ಅರ್ಕಾವತಿ ಬಡಾವಣೆ: ಮೂಲೆ ನಿವೇಶನ ಹರಾಜಿಗೆ ಹೈಕೋರ್ಟ್ ತಡೆ

Update: 2022-06-02 17:27 GMT

ಬೆಂಗಳೂರು ಜೂ.2: ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿಡಿಎ ಅಭಿವೃದ್ಧಿಪಡಿಸುತ್ತಿರುವ ಅರ್ಕಾವತಿ ಬಡಾವಣೆಯಲ್ಲಿರುವ ಮೂಲೆ ನಿವೇಶನಗಳ ಹರಾಜಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಅರ್ಕಾವತಿ ಲೇಔಟ್ ಏಳನೆ ಬ್ಲಾಕ್‍ನಲ್ಲಿ ಬಿಡಿಎ ನಿವೇಶನ ಹೊಂದಿದ್ದ ಮಂಜುನಾಥ ರಾವ್, ಮಂಜುಳಾ ಆರ್.ಶೆಟ್ಟಿ ಮತ್ತು ಇಂದುಮತಿ ಬಾಬು ಶೇಖರ್ ಅವರು ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ತಮ್ಮ ಪರವಾಗಿ ಮಾರಾಟ ಪತ್ರಗಳನ್ನು ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಆಲಿಸಿದ ಹೈಕೋರ್ಟ್ ನ್ಯಾಯಪೀಠ, ಈ ಮಧ್ಯಂತರ ಆದೇಶ ನೀಡಿದೆ.

ಬಿಡಿಎ ಮಾಡಿದ ತಪ್ಪಿನಿಂದಾಗಿ ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಹಂಚಿಕೆಯಿಂದ ವಂಚಿತರಾದವರು ಪರ್ಯಾಯ ನಿವೇಶನಗಳಿಗಾಗಿ ಕಾಯುತ್ತಿರುವಾಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು(ಬಿಡಿಎ) ಖಾಸಗಿ ರಿಯಲ್ ಎಸ್ಟೇಟ್ ಕಂಪೆನಿಯಂತೆ ಲಾಭ ಗಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ. 

ಹಂಚಿಕೆದಾರರಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಪರಿಹಾರಕ್ಕಾಗಿ ಬಾಕಿ ಉಳಿದಿರುವಾಗ ಮತ್ತು ಆ ಹಂಚಿಕೆದಾರರು ಕಚೇರಿಯಿಂದ ಕಚೇರಿಗೆ ದಿನವೂ ಎಡತಾಕುತ್ತಿದ್ದಾರೆ ಮತ್ತು ವಿವಿಧ ಪರಿಹಾರಗಳನ್ನು ಕೋರಿ ಕೋರ್ಟ್ ಮೆಟ್ಟಿಲೇರುತ್ತಿದ್ದಾರೆ. ಹೀಗಾಗಿ, ಮೊದಲು ನಿವೇಶನ ಹಂಚಿಕೆದಾರರಿಗೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯುವವರೆಗೆ ಮೂಲೆ ನಿವೇಶನಗಳನ್ನು ಹರಾಜು ಮಾಡಬಾರದು ಎಂದು ನ್ಯಾಯಪೀಠ ನಿರ್ದೇಶನ ನೀಡಿದೆ.

ದ್ವಿತೀಯ ನಾಲಾ ಬಫರ್ ಝೋನ್‍ನಲ್ಲಿ ನಿವೇಶನಗಳನ್ನು ರೂಪಿಸಿದ ಗಂಭೀರ ಪ್ರಮಾದವನ್ನು ಮನಗಂಡ ಬಿಡಿಎ ತಾನಾಗಿಯೇ ಬಡಾವಣೆ ಯೋಜನೆ ಮಾರ್ಪಾಡು ಮಾಡಿ, ತಾನಾಗಿಯೇ ಅನುಮೋದನೆ ನೀಡಿ, ರಸ್ತೆ ನಿರ್ಮಿಸಿ ನಿವೇಶನಗಳನ್ನು ಅಳಿಸಿ, ಈಗ ಸುಮಾರು 35 ಕಿಲೋಮೀಟರ್ ದೂರದಲ್ಲಿ ಪರ್ಯಾಯ ನಿವೇಶನಗಳನ್ನು ಮಂಜೂರು ಮಾಡಲು ಮುಂದಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News