ದ್ವೇಷ ಭಾಷಣಗಾರರ ವಿರುದ್ಧ ಕ್ರಮಕ್ಕೆ ವಿವಿಧ ಸಂಘಟನೆಗಳ ಆಗ್ರಹ

Update: 2022-06-08 14:09 GMT

ಮಂಗಳೂರು: ವಿಟ್ಲದಲ್ಲಿ ಸಂಘಪರಿವಾರ ಸಂಘಟನೆಗಳ ಮುಖಂಡ ರಾಧಾಕೃಷ್ಣ ಮತ್ತಿತರರು ಇಸ್ಲಾಮ್ ಧರ್ಮದ ಮೌಲ್ಯಗಳ ವಿರುದ್ಧ ಅವಹೇಳನಕಾರಿ ಮತ್ತು ನಿಂದನಾತ್ಮಕವಾಗಿ ದ್ವೇಷ ಭಾಷಣ ಮಾಡಿ ಮುಸ್ಲಿಮರು, ಹಿಂದುಳಿದ ವರ್ಗ, ಪರಿಶಿಷ್ಟರು, ಬುಡಕಟ್ಟು ಜನಾಂಗದ ಮದ್ಯೆ ಕೋಮು ಗಲಭೆ ಸೃಷ್ಟಿಸುವ ಹುನ್ನಾರ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಇಂತಹ ದ್ವೇಷ ಭಾಷಣಗಾರರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಕೆ. ಅಶ್ರಫ್ ಒತ್ತಾಯಿಸಿದ್ದಾರೆ.

ಈ ಭಾಷಣದ ಮೂಲಕ ನಿರ್ಧಿಷ್ಟ ಜನರ ಧಾರ್ಮಿಕ ನಂಬಿಕೆಗಳ ಬಗ್ಗೆ ಅವಹೇಳನ ಮಾಡಲಾಗಿದೆ. ಹಾಗಾಗಿ ರಾಜ್ಯ ಸರಕಾರ ವಿಟ್ಲದ  ದ್ವೇಷ ಭಾಷಣಗಾರರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ತಕ್ಷಣ ಬಂಧಿಸ ಬೇಕು ಎಂದು ಆಗ್ರಹಿಸಿದ್ದಾರೆ.

ಮುಸ್ಲಿಂ ಲೀಗ್ ಆಗ್ರಹ: ವಿಟ್ಲದಲ್ಲಿ ಮಾಡಿದ ಕೋಮು ಪ್ರಚೋದನಕಾರಿ ಭಾಷಣವು ಕೇವಲ ವಿಘ್ನ ಸಂತೋಷಿಗರ ಚಪ್ಪಾಳೆ ಗಿಟ್ಟಿಸಲು ಮತ್ತು ರಾಜಕೀಯ ದುರ್ಲಾಭ ಪಡೆಯಲು ಮಾಡಿದ್ದಾಗಿದೆ. ಇಸ್ಲಾಂ ಧರ್ಮವನ್ನು ತೀರಾ ಅವಹೇಳಕಾರಿಯಾಗಿ ಚಿತ್ರೀಕರಿಸಿ ತನ್ನ ಅನಾಗರಿಕತೆಯನ್ನು ಪ್ರದರ್ಶಿಸಿದ ಈತನ ವಿರುದ್ದ ಕಠಿಣ ಕಾನೂನು ಕ್ರಮ ಜರಗಿಸಿ ಜೈಲಿಗಟ್ಟುವಂತೆ ಪೊಲೀಸ್ ಇಲಾಖೆಗೆ ದ.ಕ.ಜಿಲ್ಲಾ ಮುಸ್ಲಿಂ ಲೀಗ್  ಆಗ್ರಹಿಸಿದೆ.

ಇಂತಹ ವಿಚಿದ್ರಕಾರಿ ವ್ಯಕ್ತಿಗಳನ್ನು ಮಟ್ಟಹಾಕದಿದ್ದರೆ ಅದು ಈ ನಾಡಿನ ಶಾಂತಿಯನ್ನು ಕದಡಿ ಈ ನಾಡನ್ನು ಅರಾಜಕತೆಗೆ ತಳ್ಳುವುದಕ್ಕೆ ಕಾರಣವಾಗಬಹುದು. ಕಾನೂನು ಪಾಲಕರು ಇದಕ್ಕೆ ಆಸ್ಪದ ನೀಡದೆ ಜಾತಿ ಧರ್ಮದ ಆಧಾರದಲ್ಲಿ ತಾರತಮ್ಯ ನೀತಿ ಅನುಸರಿಸದೆ ಉದ್ರೇಕಕಾರಿ ಭಾಷಣ ಯಾರೇ ಮಾಡಿದರೂ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮುಸ್ಲಿಂ ಲೀಗ್ ಅಧ್ಯಕ್ಷ ಕೆ.ಎಂ. ಫಯಾಝ್ ತಿಳಿಸಿದ್ದಾರೆ.

ರಾಜ್ಯ ದಾರಿಮಿ ಉಲಮಾ ಒಕ್ಕೂಟ: ಪ್ರವಾದಿ ನಿಂದನೆ ಮಾಡಿ ಅಂತಾರ್ರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಹರಾಜು ಮಾಡಿದ ಬಿಜೆಪಿ ವಕ್ತಾರೆಯನ್ನೂ ಮೀರಿಸುವ ರೀತಿಯಲ್ಲಿ ವಿಟ್ಲದಲ್ಲಿ ಮುರಳೀಧರ ಹಂಸತ್ತಡ್ಕ ಎಂಬಾತ ಕೋಮು ಉದ್ರೇಕಕಾರಿ ಭಾಷಣ ಮಾಡಿರುವುದು ಖಂಡನೀಯ. ಜಗತ್ತಿನಲ್ಲೇ ದ್ವಿತೀಯ ಸ್ಥಾನದಲ್ಲಿರುವ ಇಸ್ಲಾಂ ಧರ್ಮವನ್ನು ತೀರಾ ಅವಹೇಳಕಾರಿಯಾಗಿ ಚಿತ್ರೀಕರಿಸಿ ತನ್ನ ಅನಾಗರಿಕತೆಯನ್ನು ಪ್ರದರ್ಶಿಸಿದ ಈತನ ವಿರುದ್ದ ಕಠಿಣ ಕಾನೂನು ಕ್ರಮ ಜರಗಿಸಿ ಜೈಲಿಗಟ್ಟುವಂತೆ ರಾಜ್ಯ ದಾರಿಮಿ ಉಲಮಾ ಒಕ್ಕೂಟ ಆಗ್ರಹಿಸಿದೆ.

ವಿವಿಧ ಜಾತಿ ಜನಾಂಗದವರ ಮಧ್ಯೆ ಈ ರೀತಿ ದ್ವೇಷ ಹರಡುವವರ ವಿರುದ್ದ ಕಾನೂನು ಪಾಲನೆ ಆಗದಿದ್ದಲ್ಲಿ, ಮುಂದಿನ ದಿನಗಳಲ್ಲಿ ಸಮಾನ ಮನಸ್ಕರನ್ನು ಸೇರಿಸಿ ಉಗ್ರ ಹೋರಾಟ ಮಾಡುವ ಅನಿವಾರ್ಯತೆ ಬಂದೊದಗಬಹುದು. ಕಾನೂನು ಪಾಲಕರು ಇದಕ್ಕೆ ಆಸ್ಪದ ನೀಡದೆ ಕಠಿಣ ಕಾನೂನು ಕ್ರಮ ಜರಗಿಸುವಂತೆ ಉಲಮಾ ಒಕ್ಕೂಟ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News