ಬೆಂಗಳೂರು | ಕೀರ್ತಿಗಣೇಶ್ ಬಂಧನ ವಿರೋಧಿಸಿ ಪ್ರತಿಭಟನೆ; ಯುವಕಾಂಗ್ರೆಸ್ ಕಾರ್ಯಕರ್ತರು ವಶಕ್ಕೆ
ಬೆಂಗಳೂರು, ಜೂ.4: ಕೇಸರಿಕರಣ ಹಾಗೂ ಕುವೆಂಪು ಅವರನ್ನು ಅವಹೇಳನಕಾರಿ ಆಗಿ ಬಿಂಬಿಸಿರುವ ಆರೋಪ ಹೊತ್ತಿರುವ ರೋಹಿತ್ ಚಕ್ರತೀರ್ಥ ಬಂಧನಕ್ಕೆ ಆಗ್ರಹಿಸಿ ಪ್ರತಿಭಟಿಸಿದ್ದ ಎನ್‍ಎಸ್‍ಯುಐ ರಾಜ್ಯಾಧ್ಯಕ್ಷ ಕೀರ್ತಿಗಣೇಶ್ ಬಂಧಿಸಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ ಯುವಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಶನಿವಾರ ಇಲ್ಲಿನ ಫ್ರೀಡಂ ಪಾರ್ಕ್‍ನ ಮೈದಾನದಲ್ಲಿ ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ನೇತೃತ್ವದಲ್ಲಿ ಜಮಾಯಿಸಿದ ಕಾರ್ಯಕರ್ತರು, ಆರೆಸ್ಸೆಸ್ ಸಮವಸ್ತ್ರ ತೊಟ್ಟ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಗೃಹ ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಆಗ ಮಧ್ಯ ಪ್ರವೇಶಿಸಿದ ಪೊಲೀಸರು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮುಹಮ್ಮದ್ ನಲಪಾಡ್ ಸೇರಿದಂತೆ ಹಲವರನ್ನು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು.
ಇದಕ್ಕೂ ಮೊದಲು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಿ.ವಿ.ಶ್ರೀನಿವಾಸ್, ಬಿಜೆಪಿ ಅವರು ಯಾರ ಮನೆಗೆ ಹೋಗಿ ಬೇಕಾದರೂ ಬೆಂಕಿ ಹಚ್ಚಬಹುದು. ಅವರಿಗೆ ಯಾವುದೇ ಕಾನೂನು ಇಲ್ಲ. ಆದರೆ ಕಾಂಗ್ರೆಸ್‍ನವರು ಚಡ್ಡಿ ಸುಟ್ಟಿದ್ದಕ್ಕೆ ಕಾನೂನು ಬೇಕಾ? ಎಂದು ಕೇಳಿದರು.
ಚಡ್ಡಿ ಏನು ರಾಷ್ಟ್ರಧ್ವಜವೇ, ಕೀರ್ತಿಗಣೇಶ್ ಏನು ರಾಷ್ಟ್ರಧ್ವಜ ಸುಟ್ಟಿದ್ದಾರಾ ಎಂದವರು, ಕೀರ್ತಿಗಣೇಶ್ ಬಿಡುಗಡೆ ಆಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟದ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಹಮ್ಮದ್ ನಲಪಾಡ್ ಮಾತನಾಡಿ, ಇಡೀ ಕರ್ನಾಟಕದ ಜಿಲ್ಲೆಗಳಲ್ಲಿ ಚಡ್ಡಿ ಸುಡುತ್ತೇವೆ. ಇವತ್ತು ಒಂದು ಚಡ್ಡಿ ಸುಟ್ಟಿದ್ದಕ್ಕೆ ಕೀರ್ತಿಗಣೇಶ್ ಬಂಧಿಸಿದ್ದೀರಿ. ನಾವು ಎಲ್ಲ್ಲ ಜಿಲ್ಲೆಗಳಲ್ಲಿ ಚಡ್ಡಿ ಸುಡುತ್ತೇವೆ ಆಗ ಎಷ್ಟು ಜನರನ್ನು ಬಂಧಿಸುತ್ತೀರಿ ನೋಡೋಣ ಎಂದರು.
ಅಲ್ಲದೆ, ಈ ಚಡ್ಡಿಯಲ್ಲಿ ಅಷ್ಟೊಂದು ಶಕ್ತಿ ಇದೆಯಾ ಎಂದ ಅವರು, ಈ ಚಡ್ಡಿಯೂ ಮೊದಲು ಮುಸ್ಲಿಮರನ್ನು ಹೊಡೆಯಿತು, ಆಮೇಲೆ ದಲಿತರನ್ನು, ಕ್ರೈಸ್ತ ಸಮಾಜವನ್ನು ಹೊಡೆದರು. ಇವರು ಬಸವಣ್ಣನ, ಕುವೆಂಪು ಅವರನ್ನು ಸಹ ಬಿಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.