×
Ad

''ವಾಹನದ ಮೇಲೆ ಡಿಸೈನ್ ಡಿಸೈನ್ ಟ್ಯಾಕ್ಸ್, ಪೆಟ್ರೋಲ್-ಡಿಸೇಲ್ ಮೇಲಂತೂ ಮೂರುಪಟ್ಟು ಟ್ಯಾಕ್ಸ್''

Update: 2022-06-07 22:42 IST

ಬೆಂಗಳೂರು: ರಾಜಧಾನಿ ಬೆಂಗಳೂರಿನ ರಸ್ತೆ ಗುಂಡಿಗಳಿಂದಾಗಿ ವಾಹನ ಸವಾರರು ನಿತ್ಯ ನರಕ ಅನುಭವಿಸುವಂತಾಗಿದ್ದು, ಇತ್ತೀಚೆಗೆ ಬೆಂಗಳೂರಿನ ಉದ್ಯಮಿಗಳನ್ನು ಗಂಟು ಮೂಟೆ ಕಟ್ಟಿಕೊಂಡು ಹೈದರಾಬಾದ್ ಗೆ ಬರುವಂತೆ ತೆಲಂಗಾಣದ ಸಚಿವರೊಬ್ಬರ ಟ್ವೀಟ್ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಮತ್ತೆ ರಸ್ತೆ ಗುಂಡಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಗೀತರಚನೆಕಾರ, ನಿರ್ದೇಶಕ  ಕವಿರಾಜ್ ಪ್ರತಿಕ್ರಿಯಿಸಿದ್ದಾರೆ. 

ಫೇಸ್ ಬುಕ್ ನಲ್ಲಿ ವೈರಲ್ ಆಗುತ್ತಿರುವ ರಸ್ತೆ ಗುಂಡಿಯ ಫೊಟೊ ಒಂದನ್ನು ಹಂಚಿಕೊಂಡಿರುವ ಅವರು, ''ವಿವಿಧ ರೀತಿಯಲ್ಲಿ ದಂಡ ವಿಧಿಸಿ ಇಷ್ಟೆಲ್ಲಾ ಕಿತ್ತು ತಿಂದ ಮೇಲೆ ನಮಗೆ ಕನಿಷ್ಠ ಮೂಲಭೂತ ಸೌಲಭ್ಯ ಕೊಡದ ಆಳುವವರ ಮೇಲೆ ನಾವು ಯಾವ ದಂಡ ವಿಧಿಸಬೇಕು  ??'' ಎಂದು ಪ್ರಶ್ನೆ ಮಾಡಿದ್ದಾರೆ. 

''ಸಮಾಜವಾಗಿ ನಮ್ಮನ್ನು ಒಡೆದು ‌, ಕಚ್ಚಾಡಲು ದಿನಕ್ಕೊಂದು ಹೊಸ ವಿವಾದ ಸೃಷ್ಟಿಸುತ್ತಾ ಬೇರೆಲ್ಲಾ ಜ್ವಲಂತ ಸಮಸ್ಯೆ ,ಅನ್ಯಾಯಗಳಿಗೆ ನಮ್ಮನ್ನು ಕುರುಡಾಗಿರುವಂತೆ ನೋಡಿಕೊಳ್ಳುವ ಹುನ್ನಾರಗಳನ್ನು ನಾವ್ಯಾಕೆ ಒಂದು ಸಮಾಜವಾಗಿ ಅರ್ಥೈಸಿಕೊಳ್ಳುತ್ತಿಲ್ಲ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಕವಿರಾಜ್  ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು ಹೀಗೆ...

ಹೆಲ್ಮೆಟ್ ಹಾಕದಿದ್ರೆ ಇಷ್ಟು , ಇನ್ಶೂರೆನ್ ಇಲ್ಲಾಂದ್ರೆ ಅಷ್ಟು , ಬೆಲ್ಟ್ ಹಾಕದಿದ್ರೆ ಇಷ್ಟು ಇತ್ಯಾದಿ ಇತ್ಯಾದಿ ಫೈನ್ ಗಳನ್ನು ರಸ್ತೇಲಿ ಅಡ್ಡಗಟ್ಟಿ ವಸೂಲಿ ಮಾಡಲಾಗುತ್ತೆ.  ಇಷ್ಟೆಲ್ಲಾ ಕಿತ್ತು ತಿಂದ ಮೇಲೆ ನಮಗೆ ಕನಿಷ್ಠ ಮೂಲಭೂತ ಸೌಲಭ್ಯ ಕೊಡದ ಆಳುವವರ ಮೇಲೆ ನಾವು ಯಾವ ದಂಡ ವಿಧಿಸಬೇಕು  ?? ಎಷ್ಟು ದಂಡ ವಿಧಿಸಬೇಕು ಹಾಗಾದರೆ ??  ರಸ್ತೆ ಗುಂಡಿಗೆ ಬಿದ್ದು ಮೂಳೆ ಮುರಿದು ಕೊಳ್ಳುವವರೆಷ್ಟೋ ?? ಪ್ರಾಣ ತೆತ್ತವರೆಷ್ಟೋ ??? ಅದರ ಹೊಣೆಯೆಲ್ಲಾ ಹೊರುವವರು ಯಾರು ???  ದಿನನಿತ್ಯ ನಮ್ಮನ್ನು ಹೈರಾಣಾಗಿಸುವ ನೈಜ , ವಾಸ್ತವ ಸಮಸ್ಯೆಗಳ ವಿರುದ್ಧ ಯಾವತ್ತೂ ನಾವೇಕೆ ಒಂದಾಗಿ ದನಿಯೆತ್ತುವುದೇ ಇಲ್ಲ ??  ನಾವೇಕೆ ನಮ್ಮ ಶಕ್ತಿ ,ಸಮಯ ಎಲ್ಲವನ್ನು ಯಾವುದೋ ಒಂದು ಜಾತೀ ,ಒಂದು ಸಿದ್ಧಾಂತ ,ಒಂದು ಪಕ್ಷಕ್ಕೆ ಮಾತ್ರ ಅಡವಿಟ್ಟು ಸದಾ ಬಡಿದಾಡುಕೊಳ್ಳುತ್ತೇವೇ ? ಪ್ರತಿಯೊಂದಕ್ಕೂ ತೆರಿಗೆ ಕಟ್ಟಿಸಿಕೊಳ್ಳುವ, ತಪ್ಪಿದರೆ ಅದಕ್ಕೆ ದಂಡ ಕೂಡಾ ಕಟ್ಟಿಸುವ , ಆದರೆ ಪ್ರತಿಯಾಗಿ ನಮಗೆ ಕನಿಷ್ಠ ಮೂಲಭೂತ ಸೌಕರ್ಯ ನೀಡದ ಸರ್ಕಾರಗಳ ವಿರುದ್ಧ ನಾವೇಕೆ ಸಾಮೂಹಿಕ  'ಕರ ನಿರಾಕರಣೆ' ಚಳುವಳಿ ಮಾಡುವುದಿಲ್ಲ . ಸೌಲಭ್ಯ‌ ಕೊಡದಿದ್ದರೆ ತೆರಿಗೆಯು ಇಲ್ಲಾ , ದಂಡವು ಇಲ್ಲಾ ಅನ್ನುವ ಹಕ್ಕು 'ಪ್ರಜಾ' ಪ್ರಭುತ್ವದಲ್ಲಿ ಇಲ್ಲವೇ ?

ಸಮಾಜವಾಗಿ ನಮ್ಮನ್ನು ಒಡೆದು ‌, ಕಚ್ಚಾಡಲು ದಿನಕ್ಕೊಂದು ಹೊಸ ವಿವಾದ ಸೃಷ್ಟಿಸುತ್ತಾ ಬೇರೆಲ್ಲಾ ಜ್ವಲಂತ ಸಮಸ್ಯೆ ,ಅನ್ಯಾಯಗಳಿಗೆ ನಮ್ಮನ್ನು ಕುರುಡಾಗಿರುವಂತೆ ನೋಡಿಕೊಳ್ಳುವ ಹುನ್ನಾರಗಳನ್ನು ನಾವ್ಯಾಕೆ ಒಂದು ಸಮಾಜವಾಗಿ ಅರ್ಥೈಸಿಕೊಳ್ಳುತ್ತಿಲ್ಲ. ಜಾತ್ಯಾತೀತವಾಗಿ ,ಧರ್ಮಾತೀತವಾಗಿ ನಮ್ಮೆಲ್ಲರಿಗೂ ಕಂಟಕವಾಗಿರುವ ನಿಜವಾದ ಸಮಸ್ಯೆಗಳ ರಾಶಿಯೇ ಎದುರು ಬಿದ್ದಿದೆ. ಆದರೆ ಸಣ್ಣ ಗೊಣಗಾಟವೊಂದು ಬಿಟ್ಟರೆ ಅದ್ಯಾವುದಕ್ಕೂ ನಾವು ಒಂದು ಗಟ್ಟಿ ದನಿಯೆತ್ತುವುದೇ ಇಲ್ಲ. ಆದರೆ ನಮ್ಮ ಜಾತಿ , ಧರ್ಮಕ್ಕೆ ಅವಮಾನ ಎಂದಾಗ  ಮಾತ್ರವೇ ಎಲ್ಲಿಲ್ಲದ ವೀರಾವೇಶ ಉಕ್ಕೇರಿ , ಪ್ರಾಣ ಕೊಡಲು ತಯಾರು ಎಂಬಂತೆ ಸಾಮೂಹಿಕವಾಗಿ ಸಿಡಿದೇಳುವಂತೆ ಇಡೀ ಸಮಾಜದ ಮೆದುಳನ್ನೆ ಮಾಲ್ ಫಂಕ್ಷನ್ ಮಾಡಿಬಿಟ್ಟಿವೆ ನಮ್ಮನ್ನು ಆಳುವವರ ರಾಜಕೀಯದ ಧೂರ್ತ ಹಿತಾಸಕ್ತಿಗಳು . ಎಂದಾದರು ನಾವು ಎಚ್ಚರಗೊಳ್ಳುವೆವೆ ?  ಒಕ್ಕೊರಲಿಂದ ಪ್ರಭುತ್ವದ ಅಸಮರ್ಥತೆಯ ವಿರುದ್ಧ ದನಿ ಎತ್ತುವೆವೆ ? ನಮ್ಮ ಬೆವರಿನ ದುಡಿಮೆಯ ತೆರಿಗೆಗೆ ತಕ್ಕ ಸೌಲಭ್ಯ ಪಡೆಯಲು ಹಕ್ಕೊತ್ತಾಯ ಮಾಡುವೆವೇ ?  ನಮ್ಮ ನಮ್ಮಲ್ಲೆ ಕಚ್ಚಾಡುವುದು ಬಿಟ್ಟು ಜ್ವಲಂತ ಸಮಸ್ಯೆಗಳ ವಿರುದ್ಧ ಒಗ್ಗೂಡಿ ಹೋರಾಡುವೆವೇ ?

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News