ಕೇರಳ ಸಿಎಂ ನಿವಾಸಕ್ಕೆ ಪಿಎಫ್ಐ ಜಾಥಾ: ಉದ್ವಿಗ್ನತೆ ಸೃಷ್ಟಿ, ಪೊಲೀಸರಿಂದ ಜಲಫಿರಂಗಿ,ಅಶ್ರುವಾಯು ಪ್ರಯೋಗ

Update: 2022-06-06 15:48 GMT

ತಿರುವನಂತಪುರ,ಜೂ.6: ಅಲಪ್ಪುಳ ದ್ವೇಷ ಭಾಷಣ ಪ್ರಕರಣದಲ್ಲಿ ಪೊಲೀಸರು ನಿರಂಕುಶವಾಗಿ ತಮ್ಮ ನಾಯಕರನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಪಿಎಫ್ಐ ಕಾರ್ಯಕರ್ತರು ಸೋಮವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧಿಕೃತ ನಿವಾಸ ಕ್ಲಿಫ್ ಹೌಸ್ ಗೆ ಜಾಥಾ ನಡೆಸಿದ ಸಂದರ್ಭ ಉದ್ವಿಗ್ನತೆ ಸೃಷ್ಟಿಯಾಗಿತ್ತು.

ನೂರಾರು ಪಿಎಫ್ಐ ಕಾರ್ಯಕರ್ತರು ಭಾಗಿಯಾಗಿದ್ದ ಜಾಥಾ ಅಟ್ಟಕ್ಕುಲಂಗರ್ನಿಂದ ಆರಂಭಗೊಂಡಿತ್ತು, ಅದು ದೇವಸ್ವಂ ಮಂಡಳಿ ಜಂಕ್ಷನ್ ತಲುಪಿದಾಗ ಪೊಲೀಸರು ತಡೆದಿದ್ದರು. ಬ್ಯಾರಿಕೇಡ್‌ಗಳನ್ನು  ದಾಟಿ ಮುಂದಕ್ಕೆ ಸಾಗಲು ಯತ್ನಿಸಿದ್ದ ಕಾರ್ಯಕರ್ತರನ್ನು ಪೊಲೀಸರು ಹಿಂದಕ್ಕೆ ತಳ್ಳಿದ್ದರು. ವಾಪಸ್ ಹೋಗಲು ಪ್ರತಿಭಟನಾಕಾರರು ನಿರಾಕರಿಸಿದಾಗ ಪೊಲೀಸರು ಅವರ ವಿರುದ್ಧ ಜಲಫಿರಂಗಿಯನ್ನು ಬಳಸಿದ್ದರು. ಆದರೂ ಪ್ರತಿಭಟನಾಕಾರರು ಚದುರದಿದ್ದಾಗ ಅಶ್ರುವಾಯು ಪ್ರಯೋಗಿಸಿದ್ದರು. ಪ್ರತಿಯಾಗಿ ಪ್ರತಿಭಟನಾಕಾರರು ಖಾಲಿ ನೀರಿನ ಬಾಟ್ಲಿಗಳನ್ನು ಪೊಲೀಸರತ್ತ ತೂರಿದ್ದರು.

ಪಿಎಫ್ಐ ನಾಯಕರು ಭಾಷಣಗಳನ್ನು ಮಾಡಿದ ಬಳಿಕ ಕೊನೆಗೂ ಉದ್ವಿಗ್ನತೆ ಶಮನಗೊಂಡಿದ್ದು,ಅಪರಾಹ್ನ 1:50ಕ್ಕೆ ಜಾಥಾ ಅಂತ್ಯಗೊಂಡಿತು. ಜಾಥಾವನ್ನುದ್ದೇಶಿಸಿ ಮಾತನಾಡಿದ ಪಿಎಫ್ಐ ರಾಜ್ಯ ಕಾರ್ಯದರ್ಶಿ ಸಿ.ಎ.ರವೂಫ್ ಅವರು,ಪೊಲೀಸರು ಅನ್ಯಾಯವಾಗಿ ತಮ್ಮ ಸಂಘಟನೆಯನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆ. ಸಮುದಾಯಗಳ ನಡುವೆ ದ್ವೇಷವನ್ನು ಹರಡುವ ಹೇಳಿಕೆಗಳಿಗಾಗಿ ಪ್ರಕರಣ ದಾಖಲಾಗಿರುವ ಸಂಘ ಪರಿವಾರ ನಾಯಕರ ಬಗ್ಗೆ ಮೃದುಧೋರಣೆ ತಳೆದಿದ್ದಾರೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News