ಟಿಕಾಯತ್ ಮೇಲೆ ಹಲ್ಲೆ ಆರೋಪ ಪ್ರಕರಣ: ಬಂಧಿತರು ಐದು ದಿನ ಪೊಲೀಸ್ ಕಸ್ಟಡಿಗೆ

Update: 2022-05-31 16:22 GMT

ಬೆಂಗಳೂರು, ಮೇ 31: ರೈತ ನಾಯಕ ರಾಕೇಶ್ ಟಿಕಾಯತ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪ ಪ್ರಕರಣ ಸಂಬಂಧ ಬಂಧಿತರನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದ್ದು, ವಿಚಾರಣೆ ಮುಂದುವರೆದಿದೆ. 

ಆರೋಪಿಗಳಾದ ಭರತ್ ಶೆಟ್ಟಿ, ಪ್ರದೀಪ್ ಹಾಗೂ ಶಿವಕುಮಾರ್‍ನನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿದ ಪೊಲೀಸರು, ಆನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿ ಐದು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ. ಘಟನೆ ಮೂಲ ಕಾರಣ ಯಾರು, ಆರೋಪಿಗಳ ಹಿಂದೆ ಯಾರಿದ್ದಾರೆ ಎಂದು ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.

ಸುದ್ದಿವಾಹಿನಿ ಮುಖ್ಯಸ್ಥನಿಗೆ ಕರೆ: ಬಲಪಂಥೀಯ ಸಂಘಟನೆಗಳಲ್ಲಿ ಸಕ್ರಿಯವಾಗಿರುವ ಭರತ್ ಶೆಟ್ಟಿ, ಘಟನೆಯ ಪ್ರಮುಖ ರೂವಾರಿ ಎನ್ನಲಾಗಿದೆ. ಈತ ಕೃತ್ಯವೆಸಗುವ ಮುನ್ನ ಸುದ್ದಿ ವಾಹಿನಿವೊಂದರ ಮುಖ್ಯಸ್ಥನೊಂದಿಗೆ ಸಂಪರ್ಕದಲ್ಲಿದ್ದ. ಜತೆಗೆ, ಸೋಮವಾರ ಮಧ್ಯಾಹ್ನವೂ ಆತನೊಂದಿಗೆ ಮಾತುಕತೆ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ.

ಟಿಕಾಯತ್ ಮೇಲೆ ಹಲ್ಲೆ ಹುಚ್ಚುತನ: ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ರೈತ ನಾಯಕ ರಾಕೇಶ್ ಟಿಕಾಯತ್ ಮೇಲೆ ನಡೆದ ಹಲ್ಲೆಯೂ ಹುಚ್ಚುತನ ಎಂದು ತಿಳಿಸಿದರು.

ಈ ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ. ಅಲ್ಲದೆ, ರೈತ ನಾಯಕರು ರಾಜ್ಯಕ್ಕೆ ಬಂದಾಗ ಈ ರೀತಿ ಹಲ್ಲೆ ಆಗಬಾರದಿತ್ತು. ಈ ಕೃತ್ಯ ಹುಚ್ಚುತನವಾಗಿದೆ ಎಂದ ಅವರು, ಇಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿದೆ. ಏಕಾಏಕಿ ಯಾರೊಬ್ಬರ ಮೇಲೂ ಮಸಿ ಎರಚುವುದು ಸರಿಯಲ್ಲ ಎಂದರು.

ವೈರಲ್ ಆದ ಉಮಾದೇವಿ ಸ್ಲೋಗನ್

ರಾಕೇಶ್ ಟಿಕಾಯತ್‍ಗೆ ಮಸಿ ಬಳಿದ ಘಟನೆ ವೇಳೆ ಕಾರ್ಯಕರ್ತೆಯ ವರ್ತನೆ ನಗೆಪಾಟಲಿಗೆ ಎಡೆಮಾಡಿಕೊಟ್ಟಿದೆ. ಮಸಿ ಬಳಿದ ಪ್ರಕರಣದ ಆರೋಪಿ ಭರತ್‍ಶೆಟ್ಟಿ ಮೋದಿ ಮೋದಿ ಅಂತಾ ಜೈಕಾರ್ ಕೂಗಿದರೆ ಬಲಪಂಥೀಯ ಮಹಿಳಾ ಕಾರ್ಯಕರ್ತೆ ಉಮಾದೇವಿ ಧಿಕ್ಕಾರ ಎಂದಿದ್ದಾಳೆ. ಬಳಿಕ ಭರತ್ ಶೆಟ್ಟಿ ಜಿಂದಾಬಾದ್ ಎಂದು ಸರಿಪಡಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಸಾಕಷ್ಟು ನಗೆಪಾಟಲಿಗೆ ಗುರಿಯಾಗಿದೆ.

ಸನ್ನಡತೆ ಮೇಲೆ ಹೊರಬಂದಿದ್ದ

ಬಂಧಿತ ಆರೋಪಿಗಳ ಪೈಕಿ ಶಿವಕುಮಾರ್ ಎಂಬಾತ ಈಗಾಗಲೇ ಜೈಲಿಗೆ ಹೋಗಿದ್ದು, ಸನ್ನಡತೆ ಆಧಾರದ ಮೇಲೆ ಹೊರಬಂದಿದ್ದ. ಇನ್ನೂ ಮೂವರು ಆರೋಪಿಗಳ ಮೊಬೈಲ್ ವಶಕ್ಕೆ ಪಡೆದು ಘಟನೆಗೂ ಮುನ್ನ ಯಾರ ಜೊತೆ ಸಂಪರ್ಕ ಮಾಡಿದ್ದರು ಎಂದು ಪರಿಶೀಲನೆ ನಡೆಸುತ್ತಿದ್ದಾರೆ.

ಗುಪ್ತಚರ ಇಲಾಖೆ ಮಾಹಿತಿ

ಮತ್ತೊಂದೆಡೆ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಸಂಗ್ರಹಿಸುತ್ತಿದೆ. ಘಟನೆಗೆ ನಿಖರ ಕಾರಣವೇನು ಎನ್ನುವುದರ ಬಗ್ಗೆ ಹೈಗ್ರೌಂಡ್ಸ್ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇನ್ನೊಂದೆಡೆ ಆರೋಪಿಗಳಾದ ಭರತ್ ಶೆಟ್ಟಿ, ಪ್ರದೀಪ್ ಮತ್ತು ಶಿವಕುಮಾರ್‍ನ ವಿಚಾರಣೆಗೆ ಒಳಪಡಿಸಿದ್ದು, ಆರೋಪಿಗಳು ಯಾರ ಕುಮ್ಮಕ್ಕಿನಿಂದ ಈ ಕೃತ್ಯವೆಸಗಿದ್ದರು, ಯಾವ ಉದ್ದೇಶಕ್ಕೆ ಮಸಿ ಬಳಿದು ಹಲ್ಲೆ ಮಾಡಿದ್ದರು ಎಂದು ವಿಚಾರಣೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News