ಬೆಂಗಳೂರಿನಲ್ಲಿ ಗಾಳಿ, ಗುಡುಗು, ಸಿಡಿಲು ಸಹಿತ ಭಾರೀ ಮಳೆ

Update: 2022-06-03 16:10 GMT

ಬೆಂಗಳೂರು, ಜೂ.3: ನಗರದ ಹಲವೆಡೆ ಶುಕ್ರವಾರ ಸಂಜೆ ಗುಡುಗು-ಸಿಡಿಲು ಸಹಿತ ಮಳೆ ಸುರಿಯಿತು. ಮಳೆ ಸಂದರ್ಭದಲ್ಲೇ ಗಾಳಿಯು ಸಹ ಜೋರಾಗಿ ಬೀಸಿದ್ದರಿಂದ ಹಲವು ಕಡೆಗಳಲ್ಲಿ ಮರಗಳು ನೆಲಕ್ಕುರುಳಿವೆ. 

ವೈಟ್‍ಫೀಲ್ಡ್, ಕಾರ್ಪೂರೇಷನ್, ಮಾರತ್ತಹಳ್ಳಿ, ಎಚ್‍ಎಸ್‍ಆರ್ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಕೋರಮಂಗಲ, ಮಲ್ಲೇಶ್ವರ, ರಾಜಾಜಿನಗರ, ಬಸವೇಶ್ವರನಗರ, ಪೀಣ್ಯ, ಯಶವಂತಪುರ, ಇಂದಿರಾನಗರ, ಎಂ.ಜಿ.ರಸ್ತೆ, ಶಾಂತಿನಗರ, ವಿಲ್ಸನ್ ಗಾರ್ಡನ್, ಕೆಂಗೇರಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಗುಡುಗು, ಸಿಡಿಲು, ಗಾಳಿ ಸಹಿತ ಜೋರು ಮಳೆ ಸುರಿಯಿತು. 

ಮಳೆ ಹಾಗೂ ಮರಗಳು ನೆಲಕ್ಕುರುಳಿದ್ದರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ಬಿಬಿಎಂಪಿ ಅರಣ್ಯ ವಿಭಾಗದ ಸಿಬ್ಬಂದಿ ಸ್ಥಳಕ್ಕೆ ಹೋಗಿ ಮರಗಳನ್ನು ತೆರವು ಮಾಡಿದರು. ಇದರಿಂದ, ವಾಹನ ಸಂಚಾರ ಯಥಾಸ್ಥಿತಿಗೆ ಮರಳಿತು. ಕೆಲವು ಕಡೆಗಳಲ್ಲಿ ಮರದ ರೆಂಬೆಗಳು ಮುರಿದು ವಿದ್ಯುತ್ ತಂತಿಗಳ ಮೇಲೆ ಬಿದ್ದಿವೆ. ಹೀಗಾಗಿ, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು.

ರಾಜ್ಯದಲ್ಲಿ ಇನ್ನೂ ಮೂರು ದಿನ ಮಳೆ: ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ಶನಿವಾರದಿಂದ ಇನ್ನು ಮೂರು ದಿನ ಕಾಲ ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಉಂಟಾಗಿರುವ ಹಿನ್ನೆಲೆಯಲ್ಲಿ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದೆ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಮಾಹಿತಿ ನೀಡಿದೆ. 

ಯೆಲ್ಲೋ ಅಲರ್ಟ್ ಘೋಷಣೆ: ಜೂನ್ 4ರಿಂದ ಜೂನ್ 7ರವರೆಗೆ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ರಾಮನಗರ, ಮೈಸೂರು, ಮಂಡ್ಯ, ದಾವಣಗೆರೆ, ಹಾಸನ, ಕೊಡಗು ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವವಿದೆ. ಹವಾಮಾನ ಇಲಾಖೆ ಈ ಪ್ರದೇಶಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ಕೂಡಲೇ ಸ್ಥಳಕ್ಕೆ ತೆರಳಿ

ನಗರದಲ್ಲಿ ಮಳೆಯಿಂದಾಗಿ ಪ್ರವಾಹ, ಹಾನಿ ಬಗ್ಗೆ ಮಾಹಿತಿ ಬಂದರೆ, ಕೂಡಲೇ ಬಿಬಿಎಂಪಿ ಇಂಜಿನಿಯರ್‍ಗಳು ಸ್ಥಳಕ್ಕೆ ತೆರಳಬೇಕು. ಲೊಕೇಶನ್ ಅನ್ನು ಕಳುಹಿಸಬೇಕು. ಜಂಟಿ ಆಯುಕ್ತರು ಇದನ್ನು ಕಟ್ಟುನಿಟ್ಟಾಗಿ ಪರಿಶೀಲನೆ ಮಾಡಬೇಕು. ಹಾಗೆಯೇ ರಾಜಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ಪೈಪ್‍ಲೈನ್‍ಗಳಲ್ಲಿ ಕಸವನ್ನು 30ದಿನದ ಒಳಗಾಗಿ ತೆಗೆಯಬೇಕು. ತಗ್ಗು ಪ್ರದೇಶಗಳಲ್ಲಿ ದೊಡ್ಡ ಇಂಗು ಗುಂಡಿಗಳನ್ನು ಮಾಡಬೇಕು. ಒಣಗಿದ ಮರಗಳನ್ನು ಗುರುತಿಸಿ ಕತ್ತರಿಸಬೇಕು. ಮಳೆಗಾಲ ಮುಗಿಯುವ ತನಕ ಲೈಸನ್ಸ್ ಪಡೆದವರೂ ರಸ್ತೆಗಳನ್ನು ಅಗೆಯುವಂತಿಲ್ಲ. 

-ಆರ್. ಅಶೋಕ್, ಕಂದಾಯ ಸಚಿವ  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News