ಮುಟ್ಟಿನ ಸಮಯದಲ್ಲಿ ಆಗುವ ಹೊಟ್ಟೆ ನೋವಿಗೆ ಪರಿಹಾರಗಳೇನು? ಮಾಹಿತಿ ಇಲ್ಲಿದೆ

Update: 2022-05-31 16:47 GMT

ಮಹಿಳೆಯರು ಕುಟುಂಬದ ಆಧಾರ ಸ್ತಂಭಗಳಾಗಿದ್ದು, ಮಹಿಳೆ ಆರೋಗ್ಯವಾಗಿದ್ದರೆ ಕುಟುಂಬವೂ ಆರೋಗ್ಯವಾಗಿರುತ್ತದೆ. ನಾವು ಆರೋಗ್ಯದ ಬಗ್ಗೆ ಮಾತನಾಡುವಾಗ ದೈಹಿಕ ಮಾತ್ರವಲ್ಲ, ಮಾನಸಿಕ ಆರೋಗ್ಯದ ಬಗ್ಗೆಯೂ ಗಮನಹರಿಸಬೇಕು. ಮಹಿಳೆಯರು ಹಲವಾರು ಕೆಲಸ ಕಾರ್ಯಗಳನ್ನು ಮಾಡುವುದರಿಂದ ಲೈಂಗಿಕ ಸಮಸ್ಯೆ, ಸಂತಾನೋತ್ಪತ್ತಿ ಆರೋಗ್ಯ ಮತ್ತು ಮುಟ್ಟಿನ ಆರೋಗ್ಯದ ಮೇಲೆ ಕೇಂದ್ರೀಕರಿಸುವುದು ಹೆಚ್ಚು ಮುಖ್ಯವಾಗಿರುತ್ತದೆ.

ಮುಟ್ಟಿನ ಸೆಳೆತವು ನೋವಿನ ಸಂವೇದನೆಗಳಾಗಿದ್ದು, ವೈದ್ಯಕೀಯವಾಗಿ ಡಿಸ್ಮೆನೊರಿಯಾ ಎಂದು ಕರೆಯಲ್ಪಡುವ ಮುಟ್ಟಿನ ಅವಧಿಯ ಮೊದಲು ಮತ್ತು ಆ ಸಮಯದಲ್ಲಿ ಅನೇಕ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ.  ಇದು ಸಣ್ಣ ನೋವಿನಿಂದ ಹಿಡಿದು ಜೀವನದ ಮೇಲೆಯೇ ಪರಿಣಾಮ ಬೀರುವ ತೀವ್ರವಾದ ನೋವಿನವರೆಗೆ ಇರುತ್ತದೆ.

 ಸಾಮಾನ್ಯವಾಗಿ ಮುಟ್ಟಿನ ಸೆಳೆತವು ಋತುಚಕ್ರದ ನಂತರ ಅಥವಾ ಮೊದಲ ಮುಟ್ಟಿನ ನಂತರ ಒಂದು ಅಥವಾ ಎರಡು ವರ್ಷಗಳ ಆನಂತರ ಪ್ರಾರಂಭವಾಗುತ್ತದೆ. ಏಕೆಂದರೆ ಆ ಸಮಯದಲ್ಲಿ ಹುಡುಗಿಯರು ಅಂಡೋತ್ಪತ್ತಿ ಚಕ್ರಗಳನ್ನು ಹೊಂದಲು ಪ್ರಾರಂಭಿಸುತ್ತಾರೆ.  ಆದ್ದರಿಂದ ಋತು ಚಕ್ರಗಳ ಸಮಯದಲ್ಲಿ ಕೆಲವು ಸೆಳೆತದ ಅನುಭವಗಳು ಅಂಡೋತ್ಪತ್ತಿ ನಡೆಯುತ್ತಿದೆ ಎಂಬುವುದಾಗಿ ನಾವು ಆರೋಗ್ಯಕರ ರೀತಿಯಲ್ಲಿ ಮನಗಾಣಬಹುದಾಗಿದೆ.  

ಆದ್ದರಿಂದ ಈ ಸೆಳೆತಗಳು ಸಂಭವಿಸಿದಾಗ ಅದು ಕೇವಲ ಪ್ರಾಥಮಿಕ ಡಿಸ್ಮೆನೊರಿಯಾ ಎಂದು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಆದರೆ ದ್ವಿತೀಯ ಡಿಸ್ಮೆನೊರಿಯಾವನ್ನು ಉಂಟುಮಾಡುವ ಯಾವುದೇ  ಸಮಸ್ಯೆ ಇದ್ದಲ್ಲಿ ನೋವು ಹೆಚ್ಚಿರುತ್ತದೆ ಮತ್ತು ಈ ಸಮಯದಲ್ಲಿ ಭಾರೀ ರಕ್ತಸ್ರಾವ ಉಂಟಾಗಬಹುದು.  ಋತುಚಕ್ರದ ನೋವು ಮತ್ತು ಡಿಸ್ಪ್ರೆಯೂನಿಯಾ (ನೋವಿನ ಲೈಂಗಿಕತೆ), ನೋವಿನ ಮಲ ವಿಸರ್ಜನೆಯು ದ್ವಿತೀಯ ಡಿಸ್ಮೆನೊರಿಯಾದ ಇತರ ಲಕ್ಷಣಗಳಾಗಿರಬಹುದು.

 ಮುಟ್ಟಿನ ಸೆಳೆತವು ಸಾಮಾನ್ಯವಾಗಿ ಹೊಟ್ಟೆಯ ಕೆಳಭಾಗದಲ್ಲಿ ಅನುಭವವಾಗುತ್ತದೆ. ಕೆಳಗಿನ ಬೆನ್ನು ಮತ್ತು ತೊಡೆಗಳಲ್ಲಿ ನೋವು, ವಾಕರಿಕೆ ಮತ್ತು ವಾಂತಿ, ಬೆವರುವುದು, ಮೂರ್ಛೆ ಮತ್ತು ತಲೆತಿರುಗುವಿಕೆ, ಅತಿಸಾರ ಅಥವಾ ತೆಳುವಾದ ಮಲ, ಮಲಬದ್ಧತೆ, ಉಬ್ಬುವುದು, ತಲೆನೋವು ಉಂಟಾಗುತ್ತದೆ.

 ದ್ವಿತೀಯ ಡಿಸ್ಮೆನೊರಿಯಾದ ಕೆಲವು ಕಾರಣಗಳು ಪಿಐಡಿ, ಎಂಡೊಮೆಟ್ರಿಯೊಸಿಸ್, ಅಡೆನೊಮೈಯೋಸಿಸ್ ಮತ್ತು ಫೈಬ್ರಾಯ್ಡ್‌ಗಳನ್ನು ಒಳಗೊಂಡಿವೆ.

ಪರಿಹಾರ 

 ವ್ಯಾಯಾಮ ಧ್ಯಾನ ಯೋಗ ಸೇರಿದಂತೆ ಉತ್ತಮ ಜೀವನಶೈಲಿ ನಿರ್ವಹಣೆ, ಮಲಬದ್ಧತೆ ಬರದಂತಿರಲು ಸಂಸ್ಕರಿತ ಆಹಾರ ಕಡಿಮೆ ಮಾಡುವುದು, ಆಹಾರದಲ್ಲಿ ಫೈಬರ್ ಸೇವನೆಯನ್ನು ಹೆಚ್ಚಿಸುವುದು ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸೆಳೆತಗಳು ತೀವ್ರವಾಗಿದ್ದರೆ ಆವರ್ತಕ ಹಾರ್ಮೋನ್ ಚಿಕಿತ್ಸೆಯನ್ನು ನೀಡಬಹುದು. ಕೆಲವು ಗರ್ಭಾಶಯದ ಸಾಧನಗಳು (ಐಯುಡಿಗಳು), ಯೋನಿ ಉಂಗುರಗಳು, ತೇಪೆಗಳು ಮತ್ತು ಚುಚ್ಚುಮದ್ದು ಸೇರಿದಂತೆ ಇತರ ರೀತಿಯ ಹಾರ್ಮೋನ್ ಜನನ ನಿಯಂತ್ರಣಗಳು ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸೆಳೆತಗಳು ಎಂಡೊಮೆಟ್ರಿಯೊಸಿಸ್ ಅಥವಾ ಫೈಬ್ರಾಯ್ಡ್‌ಗಳಂತಹ  ವೈದ್ಯಕೀಯ ಸ್ಥಿತಿಯ ಕಾರಣದಿಂದಾಗಿ, ಅನಗತ್ಯ ಅಂಗಾಂಶವನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಯ ಅಗತ್ಯವಿರಬಹುದು.

 ಪರಿಹಾರ ನೀಡಬಹುದಾದ ಕೆಲವು ಮನೆಮದ್ದುಗಳು:

ಸೆಳೆತ ಕಡಿಮೆ ಮಾಡಲು ಕೆಲವೊಮ್ಮೆ ಮನೆಮದ್ದುಗಳು ಸಹಾಯ ಮಾಡುತ್ತವೆ.ಕೆಳ ಹೊಟ್ಟೆಗೆ ಶಾಖದ ಪ್ಯಾಡ್ ಅನ್ನು ಇಡುವುದು. ವಿಶ್ರಾಂತಿ ಮತ್ತು ಧ್ಯಾನದ ತಂತ್ರಗಳನ್ನು ಅಭ್ಯಾಸ ಮಾಡುವುದು, ಜಾಗಿಂಗ್, ವಾಕಿಂಗ್ ಅಥವಾ ಯೋಗದಂತಹ ದೈಹಿಕ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವುದು, ಬೆಚ್ಚಗಿನ ನೀರಿನ ಸ್ನಾನ ಮಾಡುವುದು, ಮಸಾಜ್ ಮಾಡಿಕೊಳ್ಳುವುದರಿಂದ ನೋವಿನ ಸೆಳೆತ ಕಡಿಮೆ ಆಗಬಹುದು.

ಗಿಡಮೂಲಿಕೆಗಳ ಪರಿಹಾರಗಳು:

ವಿವಿಧ ಗಿಡಮೂಲಿಕೆ  ಔಷಧಿಗಳು ರೋಗಲಕ್ಷಣಗಳನ್ನು ನಿರ್ವಹಿಸಲು ಸಹಾಯ ಮಾಡಬಹುದು, ಆದಾಗ್ಯೂ ಗಿಡಮೂಲಿಕೆಗಳಿಂದ ಪರಿಹಾರ ಸಿಗುತ್ತದೆ ಎಂದು ಸಂಶೋಧನೆಯು ಇನ್ನೂ ಸಾಬೀತಾಗಿಲ್ಲ.  ಒಟ್ಟಾರೆಯಾಗಿ ವೈದ್ಯರಿಂದ ಸಾಕಷ್ಟು ಮಾರ್ಗದರ್ಶನವನ್ನು ಪಡೆಯಬೇಕು ಮತ್ತು ಚಿಕಿತ್ಸೆಯ ಆಯ್ಕೆಗಳ ಬಗ್ಗೆ ನುರಿತ ಪರಿಣಿತರ ಸಹಾಯ ಪಡೆಯಬೇಕು.


ಮಾಹಿತಿ: ಡಾ. ಜಯಶ್ರೀ ಸುಂದರ್, (ನಿರ್ದೇಶಕರು - ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ಮಧುಕರ್ ರೇನ್‌ಬೋ ಮಕ್ಕಳ ಆಸ್ಪತ್ರೆ, ಮಾಳವೀಯ ನಗರ, ದಿಲ್ಲಿ)

ಮಾಹಿತಿ ಕೃಪೆ: Indianexpress.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News