲಿ ಬರೆದಿರುವ ಕುರಿತು ಆ ಟಿವಿ ವರದಿಗಾರ್ತಿ, "ಈ ಮೂಲಕ ನೀವು ಯಾವ ಸುಳ್ಳನ್ನು ಪ್ರಚಾರ ಮಾಡುತ್ತಿದ್ದೀರಿ? ಅಥವಾ ನೀವು ಏನನ್ನು ಬಚ್ಚಿಡಲು ಪ್ರಯತ್ನಿಸುತ್ತಿದ್ದೀರಿ?" ಎಂದು ಎಗರಾಡಿದ್ದರು.  

ಇತ್ತೀಚಿನ ವರ್ಷಗಳಲ್ಲಿ ಉರ್ದು ಭಾಷೆಯನ್ನು ಬಹುಸಂಖ್ಯಾತ ಹಿಂದೂ ಸಮುದಾಯದಿಂದ ವಿಷಯಗಳನ್ನು ಬಚ್ಚಿಡಲು ಬಳಸುವ ನಿಗೂಢವಾದ ಸಾಂಕೇತಿಕ ಭಾಷೆಯೆಂಬಂತೆ ಕಾಣಲಾಗುತ್ತಿದೆ. ಈ ಬಗೆಯ ಅಪನಂಬಿಕೆಗೆ ಪುಷ್ಟಿ ನೀಡುವುದಕ್ಕಾಗಿ ಬಿಜೆಪಿ ಹಾಗೂ ಆರೆಸ್ಸೆಸ್‌ ಅನುಯಾಯಿಗಳು ಎಲ್ಲ ಬಗೆಯ ಶ್ರಮ ನಡೆಸಿದ್ದಾರೆ.

ಸಾವರ್ಕರ್ ಅವರ ಉರ್ದು ಕವಿತೆಯ ಬಗ್ಗೆ ಸಂಘ ಪರಿವಾರ ಮೌನ ತಾಳಿರುವುದೇಕೆ?.

ಉರ್ದು ಭಾಷೆ ಹಿಂದೂ ವಿರೋಧಿಯೆಂದೇ ಸದಾ ಪ್ರತಿಪಾದಿಸುತ್ತಲೇ ಬಂದಿರುವ ಆರೆಸ್ಸೆಸ್, ತನ್ನ ಹಿಂದುತ್ವದ ‘ಪೋಸ್ಟರ್ ಬಾಯ್’ ವಿನಾಯಕ ದಾಮೋದರ್ ಸಾವರ್ಕರ್ ಸ್ವತಃ ಒಬ್ಬ ಉರ್ದು ಕವಿಯಾಗಿದ್ದರು ಹಾಗೂ ಉರ್ದುಭಾಷೆಯಲ್ಲಿ ಹಲವಾರು ಗಝಲ್‌ಗಳನ್ನು ತನ್ನ ಕೈಯ್ಯಾರೆ ಬರೆದಿದ್ದರೆಂಬುದನ್ನು ಎಲ್ಲೂ ಪ್ರಸ್ತಾಪಿಸುವುದೇ ಇಲ್ಲ. 

ಖುಷಿ ಕೆ ದೌರ್ ದೌರೆ ಸೆ ಹೈ ಯಾನ್ ರಂಜೊ ಮೆಹಾನ್ ಪೆಹಲೆ

ಬಹಾರ್ ಆತಿ ಹೈ ಪೀಚೆ ಔರ್ ಖಿಝಾನ್ ಗಿರ್ದೆ ಚಮನ್ ಪೆಹಲೆ

(ಇಲ್ಲಿ ಸಂತಸದ ಆಗಮನಕ್ಕೆ ಮೊದಲು, ವಿಷಾದ ಹಾಗೂ ಶೋಕ ಆವರಿಸಿರುತ್ತದೆ - ಇನ್ನೇನು ವಸಂತ ಬಂತು ಅನ್ನುತ್ತಿರುವಾಗಲೇ ಉದ್ಯಾನವು ಶರತ್ಕಾಲದ ಉಡುಗೆ ಧರಿಸಿರುತ್ತದೆ)

ಅಭಿ ಮೆರಾಜ್ ಕಾ ಕ್ಯಾ ಝಿಕರ್ ಯೆ ಪೆಹಲಿ ಹಿ ಮಂಝಿಲ್ ಹೈ

ಹಝಾರೋಂ ಮಂಝಿಲೇಂ ಕರ್ನಿ ಹೈ ತೇ ಹಮ್ ಕೋ ಕಠಿಣ್ ಪೆಹಲೆ

(ಈಗಲೇ ಯಾಕೆ ಉತ್ತುಂಗದ ಚರ್ಚೆ? ಇದು ಕೇವಲ ಮೊದಲ ಹಂತವಷ್ಟೇ - ಹಲವಾರು ಕಠಿಣ ಮಜಲುಗಳನ್ನು ನಾವಿನ್ನೂ ದಾಟಲಿಕ್ಕಿದೆ),

‘ಮೆರಾಜ್’ ಎಂಬುದು ಪ್ರವಾದಿ ಮುಹಮ್ಮದರು ಅನುಭವಿಸಿದ ದಿವ್ಯಲೋಕದ ಪ್ರಯಾಣಕ್ಕಿರುವ ಹೆಸರು. ಶೃಂಗ ಅಥವಾ ಉತ್ತುಂಗದ ಸಂಕೇತವಾಗಿ ಈ ಪದವನ್ನು ಬಳಸಲಾಗುತ್ತದೆ. ಆರೆಸ್ಸೆಸ್ ಹಾಗೂ ಅದರ ಅನುಯಾಯಿಗಳು ಭಾರತೀಯ ಮುಸ್ಲಿಮರ ವಿರುದ್ಧ ದ್ವೇಷದ ಬೀಜಗಳನ್ನು ಬಿತ್ತುವುದಕ್ಕಾಗಿ ಹೇಳಿರುವ ಸುಳ್ಳುಗಳ ಒಂದು ದೀರ್ಘ ಇತಿಹಾಸವೇ ಇದೆ. ಉರ್ದು ಅವರ ಪಾಲಿಗೆ ಸುಲಭವಾದ ಗುರಿಯಾಗಿದ್ದು, ಪದೇ ಪದೇ ಅವರ ಧಾಳಿಗೆ ತುತ್ತಾಗುತ್ತಲೇ ಇರುತ್ತದೆ.

ಸಾವರ್ಕರ್ ಅವರನ್ನು ದೈವೀಕರಿಸುವ ಪ್ರಯತ್ನಗಳನ್ನು ಸತತವಾಗಿ ನಡೆಯುತ್ತಲೇ ಇವೆ. ಅವರ ಜೀವನಚರಿತ್ರೆಯ ಕುರಿತಾದ ಒಂದು ಸಿನೆಮಾ ಕೂಡಾ ತೆರೆಕಾಣಲು ಸಿದ್ಧವಾಗಿದೆ. ಆದರೆ ಆತ ಉರ್ದು ಕವಿಯಾಗಿದ್ದಾರೆಂಬುದಾಗಲಿ ಅಥವಾ ಉರ್ದು ಲಿಪಿಯಲ್ಲಿ ಬರೆಯುತ್ತಿದ್ದರೆಂಬ ಬಗ್ಗೆಯಾಗಲಿ ಎಲ್ಲೂ ಯಾವುದೇ ಉಲ್ಲೇಖ ಕಂಡು ಬರುವುದಿಲ್ಲ. 

ಉರ್ದುವನ್ನು ದಾಳಿಕೋರರ ಭಾಷೆಯಾಗಿ ಚಿತ್ರಿಸಲು ಬಿಜೆಪಿ ಆರೆಸ್ಸೆಸ್ ಪ್ರಯತ್ನ 

ಮುಘಲ್ ಸರಾಯ್ ಜಂಕ್ಷನ್ ಅನ್ನು ಪಂಡಿತ್ ದೀನದಯಾಳ್ ಉಪಾಧ್ಯಾಯ ರೈಲು ನಿಲ್ದಾಣವೆಂದು ಹಾಗೂ ಅಲಹಾಬಾದ್ ಅನ್ನು ಪ್ರಯಾಗ್‌ರಾಜ್ ಎಂದು ಮರುನಾಮಕರಣ ಮಾಡಿದವರು ಉರ್ದು ಭಾಷೆಯನ್ನು ಅಪರಾಧಿಯ ಸ್ಥಾನದಲ್ಲಿ ನಿಲ್ಲಿಸಲು ಹಾಗೂ ಅದನ್ನು ವಿದೇಶಿ ಆಕ್ರಮಣಕಾರರ ಭಾಷೆಯೆಂದು ಚಿತ್ರಿಸಲು ನಿರಂತರ ಪ್ರಯತ್ನಗಳನ್ನು ಮಾಡಿದ್ದಾರೆ. ಜೊತಗೆ, ಅಧಿಕೃತ ಭಾಷಾ ಸಮಿತಿಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ಶಾ ಅವರು ದೇಶದೆಲ್ಲೆಡೆ ಹಿಂದಿ ಭಾಷೆಯನ್ನು ಹೇರಲು ಕರೆ ನೀಡುವ ಮೂಲಕ ಬೆಂಕಿಗೆ ತುಪ್ಪ ಸುರಿದಿದ್ದಾರೆ.  

ಉರ್ದು ಮುಸ್ಲಿಮರ ಭಾಷೆಯೆಂದು ಹಾಗೂ ಅದಕ್ಕೆ ಹಿಂದೂಗಳ ಜೊತೆ ಯಾವುದೇ ನಂಟಿಲ್ಲವೆಂದು ಆರೆಸ್ಸೆಸ್ ನಿರಂತರವಾಗಿ ಪ್ರಚಾರ ಮಾಡುತ್ತಲೇ ಬಂದಿದೆ. ಈ ಮೂಲಕ ಅದು ಉರ್ದು ಭಾಷೆಯಲ್ಲಿ ಬರೆದ ಹಲವಾರು ಹಿಂದೂ ಕವಿಗಳ ಅಸ್ತಿತ್ವವನ್ನು ಅಲ್ಲಗಳೆದಂತಾಗಿದೆ. ಅಂತಹ ಕೆಲವು ಕವಿಗಳ ಪ್ರಾತಿನಿಧಿಕ ಪಟ್ಟಿಯೊಂದು ಇಲ್ಲಿದೆ:

1574ರಲ್ಲಿ ಜನಿಸಿದ ಪಂಡಿತ ಚಂದ್ರ ಭಾನ್ ಉರ್ದು ಭಾಷೆಯ ಆರಂಭಕಾಲದ ಕವಿಗಳಲ್ಲೊಬ್ಬರೆನಿಸಿದ್ದಾರೆ. ಅವರ ಕಾವ್ಯನಾಮ 'ಬ್ರಾಹ್ಮಣ್' ಎಂದಾಗಿತ್ತು. 

‘ಚಕ್‌ಬಸ್ತ್’ ಎಂಬ ಕಾವ್ಯನಾಮವಿದ್ದ ಮಹಾರಾಜ್ ರಾಮ ನಾರಾಯಣ ಅವರು ರಾಮಾಯಣ ಕಾವ್ಯವನ್ನು ಉರ್ದು ಭಾಷೆಯಲ್ಲಿ 'ನಝ್ಮ್' ಶೈಲಿಯಲ್ಲಿ ಬರೆದಿದ್ದಾರೆ. 

ಲಾಲಾ ಮಾಧವ್ ರಾಮ್ ಅವರನ್ನು ದೊರೆ ಬಹಾದೂರ್ ಶಾ ಝಫರ್ ಅವರ ಅಸ್ಥಾನದಲ್ಲಿ ಪ್ರಮುಖ ಕವಿಗಳಲೊಬ್ಬರೆಂದು ಪರಿಗಣಿಸಲಾಗಿತ್ತು. ಅವರು ಜೌಹರ್ ಎಂಬ ಕಾವ್ಯನಾಮದ ಉರ್ದು ಕವಿಯಾಗಿದ್ದರು. 

ಉರ್ದು ಭಾಷೆ ಭಾರತದ ಬಹುಮುಖಿ ಸಂಸ್ಕೃತಿಯ ಗತ ಮತ್ತು ವರ್ತಮಾನಕಾಲಗಳ ಹೆಬ್ಬಾಗಿಲು

ಐತಿಹಾಸಿಕವಾಗಿ ಉರ್ದು ಭಾಷೆಯು ಹಿಂದೂ - ಮುಸ್ಲಿಮರಿಬ್ಬರೂ ಗುರುತಿಸುವ ಮತ್ತು ಮಾತನಾಡುವ ಭಾಷೆಯಾಗಿದೆ. ಅದು ಭಾರತದ ಬಹುಸಂಸ್ಕೃತಿಯ ಇತಿಹಾಸದ ಸಂಕೇತವಾಗಿದೆ. ಖುದಾ-ಎ-ಸುಖನ್ (ಭಾಷೆಯ ಸಾಮ್ರಾಟ) ಎಂದು ಕರೆಯಲ್ಪಡುತ್ತಿದ್ದ ಮೀರ್ ತಕೀ ಮೀರ್ ಅವರ ಪ್ರಸಿದ್ಧ ದ್ವಿಪದಿಯೊಂದು ಇದನ್ನೇ ಸೂಚಿಸುತ್ತದೆ. 

ಮೀರ್ ಕೆ ದೀನೊ ಮಝಹಬ್ ಕೊ ತುಮ್ ಪೂಚ್ತೆ ಕ್ಯಾ ಹೊ? ಉನ್ನೆ ತೊ

ಖ್ವಶ್ಕಾ ಖೈನ್‌ಚಾ, ದೈರ್ ಮೇ ಬೈಠಾ,  ಕಬ್ ಕಾ ತರ್ಕೆ ಇಸ್ಲಾಮ್ ಕಿಯಾ

(ಮೀರ್‌ನ ಧರ್ಮ ಹಾಗೂ ನಂಬಿಕೆಯ ಬಗ್ಗೆ ನೀವೇನು ಕೇಳುತ್ತೀರಿ? ಅವನಂತೂ - ಎಂದೋ ಇಸ್ಲಾಮ್ ಧರ್ಮವನ್ನು ತ್ಯಜಿಸಿ, ಹಣೆಗೆ ತಿಲಕ ಹಚ್ಚಿಕೊಂಡು, ದೇಗುಲದಲ್ಲಿ ವಾಸವಾಗಿದ್ದಾನೆ)

ಅಥವಾ ಸರ್ ಮುಹಮ್ಮದ್ ಇಕ್ಬಾಲ್ ಅವರು ತನ್ನ ಕೃತಿ ಬಾಂಗೆ ದರಾದಲ್ಲಿ ಬರೆದಿರುವ ಕವಿತೆ 'ರಾಮ್‌' ನ ಎರಡು ದ್ವಿಪದಿಗಳು ಹೀಗಿವೆ.

 ಹಯ್ ರಾಮ್ ಕೆ ವಜೂದ್ ಪೆ ಹಿಂದೂಸ್ತಾನ್ ಕೊ ನಾಝ್

 ಅಹ್ಲೆ ನಝರ್ ಸಮಝ್‌ತೆ ಹೈ ಉಸ್ಕೊ ಇಮಾಮೆ ಹಿಂದ್

(ರಾಮನ ಅಸ್ತಿತ್ವದ ಬಗ್ಗೆ ಭಾರತವು ಹೆಮ್ಮೆ ಪಡುತ್ತದೆ. ದಾರ್ಶನಿಕರು ಅವನನ್ನು ಭಾರತದ 'ಇಮಾಮ್' (ಗುರು) ಎಂದು ಪರಿಗಣಿಸುತ್ತಾರೆ).

ಎಜಾಝ್ ಉಸ್ ಚರಾಗೆ ಹಿದಾಯತ್ ಕಾ ಹೈ ಯಹೀ

ರೌಶನ್ ತರ್ ಅಝ್ ಸಹರ್ ಹೈ ಝಮಾನೆ ಮೇ ಶಾಮೆ ಹಿಂದ್

(ಸನ್ಮಾರ್ಗದ ದೀಪವಾಗಿದ್ದ ಆತನ ಮಹಿಮೆಯಿಂದಾಗಿಯೇ, ಜಗತ್ತಿನಲ್ಲಿ ಭಾರತದ ಸಂಜೆಯು ಮುಂಜಾವಿಗಿಂತ ಹೆಚ್ಚು ಉಜ್ವಲವಾಗಿದೆ).

ಮಥುರಾ ಮತ್ತು ಶ್ರೀ ಕೃಷ್ಣನ ಜೊತೆ ಉರ್ದು ಮತ್ತು ಮತ್ತು ಮುಸ್ಲಿಮರ ನಂಟು 

ಶ್ರೀಕೃಷ್ಣನ ವ್ಯಕ್ತಿತ್ವ ಕೂಡಾ ಅತ್ಯಂತ ಅಲ್ಪಾವಧಿಯಲ್ಲಿ ಉರ್ದು ಸೂಫಿ ಕಾವ್ಯದ ಅವಿಭಾಜ್ಯ ಅಂಗವಾಗಿ ಬಿಟ್ಟಿತು. ಉದಾ: ಇನ್‌ಶಾ ಅಲ್ಲಾ ಖಾನ್ ಇನ್ಶಾ ಅವರ ಒಂದು ಪ್ರಸಿದ್ಧ ದ್ವಿಪದಿ ಹೀಗಿದೆ: 

ಸಾಂವಲೆ ತನ್ ಪೆ ಘಝಬ್ ಧಜ್ ಹೈ ಬಸಂತಿ ಶಾಲ್ ಕಿ

ಜೀ ಮೇ ಹೈ ಕಹ್ ಬೈಠಿಯೇ ಅಬ್ ಜೈ ಕನಯ್ಯಾ ಲಾಲ್ ಕಿ

(ನಸುಗಪ್ಪು ಶರೀರದ ಮೇಲೆ ಹೊದಿಸಲಾದ ಈ ಹಳದಿ ಶಾಲು ಶೋಭಿಸುತ್ತಿದೆ - ಕನಯ್ಯಾ ಲಾಲ್ (ಶ್ರೀ ಕೃಷ್ಣ) ನಿಗೆ ಜಯವಾಗಲೆಂಬ ಮನದ ಮಾತನ್ನು ಇನ್ನಾದರೂ ಹೇಳಿ ಬಿಡಿ.) 

ಧರ್ಮನಿಷ್ಠ ಮುಸಲ್ಮಾನರಾಗಿದ್ದ ಮೌಲಾನಾ ಹಸ್ರತ್ ಮೊಹಾನಿ ಅವರು ತನ್ನನ್ನು ಶ್ರೀಕೃಷ್ಣನ ಅಭಿಮಾನಿಯೆಂದು ಬಣ್ಣಿಸಿಕೊಂಡಿದ್ದಾರೆ: 

ಪೈಘಾಮೆ ಹಯಾತೆ ಜಾವೆದಾನ್ ಥಾ

ಹರ್ ನಗ್ಮಯೆ ಕ್ರಿಶನ್ ಬಾನ್ಸುರಿ ಕಾ

(ಕೃಷ್ಣನ ಕೊಳಲಿನಿಂದ ಹೊರಬಂದ ಪ್ರತಿಯೊಂದು - ಅಮರ ಬದುಕಿನ ಸಂದೇಶವಾಗಿತ್ತು).

* ಲೇಖಕ ಅಲಿ ಫರಾಜ್ ರಿಝ್ವಿ ಅವರು ರಂಗಭೂಮಿ ಕಲಾವಿದರಾಗಿದ್ದು, ದಿಲ್ಲಿ ವಿವಿಯಲ್ಲಿ 'ಸೋಶಿಯಲ್ ವರ್ಕ್' ವಿಭಾಗದಲ್ಲಿ ವಿದ್ಯಾರ್ಥಿಯಾಗಿದ್ದಾರೆ.

ಕೃಪೆ: Thequint.com 

Writer - ಅಲಿ ಫರಾಝ್ ರಿಝ್ವಿ (Thequint.com)

contributor

Editor - ಅಲಿ ಫರಾಝ್ ರಿಝ್ವಿ (Thequint.com)

contributor

Similar News