ಶೇ.71ರಷ್ಟು ಭಾರತೀಯರು ಆರೋಗ್ಯಕರ ಆಹಾರದಿಂದ ವಂಚಿತರಾಗಿದ್ದಾರೆ: ವರದಿ

Update: 2022-06-05 12:41 GMT

ಹೊಸದಿಲ್ಲಿ, ಜೂ.5: ಶೇ.71ರಷ್ಟು ಭಾರತೀಯರಿಗೆ ಆರೋಗ್ಯಕರವಾದ ಆಹಾರವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಮತ್ತು ಕಳಪೆ ಆಹಾರದಿಂದಾಗಿ ಉಂಟಾಗುವ ರೋಗಗಳಿಂದ ಪ್ರತಿ ವರ್ಷ 17 ಲ.ಕ್ಕೂ ಅಧಿಕ ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವಿರಾನ್ಮೆಂಟ್ (ಸಿಎಸ್ಇ) ಮತ್ತು ಡೌನ್ ಟು ಅರ್ತ್(ಡಿಟಿಇ) ನಿಯಕಾಲಿಕ ಬಿಡುಗಡೆಗೊಳಿಸಿರುವ ‘ಭಾರತದ ಪರಿಸರದ ಸ್ಥಿತಿ 2022:ಅಂಕಿಅಂಶಗಳಲ್ಲಿ’ ವರದಿಯು ತೋರಿಸಿದೆ.

‌ಜಾಗತಿಕವಾಗಿ ವಿಶ್ವದ ಶೇ.41ರಷ್ಟು ಜನಸಂಖ್ಯೆಗೆ ಆರೋಗ್ಯಕರ ಆಹಾರ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ವರದಿಯು ತಿಳಿಸಿದೆ.

ಸಾಮಾನ್ಯ ಭಾರತೀಯನ ಆಹಾರವು ಸಾಕಷ್ಟು ಹಣ್ಣುಗಳು, ತರಕಾರಿಗಳು, ದ್ವಿದಳ ಧಾನ್ಯಗಳು, ಬೀಜಗಳು ಮತ್ತು ಇಡಿಯ ಧಾನ್ಯಗಳನ್ನು ಒಳಗೊಂಡಿರುವುದಿಲ್ಲ. ಕಳಪೆ ಆಹಾರ ಸೇವನೆಯು ಉಸಿರಾಟದ ಕಾಯಿಲೆಗಳು,ಮಧುಮೇಹ,ಕ್ಯಾನ್ಸರ್,ಪಾರ್ಶ್ವವಾಯು ಮತ್ತು ಪರಿಧಮನಿ ಹೃದಯ ರೋಗಕ್ಕೆ ಕಾರಣವಾಗಬಲ್ಲದು ಎಂದೂ ವರದಿಯು ತಿಳಿಸಿದೆ.

20 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದ ಭಾರತೀಯ ಪ್ರತಿದಿನ ಶಿಫಾರಸು ಮಾಡಲಾಗಿರುವ 200 ಗ್ರಾಮ್‌ಗಳ ಬದಲು ಕೇವಲ 35.8 ಗ್ರಾಮ್ ಹಣ್ಣನ್ನು ಸೇವಿಸುತ್ತಾನೆ ಎಂದು ಪಿಟಿಐ ತನ್ನ ವರದಿಯಲ್ಲಿ ತಿಳಿಸಿದೆ. ವಯಸ್ಕ ವ್ಯಕ್ತಿಗಳು ಪ್ರತಿದಿನ ಶಿಫಾರಸು ಮಾಡಲಾದ 300 ಗ್ರಾಮ್‌ಗಳ ಬದಲು ಕೇವಲ 168.70 ಗ್ರಾಮ್ ತರಕಾರಿಗಳನ್ನು ಸೇವಿಸುತ್ತಾರೆ.

ಆರೋಗ್ಯಕರ ಆಹಾರದ ವೆಚ್ಚವು ವ್ಯಕ್ತಿಯ ಆದಾಯದ ಶೇ.63ನ್ನು ಮೀರಿದಾಗ ಅದು ಕೈಗೆಟಕುವಂಥದ್ದಲ್ಲ ಎಂದು ಪರಿಗಣಿಸಲಾಗಿದೆ ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು ಹೇಳಿದೆ.

ಬಳಕೆದಾರ ಆಹಾರ ಬೆಲೆ ಸೂಚ್ಯಂಕ ಹಣದುಬ್ಬರವು ಕಳೆದೊಂದು ವರ್ಷದಲ್ಲಿ ಶೇ.327ರಷ್ಟು ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಬಳಕೆದಾರ ಆಹಾರ ಬೆಲೆ ಸೂಚ್ಯಂಕವನ್ನು ಒಳಗೊಂಡಿರುವ ಬಳಕೆದಾರ ಬೆಲೆ ಸೂಚ್ಯಂಕ (ಸಿಪಿಐ)ವು ಶೇ.84ರಷ್ಟು ಏರಿಕೆಯನ್ನು ಕಂಡಿದೆ ಎಂದು ಸಿಎಸ್ಇ-ಡಿಇಟಿ ವರದಿಯು ಹೇಳಿದೆ. ಕಳೆದ ಎಪ್ರಿಲ್‌ನಲ್ಲಿ ಭಾರತದ ಸಿಪಿಐ ಅಥವಾ ಚಿಲ್ಲರೆ ಹಣದುಬ್ಬರವು ಎಂಟು ವರ್ಷಗಳ ಗರಿಷ್ಠ ಮಟ್ಟವಾದ ಶೇ.7.79ಕ್ಕೆ ತಲುಪಿದೆ.

ಆಹಾರವು ಚಿಲ್ಲರೆ ಹಣದುಬ್ಬರದಲ್ಲಿ ಪ್ರಮುಖ ಪಾತ್ರವನ್ನು ಹೊಂದಿರುವಂತೆ ಕಂಡು ಬರುತ್ತಿದೆ ಎಂದು ಅಭಿಪ್ರಾಯಿಸಿರುವ ಡಿಇಟಿಯ ವ್ಯವಸ್ಥಾಪಕ ಸಂಪಾದಕ ರಿಚರ್ಡ್ ಮಹಾಪಾತ್ರ ಅವರು,‘ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ,ಏರುತ್ತಿರುವ ಅಂತರರಾಷ್ಟ್ರೀಯ ಬೆಳೆ ಬೆಲೆಗಳು ಮತ್ತು ಅತ್ಯಂತ ಪ್ರತಿಕೂಲ ಹವಾಮಾನ ಸಂಬಂಧಿತ ಅಡಚಣೆಗಳು ಪ್ರಸಕ್ತ ಅಧಿಕ ಮಟ್ಟದ ಆಹಾರ ಹಣದುಬ್ಬರಕ್ಕೆ ಕಾರಣವಾಗಿವೆ. ವಾಸ್ತವದಲ್ಲಿ ಕ್ರಿಸಿಲ್ ದತ್ತಾಂಶಗಳ ನಮ್ಮ ವಿಶ್ಲೇಷಣೆಯು ಮಾರ್ಚ್-ಎಪ್ರಿಲ್ 2022ರಲ್ಲಿ ಆಹಾರ ಬೆಲೆಗಳು ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಏರಿಕೆಯಾಗಿದೆ ಎನ್ನುವುದನ್ನು ತೋರಿಸಿದೆ’ಎಂದು ಹೇಳಿದ್ದಾರೆ.

‘ನಾಗರಿಕರ ಆಹಾರ ಕ್ರಮ ಆರೋಗ್ಯಕರವಾಗಿಲ್ಲ ಮತ್ತು ದೇಶದಲ್ಲಿ ಪೌಷ್ಟಿಕತೆಯ ಮಟ್ಟವು ಅತ್ಯಂತ ಕಳಪೆಯಾಗಿಯೇ ಮುಂದುವರಿದಿದೆ. ಸೂಕ್ತ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ನಾವು ದುಬಾರಿ ಬೆಲೆಯನ್ನು ತೆರಬೇಕಾಗುತ್ತದೆ ’ ಎಂದು ವರದಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News