×
Ad

ಸಮಾಜದ ಸ್ವಾಸ್ಥ್ಯ ಕೆಡಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತಾರತಮ್ಯ ಯಾಕೆ: ಯು.ಟಿ.ಖಾದರ್ ಪ್ರಶ್ನೆ

Update: 2022-06-03 21:26 IST

ಮಂಗಳೂರು : ಸಮಾಜದ ಸ್ವಾಸ್ಥ್ಯ ಕೆಡಹುವವರ ವಿರುಧ್ಧ ಕಾನೂನು ಕ್ರಮ ಕೈಗೊಳ್ಳಲು ರಾಜ್ಯ ಸರಕಾರ ದ್ವಿಮುಖ ನೀತಿ ತಾಳುತ್ತಿದೆ. ಸಣ್ಣಪುಟ್ಟ ತಪ್ಪು ಮಾಡಿದವರನ್ನು ಭೇಟೆಯಾಡಿ ಬಂಧಿಸುವ ಪೊಲೀಸ್ ಇಲಾಖೆಯು ದೊಡ್ಡ ಮಟ್ಟಿನಲ್ಲಿ ಸಮಾಜದ ಶಾಂತಿ ಕದಡುವವರ, ಸಾಮರಸ್ಯ, ಸ್ವಾಸ್ಥ್ಯ ಕೆಡಿಸುವವರ ವಿರುದ್ಧ ಯಾಕೆ ಮೌನ ವಹಿಸಿದೆ. ಇಂತಹ ತಾರತಮ್ಯ ಯಾಕೆ ಎಂದು ರಾಜ್ಯ ವಿಧಾನಸಭೆಯ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಪ್ರಶ್ನಿಸಿದ್ದಾರೆ.

ಬಾಯಿಗೆ ಬಂದಂತೆ ಮಾತನಾಡುವ ಪ್ರಮೋದ್ ಮುತಾಲಿಕ್ ಹಾಗೂ ಚಕ್ರವರ್ತಿ ಸೂಲಿಬೆಲೆ ಹೇಳಿಕೆಗಳು ಕಾನೂನು ಉಲ್ಲಂಘನೆ ಅಲ್ಲದೇ ? ಕೇವಲ ಪ್ರತಿಭಟನೆ ಮಾಡಿದ್ದೇ ಅಪರಾಧ ಎಂಬಂತೆ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕವಾದ ಎನ್‌ಎಸ್‌ಯುಐನ ರಾಜ್ಯಾಧ್ಯಕ್ಷ ಮೇಲೆ ಕೇಸು ದಾಖಲಿಸಿರುವ ಬಿಜೆಪಿ ಸರಕಾರವು ಗುಂಡು ಹಾರಿಸುವೆ ಎಂದು ಸಾರ್ವಜನಿಕವಾಗಿಯೇ ಹೇಳಿದ ಪ್ರಮೋದ್ ಮುತಾಲಿಕ್ ವಿರುದ್ಧ ಮೌನವಾಗಿರುವುದು ಯಾತಕ್ಕೆ ? ಮೂರು ಮಸೀದಿ ಬಿಟ್ಟುಕೊಡಿ ಎಂದು ತಾಕೀತು ಮಾಡುವ ಚಕ್ರವರ್ತಿ ಸೂಲಿಬೆಲೆ ವಿರುದ್ದ ಯಾಕೆ  ಕಾನೂನು ಕ್ರಮವಿಲ್ಲ ? ಇಷ್ಟಕ್ಕೂ ಈ ರೀತಿ ಹೇಳಲು ಅವರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಖಾದರ್ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಸರಕಾರವಿದ್ದಾಗ ಸರ್ವಸ್ವವನ್ನು ಅದುಮಿಟ್ಟುಕೊಂಡಿದ್ದ ಈ ಮಂದಿ ಈಗ ಸಾರ್ವಜನಿಕವಾಗಿಯೇ ಧಮಿಕಿ ಹಾಕುತ್ತಿದ್ದಾರೆ ಎಂದರೆ ಇದಕ್ಕೆ ಬಿಜೆಪಿ ಸರಕಾರದ ಕುಮ್ಮಕ್ಕು ಹಾಗೂ ಬೆಂಬಲ ಇದೆ ಎಂದು ಸಾಬೀತಾಗಿದೆ. ಸಮಾಜ ದ್ರೋಹಿಗಳನ್ನು ಸಹಿಸುವುದಿಲ್ಲ ಎಂದು ಹೇಳುವ ಸರಕಾರ ಮುತಾಲಿಕ್ ಹಾಗೂ ಸೂಲಿಬೆಲೆಯ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಯು.ಟಿ.ಖಾದರ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News