ಮಂಗಳೂರು : ಪೊಲೀಸರ ಮೇಲೆ ಬೈಕ್, ಕಾರು ಹತ್ತಿಸಲು ಯತ್ನ ಆರೋಪ; ಆರು ಮಂದಿ ಸೆರೆ
Update: 2022-05-31 14:45 IST
ಮಂಗಳೂರು : ಗಸ್ತಿನಲ್ಲಿದ್ದ ಪೊಲೀಸರ ಮೇಲೆ ಬೈಕ್, ಕಾರು ಹತ್ತಿಸಲು ಯತ್ನಿಸಿದ ಹಾಗೂ ಅಜಾಗರೂಕತೆ, ಅಪಾಯಕಾರಿ ವಾಹನ ಚಲಾವಣೆ ಆರೋಪದಲ್ಲಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದ ಇಬ್ಬರು ಹಾಗೂ ಆಶ್ರಯ ನೀಡಿದ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಇನ್ನೂ ಒಂಭತ್ತು ಮಂದಿ ನೇರವಾಗಿ ಭಾಗಿಯಾಗಿದ್ದು ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ನೌಷಾದ್ ಹಾಗು ಮೈಸೂರಿನಲ್ಲಿ ಹೈದರಾಲಿ ಎಂಬವರನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನಗರ ಹೊರವಲಯದ ಅಡ್ಯಾರ್ ಕಣ್ಣೂರು ಮೈದಾನದಲ್ಲಿ ಶುಕ್ರವಾರ ನಡೆದ ಎಸ್‌ಡಿಪಿಐ ಪಕ್ಷದ ಜನಾಧಿಕಾರ ಸಮಾವೇಶಕ್ಕೆ ದ್ವಿಚಕ್ರ ಮತ್ತು ಕಾರಿನಲ್ಲಿ ತೆರಳುತ್ತಿದ್ದ ಕೆಲವು ಯುವಕರು ಕರ್ತವ್ಯ ನಿರತ ಪೊಲೀಸರನ್ನು ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.