×
Ad

ಸಂಘದ ಉನ್ನತ ಪದಾಧಿಕಾರಕ್ಕೆ ನೀವು ಸದಾ ಅಸ್ಪೃಶ್ಯ: ಚಡ್ಡಿ ಹೊತ್ತ ಛಲವಾದಿ ನಾರಾಯಣ ಸ್ವಾಮಿಗೆ ಸಿದ್ದರಾಮಯ್ಯ ತಿರುಗೇಟು

Update: 2022-06-07 20:46 IST

ಬೆಂಗಳೂರು:  ಆರೆಸ್ಸೆಸ್ ಕುರಿತ ಹೇಳಿಕೆ ಖಂಡಿಸಿ ಚಡ್ಡಿಗಳನ್ನು ತಲೆ ಮೇಲಿಟ್ಟು ತನ್ನ ವಿರುದ್ಧ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿರುವ ಬಗ್ಗೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. 

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, '' ನಿಮ್ಮ ಸಂಘದ ಉನ್ನತ ಪದಾಧಿಕಾರಿಗಳಲ್ಲಿ ದಲಿತರು ಮತ್ತು ಹಿಂದುಳಿದ‌ ಜಾತಿಗಳು ಯಾಕೆ ಇಲ್ಲ" ಎನ್ನುವ  ನನ್ನ ಪ್ರಶ್ನೆಗೆ ಆರ್.ಎಸ್.ಎಸ್ ನವರು ಬಿಜೆಪಿ ಶಾಸಕ ಛಲವಾದಿ ನಾರಾಯಣ ಸ್ವಾಮಿಯವರ ಮೂಲಕ ಉತ್ತರ ನೀಡಿದ್ದಾರೆ. ಈ‌ ಸಂದೇಶವನ್ನು ಬಿಜೆಪಿಯಲ್ಲಿರುವ ದಲಿತ ಬಂಧುಗಳು ಅರ್ಥಮಾಡಿಕೊಳ್ಳಲಿ ಎಂದು ಹಾರೈಸುತ್ತೇನೆ'' ಎಂದು ಹೇಳಿದ್ದಾರೆ.

''ಆರ್.ಎಸ್.ಎಸ್‌ ಗೆ ಬೆಂಬಲ ನೀಡಲು ಹಳೆ ಚಡ್ಡಿ ಹೊತ್ತು ಕೊಂಡು ಮೆರವಣಿಗೆ ಮಾಡಿದ ನಾರಾಯಣಸ್ವಾಮಿಯವರೇ, ನಿಮ್ಮ ಸ್ಥಾನಮಾನ ಏನಿದ್ದರೂ ಇಷ್ಟಕ್ಕೆ ಸೀಮಿತ. ಆ ಸಂಘದ ಉನ್ನತ ಪದಾಧಿಕಾರಕ್ಕೆ ನೀವು ಸದಾ ಅಸ್ಪೃಶ್ಯ ನೆನಪಿರಲಿ. ಯಾರ್ಯಾರದೋ ಹಳೆ ಚಡ್ಡಿ ಹೊತ್ತುಕೊಂಡ ನಿಮ್ಮನ್ನು ಕಂಡು‌‌ ಮನಸ್ಸಿಗೆ ನೋವಾಯಿತು. ನಿಮ್ಮನ್ನು "ಪಠ್ಯಪುಸ್ತಕ‌ ಪರಿಷ್ಕರಣ‌ ಸಮಿತಿಯ ಅಧ್ಯಕ್ಷತೆ" ಯಂತಹ ಸ್ಥಾನದಲ್ಲಿ‌‌ ಕಾಣುವ ಆಸೆ ನನಗೆ'' ಎಂದಿದ್ದಾರೆ.

''ನಿಮ್ಮ ಪ್ರತಿಭಟನೆಯ ಹಕ್ಕನ್ನು ನಾನು ಗೌರವಿಸುತ್ತೇನೆ. ಆದರೆ ಕೇವಲ ರಾಜಕೀಯ ಜಿದ್ದಾಜಿದ್ದಿಗಾಗಿ ಹಳೆಚಡ್ಡಿ ಹೊತ್ತುಕೊಳ್ಳಲೂ ಸಿದ್ಧರಾದ ನಿಮ್ಮ ಗುಲಾಮಿ‌ ಮನಸ್ಥಿತಿಗೆ ನನ್ನ ಧಿಕ್ಕಾರ. ಸ್ವಾಭಿಮಾನವನ್ನು‌ ಉಸಿರಾಗಿಸಿಕೊಂಡು ಬದುಕಿದ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಸ್ವಲ್ಪ ಓದಿ ಸ್ವಾಭಿಮಾನದ ಪಾಠ ಕಲಿಯಬೇಕೆಂದಷ್ಟೇ ‌ನಿಮಗೆ‌ ನಾನು ನೀಡುವ ಸಲಹೆ'' ಎಂದು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News