ಹಿಂಸೆಗೆ ಪ್ರಚೋದನೆ ನೀಡುವವರ ವಿರುದ್ಧ ಕಾನೂನು ಕ್ರಮವಾಗಲಿ: ಸಿಎಂಗೆ ಯು.ಟಿ.ಖಾದರ್ ನೇತೃತ್ವದ ನಿಯೋಗದಿಂದ ಆಗ್ರಹ

Update: 2022-06-03 17:12 GMT

ಬೆಂಗಳೂರು: ಹಿಂಸೆಗೆ ನೇರವಾಗಿ ಪ್ರಚೋದನೆ ನೀಡುವ ಹೇಳಿಕೆ ನೀಡುತ್ತಿರುವ ಪ್ರಮೋದ್ ಮುತಾಲಿಕ್ ಹಾಗೂ ಚಕ್ರವರ್ತಿ ಸೂಲಿಬೆಲೆಯಂತವರ ವಿರುದ್ಧ ಕಾನೂನು ಕ್ರಮಕೈಗೊಳ್ಳದೇ ಇರುವುದು ಸರಿಯಲ್ಲ, ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಪಕ್ಷ ಉಪನಾಯಕ ಯು.ಟಿ. ಖಾದರ್ ನೇತೃತ್ವದ ಶಾಸಕರು ಹಾಗು ಮುಖಂಡರ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಗ್ರಹಿಸಿದೆ. 

ಶುಕ್ರವಾರ ಸಂಜೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್, ಶಾಸಕ ರಹೀಮ್ ಖಾನ್, ಜಿ.ಎ. ಬಾವಾ ಅವರ ನಿಯೋಗ ರಾಜ್ಯದಲ್ಲಿ ಕೆಲವರು ನಿರಂತರ ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ. ದೈಹಿಕ ಹಲ್ಲೆ, ಕೊಲೆಯಂತಹ ಬೆದರಿಕೆ ಹಾಕುತ್ತಿದ್ದಾರೆ. ಧರ್ಮಗಳ ನಡುವೆ ದ್ವೇಷ ಹರಡುವ ಮಾತಾಡುತ್ತಿದ್ದಾರೆ. ಆದರೆ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಆಗುತ್ತಿಲ್ಲ. ಅಂತಹ ವ್ಯಕ್ತಿಗಳ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮವಾಗಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಸೂಕ್ತ ನಿರ್ದೇಶನ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ಯು.ಟಿ. ಖಾದರ್ ತಿಳಿಸಿದ್ದಾರೆ. 

ಮಳಲಿ ಮಸೀದಿ ನವೀಕರಣ ಸಂದರ್ಭದಲ್ಲಿ ಸೃಷ್ಟಿಯಾದ ವಿವಾದ ನ್ಯಾಯಾಲಯದಲ್ಲಿದ್ದು ಅದರ ತೀರ್ಪಿಗೆ ಎಲ್ಲರೂ ಬದ್ಧವಾಗಿರಬೇಕು. ತೀರ್ಪು ಬರುವವರೆಗೆ ಯಾರೂ ಆ ಬಗ್ಗೆ  ಶಾಂತಿ ಭಂಗವಾಗುವ ಹೇಳಿಕೆ ನೀಡಲು ಜಿಲ್ಲಾಡಳಿತ ಅವಕಾಶ ನೀಡಬಾರದು ಎಂದೂ ನಿಯೋಗ ಬೊಮ್ಮಾಯಿ ಯವರನ್ನು ಆಗ್ರಹಿಸಿದ್ದೇವೆ. ಜಿಲ್ಲಾಡಳಿತಕ್ಕೆ ಈ ಬಗ್ಗೆ ಸೂಚನೆ ನೀಡುವುದಾಗಿ ಸಿಎಂ ಹೇಳಿದ್ದಾರೆ  ಎಂದು ಖಾದರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News