×
Ad

ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಚಡ್ಡಿ, ಮುಖವಾಡ ತೊಟ್ಟು ಪ್ರತಿಭಟನೆ ನಡೆಸಿದ ಕಾಂಗ್ರೆಸ್

Update: 2022-06-08 21:28 IST

ಬೆಂಗಳೂರು, ಜೂ.8: ವಿಧಾನಪರಿಷತ್ತಿನ ಬಿಜೆಪಿ ಸದಸ್ಯ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತ ಆರೆಸ್ಸೆಸ್‍ನ ಚಡ್ಡಿ ವೇಷ ತೊಟ್ಟು ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಬುಧವಾರ ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಮುಂಭಾಗ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷದ ವಿರುದ್ಧ ದಿನನಿತ್ಯ ಆಧಾರರಹಿತ ಹೇಳಿಕೆಗಳನ್ನು ನೀಡಿ ಪಠ್ಯಪುಸ್ತಕದಲ್ಲಿರುವ ಲೋಪವನ್ನೆಲ್ಲ ಮರೆಮಾಚಲು ಹಾಗೂ ಶೇ.40 ಕಮಿಷನ್ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್, ಪ್ರತಿಪಕ್ಷದ ನಾಯಕರು ಚಡ್ಡಿ ಸಂಸ್ಕೃತಿ ವಿರುದ್ಧ ಧ್ವನಿ ಎತ್ತಿದರೆ ಬಿಜೆಪಿ ನಾಯಕರು ಅವರ ವಿರುದ್ಧ ಆಧಾರರಹಿತ ಟೀಕೆ ನಡೆಸುತ್ತಾರೆ. ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿರುವ ಅತ್ಯಂತ ಭ್ರಷ್ಟ ಪಕ್ಷ. ಭ್ರಷ್ಟಾಚಾರಿಗಳು ಪ್ರತಿಪಕ್ಷಗಳ ವಿರುದ್ಧ ಮಾತನಾಡುವ ನೈತಿಕತೆಯನ್ನು ಹೊಂದಿಲ್ಲ ಎಂದು ಆರೋಪಿಸಿದರು.

ಬಿಜೆಪಿ ಪಕ್ಷದ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಶಾಸಕರೇ ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಾರೆ. ಜೊತೆಗೆ ಆರೋಗ್ಯ ಸಚಿವರು ಅಸಮರ್ಥ ನಾಯಕರೆಂದು ಅವರ ಪಕ್ಷದ ನಾಯಕರೇ ಹೇಳುತ್ತಾರೆ. ಇಷ್ಟೆಲ್ಲ ಟೀಕೆಗೆ ಗುರಿಯಾದರೂ ಅಧಿಕಾರದಲ್ಲಿರಲು ಬಿಜೆಪಿ ನಾಯಕರಿಗೆ ಹಾಗೂ ಮಂತ್ರಿಗಳಿಗೆ ಯಾವ ನೈತಿಕತೆಯಿದೆ ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಯುವ ನಾಯಕರಾದ ಎ.ಆನಂದ್, ಪ್ರಕಾಶ್, ಮಂಜುನಾಥ್ ಚಂದ್ರಶೇಖರ್, ಸುಪ್ರಜ ಚಿಕ್ಕಣ್ಣ, ವೆಂಕಟೇಶ್, ನವೀನ್, ಪ್ರಶಾಂತ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News