ಸರಕಾರದ ಆದೇಶವಿಲ್ಲದಿದ್ದರೂ ಪಿಯುಸಿ ಇತಿಹಾಸ ಪಠ್ಯ ತಿರುಚಿದ ಚಕ್ರತೀರ್ಥ ಸಮಿತಿ

Update: 2022-06-06 02:31 GMT

ಬೆಂಗಳೂರು: ಆರರಿಂದ ಹತ್ತನೇ ತರಗತಿಯ ಸಮಾಜ ವಿಜ್ಞಾನ ಮತ್ತು ಭಾಷಾ ವಿಷಯಗಳ ಪಠ್ಯಪುಸ್ತಕ ಪರಿಷ್ಕರಣೆ ಮಾಡಲು ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಸರಕಾರವು ಆದೇಶ ಹೊರಡಿಸಿದ್ದರೆ ದ್ವಿತೀಯ ಪಿಯುಸಿ ಇತಿಹಾಸ ಪಠ್ಯಪುಸ್ತಕದ ಅಧ್ಯಾಯ 4.2ರಲ್ಲಿನ ಹೊಸ ಧರ್ಮಗಳ ಉದಯ ಪಠ್ಯಭಾಗವನ್ನು ಪರಿಷ್ಕರಿಸಲು ಯಾವುದೇ ಆದೇಶ ಹೊರಡಿಸದೆಯೇ ಇದೇ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿಗೆ ವಹಿಸಿರುವುದು ಇದೀಗ ಬಹಿರಂಗವಾಗಿದೆ.

ಯಾವುದೇ ಆದೇಶವಿಲ್ಲದೆಯೇ ಕೇವಲ ಸಚಿವರ ಟಿಪ್ಪಣಿ ಆಧರಿಸಿ ಪರಿಷ್ಕರಿಸಿರುವುದಕ್ಕೆ ಯಾವುದೇ ಮಾನ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ. ಆದರೂ ದ್ವಿತೀಯ ಪಿಯುಸಿ ಇತಿಹಾಸ ಪಠ್ಯಪುಸ್ತಕದ 4.2 ಅಧ್ಯಾಯವನ್ನು ಈಗಾಗಲೇ ಪರಿಷ್ಕರಿಸಲಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೆ ಈ ಸಮಿತಿಯು ಪರಿಷ್ಕರಿಸಿರುವ ಪಠ್ಯ ಪುಸ್ತಕ ಮುದ್ರಣ ಮಾಡಲು ಅನುಮತಿ ನೀಡುವ ಸಂಬಂಧ ಏಕಕಡತವನ್ನು ಪಿಯು ಮಂಡಳಿಗೆ ಕಳುಹಿಸಿದೆ ಎಂದು ಗೊತ್ತಾಗಿದೆ.

ಪಠ್ಯ ಪರಿಷ್ಕರಣೆ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹೊತ್ತಿನಲ್ಲಿಯೇ ದ್ವಿತೀಯ ಪಿಯುಸಿ ಇತಿಹಾಸ ಪಠ್ಯ ಪುಸ್ತಕ ಪರಿಷ್ಕರಣೆ ಸಂಬಂಧದ ಕಡತವನ್ನು ಶರವೇಗದಲ್ಲಿ ಪಿಯು ಮಂಡಳಿಗೆ ರವಾನಿಸಿದೆ ಎಂದು ತಿಳಿದು ಬಂದಿದೆ.

ಜುಲೈನಿಂದ ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಲಿದ್ದು ಅಷ್ಟರೊಳಗೆ ಪರಿಷ್ಕೃತ ಪಠ್ಯಕ್ಕೆ ಅನುಮತಿ ದೊರೆತರೆ ಮುದ್ರಣದ ಕುರಿತು ತೀರ್ಮಾನ ಕೈಗೊಳ್ಳಬಹುದು. ಈ ಅವಧಿಯೊಳಗೆ ಯಾವುದೇ ತೀರ್ಮಾನ ಕೈಗೊಳ್ಳದಿದ್ದರೆ ಚಾಲ್ತಿಯಲ್ಲಿರುವ ಪಠ್ಯವನ್ನೇ ಮುಂದುವರಿಸುವುದು ಅನಿವಾರ್ಯವಾಗಲಿದೆ ಎಂದು ಪಿಯು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ‘the-file.in’ಗೆ ಮಾಹಿತಿ ನೀಡಿದರು.

 ಟಿಪ್ಪಣಿಯಲ್ಲೇನಿತ್ತು?: ಪದವಿಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ಇತಿಹಾಸ ವಿಭಾಗಕ್ಕೆ ನಿಗದಿಪಡಿಸಿದ ಭಾರತದ ಇತಿಹಾಸ (ಕರ್ನಾಟಕ ವಿಶೇಷ ಉಲ್ಲೇಖದೊಂದಿಗೆ) ಪಠ್ಯಪುಸ್ತಕದ 4.2ನೇ ಅಧ್ಯಾಯ ಹೊಸ ಧರ್ಮಗಳ ಉದಯ ಪಠ್ಯಭಾಗದಲ್ಲಿ ನಿರ್ದಿಷ್ಟ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗುವಂತಹ ವಿಷಯವಿರುವ ಬಗ್ಗೆ ದೂರು ಬಂದಿರುತ್ತದೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಸಮಾಜ ಅಧ್ಯಯನ ಪಠ್ಯಪುಸ್ತಕದ ಪರಿಶೀಲನೆಗಾಗಿ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ರಚನೆಯಾಗಿರುತ್ತದೆ. ದ್ವಿತೀಯ ಪಿಯುನ ಇತಿಹಾಸ ಪಠ್ಯಪುಸ್ತಕದ 4.2 ಅಧ್ಯಾಯವನ್ನು ಪರಿಶೀಲಿಸಿ ಸೂಕ್ತವಾಗಿ ಪರಿಷ್ಕರಿಸಲು ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಗೆ ವಹಿಸಲು ಹಾಗೂ ಈ ಪರಿಷ್ಕೃತ ಪಠ್ಯಪುಸ್ತಕವನ್ನು 2022-23ನೇ ಸಾಲಿನಲ್ಲಿ ಮುದ್ರಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಬಿ.ಸಿ. ನಾಗೇಶ್ ಟಿಪ್ಪಣಿಯಲ್ಲಿ ಸೂಚಿಸಿದ್ದರು.

ಆರರಿಂದ ಹತ್ತನೇ ತರಗತಿ ಸಮಾಜ ವಿಜ್ಞಾನ ವಿಷಯದ ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಸಂಬಂಧ ಅಂದು ಸಚಿವರಾಗಿದ್ದ ಎಸ್. ಸುರೇಶ್‌ಕುಮಾರ್ ಅವರು ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಬೇಕು ಎಂದು ಟಿಪ್ಪಣಿ ಹಾಳೆಯಲ್ಲಿಯೇ ಸೂಚಿಸಿದ್ದರು. ಈ ಟಿಪ್ಪಣಿಯನ್ನಾಧರಿಸಿ ಸಚಿವ ನಾಗೇಶ್ ಅವರು ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ಅನುಮೋದನೆ ನೀಡಿದ್ದರು. ಆ ನಂತರ ಈ ಸಂಬಂಧ ಸರಕಾರದ ಆದೇಶವೂ ಪ್ರಕಟವಾಗಿತ್ತು.

ಆದರೆ ದ್ವಿತೀಯ ಪಿಯುಸಿ ಇತಿಹಾಸ ಪಠ್ಯಪುಸ್ತಕದ 4.2 ಅಧ್ಯಾಯವನ್ನು ಪರಿಷ್ಕರಿಸಲು ಸರಕಾರವು ಯಾವುದೇ ಆದೇಶ ಹೊರಡಿಸದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ಸಚಿವರ ಟಿಪ್ಪಣಿ ಮೇಲೆ ಸರಕಾರದ ಆದೇಶವು ಪ್ರಕಟವಾಗಬೇಕು. ಆಗಷ್ಟೇ ಅದಕ್ಕೆ ಮಾನ್ಯತೆ ದೊರೆತಂತೆ. ಹಾಗೆಯೇ ಸಚಿವರ ಟಿಪ್ಪಣಿಯು ಎಂದಿಗೂ ಸರಕಾರದ ಆದೇಶವಲ್ಲ. ಹೀಗಿದ್ದರೂ ಸರಕಾರದ ಆದೇಶವಿಲ್ಲದೆಯೇ ಇತಿಹಾಸ ಪಠ್ಯಪುಸ್ತಕ ಪರಿಷ್ಕರಣೆಗೆ ಸೂಚಿಸಿರುವುದು ‘ಅನಧಿಕೃತ’ವಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಚಿವ ನಾಗೇಶ್ ಟಿಪ್ಪಣಿಯಲ್ಲಿ ನೀಡಿರುವ ಸೂಚನೆ ಮೇರೆಗೆ ಪದವಿಪೂರ್ವ ಶಿಕ್ಷಣ ಮಂಡಳಿಯ ನಿರ್ದೇಶಕರು ‘ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿರುವುದರಿಂದ ಅದರಂತೆ ಪರಿಶೀಲಿಸಿ ಹಂತ ಹಂತವಾಗಿ ಪಿಯು ಇತಿಹಾಸ ಪಠ್ಯಪುಸ್ತಕ ಪರಿಷ್ಕರಣೆ ಮಾಡಬಹುದು’ ಎಂದು ಪ್ರಸ್ತಾಪಿಸಿದ್ದರು. ಅಲ್ಲದೆ ಸಚಿವರು ಹೊರಡಿಸಿದ್ದ ಅದೇ ಟಿಪ್ಪಣಿಯಲ್ಲಿ ಸೂಚಿಸಿದಂತೆ ಕ್ರಮ ಕೈಗೊಳ್ಳಬೇಕು ಎಂದೂ ಉಲ್ಲೇಖಿಸಿದ್ದರು ಎಂದು ಗೊತ್ತಾಗಿದೆ.

4.2 ಅಧ್ಯಾಯದಲ್ಲೇನಿದೆ?: ಪಠ್ಯಪುಸ್ತಕದ 4.2 ಅಧ್ಯಾಯದಲ್ಲಿ ಹೊಸ ಧರ್ಮಗಳ ಉದಯ-ಜೈನ ಧರ್ಮ ಮತ್ತು ಬೌದ್ಧ ಧರ್ಮ ಎಂಬ ಪಾಠಾಂಶವಿತ್ತು. ವೈದಿಕ ಧರ್ಮದಲ್ಲಿನ ಗೊಂದಲಳು, ಪುರೋಹಿತ ವರ್ಗದ ಪರಮಾಧಿಕಾರ, ಪ್ರಾಣಿಬಲಿ, ಮಂತ್ರಗಳ ಪಠಣ, ಜಾತಿ ಪದ್ಧತಿ, ಮಹಾನ್ ವ್ಯಕ್ತಿಗಳ ಜನನವು ಹೊಸ ಧರ್ಮಗಳ ಉದಯಕ್ಕೆ ಕಾರಣವಾದವು ಎಂಬ ಅಂಶವಿದೆ.

ಆರಂಭದಲ್ಲಿ ವೈದಿಕ ಧರ್ಮ ಯಾವುದೇ ಜಟಿಲತೆಗಳಿಲ್ಲದೆ ಸರಳವಾಗಿತ್ತು. ನಂತರ ಪುರೋಹಿತರ ಪ್ರಭಾವದಿಂದಾಗಿ ಬಹಳಷ್ಟು ಕಠೋರತೆಗಳು ಧರ್ಮದೊಳಗೆ ನುಸುಳಿದವು. ಜನರು ಅಸಂತುಷ್ಟರಾದರು ಮತ್ತು ಬದಲಾವಣೆಯನ್ನು ಬಯಸಿದ್ದ ಅವರು ಅದನ್ನು ಹೊಸಧರ್ಮಗಳಲ್ಲಿ ಕಂಡುಕೊಂಡರು. ಬ್ರಾಹ್ಮಣರು ಇತರ ಜಾತಿಗಳ ಮೇಲೆ ಪರಮಾಧಿಕಾರ ಸ್ಥಾಪಿಸಿದರು. ಜನರಿಗೆ ಪುರೋಹಿತರಿಲ್ಲದೆ ಯಜ್ಞಗಳನ್ನು ಮಾಡುವುದು ಅಸಾಧ್ಯವಾಗಿತ್ತು. ಬ್ರಾಹ್ಮಣರು ಅನೇಕ ವಿಶೇಷ ಸೌಲಭ್ಯಗಳನ್ನು ಅನುಭವಿಸುತ್ತಿದ್ದರು ಮತ್ತು ತಮ್ಮನ್ನು ಎಲ್ಲರಿಗಿಂತ ಶ್ರೇಷ್ಠರೆಂದು ತಿಳಿದಿದ್ದರು.

ಪ್ರಾಣಿ ಬಲಿ, ಶಾಸ್ತ್ರ ವಿಧಿಗಳೊಂದು ಭಾಗವಾಗಿತ್ತು ಮತ್ತು ಇವುಗಳ ಆಚರಣೆ ದುಬಾರಿಯಾಯಿತು.ಹೀಗಾಗಿ ಜನರು ಅಸ್ತಿತ್ವದಲ್ಲಿದ್ದ ಧರ್ಮದಲ್ಲಿನ ನಂಬಿಕೆ ಕಳೆದುಕೊಂಡರು. ಋಗ್ವೇದದ ಕಾಲದ ಧಾರ್ಮಿಕ ವಿಧಿ ಮತ್ತು ಧರ್ಮಾಚರಣೆ ಉತ್ತರ ವೇದ ಕಾಲದಲ್ಲಿ ಸಂಕೀರ್ಣವಾದವು. ಸಂಸ್ಕೃತದಲ್ಲಿದ್ದ ವೈದಿಕ ಸಾಹಿತ್ಯದ ಮೇಲೆ ಪುರೋಹಿತರ ಪ್ರಭುತ್ವವಿತ್ತು. ಜನಸಾಮಾನ್ಯರಿಗೆ ಅವುಗಳನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿರಲಿಲ್ಲ.

ಸ್ಪಷ್ಟ ತಿಳಿವಳಿಕೆಯ ಕೊರತೆಯಿಂದ ಜನರು ಮಂತ್ರ ಪಠಣೆಯಲ್ಲಿ ನಂಬಿಕೆ ಕಳೆದುಕೊಂಡರು. ಜಾತಿ ಪದ್ಧತಿಯು, ಸಾಮಾಜಿಕ ವ್ಯವಸ್ಥೆಯು ಜಟಿಲವಾಗಿತ್ತು. ಬೇರೆ ಬೇರೆ ಜಾತಿಗಳ ಮಧ್ಯೆ ಭೇದ ಭಾವವಿತ್ತು. ಬ್ರಾಹ್ಮಣರು ಉನ್ನತ ಸ್ಥಾನವನ್ನು ಹೊಂದಿದ್ದರು. ಸಮಾಜದಲ್ಲಿನ ಅಸಮಾನತೆಯಿಂದಾಗಿ ಜನರು ಅತೃಪ್ತರಾಗಿದ್ದರು. ಶೂದ್ರರು ಹೇಳಿಕೊಳ್ಳಲಾಗದ ಸಂಕಷ್ಟಗಳಿಗೆ ಗುರಿಯಾದರು.

ಜನರು ಅಸಂತುಷ್ಟರು ಮತ್ತು ಅತೃಪ್ತರಾಗಿದ್ದಾಗ ಮಹಾವೀರ ಮತ್ತು ಗೌತಮ ಬುದ್ಧನಂತಹ ಇಬ್ಬರು ಮಹಾನ್ ವ್ಯಕ್ತಿಗಳು ಜನಿಸಿದರು. ಅವರು ಸರಳವಾದ ತತ್ವಗಳನ್ನು ಜನರಾಡುವ ಭಾಷೆಯಲ್ಲಿ ಬೋಧಿಸಿದರು. ಹೊಸ ಧರ್ಮಗಳು ಬೋಧಿಸಿದ ಸರಳ ಮುಕ್ತಿ ಮಾರ್ಗದಿಂದಾಗಿ ಸಾಮಾನ್ಯರು ಹೊಸ ಧರ್ಮಗಳತ್ತ ಆಕರ್ಷಿಸಲ್ಪಟ್ಟರು ಎಂಬ ಸಾಲುಗಳಿವೆ.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News