ಮಾರಣಾಂತಿಕ ಬ್ರೈನ್ ಟ್ಯೂಮರ್

Update: 2022-06-07 18:35 GMT

ಪ್ರತೀ ವರ್ಷ 40ರಿಂದ 50 ಸಾವಿರ ಮಂದಿ ಮೆದುಳಿನ ಟ್ಯೂಮರ್‌ಗೆ ತುತ್ತಾಗುತ್ತಾರೆ. ಇದರಲ್ಲಿ 20 ಶೇಕಡಾ ಮಕ್ಕಳಲ್ಲಿ ಕಾಣಸಿಗುತ್ತಾರೆ. ಸುಮಾರು 120 ಬಗೆಯ ವಿಧವಿಧದ ಮೆದುಳಿನ ಟ್ಯೂಮರ್ ಗುರುತಿಸಲಾಗಿದ್ದು, ಬೇರೆ ಬೇರೆ ರೀತಿಯಲ್ಲಿ ಇವುಗಳು ರೋಗಿಯನ್ನು ಕಾಡುತ್ತದೆ. ರೋಗದ ಚಿಹ್ನೆಗಳು ಮೆದುಳಿನ ಯಾವ ಭಾಗದಲ್ಲಿ ಮೆದುಳಿನ ಗಡ್ಡೆ ಬೆಳೆದಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಹೆಚ್ಚಾಗಿ ಇಳಿವಯಸ್ಸಿನಲ್ಲಿ ಕಾಣಸಿಗುವ ಈ ಬ್ರೈನ್ ಟ್ಯೂಮರ್, 65 ವರ್ಷ ದಾಟಿದ ಬಳಿಕ ಸುಮಾರು 1 ಲಕ್ಷದಲ್ಲಿ 15ರಿಂದ 20 ಮಂದಿಯಲ್ಲಿ ಕಾಣಿಸಿಕೊಳ್ಳಬಹುದು. ವಯಸ್ಸಾದಂತೆ ಈ ರೋಗ ಬರುವ ಸಾಧ್ಯತೆ ಹೆಚ್ಚಾಗುತ್ತದೆ.

ಬ್ರೈನ್ ಟ್ಯೂಮರ್‌ನ ಲಕ್ಷಣಗಳು 
ಬ್ರೈನ್ ಟ್ಯೂಮರ್‌ನ ಚಿಹ್ನೆಗಳು ಟ್ಯೂಮರ್‌ನ ಗಾತ್ರ, ಜಾಗ ಮತ್ತು ಬೆಳವಣಿಗೆಯ ತೀವ್ರತೆಯ ಮೇಲೆ ಅವಲಂಬಿತವಾಗಿರುತ್ತದೆ
1. ತಲೆನೋವು: ಮೆದುಳು ನಮ್ಮ ದೇಹದ ಅತ್ಯಂತ ಗಟ್ಟಿಯಾದ ತಲೆಬುರುಡೆ ಎಲುಬಿನ ಒಳಭಾಗದಲ್ಲಿರುವುದರಿಂದ, ಮೆದುಳಿನಲ್ಲಿ ಗಡ್ಡೆ ಬೆಳೆದಾಗ ಮೆದುಳಿನ ಒಳಭಾಗದ ಒತ್ತಡ ಹೆಚ್ಚಾಗುತ್ತದೆ. ಹೀಗೆ ಮೆದುಳಿನ ಒತ್ತಡ ಜಾಸ್ತಿಯಾದಾಗ ತಲೆನೋವು ಬರುತ್ತದೆ. ಮೆದುಳಿನ ಟ್ಯೂಮರ್‌ನ ಗಾತ್ರ ಜಾಸ್ತಿಯಾದಂತೆಲ್ಲಾ ತಲೆನೋವಿನ ತೀವ್ರತೆ ಹೆಚ್ಚುತ್ತದೆ. ತಲೆನೋವು ಮೆದುಳು ಗಡ್ಡೆಯ ಸೂಚಕವಲ್ಲ. ಆದರೆ ಮೆದುಳುಗಡ್ಡೆ ಇದ್ದವರಲ್ಲಿ ತಲೆನೋವು ಸಾಮಾನ್ಯ. ಸುತ್ತಿಗೆಯಿಂದ ಹೊಡೆದಂತೆ ತಲೆಸಿಡಿಯುವಂತಹ ತಲೆನೋವು ಇರಬಹುದು. ಕೆಮ್ಮಿದಾಗ, ಸೀನಿದಾಗ, ಮುಂದೆ ಬಾಗಿದಾಗ ತಲೆನೋವು ಹೆಚ್ಚಾಗುವುದರ ಜೊತೆಗೆ, ವಾಂತಿಯಾಗುತ್ತಿದ್ದರೆ ಬಹಳ ಗಂಭೀರವಾಗಿ ಪರಿಗಣಿಸಬೇಕು.


2. ವಾಕರಿಕೆ ಮತ್ತು ವಾಂತಿ: ಪದೇ ಪದೇ ವಾಕರಿಕೆ ಬಂದಂತಾಗುವುದು ಮತ್ತು ತಲೆನೋವು ಜಾಸ್ತಿಯಾದಂತೆ ವಾಂತಿ ಹೆಚ್ಚಾಗುವುದು ಮೆದುಳಿನ ಟ್ಯೂಮರ್‌ನ ಪ್ರಾಥಮಿಕ ಲಕ್ಷಣ. ಪರೀಕ್ಷೆಗಳು ನಕಾರಾತ್ಮಕವೆಂದು ತಿಳಿಯುವವರೆಗೂ ಮೆದುಳು ಗಡ್ಡೆಯ ಸಂಶಯವನ್ನು ತಳ್ಳಿ ಹಾಕುವಂತಿಲ್ಲ.

3. ಜಡತ್ವ, ನೆನಪು, ಬುದ್ಧಿ ಶಕ್ತಿಯ ಬದಲಾವಣೆಗಳು, ಮಾತನಾಡುವ ಸಾಮರ್ಥ್ಯ ಕುಂಠಿತವಾಗುವುದು. ಅಂಧತ್ವ, ದೃಷ್ಟಿದೋಷ, ಮಾನಸಿಕ ಗೊಂದಲ ಕಾಣಿಸಿಕೊಳ್ಳಬಹುದು. ರೋಗದ ಲಕ್ಷಣಗಳು ಮೆದುಳು ಯಾವ ಭಾಗದಲ್ಲಿ ಗಡ್ಡೆ ಬೆಳೆಯುತ್ತಿದೆ ಎಂಬುದರ ಬಗ್ಗೆ ಮಾಹಿತಿಯನ್ನು ವೈದ್ಯರಿಗೆ ನೀಡುತ್ತದೆ.

4. ವಿಪರೀತ ಸುಸ್ತು, ದೇಹದಲ್ಲಿ ವಿವಿಧ ರೀತಿಯ ಬದಲಾವಣೆ, ದೇಹದ ಭಾಗಗಳಲ್ಲಿ ನರಗಳ ದೌರ್ಬಲ್ಯ ಕಾಣಿಸಬಹುದು.

5. ಮೂರ್ಛೆ ತಪ್ಪುವುದು ಅಥವಾ ಅಪಸ್ಮಾರ ಪದೇ ಪದೇ ಕಾಡುತ್ತದೆ.

6.ಕೆಲಸಕಾರ್ಯಗಳಲ್ಲಿ ಅನಾಸಕ್ತಿ, ಮಂಕಾಗುವುದು, ಪ್ರಜ್ಞೆ ಇಲ್ಲದಂತಾಗುವುದು. ಕಲಿಕೆಯ ಸಾಮರ್ಥ್ಯ ಕುಸಿಯುವುದು, ನಿತ್ಯದ ಬೇಕು-ಬೇಡಗಳನ್ನು ನೋಡಿಕೊಳ್ಳುವ ಸಾಮರ್ಥ್ಯ ಕುಂಠಿತವಾಗುತ್ತದೆ.

ಪತ್ತೆ ಹಚ್ಚುವುದು ಹೇಗೆ? 
ರೋಗ ಲಕ್ಷಣಗಳ ಬಗೆಗಿನ ವಿವರವಾದ ಮಾಹಿತಿ ಗಳು, ದೈಹಿಕ ಪರೀಕ್ಷೆ ತಲೆಯ ಕ್ಷ-ಕಿರಣ, ಮೆದುಳಿನ ಸಿ.ಟಿ. ಸ್ಕಾನ್ ಮತ್ತು ಎಂಆರ್‌ಐ ಮಾಡಿಸಿ ರೋಗವನ್ನು ಗುರುತಿಸಲಾಗುತ್ತದೆ. ಮೆದುಳಿನ ಕಾರ್ಯದಕ್ಷತೆಯನ್ನು ಇಇಜಿ ಎಂಬ ಪರೀಕ್ಷೆ ಮುಖಾಂತರ ಕಂಡು ಹಿಡಿಯುತ್ತಾರೆ. ಒಂದು ವೇಳೆ ಮೆದುಳಿನ ಒಳಗೆ ಟ್ಯೂಮರ್ ಅಥವಾ ಗಡ್ಡೆ ಇದೆ ಎಂದು ತಿಳಿದು ಬಂದಲ್ಲಿ ಅದರ ಗಾತ್ರ, ಅದರ ಸುತ್ತಳತೆ ಮತ್ತು ಸುತ್ತಲಿನ ಮೆದುಳಿನ ಅಂಗಾಂಶಗಳ ಬಗೆಗಿನ ಮಾಹಿತಿಯನ್ನು ಪಡೆಯಲಾಗುತ್ತದೆ. ಅಗತ್ಯವಿದ್ದಲ್ಲಿ ನ್ಯೂರೋಸರ್ಜನ್, ಮೆದುಳಿನ ಹೊರಭಾಗದ ತಲೆಬುರುಡೆ ಎಲುಬಿನಲ್ಲಿ ರಂಧ್ರ ಮಾಡಿ, ಗಡ್ಡೆಯ ಸಣ್ಣ ತುಂಡನ್ನು ತೆಗೆದು ಸೂಕ್ಷ್ಮದರ್ಶಕದಲ್ಲಿ ಪರೀಕ್ಷೆ ಮಾಡುತ್ತಾರೆ. ಈ ಪರೀಕ್ಷೆಗೆ ಬಯಾಪ್ಸಿ ಎನ್ನುತ್ತಾರೆ. ಒಟ್ಟಿನಲ್ಲಿ ನರರೋಗ ತಜ್ಞರು ಮತ್ತು ನ್ಯೂರೋಸರ್ಜನ್ ಒಟ್ಟುಗೂಡಿ, ರೋಗದ ಲಕ್ಷಣಗಳ ಮತ್ತು ಪರೀಕ್ಷೆಯ ಫಲಿತಾಂಶವನ್ನು ತಾಳೆ ಹಾಕಿ ರೋಗ ನಿರ್ಣಯಮಾಡುತ್ತಾರೆ. ಕೆಲವೊಮ್ಮೆ ರೋಗ ನಿರ್ಣಯ ಮಾಡಲು ಹಲವಾರು ಬಾರಿ ಸಿ.ಟಿ. ಸ್ಕಾನ್ ಅಥವಾ ಎಂಆರ್‌ಐ ಸ್ಕಾನ್ ಮಾಡಬೇಕಾಗಬಹುದು. ಮೆದುಳಿನ ಅಂಗಾಂಶಗಳನ್ನು ಕಾಲ್ಪನಿಕವಾಗಿ ಸಣ್ಣ ಸಣ್ಣ ಹಾಳೆಗಳಾಗಿ ಕತ್ತರಿಸಿ, ಆ ಬಳಿಕ ಮರು ಜೋಡಣೆ ಮಾಡಿ ಗಡ್ಡೆಯನ್ನು ಪತ್ತೆ ಹಚ್ಚುತ್ತಾರೆ. ನುರಿತ ರೇಡಿಯೋಲಾಜಿಸ್ಟ್ ಅಥವಾ ಎಕ್ಸ್‌ರೇ ತಜ್ಞರ ಸಲಹೆ ಇದಕ್ಕೆ ಅತೀ ಅಗತ್ಯ.

ಚಿಕಿತ್ಸೆ ಹೇಗೆ: 
ರೋಗಿಯ ಸಾಮಾನ್ಯ ಆರೋಗ್ಯ ಸ್ಥಿತಿ, ಮೆದುಳು ಗಡ್ಡೆಯ ಗಾತ್ರ, ವಿಧ ಮತ್ತು ಯಾವ ಜಾಗದಲ್ಲಿದೆ ಎಂಬುದನ್ನು ಗುರುತಿಸಲಾಗುತ್ತದೆ. ಅದೇ ರೀತಿ ಗಡ್ಡೆಯ ಬೆಳವಣಿಗೆಯ ವೇಗ ಮತ್ತು ರೋಗಿಯ ವಯಸ್ಸು ಇವೆಲ್ಲವನ್ನು ತಾಳೆ ಹಾಕಿ ಯಾವ ರೀತಿಯ ಚಿಕಿತ್ಸೆ ನೀಡಬೇಕು ಎಂದು ನಿರ್ಧರಿಸುತ್ತಾರೆ. ಸಾಮಾನ್ಯವಾಗಿ ಮೆದುಳಿನ ಹೊರಭಾಗದಲ್ಲಿರುವ ಚಿಕ್ಕ ಪುಟ್ಟ ತೀವ್ರತರವಲ್ಲದ ಗಡ್ಡೆಗಳನ್ನು ಶಸ್ತ್ರ ಚಿಕಿತ್ಸೆ ಮಾಡಿ ತೆಗೆಯಲಾಗುತ್ತದೆ. ಆದರೆ ಕೆಲವೊಮ್ಮೆ ಮೆದುಳು ಒಳಭಾಗದಲ್ಲಿ ಗಡ್ಡೆ ಬೆಳೆದಿದ್ದಲ್ಲಿ ಶಸ್ತ್ರ ಚಿಕಿತ್ಸೆ ಮಾಡಿದಲ್ಲಿ ರೋಗಿಗೆ ಗಡ್ಡೆಗಿಂತ, ಶಸ್ತ್ರಚಿಕಿತ್ಸೆಯಿಂದಲೇ ಹೆಚ್ಚು ಹಾನಿಯಾಗುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಗಡ್ಡೆಗಳ ಗಾತ್ರ ಜಾಸ್ತಿಯಾಗಿ ಪಕ್ಕದ ಅಂಗಾಂಶಗಳ ಜೊತೆ ಸೇರಿಹೋಗಿದ್ದಲ್ಲಿ, ಗಡ್ಡೆಯನ್ನು ಸಂಪೂರ್ಣವಾಗಿ ತೆಗೆಯಲು ಸಾಧ್ಯವಾಗದಿರಬಹುದು. ಈ ಕಾರಣದಿಂದ ಕೆಲವೊಮ್ಮೆ ಶಸ್ತ್ರಚಿಕಿತ್ಸೆಯ ಜೊತೆಗೆ ವಿಕಿರಣ ಚಿಕಿತ್ಸೆ ಮತ್ತು ಕಿಮೋಥೆರಪಿ ಚಿಕಿತ್ಸೆ ನೀಡಲಾಗುತ್ತದೆ. ಯಾವ ರೀತಿಯ ಚಿಕಿತ್ಸೆ ಎಂಬುದನ್ನು ವೈದ್ಯರೇ ನಿರ್ಧರಿಸುತ್ತಾರೆ. ಕೆಲವೊಮ್ಮೆ ಶಸ್ತ್ರ ಚಿಕಿತ್ಸೆ ಮಾಡಿದ ಬಳಿಕ ತಲೆಬುರುಡೆಯೊಳಗಿನ ಉರಿಯೂತದಿಂದಾಗಿ ಸಣ್ಣ ಪುಣ್ಣ ತೊಂದರೆಗಳೂ ಉಂಟಾಗಬಹುದು. ಇವೆಲ್ಲವನ್ನು ರೋಗಿಯ ಒಡನಾಡಿಗಳಿಗೆ ಸೂಕ್ತ ಮಾಹಿತಿ ನೀಡಿ ಮನವರಿಕೆ ಮಾಡಲಾಗುತ್ತದೆ. ಶಸ್ತ್ರ ಚಿಕಿತ್ಸೆಯಿಂದ ಉಂಟಾಗುವ ಅಡ್ಡ ಪರಿಣಾಮದ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ. ರೋಗಿ ಮತ್ತು ರೋಗಿಯ ಸಂಬಂಧಿಕರಿಗೆ ಆಪ್ತ ಸಮಾಲೋಚಕರಿಂದ ಸಮಾಲೋಚನೆ ಮಾಡಿ ಮಾನಸಿಕ ಧೈರ್ಯ ಮತ್ತು ನೈತಿಕ ಸ್ಥೈರ್ಯ ನೀಡುವುದು ಅತೀ ಅವಶ್ಯಕ.

ಕೊನೆ ಮಾತು: 
ಬ್ರೈನ್ ಟ್ಯೂಮರ್ ಮಾರಣಾಂತಿಕ ಕಾಯಿಲೆ ಹೌದಾದರೂ, ಪ್ರಥಮ ಮತ್ತು ದ್ವಿತೀಯ ಹಂತದ ಬ್ರೈನ್ ಟ್ಯೂಮರ್ ಹೊಂದಿರುವವರಿಗೆ ಪರಿಣಾಮಕಾರಿ ಚಿಕಿತ್ಸೆ ಇದೆ. ತೀವ್ರತರವಲ್ಲದ ಬ್ರೈನ್‌ಟ್ಯೂಮರನ್ನು ಶಸ್ತ್ರ ಚಿಕಿತ್ಸೆ ಮೂಲಕ ಸಂಪೂರ್ಣವಾಗಿ ಗುಣಪಡಿಸಬಹುದು. ರೋಗಿಗೆ ಮಾನಸಿಕ ಧೈರ್ಯ ಮತ್ತು ಕೌನ್ಸಿಲಿಂಗ್ ಮಾಡಿಸುವುದು ಅತೀ ಅವಶ್ಯಕ.

Writer - ಡಾ. ಮುರಲೀ ಮೋಹನ್ ಚೂಂತಾರು

contributor

Editor - ಡಾ. ಮುರಲೀ ಮೋಹನ್ ಚೂಂತಾರು

contributor

Similar News