ಉದ್ಯೋಗ ಕ್ಷೇತ್ರದಿಂದ ಮಹಿಳೆಯರ ಕಣ್ಮರೆಯಿಂದ ಭಾರತದಲ್ಲಿ ಲಕ್ಷಾಂತರ ಕೋಟಿ ನಷ್ಟದ ಅಪಾಯ

Update: 2022-06-04 09:28 GMT

ದೇಶದಾದ್ಯಂತದ ಪರಿಸ್ಥಿತಿಯನ್ನು ಭುನಿಯಾಳ ಕತೆ ಪ್ರತಿಧ್ವನಿಸಿದೆ. ಬೆಂಗಳೂರಿನ ಅಝೀಮ್ ಪ್ರೇಮ್‌ಜಿ ವಿವಿಯಲ್ಲಿ ಅರ್ಥಶಾಸ್ತ್ರದ ಫ್ರೊಫೆಸರ್ ಆಗಿದ್ದ ರೋಸಾ ಅಬ್ರಹಾಂ ‘‘ಸುಮಾರು 20,000 ಮಂದಿಯನ್ನು ಗಮನಿಸಿದ್ದು, ಪ್ರಥಮ ಲಾಕ್‌ಡೌನ್‌ನ ಬಳಿಕ ಪುರುಷರಿಗಿಂತ ಮಹಿಳೆಯರು ಉದ್ಯೋಗ ಕಳೆದುಕೊಳ್ಳುವ ಪ್ರಮಾಣ ಅತ್ಯಧಿಕವಾಗಿದ್ದು ನಿರ್ಬಂಧ ತೆರವಾದ ಬಳಿಕ ಉದ್ಯೋಗವನ್ನು ಮತ್ತೆ ಪಡೆಯುವ ಸಾಧ್ಯತೆಯೂ ತುಂಬಾ ಕಡಿಮೆ’’ ಎಂದಿದ್ದಾರೆ.

ಮದುವೆಯಾಗಿ ಬದುಕಿನಲ್ಲಿ ನೆಲೆ ಕಂಡುಕೋ ಎಂಬ ಪೋಷಕರ ಒತ್ತಡದ ವಿರುದ್ಧ ಸಂಚೂರಿ ಭುನಿಯಾ ಹಲವು ವರ್ಷಗಳಿಂದ ಸಂಷರ್ಘ ನಡೆಸಿದಳು. ಅವಳಿಗೆ ಗೃಹಿಣಿಯಾಗುವ ಬದಲು ಪ್ರಯಾಣ ಮಾಡುವುದು ಮತ್ತು ಹಣ ಗಳಿಸುವುದರಲ್ಲಿ ಆಸಕ್ತಿಯಿತ್ತು. 

ಹೀಗೆ 2019ರಲ್ಲಿ ಪೂರ್ವ ಭಾರತದ ಒಡಿಶಾದ ಪತ್ರಪಾಳಿ ಎಂಬ ತನ್ನ ಹಳ್ಳಿಯಿಂದ ತೆರಳಿದ ಭುನಿಯಾ ರೈಲು ಹತ್ತಿ ಬೆಂಗಳೂರಿಗೆ ಬಂದು ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ತಿಂಗಳಿಗೆ ರೂ. 8,500 ವೇತನದ ಉದ್ಯೋಗಕ್ಕೆ ಸೇರಿಕೊಂಡಳು. ಉದ್ಯೋಗ ಅವಳನ್ನು ಸ್ವತಂತ್ರಗೊಳಿಸಿತು. ‘‘ನಾನು ಓಡಿಹೋದೆ. ನಾನು ಹೋಗಬಹುದಾದ ಏಕೈಕ ದಾರಿ ಇದಾಗಿತ್ತು’’ ಎಂದವಳು ಹೇಳಿಕೊಂಡಿದ್ದಳು. ಆದರೆ ಆ ಆರ್ಥಿಕ ಸ್ವಾತಂತ್ರ್ಯದ ಜೀವನ ಕೋವಿಡ್-19 ಆಗಮನದೊಂದಿಗೆ ಹಠಾತ್ತನೆ ಕೊನೆಗೊಂಡಿತು. 2020ರಲ್ಲಿ ಸೋಂಕು ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದರು ಮತ್ತು ಬಹುತೇಕ ಎಲ್ಲಾ ವ್ಯವಹಾರಗಳೂ ಮುಚ್ಚಲ್ಪಟ್ಟವು. ಕೆಲವೇ ವಾರಗಳಲ್ಲಿ 100 ಮಿಲಿಯನ್‌ಗೂ ಅಧಿಕ ಭಾರತೀಯರು, ಸಂಚೂರಿ ಭುನಿಯಾ ಸೇರಿದಂತೆ ತಮ್ಮ ಉದ್ಯೋಗ ಕಳೆದುಕೊಂಡರು. ಭುನಿಯಾ ಒತ್ತಾಯಪೂರ್ವಕವಾಗಿ ಹಳ್ಳಿಗೆ ಮರಳಬೇಕಾಯಿತು ಮತ್ತು ಆ ಬಳಿಕ ಆಕೆಗೆ ಸ್ಥಿರ ಉದ್ಯೋಗ ಸಿಗಲಿಲ್ಲ. 

ಸಾಂಕ್ರಾಮಿಕದ ಕಪಿಮುಷ್ಟಿಯಿಂದ ಜಗತ್ತು ಹೊರಬರುತ್ತಿದ್ದಂತೆಯೇ ಅರ್ಥಶಾಸ್ತ್ರಜ್ಞರು ಕಳವಳಕಾರಿ ಅಂಶದ ಬಗ್ಗೆ ಎಚ್ಚರಿಕೆ ನೀಡಿದರು: ಉದ್ಯೋಗಕ್ಕೆ ಮರಳಲು ಪುರುಷರಿಗಿಂತ ಕಡಿಮೆ ಸಾಧ್ಯತೆ ಇರುವ ಮಹಿಳೆಯರಿಗೆ ಉದ್ಯೋಗಗಳನ್ನು ಮರುಸ್ಥಾಪಿಸಲು ವಿಫಲವಾಗಿರುವುದು ಜಾಗತಿಕ ಆರ್ಥಿಕ ಪ್ರಗತಿಯಿಂದ ಲಕ್ಷಾಂತರ ಕೋಟಿ ಡಾಲರ್‌ಗಳಷ್ಟನ್ನು ಅಳಿಸಿಹಾಕಬಹುದು ಎಂದು ಎಚ್ಚರಿಸಿದ್ದರು. ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆ ತೀವ್ರವಾಗಿ ಕುಸಿದು ಈಗ ಯುದ್ಧದಿಂದ ಜರ್ಜರಿತಗೊಂಡಿರುವ ಯೆಮನ್‌ನ ಮಟ್ಟಕ್ಕೆ ತಲುಪಿರುವ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಪರಿಸ್ಥಿತಿ ಇನ್ನಷ್ಟು ಮಸುಕಾಗಿದೆ ಎಂದು ಮುನ್ಸೂಚನೆ ನೀಡಲಾಗಿದೆ. 

ಪೇ ಚೆಕ್ ಪಾಡ್‌ಕಾಸ್ಟ್‌ನ ಈ ವಾರದ ಸಂಚಿಕೆಯಲ್ಲಿ, ವಿಶ್ವದ 2ನೇ ಅತ್ಯಧಿಕ ಜನಸಂಖ್ಯೆಯ ದೇಶದಲ್ಲಿ ಈಗಾಗಲೇ ಇರುವ ಆತಂಕಕಾರಿ ಪ್ರವೃತ್ತಿಯನ್ನು ಕೊರೋನ ಸೋಂಕು ಹೇಗೆ ಇನ್ನಷ್ಟು ತೀವ್ರಗೊಳಿಸಿದೆ ಎಂಬುದನ್ನು ಪರಿಶೀಲಿಸಲಾಗಿದೆ. 2010ರಿಂದ 2020ರ ಮಧ್ಯೆ, ಭಾರತದಲ್ಲಿ ಮಹಿಳಾ ಉದ್ಯೋಗಿಗಳ ಪ್ರಮಾಣ ಶೇ. 26ರಿಂದ ಶೇ. 19ಕ್ಕೆ ಕುಸಿದಿದೆ ಎಂದು ವಿಶ್ವಬ್ಯಾಂಕ್‌ನ ದಾಖಲೆ ವಿವರಿಸಿದೆ. ಸೋಂಕು ಉಲ್ಬಣಗೊಂಡಂತೆ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಮುಂಬೈಯ ಅರ್ಥಶಾಸ್ತ್ರಜ್ಞರ ಪ್ರಕಾರ, 2022ರಲ್ಲಿ ಮಹಿಳಾ ಉದ್ಯೋಗಿಗಳ ಪ್ರಮಾಣ ಶೇ. 9ಕ್ಕೆ ಕುಸಿದಿದೆ. 

ಇದು ಭಾರತದ ಅರ್ಥವ್ಯವಸ್ಥೆಗೆ ಹಾನಿಕಾರಕ ಸುದ್ದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿದ್ದರು ಮತ್ತು ದೇಶ ಅಭಿವೃದ್ಧಿಯ ಸುವರ್ಣ ಯುಗದ ಬಗ್ಗೆ ಶ್ರಮಿಸುವಂತೆ ದೇಶಕ್ಕೆ ಕರೆ ನೀಡಿದ್ದರು. ಆದರೆ ಅವರ ಆಡಳಿತವು ಮಹಿಳಾ ಉದ್ಯೋಗಿಗಳ ಭವಿಷ್ಯವನ್ನು ಸುಧಾರಿಸುವಲ್ಲಿ ಅಲ್ಪಪ್ರಗತಿ ಸಾಧಿಸಿದೆ. ಇದು ವಿಶೇಷವಾಗಿ, ಭಾರತದ 1.3 ಬಿಲಿಯನ್ ಜನಸಂಖ್ಯೆಯ ಮೂರನೇ ಎರಡರಷ್ಟು ಜನರಿರುವ ಗ್ರಾಮೀಣ ಭಾಗದಲ್ಲಿ ಸತ್ಯವಾಗಿದೆ. ದೇಶದ ತ್ವರಿತ ಆರ್ಥಿಕ ವಿಸ್ತರಣೆಯ ಹೊರತಾಗಿಯೂ ಮಹಿಳೆಯರು ನಗರ ಕೇಂದ್ರದಲ್ಲಿ ಕೆಲಸ ಮಾಡುವ ಬದಲಾವಣೆಗೆ ಒಗ್ಗಿಕೊಳ್ಳಲು ಹೆಣಗಾಡುತ್ತಿದ್ದಾರೆ. 

ಪುರುಷರು ಮತ್ತು ಮಹಿಳಾ ಉದ್ಯೋಗಿಗಳ ನಡುವಿನ ಶೇ. 58ರಷ್ಟು ಅಂತರವನ್ನು ಮುಚ್ಚಿಬಿಟ್ಟರೆ 2050ರ ವೇಳೆಗೆ ಭಾರತದ ಜಿಡಿಪಿಯನ್ನು ಮೂರನೇ ಒಂದರಷ್ಟು ವಿಸ್ತರಿಸಬಹುದು. ಇದು ಅಮೆರಿಕದ ಡಾಲರ್ ಲೆಕ್ಕದಲ್ಲಿ ಸುಮಾರು 6 ಶತಕೋಟಿ ಡಾಲರ್‌ಗೆ ಸಮವಾಗುತ್ತದೆ ಎಂದು ಬ್ಲೂಮ್‌ಬರ್ಗ್ ಇಕನಾಮಿಕ್ಸ್‌ನ ಇತ್ತೀಚಿನ ವಿಶ್ಲೇಷಣೆ ಹೇಳಿದೆ. ಏನನ್ನೂ ಮಾಡದಿರುವುದು ಜಾಗತಿಕ ಮಾರುಕಟ್ಟೆಗೆ ಸ್ಪರ್ಧಾತ್ಮಕ ಉತ್ಪಾದಕರಾಗುವ ಪ್ರಕ್ರಿಯೆಯಲ್ಲಿ ದೇಶವನ್ನು ಹಳಿತಪ್ಪಿಸಬಹುದು. ಭಾರತದ ಜನಸಂಖ್ಯೆಯಲ್ಲಿ ಶೇ. 48ರಷ್ಟು ಮಹಿಳೆಯರಿದ್ದರೂ ಅವರು ಜಿಡಿಪಿಗೆ ಕೇವಲ ಶೇ. 17 ಕೊಡುಗೆ ನೀಡುತ್ತಿದ್ದಾರೆ. ಚೀನಾದಲ್ಲಿ ಇದು ಶೇ. 40 ಆಗಿದೆ. ಬ್ಲೂಮ್‌ಬರ್ಗ್ ಇಕನಾಮಿಕ್ಸ್ ಪ್ರಕಾರ ಲಿಂಗ ಅಸಮಾನತೆಯನ್ನು ಪರಿಹರಿಸುವ ಮತ್ತು ಉದ್ಯೋಗಸ್ಥ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸುವ ಕಾರ್ಯನೀತಿ ಬದಲಾವಣೆಯು 2050ರ ವೇಳೆಗೆ ಸುಮಾರು 20 ಶತಕೋಟಿ ಡಾಲರ್ ಅನ್ನು ಜಾಗತಿಕ ಅರ್ಥವ್ಯವಸ್ಥೆಗೆ ಸೇರಿಸುತ್ತದೆ. 

ಸಂಚೂರಿ ಭುನಿಯಾರಂತಹ ಉದ್ಯೋಗಿಗಳಿಗೆ ಸಾಂಕ್ರಾಮಿಕವು ಭಾರೀ ಪರಿಣಾಮ ಬೀರಿತು. ತನ್ನ ಹಳ್ಳಿಗೆ ಮರಳುವ ಅನಿವಾರ್ಯತೆಗೆ ಸಿಲುಕಿದ ಆಕೆಗೆ ಹಳ್ಳಿಯಲ್ಲಿ ಮತ್ತೆ ಸ್ಥಿರ ಉದ್ಯೋಗ ಸಿಗಲಿಲ್ಲ. ಸ್ಥಿರ ಆದಾಯ ಇಲ್ಲದಿದ್ದರೂ ತಮ್ಮ ಮಗಳನ್ನು ದೂರದ ಊರಿಗೆ ಒಬ್ಬಂಟಿಯಾಗಿ ಕಳುಹಿಸಲು ಅವಳ ಹೆತ್ತವರು ಹಿಂಜರಿಯುತ್ತಿದ್ದಾರೆ.

 ದೇಶದಾದ್ಯಂತದ ಪರಿಸ್ಥಿತಿಯನ್ನು ಭುನಿಯಾಳ ಕತೆ ಪ್ರತಿಧ್ವನಿಸಿದೆ. ಬೆಂಗಳೂರಿನ ಅಝೀಮ್ ಪ್ರೇಮ್‌ಜಿ ವಿವಿಯಲ್ಲಿ ಅರ್ಥಶಾಸ್ತ್ರದ ಫ್ರೊಫೆಸರ್ ಆಗಿದ್ದ ರೋಸಾ ಅಬ್ರಹಾಂ ‘‘ಸುಮಾರು 20,000 ಮಂದಿಯನ್ನು ಗಮನಿಸಿದ್ದು, ಪ್ರಥಮ ಲಾಕ್‌ಡೌನ್‌ನ ಬಳಿಕ ಪುರುಷರಿಗಿಂತ ಮಹಿಳೆಯರು ಉದ್ಯೋಗ ಕಳೆದುಕೊಳ್ಳುವ ಪ್ರಮಾಣ ಅತ್ಯಧಿಕವಾಗಿದ್ದು ನಿರ್ಬಂಧ ತೆರವಾದ ಬಳಿಕ ಉದ್ಯೋಗವನ್ನು ಮತ್ತೆ ಪಡೆಯುವ ಸಾಧ್ಯತೆಯೂ ತುಂಬಾ ಕಡಿಮೆ’’ ಎಂದಿದ್ದಾರೆ. ಮನೆಯ ಹೆಚ್ಚುವರಿ ಕೆಲಸ, ಶಾಲೆ ಮುಚ್ಚಲ್ಪಟ್ಟ ಬಳಿಕ ಶಿಶುಪಾಲನಾ ಆಯ್ಕೆಯ ಕೊರತೆ, ವಿವಾಹದಲ್ಲಿ ಹೆಚ್ಚಳವು ಮಹಿಳೆಯರ ಸ್ವಾಯತ್ತತೆಯನ್ನು ಹೆಚ್ಚಾಗಿ ಸೀಮಿತಗೊಳಿಸುತ್ತದೆ ಮತ್ತು ಫಲಿತಾಂಶದಲ್ಲಿ ವ್ಯತ್ಯಾಸವನ್ನು ವಿವರಿಸಲು ನೆರವಾಗುತ್ತದೆ. 

ಪುರುಷರು ಈ ರೀತಿಯ ದೊಡ್ಡ ಆಘಾತವನ್ನು ಎದುರಿಸಿದಾಗ ಅವರು ಹಿಂದಿರುಗುವ ಆಯ್ಕೆಯನ್ನು ಹೊಂದಿರುತ್ತಾರೆ. ಅವರು ವಿವಿಧ ರೀತಿಯ ಕೆಲಸಗಳಿಗೆ ಬದಲಾಯಿಸಿಕೊಳ್ಳಬಹುದು. ಆದರೆ ಮಹಿಳೆಯರಿಗೆ ಅಂತಹ ಹಿಂದಿರುಗುವ ಆಯ್ಕೆ ಇರುವುದಿಲ್ಲ. ಉದ್ಯೋಗ ಮಾರುಕಟ್ಟೆಯಲ್ಲಿ ಪುರುಷರಷ್ಟು ಪರಿಣಾಮಕಾರಿಯಾಗಿ ಬದಲಾವಣೆ ಮಹಿಳೆಯರಿಗೆ ಸಾಧ್ಯವಿಲ್ಲ ಎಂದು ಅಬ್ರಹಾಂ ಹೇಳುತ್ತಾರೆ. 

ಸ್ವಾತಂತ್ರ್ಯತೆ ಅಥವಾ ಉತ್ತಮ ವೇತನದ ಕಚೇರಿಯ ಉದ್ಯೋಗ ಎಂಬ ಕನಸು ಈಗ ಯಾತನೆ ಸಹಿತದ ಉದ್ಯೋಗ ಎಂದು ಬದಲಾಗಿದೆ ಎನ್ನುತ್ತಾರೆ ಅವರು. ಸಾಂಕ್ರಾಮಿಕ ರೋಗಕ್ಕೆ ಮುಂಚಿತವಾಗಿ, ಭಾರತೀಯ ಮಹಿಳೆಯರು ಪುರುಷರಿಗಿಂತ ಸುಮಾರು 10 ಪಟ್ಟು ಹೆಚ್ಚು ಕಾಳಜಿಯ ಉದ್ಯೋಗ ನಿರ್ವಹಿಸಿದ್ದು ಇದು ಜಾಗತಿಕ ಸರಾಸರಿಗಿಂತ 3 ಪಟ್ಟು ಅಧಿಕವಾಗಿದೆ. ಆದರೆ ಕೆಲಸ ಮಾಡುವ ನಿರ್ಧಾರ ಮಹಿಳೆಯ ಕೈಯಲ್ಲಿ ಇರದಿರುವುದು ದುರದೃಷ್ಟಕರ ಎಂದು ಅಬ್ರಹಾಂ ಹೇಳಿದ್ದಾರೆ. 

ಉದ್ಯೋಗಿಗಳ ಭಾಗವಹಿಸುವಿಕೆಯ ಕುಸಿತವು ಭಾಗಶಃ ಸಂಸ್ಕೃತಿಗೆ ಸಂಬಂಧಿಸಿದೆ. ಭಾರತೀಯರು ಶ್ರೀಮಂತರಾಗುತ್ತಿದ್ದಂತೆಯೇ, ಮಹಿಳೆಯರನ್ನು ಮನೆಯಲ್ಲಿಯೇ ಇಟ್ಟುಕೊಳ್ಳುವುದು ಸ್ಥಾನಮಾನದ ಸಂಕೇತ ಎಂದು ಭಾವಿಸಿದರು. ಮತ್ತೊಂದೆಡೆ ಸಮಾಜದ ಅತ್ಯಂತ ಕೆಳಹಂತದಲ್ಲಿರುವವರನ್ನು ಇನ್ನೂ ಸಂಭಾವ್ಯ ಗಳಿಕೆದಾರರಂತೆ ಕಾಣಲಾಗುತ್ತದೆ. ಆದರೆ ಅವರು ಔಪಚಾರಿಕ ಆರ್ಥಿಕತೆಯಿಂದ ದೂರವಿರುವ ಕಡಿಮೆ ಉದ್ಯೋಗದ ಕಾರ್ಯ ನಿರ್ವಹಿಸುತ್ತಾರೆ. ಅಧಿಕೃತ ಅಂಕಿ-ಅಂಶದಲ್ಲಿ ಅವರ ಕೆಲಸವನ್ನು ಪರಿಗಣಿಸಲಾಗುವುದಿಲ್ಲ. ಹಲವು ಹಳ್ಳಿಗಳಲ್ಲಿ ಪಿತೃಪ್ರಧಾನ ಮೌಲ್ಯಗಳು ಕಬ್ಬಿಣದ ಕಡಲೆಯಾಗಿ ಉಳಿದುಕೊಂಡಿವೆ ಮತ್ತು ಹೆಣ್ಣುಮಕ್ಕಳ ವಿರುದ್ಧದ ಕಳಂಕ ಮುಂದುವರಿದಿದೆ. ಕಾನೂನು ಬಾಹಿರವಾಗಿದ್ದರೂ ಲಿಂಗ ಆಯ್ಕೆಯ ಗರ್ಭಪಾತ ಈಗಲೂ ಸಾಮಾನ್ಯವಾಗಿದೆ. ಲಿಂಗ ಸಮಾನತೆಗೆ ಪ್ರತಿಪಾದಿಸುವ ಮುಂಬೈ ಮೂಲದ ಸಂಸ್ಥೆ ಅಕ್ಷರ ಸೆಂಟರ್‌ನ ಹಿರಿಯ ವ್ಯವಸ್ಥಾಪಕ ಅಖಿನಾ ಹಂಸರಾಜ್ ಪ್ರಕಾರ, ತಮ್ಮ ಪತ್ನಿ ಕುಟುಂಬದ ಆದಾಯಕ್ಕೆ ಕೊಡುಗೆ ನೀಡುವುದು ತಮ್ಮ ಗಂಡಸ್ಥನಕ್ಕೆ ಅವಮಾನ ಎಂದೇ ಭಾರತೀಯ ಪುರುಷರು ಹೆಚ್ಚಾಗಿ ಭಾವಿಸುತ್ತಾರೆ. ಮಹಿಳೆ ಶಿಕ್ಷಣ ಪಡೆದರೆ ಅವಳು ಉದ್ಯೋಗ ಮಾಡಿ ಆರ್ಥಿಕವಾಗಿ ಸ್ವತಂತ್ರಳಾದರೆ ಕುಟುಂಬಕ್ಕೆ ವಿಧೇಯರಾಗಿರುವುದಿಲ್ಲ ಎಂದು ಜನತೆ ಭಾವಿಸುತ್ತಾರೆ. 

ಮದುವೆ ಎಂಬುದು ಈಗಲೂ ಭಾರತದಲ್ಲಿ ಒಂದು ತಡೆಬಿಂದು ಆಗಿಯೇ ಮುಂದುವರಿದಿದೆ. ಪ್ರಥಮ ಲಾಕ್‌ಡೌನ್ ಬಳಿಕ 2020ರಲ್ಲಿ ವಿವಾಹ ನೋಂದಣಿ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ ಎಂದು ವರದಿಯಾಗಿದೆ. ಕೆಲವು ರಾಜ್ಯಗಳಲ್ಲಿ ಅಪ್ರಾಪ್ತ ವಯಸ್ಕರ ವಿವಾಹದ ಪ್ರಮಾಣ ಶೇ. 80ಕ್ಕೆ ಹೆಚ್ಚಿದೆ ಎಂದು ಸರಕಾರದ ಅಂಕಿ-ಅಂಶ ತಿಳಿಸಿದೆ.

ತಾವು ಪ್ರತೀ ವರ್ಷ 3 ಬಾಲ್ಯ ವಿವಾಹ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ತಡೆದಿದ್ದೇವೆ. ಆದರೆ ಸಾಂಕ್ರಾಮಿಕದ ಸಂದರ್ಭ ಶಾಲೆ ಮುಚ್ಚಿದ್ದ ಸಂದರ್ಭ ಬಾಲ್ಯ ವಿವಾಹ 4 ಪಟ್ಟು ಹೆಚ್ಚಿದೆ ಎಂದು ಉತ್ತರಪ್ರದೇಶದ ಅನೂಪ್‌ಶಹರ್‌ನ ಬಾಲಕಿಯರ ಶಾಲೆ ಪರ್ದಾದ ಪರ್ದಾದಿ ಎಜುಕೇಷನಲ್ ಸೊಸೈಟಿಯ ಶಿಕ್ಷಕಿ ಮಧು ಶರ್ಮ ಹೇಳಿದ್ದಾರೆ. ‘‘ಶಿಕ್ಷಣ ಪಡೆದರೆ ಉತ್ತಮ ಸ್ಥಾನಮಾನ ಪಡೆಯಬಹುದು. ಇಲ್ಲದಿದ್ದರೆ ನಿಮ್ಮ ಸ್ಥಾನ ಅಡುಗೆಮನೆಗೆ ಸೀಮಿತವಾಗಬಹುದು. ಉಳಿದದ್ದು ನಿಮಗೆ ಬಿಟ್ಟದ್ದು. ನಿಮ್ಮ ಬದುಕನ್ನು ನೀವೇ ರೂಪಿಸಿಕೊಳ್ಳಬೇಕು’’ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಮಧುಶರ್ಮ ಹೇಳಿದ್ದಾರೆ. 

2015ರಲ್ಲಿ ಪ್ರಧಾನಿ ಮೋದಿ ‘ಬೇಟಿ ಬಚಾವೊ, ಬೇಟಿ ಪಡಾವೊ ಅಭಿಯಾನ ಆರಂಭಿಸಿದ್ದರು. ಬಾಲಕಿಯರನ್ನು ಶಾಲೆಯಲ್ಲಿ ಉಳಿಸಿಕೊಳ್ಳುವ, ಲಿಂಗ ಆಧಾರಿತ ಗರ್ಭಪಾತವನ್ನು ಕಡಿಮೆಗೊಳಿಸುವ ಉಪಕ್ರಮ ಇದಾಗಿದೆ. ಸರಕಾರ ಬಾಲ್ಯವಿವಾಹ ಪದ್ಧತಿಯ ನಿರ್ಮೂಲನೆಗೂ ಪ್ರಯತ್ನಿಸಿದೆ. ಕಳೆದ ವರ್ಷ ಮಹಿಳೆಯರ ಮದುವೆ ವಯಸ್ಸನ್ನು 18ರಿಂದ 21 ವರ್ಷಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನು ಮೋದಿ ಸರಕಾರ ಅನುಮೋದಿಸಿದೆ. ಆದರೆ ಹಳ್ಳಿಗಳಲ್ಲಿ ರಾಷ್ಟ್ರೀಯ ನಿಯಮಗಳು ದೂರದ ಅಮೂರ್ತತೆಗಳಾಗಿವೆ. ಸ್ಥಳೀಯ ಸಂಪ್ರದಾಯಗಳಿಗೇ ಸ್ಥಳೀಯ ಪಂಚಾಯತ್ ಇನ್ನೂ ಪ್ರಾಶಸ್ತ್ಯ ನೀಡುತ್ತದೆ ಮತ್ತು ಜಾರಿಗೊಳಿಸುತ್ತದೆ. ಭಾರತದ ಹೆಣ್ಣುಮಕ್ಕಳಿಗೆ ಶಿಕ್ಷಣ ಒದಗಿಸುವ ಮೋದಿ ಸರಕಾರದ ಯೋಜನೆ ಸಾಕಷ್ಟು ಪ್ರಚಾರ ಪಡೆದಿದ್ದರೂ, ಬಹುತೇಕ ಉಪಕ್ರಮಗಳಿಗೆ ಮೀಸಲಿರಿಸಿದ ನಿಧಿ ಬಳಕೆಯೇ ಆಗಿಲ್ಲ ಎಂಬುದು ಸರಕಾರದ ಆಡಿಟ್ ವರದಿಯಲ್ಲಿ ಉಲ್ಲೇಖಿಸಲ್ಪಟ್ಟಿದೆ. ಸಾಕ್ಷರತೆಯ ಪ್ರಮಾಣ ಹೆಚ್ಚಿರುವ ಮತ್ತು ಉದ್ಯೋಗಾವಕಾಶ ಹೇರಳವಾಗಿರುವ ಮಹಾನಗರಗಳಲ್ಲೂ ಮಹಿಳೆಯರ ಮೇಲಿನ ಒತ್ತಡ ಗರಿಷ್ಠವಾಗಿದೆ ಎಂದು ಅಂಕಿ-ಅಂಶದಲ್ಲಿ ಸ್ಪಷ್ಟವಾಗಿದೆ.

Similar News