×
Ad

ವಿದ್ಯಾರ್ಥಿನಿಯರನ್ನು ಶಿಕ್ಷಣದಿಂದ ವಂಚಿತರನ್ನಾಗಿಸಲು ಹಿಜಾಬ್ ವಿವಾದ: ಹೋರಾಟಗಾರ್ತಿ ಕೆ.ನೀಲಾ ಆರೋಪ

Update: 2022-05-31 21:51 IST

ಮಂಗಳೂರು: ದೇಶಾದ್ಯಂತ ನಿರುದ್ಯೋಗ, ಬಡತನ, ದಿನಬಳಕೆಯ ವಸ್ತುಗಳ ಬೆಲೆ ಏರಿಕೆ, ಭ್ರಷ್ಟಾಚಾರ, ಅನಾಚಾರ ಹೆಚ್ಚುತ್ತಿದೆ. ಇವೆಲ್ಲವನ್ನು ಮರೆ ಮಾಡಲು ಬಿಜೆಪಿ, ಆರೆಸ್ಸೆಸ್ ಒಂದಲ್ಲೊಂದು ವಿವಾದಗಳನ್ನು ಹುಟ್ಟು ಹಾಕುತ್ತಲೇ ಇದೆ. ಹಿಜಾಬ್ ವಿವಾದವೂ ಅದರಲ್ಲೊಂದಾಗಿದೆ. ಮುಸ್ಲಿಂ ಹೆಣ್ಕಕ್ಕಳನ್ನು ಶಿಕ್ಷಣದಿಂದ ವಂಚಿತರ ನ್ನಾಗಿಸುವುದೇ ಈ ವಿವಾದದ ಹಿಂದಿನ ಷಡ್ಯಂತ್ರವಾಗಿದೆ ಎಂದು ಹೋರಾಟಗಾರ್ತಿ, ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯೆ ಕೆ. ನೀಲಾ ಹೇಳಿದರು.

ಸಿಪಿಎಂ ರಾಜ್ಯ ಸಮಿತಿಯು ನಗರದ ಪುರಭವನದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ರಾಜ್ಯ ಮಟ್ಟದ ಮುಸ್ಲಿಂ ಸಮಾವೇಶದಲ್ಲಿ ಮಂಗಳವಾರ ನಡೆದ  ‘ಕರ್ನಾಟಕದ ಮುಸ್ಲಿಮರ ಸ್ಥಿತಿಗತಿ’ ಎಂಬ ದ್ವಿತೀಯ ಗೊಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೂಡಿಬಾಳುವುದು ನಾಡಿನ ಪರಂಪರೆಯಾಗಿದೆ. ಹಿಂದೂ, ಮುಸ್ಲಿಮರು ಒಗ್ಗೂಡಿ ಬದುಕುತ್ತಿದ್ದಾರೆ. ಈ ಭಾವೈಕ್ಯತೆಯನ್ನು ಅಳಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಕೆ. ನೀಲಾ, ಜಾಗತಿಕ ಮಟ್ಟದಲ್ಲಿ ಮಾಡಿದ ಷಡ್ಯಂತ್ರದಿಂದಾಗಿ ದಲಿತರು ಮತ್ತು ಮುಸ್ಲಿಮರು ಕಮ್ಯುನಿಷ್ಟರಿಂದ ದೂರ ಹೋಗುವಂತಾಯಿತು. ಪ್ರತಿ ಬಾರಿ ಕೋಮುವಾದಿಗಳು ಹೊಸ ಹೊಸ ಆಟ ಹೂಡುತ್ತಾರೆ. ನಾನು ಬರೆದ ಪಾಠವನ್ನು ಕೂಡ ಪಠ್ಯಪುಸ್ತಕದಿಂದ ಕಿತ್ತು ಹಾಕಿದ್ದಾರೆ. ಧರ್ಮ, ಜಾತಿ ಮಾತ್ರವಲ್ಲ ಭಾಷೆಯ ಆಧಾರದಲ್ಲಿ ಕೂಡ ಸಮಾಜವನ್ನು ಒಡೆಯಲಾಗಿದೆ. ಹೆಣದ ಮೇಲೂ ರಾಜಕೀಯ ಮಾಡುವ ಈ ಪಕ್ಷ, ಸಂಘಟನೆಗಳ ಒಳಮರ್ಮವನ್ನು ಅರ್ಥ ಮಾಡಿಕೊಂಡು ಹೋರಾಟ ತೀವ್ರಗೊಳಿಸಬೇಕಿದೆ ಎಂದರು.

ಬಹುಸಂಖ್ಯಾತರ ಕೋಮುವಾದವನ್ನು ತಡೆಯಲು ಅಲ್ಪಸಂಖ್ಯಾತರ ಕೋಮುವಾದಕ್ಕೆ ನೀರು ಎರೆಯಲಾಗು ತ್ತದೆ. ಇದು ಉತ್ತಮ ಬೆಳವಣಿಗೆಯಲ್ಲ. ಕಮ್ಯುನಿಷ್ಟರು ನಾಸ್ತಿಕರು ಎಂದು ಸುಳ್ಳು ಹರಡುತ್ತಾರೆ. ಧರ್ಮ ಅವರವರ ಆಯ್ಕೆಯಾಗಿದೆ, ಕಮ್ಯುನಿಸ್ಟ್ ಪಕ್ಷವು ನೀವ್ಯಾಕೆ ದೇವರನ್ನು ನಂಬಿದ್ದೀರಿ ಎಂದು ಕೇಳುವುದಿಲ್ಲ ಎಂದು ಸ್ಪಷ್ಪಪಡಿಸಿದರು.

ಹಿರಿಯ ಪತ್ರಕರ್ತ ಬಿಎಂ ಹನೀಫ್ ಮಾತನಾಡಿ ಧರ್ಮ ಎಂದಿಗೂ ಮನುಷ್ಯನ ಶೋಷಣೆಯ ಅಸ್ತ್ರವಾಗಬಾರದು. ಜಾತ್ಯತೀತನಾಗದ ಹೊರತು ಒಬ್ಬ ನೈಜ ಮುಸ್ಲಿಮನಾಗಲು ಸಾಧ್ಯವಿಲ್ಲ. ಯಾವುದೇ ವಿಚಾರವನ್ನು ಅಧ್ಯಯನದ ದೃಷ್ಟಿಯಿಂದ ನೋಡಬೇಕೇ ವಿನಃ  ರಾಜಕೀಯ ದೃಷ್ಟಿಯಿಂದ ನೋಡಬಾರದು ಎಂದು ಅಭಿಪ್ರಾಯಪಟ್ಟರು.

‘ಕರ್ನಾಟಕದ ಮುಸ್ಲಿಮರ ಸ್ಥಿತಿಗತಿ’ ಕುರಿತ ಗೋಷ್ಠಿಯಲ್ಲಿ ವಿಷಯ ಮಂಡಿಸಿದ ಅವರು ಮುಸ್ಲಿಮರ ನೋವು ಇನ್ನೊಬ್ಬರ ನೋವು ಕೂಡಾ ಆಗಿದೆ. ರಾಜ್ಯದ ಬೇರೆ ಬೇರೆ ಕಡೆ ನೆಲೆಸಿರುವ ಮುಸ್ಲಿಮರ ಭಾಷೆ, ಸಂಸ್ಕೃತಿ, ಆಚಾರ, ವಿಚಾರ ಒಂದೇ ರೀತಿಯಿಲ್ಲ. ಮುಸ್ಲಿಮರ ಮಧ್ಯೆ ವೈವಿಧ್ಯತೆಯಿದ್ದರೂ ಕೂಡ ಕರ್ನಾಟಕದ ಸಂಸ್ಕೃತಿ ಯಿಂದ ಹೊರತಾಗಿಲ್ಲ ಎಂದು ಹನೀಫ್ ನುಡಿದರು.

ರಾಜ್ಯದಲ್ಲಿ ಕಾನೂನು ಸಂಪೂರ್ಣವಾಗಿ ಹದಗೆಟ್ಟಿದೆ. ಅದಕ್ಕೆ ಪೂರಕ ಎಂಬಂತೆ ಇದೀಗ ರಾಜಕಾರಣಿಗಳು ಅಭಿವೃದ್ಧಿ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಬದಲು ಧರ್ಮಗಳನ್ನು ರಕ್ಷಣೆ ಮಾಡುವ ಹೊಣೆ ಹೊತ್ತಿದ್ದಾರೆ. ಧರ್ಮಗುರುಗಳು ರಾಜಕೀಯದ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ ಎಂದರು.

ಸಾಚಾರ್ ವರದಿಯಲ್ಲಿ ಎಲ್ಲಾ ರಾಜ್ಯಗಳು ಕೂಡ ಅಲ್ಪಸಂಖ್ಯಾತ ಆಯೋಗವನ್ನು ರದ್ದು ಮಾಡಬೇಕು ಎಂದು ಹೇಳಿದೆ. ಹಾಗಾಗಿ ರಾಜ್ಯದಲ್ಲಿ ಕೂಡ ಸಮಾನ ಪ್ರಾತಿನಿಧ್ಯದ ಆಯೋಗ ರಚನೆ ಮಾಡಲು ಸರಕಾರ ಮುಂದಾಗಬೇಕು ಎಂದು ಕರೆ ನೀಡಿದರು.

ಕಮ್ಯುನಿಸ್ಟ್ ಪಕ್ಷಗಳು ಕೊಮುವಾದದ ವಿರುದ್ಧ ಸೈದ್ಧಾಂತಿಕ ಹೋರಾಟ ಮಾಡುತ್ತಿವೆ. ಮುಸ್ಲಿಮರು ಒಂದು ಪಕ್ಷದ ಜೀತದಾಳುಗಳಾಗಿ ಕೆಲಸ ಮಾಡಿದ್ದು ಸಾಕು. ಜಾತ್ಯತೀತ ಎನ್ನುವಂತಹ ಪಕ್ಷಗಳು ಮುಸ್ಲಿಮರನ್ನು ರಾಜಕೀಯ ಜೀತದಾಳುಗಳಂತೆ ಕಾಣದೆ ಅವರು ಈ ದೇಶಕ್ಕೆ ಕೊಟ್ಟ ಕೊಡುಗೆಗಳನ್ನು ಗಮನಿಸಬೇಕಿದೆ ಎಂದರು.

ಹಿರಿಯ ಚಿಂತಕ ಬಿ.ಪೀರ್ ಭಾಷಾ ಮಾತನಾಡಿ ಪ್ರಭುತ್ವವು ಫ್ಯಾಸಿಸ್ಟ್ ಆಗಿ ಮಾರ್ಪಟ್ಟಿವೆ. ಕಮ್ಯುನಿಸ್ಟರು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಈ ದೇಶದ ಒಳಗಿನ ಶತ್ರುಗಳು ಎಂದು ಗೋಳ್ವಾಲ್ಕರ್ ಹೇಳಿದ್ದರು. ಹಾಗಾಗಿ ಈ ಮೂವರೂ ಒಗ್ಗಟ್ಟಾಗಬೇಕು ಎಂದರು.

ಭಾರತದಲ್ಲಿ ಜಾತಿ, ಧರ್ಮದ ಆಧಾರಲ್ಲೂ ದಮನ ಮಾಡಲಾಗುತ್ತದೆ. ಭಾರತದ ಮುಸ್ಲಿಮರು ಅರಬ್ ರಾಷ್ಟ್ರದಿಂದ ಬಂದವರು ಎಂದು ಸುಳ್ಳು ಹೇಳಿ ಅಮಾಯಕರನ್ನು ನಂಬಿಸಲಾಗುತ್ತದೆ. ಒಂದು ಕಾಲದಲ್ಲಿ ಇಲ್ಲಿನ ಶೋಷಿತ ಸಮುದಾಯದವರು ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಇಲ್ಲಿನ ಮುಸ್ಲಿಮರು ದೇಶದ ಶೂದ್ರ ಸಂಸ್ಕೃತಿಯೊಂದಿಗೆ ಬೆಸೆದಿದ್ದಾರೆ. ಮನುವಾದ ವಿರುದ್ಧ ಸಿಡಿದು ಬಂದವರಾದ ಕಾರಣ ಮುಸ್ಲಿಮರನ್ನು ದಮನಿಸ ಲಾಗುತ್ತಿದೆ. ದಲಿತರನ್ನು ಸಾಂಸ್ಕೃತಿಕ ಅಸ್ತ್ರದ ಮೂಲಕ ನಿಯಂತ್ರಿಸಲಾಗುತ್ತಿದೆ ಎಂದರು.

ಡಾ.ಜೀವನ್‌ ರಾಜ್ ಕುತ್ತಾರ್ ಗೋಷ್ಠಿಯನ್ನು ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News