ಪ್ರಚೋದನಾಕಾರಿ ಚಟುವಟಿಕೆಯ ಉದ್ದೇಶವೇನು?

Update: 2022-06-02 03:27 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಅಯೋಧ್ಯೆಯ ರಾಮಮಂದಿರ ನಿರ್ಮಾಣ ಕಾರ್ಯ ಮುಗಿದ ನಂತರ ಕಾಶಿ, ಮಥುರಾ, ವೃಂದಾವನ, ಮುಂತಾದ ವಿಷಯಗಳನ್ನು ಕೈಗೆತ್ತಿಕೊಳ್ಳುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಇವರು ಒಂದು ರಾಜ್ಯದ ಮುಖ್ಯ ಮಂತ್ರಿಯಾಗಿ ಈ ರೀತಿ ಹೇಳಿಕೆ ನೀಡಬಾರದಿತ್ತು. ಬಿಜೆಪಿ ಮತ್ತು ಅದರ ಮಾತೃ ಸಂಘಟನೆ ಆರೆಸ್ಸೆಸ್‌ಗೆ ಈಗ ಇಂಥ ಪ್ರಚೋದನಾಕಾರಿ ವಿಷಯಗಳನ್ನು ಬಿಟ್ಟರೆ ಮುಂದಿನ ಚುನಾವಣೆಯನ್ನು ಗೆಲ್ಲಲು ಬೇರೆ ವಿಷಯಗಳಿದ್ದಂತಿಲ್ಲ. ಅಂತಲೇ ಕಾಶಿ, ಮಥುರಾ ಮಾತ್ರವಲ್ಲ ಭಾರತದಾದ್ಯಂತ ವಿವಾದದ ಸ್ಥಳಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಕರ್ನಾಟಕದಲ್ಲೂ ಬಾಬಾಬುಡಾನ್‌ಗಿರಿ ನಂತರ ಕಲ್ಯಾಣದ ಅನುಭವ ಮಂಟಪದ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ.

ಸಮಾಜವನ್ನು ಅಂದರೆ ಭಾರತೀಯರನ್ನು ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ವಿಭಜಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಜೊತೆಗೆ ಭಾರತದ ಜಾತ್ಯತೀತ ವ್ಯವಸ್ಥೆಯನ್ನು ದುರ್ಬಲಗೊಳಿಸುವುದು ಈ ಹೇಳಿಕೆ ಮತ್ತು ಚಟುವಟಿಕೆಗಳ ಹಿಂದಿನ ಉದ್ದೇಶಗಳಾಗಿವೆ ಎಂದರೆ ಅತಿಶಯೋಕ್ತಿಯಲ್ಲ. ಧರ್ಮ ನಿರಪೇಕ್ಷತೆ ನಮ್ಮ ಸಂವಿಧಾನದ ಜೀವಾಳವಾಗಿದೆ.ಅದಕ್ಕೆ ಧಕ್ಕೆ ತರುವುದು ಇಂಥ ಪ್ರಚೋದನಾಕಾರಿ ಹೇಳಿಕೆಗಳ ಉದ್ದೇಶವಾಗಿದೆ.ಯೋಗಿ ಆದಿತ್ಯನಾಥ್ ಸೇರಿದಂತೆ ಸಂಘಪರಿವಾರದ ನಾಯಕರ ಹೇಳಿಕೆಗಳು 1991ರ ಪೂಜಾ ಸ್ಥಳಗಳ ಕಾಯ್ದೆಯ ಉಲ್ಲಂಘನೆಯಾಗಿದೆ.ದೇಶದ ಯಾವುದೇ ಪೂಜಾ ಸ್ಥಳದ ಧಾರ್ಮಿಕ ಸ್ವರೂಪವು1947ರ ಆಗಸ್ಟ್ 15 ರಂದು ಹೇಗಿತ್ತೋ ಹಾಗೆಯೇ ಕಾಯ್ದುಕೊಂಡು ಹೋಗಬೇಕೆಂಬುದು ಈ ಕಾಯ್ದೆಯ ಉದ್ದೇಶವಾಗಿದೆ. ಈ ಧಾರ್ಮಿಕ ಸ್ವರೂಪವನ್ನು ಬದಲಿಸುವುದು ಈ ಕಾಯ್ದೆಯ ಪ್ರಕಾರ ನಿರ್ಬಂಧಿಸಲ್ಪಟ್ಟಿದೆ.

ವಾಸ್ತವಾಂಶ ಹೀಗಿರುವಾಗ ವಾರಣಾಸಿಯ ಜ್ಞಾನವಾಪಿ ಮಸೀದಿ ಹಾಗೂ ಮಥುರಾದ ಶಾಹಿ ಈದ್ಗಾ ಮಸೀದಿ ಸೇರಿದಂತೆ ಇತರ ಶ್ರದ್ಧಾ ಕೇಂದ್ರಗಳಿಗೆ ಸಂಬಂಧಿಸಿದಂತೆ ಸಂಘಪರಿವಾರದ ಕೋಮುವಾದಿ ಶಕ್ತಿಗಳು ಹಾಗೂ ಬಿಜೆಪಿ ಪ್ರಚೋದನಾಕಾರಿ ಅಭಿಯಾನ ನಡೆಸಿರುವುದು ಹಾಗೂ ಕೋರ್ಟುಗಳಲ್ಲಿ ತಕರಾರು ಅರ್ಜಿಗಳನ್ನು ಸಲ್ಲಿಸುವುದು , ಕಾನೂನನ್ನು ತಪ್ಪುತಪ್ಪಾಗಿ ವ್ಯಾಖ್ಯಾನಿಸುವುದು ಭಾರತದ ಏಕತೆ ಮತ್ತು ಸಮಗ್ರತೆಗೆ ಅಪಾಯ ತರುವಂಥ ಚಟುವಟಿಕೆಯಾಗಿದೆಯೆಂದರೆ ತಪ್ಪಿಲ್ಲ.

ಬಾಬರಿ ಮಸೀದಿಯನ್ನು ಹೊರತುಪಡಿಸಿ ಇತರ ಪ್ರಾರ್ಥನಾ ಸ್ಥಳಗಳ ಧಾರ್ಮಿಕ ಸ್ವರೂಪವು 1947 ಆಗಸ್ಟ್ 15ರಂದು ಯಾವ ಸ್ವರೂಪದಲ್ಲಿ ಇತ್ತೋ ಅದೇ ಸ್ವರೂಪದಲ್ಲಿ ಮುಂದುವರಿಸುವ ಮೂಲಕ ವಿವಾದಗಳಿಗೆ ಕೊನೆ ಹಾಕುವುದು ಕಾಯ್ದೆಯ ಉದ್ದೇಶವಾಗಿತ್ತು. ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳು ಒಪ್ಪಿ ಅಂಗೀಕರಿಸಿದ ಕಾಯ್ದೆ ಇದು. ಆದರೆ ಸಂಘಪರಿವಾರದ ಸಂಘಟನೆಗಳು ರಾಜಕೀಯ ಲಾಭಕ್ಕಾಗಿ ತಾವೇ ಒಪ್ಪಿಕೊಂಡಿದ್ದ ಈ ನೆಲದ ಕಾನೂನನ್ನು ಧಿಕ್ಕರಿಸಿ ದೇಶ ವ್ಯಾಪಿ ವಿವಾದದ ಕೋಲಾಹಲ ಎಬ್ಬಿಸಿದ್ದು ಸರಿಯಲ್ಲ. 2019 ರ ಸುಪ್ರೀಂ ಕೋರ್ಟ್‌ನ ತೀರ್ಪು ಕೂಡ ಈ ಕಾಯ್ದೆಯ ಸಿಂಧುತ್ವವನ್ನು ಎತ್ತಿ ಹಿಡಿದಿದೆ.

ಸಂಘಪರಿವಾರ ಈಗ ದೇಶ ವ್ಯಾಪಿ ನಡೆಸುತ್ತಿರುವ ಕೋಮುವಾದಿ ಅಭಿಯಾನದಲ್ಲಿ ಜನಾಂಗದ್ವೇಷದ ವಿಷಬೀಜಗಳಿವೆ. ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯಕ್ಕೆ ತೊಂದರೆ ಕೊಡುವ ಮತ್ತು ಅವಮಾನಿಸುವ ದುಷ್ಟ ಹುನ್ನಾರಗಳನ್ನು ಇದು ಒಳಗೊಂಡಿದೆ. ಒಂದು ಜನಸಮುದಾಯವನ್ನು ಮುಖ್ಯ ವಾಹಿನಿಯಿಂದ ದೂರ ಇಡುವ ಮಸಲತ್ತು ನಡೆದಿದೆ. ಇಂಥ ಅತಿರೇಕದ ಪ್ರಚೋದನಾಕಾರಿ ಚಟುವಟಿಕೆಗಳಿಂದ ಭಾರತ ಬರಲಿರುವ ದಿನಗಳಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ ಎಂಬ ಅರಿವು ಈ ಅವಿವೇಕಿಗಳಿಗೆ ಇದ್ದಂತಿಲ್ಲ. ಇದ್ದರೂ ವಿಭಜನೆಯೇ ಇವರ ದುರುದ್ದೇಶವಾಗಿರಲೂ ಬಹುದು.

ಇತಿಹಾಸದಲ್ಲಿ ತಪ್ಪುಗಳು ನಡೆದಿಲ್ಲವೆಂದಲ್ಲ. ಆದರೆ ಇತಿಹಾಸದ ಪ್ರಮಾದಗಳಿಗೆ ವರ್ತಮಾನದಲ್ಲಿ ಸೇಡು ತೀರಿಸಿಕೊಳ್ಳಲು ಹೊರಡುವುದು ಅವಿವೇಕತನದ ಪರಮಾವಧಿಯಾಗಿದೆ. ಇತಿಹಾಸದ ತಪ್ಪುಗಳಿಂದ ನಾವು ಪಾಠ ಕಲಿತು ಬದುಕನ್ನು ಕಟ್ಟಿಕೊಳ್ಳಬೇಕೇ ಹೊರತು ಅವುಗಳನ್ನು ಕೆದಕಿ ಮತ್ತೆ ಗಾಯ ಮಾಡಿಕೊಳ್ಳುವುದು ಸರಿಯಲ್ಲ.

ದೇಶದಲ್ಲಿ ಕಳೆದ ಐದಾರು ತಿಂಗಳಿನಿಂದ ಇಂಥ ಪ್ರಚೋದನಾಕಾರಿ ಅಭಿಯಾನ ನಡೆದಿದ್ದರೂ, ಅನೇಕ ಕಡೆ ಹಿಂಸಾತ್ಮಕ ಘಟನೆಗಳು ವರದಿಯಾಗಿದ್ದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಾಣ ಮೌನ ತಾಳಿದ್ದಾರೆ. ಒಕ್ಕೂಟ ಸರಕಾರ ಕಂಡೂ ಕಾಣದಂತಿದೆ. ಬಿಜೆಪಿ ನಾಯಕರು ಮಾತ್ರವಲ್ಲ ಮುಖ್ಯಮಂತ್ರಿಗಳೇ ಪ್ರಚೋದನಾ ಕಾರಿ ಹೇಳಿಕೆಗಳನ್ನು ನೀಡುತ್ತಿರುವುದು ಆತಂಕದ ಸಂಗತಿಯಾಗಿದೆ. ಇವನ್ನೆಲ್ಲ ಗಮನಿಸಿದರೆ ಸರಕಾರದ ಮೌನ ಸಮ್ಮತಿಯೊಂದಿಗೆ ಇದೆಲ್ಲ ನಡೆದಂತೆ ಕಾಣುತ್ತದೆ.

ನೆಲದ ಕಾನೂನನ್ನು ಎತ್ತಿ ಹಿಡಿಯುವುದು ಚುನಾಯಿತ ಸರಕಾರದ ಕರ್ತವ್ಯ. ಈ ಹೊಣೆಗಾರಿಕೆಯಿಂದ ಅದು ತಪ್ಪಿಸಿಕೊಳ್ಳುವಂತಿಲ್ಲ. ತನ್ನ ಕಾರ್ಯಸೂಚಿಯನ್ನು ಜಾರಿಗೊಳಿಸಲು ಒಂದು ವೇಳೆ ಕಾನೂನನ್ನು ತಿದ್ದಲು ಹೊರಟರೆ ಅದು ಭಾರತದ ಸಂವಿಧಾನಕ್ಕೆ ಅಪಚಾರ ಮಾಡಿದಂತೆ ಎಂಬುದನ್ನು ಅಧಿಕಾರದಲ್ಲಿರುವವರು ಮರೆಯಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News