ಮಂಗಳೂರು : ಹ್ಯಾಮಿಲ್ಟನ್ ಸರ್ಕಲ್, ಕ್ಲಾಕ್ ಟವರ್ ಬಳಿ ಮತ್ತೆರಡು ಟ್ರಾಫಿಕ್ ಐಲ್ಯಾಂಡ್

Update: 2022-06-03 14:39 GMT

ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ವಿವಿಧ ಕಡೆ ಸಾರ್ವಜನಿಕರ ವಿರೋಧದ ಮಧ್ಯೆ ಅವೈಜ್ಞಾನಿಕ ಕಾಮಗಾರಿಗಳು ನಡೆಯುತ್ತಿದೆ. ಈ ಹಿಂದೆ ಎಬಿ ಶೆಟ್ಟಿ ಸರ್ಕಲ್ ಬಳಿ ನಿರ್ಮಿಸಲಾದ ಟ್ರಾಫಿಕ್ ಐಲ್ಯಾಂಡ್‌ಗೆ ತೀವ್ರ ವಿರೋಧ ವ್ಯಕ್ತವಾಗಿದ್ದರೆ, ಇದೀಗ ಸಾರ್ವಜನಿಕರ ವಿರೋಧದ ಮಧ್ಯೆಯೂ ಸದಾ ಜನಸಂದಣಿಯಿಂದ ಕೂಡಿರುವ ನಗರದ ಸ್ಟೇಟ್‌ಬ್ಯಾಂಕ್ ಬಳಿಯ ಹ್ಯಾಮಿಲ್ಟನ್ ಸರ್ಕಲ್ ಮತ್ತು ಕ್ಲಾಕ್ ಟವರ್ ಬಳಿ ಟ್ರಾಫಿಕ್ ಐಲ್ಯಾಂಡ್ ನಿರ್ಮಿಸಲಾಗುತ್ತಿದೆ.

ಇದು ತೀರಾ ಅವೈಜ್ಞಾನಿಕ ಕಾಮಗಾರಿಯಾಗಿದೆ ಎಂಬ ಆರೋಪ ವ್ಯಕ್ತವಾಗುತ್ತಿದ್ದರೂ ಕೂಡ ಆಡಳಿತ ವ್ಯವಸ್ಥೆಯು ಇದು ತಾತ್ಕಾಲಿಕ ಮತ್ತು ಪ್ರಯೋಗಿಕ ಎಂಬ ಸಬೂಬು ನೀಡುತ್ತಿದೆ. ಆದರೆ, ಇದಕ್ಕೆ ವ್ಯಯಿಸುವ ಹಣಕ್ಕೆ ಯಾರು ಹೊಣೆ ಎಂಬ ಪ್ರಶ್ನೆಗೆ ಸಮರ್ಪಕ ಉತ್ತರವಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಟ್ರಾಫಿಕ್ ಐಲ್ಯಾಂಡ್‌ನಿಂದಾಗಿ ಹ್ಯಾಮಿಲ್ಟನ್ ಸರ್ಕಲ್ ಬಳಿ ಕೇವಲ 10 ಮೀಟರ್ ರಸ್ತೆ ದಾಟಿ ಹೋಗುವ ಬದಲು ಕನಿಷ್ಟ 2 ಕಿ.ಮೀ. ಸುತ್ತು ಬಳಸಿ ಸಂಚರಿಸಬೇಕಾಗಿದೆ. ಕ್ಲಾಕ್ ಟವರ್ ಬಳಿಯೂ ಇಂತದ್ದೇ ಸಮಸ್ಯೆ ಸೃಷ್ಟಿಯಾಗಲಿದೆ. ಇದರಿಂದ ಜನಸಾಮಾನ್ಯರು ಮತ್ತು ವಾಹನಿಗರು ತಬ್ಬಿಬ್ಬಾಗಿ ಅಪಘಾತಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬರುತ್ತಿದೆ.

ನಗರದಲ್ಲಿ ಟ್ರಾಫಿಕ್ ಐಲ್ಯಾಂಡ್ ನಿರ್ಮಾಣ ಮಾಡುವುದರಿಂದ ಸಾರ್ವಜನಿಕರಿಗೆ ಅನುಕೂಲಕ್ಕಿಂತ ಸಮಸ್ಯೆಯೇ ಹೆಚ್ಚು. ಈ ಹಿಂದಿನಂತೆ ವೃತ್ತ ನಿರ್ಮಿಸಿ ಕೊಟ್ಟರೆ ಯಾವುದೇ ಕಡೆಯಿಂದ ಬರುವ ವಾಹನಗಳಿಗೆ ಸುಗಮ ಸಂಚಾರ ಸುಲಭ ಸಾಧ್ಯವಾಗಲಿದೆ. ಅವೈಜ್ಞಾನಿಕ ಟ್ರಾಫಿಕ್ ಐಲ್ಯಾಂಡ್‌ನಿಂದ ಅಪಘಾತ, ವಾಹನ ದಟ್ಟಣೆ, ಸುತ್ತು ಬಳಸಿ ಸಂಚರಿಸುವ ಪ್ರಮೇಯ ಎದುರಾಗಲಿದೆ ಎಂದು ಜನಸಾಮಾನ್ಯರು ಅಭಿಪ್ರಾಯಪಟ್ಟಿದ್ದಾರೆ.

ಹ್ಯಾಮಿಲ್ಟನ್ ಬಳಿ ಅವೈಜ್ಞಾನಿಕ ಟ್ರಾಫಿಕ್ ಐಲ್ಯಾಂಡ್‌ನಿಂದಾಗಿ ಬಂದರ್ ಹಾಗೂ ನೆಲ್ಲಿಕಾಯಿ ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಅಥವಾ ರೊಜಾರಿಯೋ ಶಾಲೆಯ ಕಡೆಗೆ ತೆರಳಬೇಕಾದರೆ ಕ್ಲಾಕ್ ಟವರ್ ಮೂಲಕ ಸುತ್ತಾಡಬೇಕಿದೆ. ಇದರಿಂದ ಸುಮಾರು 2 ಕಿ.ಮೀ. ಕ್ರಮಿಸಬೇಕಿದೆ. ಅಲ್ಲದೆ ಸಮಯವೂ ವ್ಯರ್ಥವಾಗಲಿದೆ. ಜೊತೆಗೆ ಬೆಳಗ್ಗೆ ಮತ್ತು ಸಂಜೆಯ ವೇಳೆಗೆ ವಾಹನ ದಟ್ಟಣೆಯೂ ಹೆಚ್ಚಾಗಲಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿದ್ದ ಪ್ರತಿಭಟನೆಗಳಿಗೆ ಸಾವಿರಾರು ಮಂದಿ ಸೇರಿದ್ದರೂ ಕೂಡ ಸುಗಮ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರಲಿಲ್ಲ. ಇನ್ನು ಮುಂದೆ ಸ್ಟೇಟ್‌ಬ್ಯಾಂಕ್‌ನಲ್ಲಿ ದಟ್ಟಣೆ ಉಂಟಾದರೆ ಅದರ ಪರಿಣಾಮ ಹಂಪನಕಟ್ಟೆಯ ತನಕ ತಟ್ಟಲಿದೆ. ಬಂದರು ಕಡೆಯಿಂದ, ನೆಲ್ಲಿಕಾಯಿ ರಸ್ತೆಯ ಮೂಲಕ ಸಾಗುತ್ತಿದ್ದ ವಾಹನಗಳೆಲ್ಲವೂ ರಾವ್ ಆ್ಯಂಡ್ ರಾವ್ ವೃತ್ತದಿಂದ ಕ್ಲಾಕ್ ಟವರ್ ರಸ್ತೆಯಲ್ಲಿ ಸಾಗುವುದರಿಂದ ಈ ರಸ್ತೆಯಲ್ಲೂ ವಾಹನ ದಟ್ಟಣೆ ಹೆಚ್ಚಾಗಲಿದೆ. ಸ್ಟೇಟ್‌ಬ್ಯಾಂಕ್‌ನ ಪರಿಸರದ ಎಲ್ಲ ರಸ್ತೆಗಳನ್ನು ಏಕಮುಖ ಮಾಡುತ್ತಿರುವುದು ಸಾರ್ವಜನಿಕರಿಗೆ, ವ್ಯಾಪಾರಿಗಳಿಗೆ ತೊಂದರೆಯಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ.

ಸ್ಟೇಟ್‌ಬ್ಯಾಂಕ್‌ನ ಹ್ಯಾಮಿಲ್ಟನ್ ಸರ್ಕಲ್ ಬಳಿ ನಿರ್ಮಾಣ ಮಾಡಲಾಗುತ್ತಿರುವ ಟ್ರಾಫಿಕ್ ಐಲ್ಯಾಂಡ್ ಅವೈಜ್ಞಾನಿಕ ವಾಗಿದೆ. ಪ್ರತಿ ನಿತ್ಯ ಈ ರಸ್ತೆಯಲ್ಲಿ ಸಂಚರಿಸುವವರು ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ. ಅಭಿವೃದ್ಧಿಯ ನೆಪದಲ್ಲಿ ಈ ಪ್ರದೇಶದಲ್ಲಿ ಯಾವುದೇ ಬದಲಾವಣೆ ಮಾಡದೆ ಈ ಹಿಂದಿನಂತೆಯೇ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ಹಿಂದೆ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆಯುತ್ತಿದ್ದ ಪ್ರತಿಭಟನಾ ಸಭೆಗಳನ್ನು ಇದೀಗ ಕ್ಲಾಕ್‌ ಟವರ್‌ಗೆ ಸ್ಥಳಾಂತರಿಸಲಾಗಿದೆ. ಇನ್ನೀಗ ಕ್ಲಾಕ್‌ ಟವರ್ ಬಳಿ ಟ್ರಾಫಿಕ್ ಐಲ್ಯಾಂಡ್ ನಿರ್ಮಿಸಿದರೆ ಪ್ರತಿಭಟನೆಯ ಸಂದರ್ಭ ಮತ್ತಷ್ಟು ಸಮಸ್ಯೆ ಬಿಗಡಾಯಿಸಲಿದೆ ಎಂಬ ಮಾತು ಕೇಳಿ ಬರುತ್ತಿದೆ.

"ಇದು ಪ್ರಾಯೋಗಿಕ ಕ್ರಮವಾಗಿದೆ. ಇದರ ಸಾಧಕ ಬಾಧಕಗಳನ್ನು ಅರಿತುಕೊಂಡು ಮುಂದಿನ ದಿನಗಳಲ್ಲಿ ಏನು ಮಾಡಬೇಕು ಎಂಬುದನ್ನು ನಿರ್ಧರಿಸಲಾಗುವುದು".
-ಪ್ರೇಮಾನಂದ ಶೆಟ್ಟಿ, ಮೇಯರ್, ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News