ಆ ಎಂಟು ವರ್ಷಗಳು!

Update: 2022-06-09 08:21 GMT

ತನ್ನ ಅಧಿಕಾರಾವಧಿಯ ಎಂಟು ವರ್ಷಗಳನ್ನು ನರೇಂದ್ರ ಮೋದಿ ಪೂರ್ಣಗೊಳಿಸಿರುವಂತೆಯೇ, ಅವರ ಆಡಳಿತದ ಕಾರ್ಯನಿರ್ವಹಣೆಯ ಕುರಿತಂತೆ ಪ್ರಶಂಸೆ ಹಾಗೂ ಟೀಕೆಗಳರಡೂ ವ್ಯಕ್ತವಾಗುತ್ತಿವೆ. ಈ ಅವಧಿಯಲ್ಲಿ ಭಾರತವು ಅಭಿವೃದ್ಧಿಯ ಎಲ್ಲಾ ಕ್ಷೇತ್ರಗಳಲ್ಲಿ ಬೃಹತ್ ಹೆಜ್ಜೆಗಳನ್ನು ಇಟ್ಟಿದೆಯೆಂದು ಮೋದಿ ಅಭಿಮಾನಿಗಳು ತುಂಬಾ ಸಂತಸ ಪಡುತ್ತಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿನ ಮೋದಿ ಸರಕಾರದ ಸಾಧನೆಗಳನ್ನು ಗೃಹ ಸಚಿವ ಅಮಿತ್ ಶಾರಿಂದ ಹಿಡಿದು ವಿವಿಧ ನಾಯಕರು ಶ್ಲಾಘಿಸಿದ್ದಾರೆ. ಮನೆ, ಲಸಿಕೀಕರಣ, ಮಹಿಳೆಯರಿಗೆ ವೃತ್ತಿಪರ ವಾಹನ ಚಾಲನೆಯ ಉದ್ಯೋಗ, ಉಜ್ವಲ ಅಡುಗೆ ಅನಿಲ ಯೋಜನೆ, ಜನ ಧನ ಬ್ಯಾಂಕ್ ಖಾತೆ ಇತ್ಯಾದಿ ಕಾರ್ಯಕ್ರಮಗಳ ವಿವರಗಳ ಬಗ್ಗೆ ಬೆಳಕುಚೆಲ್ಲುವ ವಿಷಯಗಳನ್ನು ಅವರು ಬರೆದಿದ್ದಾರೆ.

 ನಗದು ಅಮಾನ್ಯ, ಕೋವಿಡ್ ನಿಯಂತ್ರಣಕ್ಕಾಗಿ ಹಠಾತ್ತನೆ ಹೇರಲಾದ ಲಾಕ್‌ಡೌನ್‌ನಿಂದಾಗಿ ಸಾವಿರಾರು ಮಂದಿ ಕಾರ್ಮಿಕರು, ಬಡವರು ಪ್ರತಿಕೂಲ ಸನ್ನಿವೇಶಗಳ ನಡುವೆಯೂ ವಸೆ ಹೋಗಿದ್ದರಿಂದ ದೇಶದ ಅಭಿವೃದ್ಧಿಗೆ ಬೃಹತ್ ಹಿನ್ನಡೆಯಾಗಿರುವ ಬಗ್ಗೆ ಸರಕಾರದ ವಿರೋಧಿಗಳು ಬೆಳಕು ಚೆಲ್ಲುತ್ತಾರೆ. ಆರೋಗ್ಯ ಸೇವೆಗಳ ಅಸಮರ್ಪಕತೆಯನ್ನೂ ಲಾಕ್‌ಡೌನ್ ಬಯಲುಗೊಳಿಸಿದೆ. ರೈತರ ದುರವಸ್ಥೆ ಶೋಚನೀಯವಾಗಿದೆ ಹಾಗೂ ಅಗತ್ಯ ಸಾಮಾಗ್ರಿಗಳ ದರಗಳು ಹೆಚ್ಚುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಮೋದಿ ಅಧಿಕಾರದ ಅವಧಿಯಲ್ಲಿ ಕೋಮು ಹಿಂಸಾಚಾರದ ಘಟನೆಗಳು ಇಲ್ಲವೆಂದು ವಾದಿಸಲಾಗುತ್ತಿದೆ. ಆದರೆ ವಾಸ್ತವದಲ್ಲಿ 2020ರ ದಿಲ್ಲಿ ಗಲಭೆ ಸೇರಿದಂತೆ ಹಿಂಸಾಚಾರದ ಕೃತ್ಯಗಳು ಹೆಚ್ಚುತ್ತಿರುವುದು ಮಾತ್ರವಲ್ಲದೆ ಎರಡು ಪ್ರಮುಖ ಧಾರ್ಮಿಕ ಸಮುದಾಯಗಳ ನಡುವೆ ಅಸಮಾಧಾನ ಬೆಳೆಯುತ್ತಿರುವುದನ್ನು ನಾವು ಕಂಡಿದ್ದೇವೆ. ಉತ್ತರಪ್ರದೇಶದಲ್ಲಿ ಕೋಮುಗಲಭೆಯ ಘಟನೆಗಳು 2014ರಲ್ಲಿ 133 ಇದ್ದುದು 2017ರಲ್ಲಿ 195ಕ್ಕೇರಿದ್ದು ಶೇ.47ರಷ್ಟು ಹೆಚ್ಚಾಗಿದೆ. 2017ರ ಹಫಿಂಗ್ಟನ್ ಪೋಸ್ಟ್ ವರದಿಯ ಪ್ರಕಾರ ಸಿರಿಯ, ನೈಜೀರಿಯ ಹಾಗೂ ಇರಾಕ್ ದೇಶಗಳ ಬಳಿಕ ಭಾರತದಲ್ಲಿ ಧರ್ಮಕ್ಕೆ ಸಂಬಂಧಿಸಿದ ಸಾಮಾಜಿಕ ದ್ವೇಷದ ಕೃತ್ಯಗಳಿಗೆ ಸಂಬಂಧಿಸಿದ ಪ್ರಕರಣಗಳು ಗರಿಷ್ಠ ಸಂಖ್ಯೆಯಲ್ಲಿ ವರದಿಯಾದ ನಾಲ್ಕನೇ ರಾಷ್ಟ್ರವಾಗಿದೆ. ಈ ಪ್ರವೃತ್ತಿಯು ಆನಂತರದ ವರ್ಷಗಳಲ್ಲಿಯೂ ಮುಂದುವರಿದಿದೆ.

‘ಇತರರನ್ನು ದ್ವೇಷಿಸಿ’ (ಮುಸ್ಲಿಮರನ್ನು ಹಾಗೂ ಕ್ರೈಸ್ತರನ್ನು) ಪ್ರವೃತ್ತಿಯು ಪ್ರಚಲಿತ ಪ್ರವೃತ್ತಿಯಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ, ಕಾಶಿ ಕಾರಿಡಾರ್ ನಿರ್ಮಾಣ ಹಾಗೂ ಮಥುರಾ, ತಾಜ್‌ಮಹಲ್, ಜಾಮಾ ಮಸೀದಿ ಹಾಗೂ ಕರ್ನಾಟಕದ ಬಾಬಾ ಬುಡಾನ್‌ಗಿರಿಗೆ ಸಂಬಂಧಿಸಿದ ವಿವಾದಗಳನ್ನು ಕೆದಕುವುದು ಹೊಸ ಪ್ರವೃತ್ತಿಯಾಗಿದೆ. ಜಾಗತಿಕವಾಗಿ ಭಾರತವು ಪ್ರಜಾಪ್ರಭುತ್ವ, ಧಾರ್ಮಿಕ ಸ್ವಾತಂತ್ರ, ಪತ್ರಿಕಾ ಸ್ವಾತಂತ್ರ, ಹಸಿವು ಹಾಗೂ ಸಂತಸ ಸೇರಿದಂತೆ ಅಭಿವೃದ್ಧಿಯ ವಿವಿಧ ಸೂಚ್ಯಂಕಗಳಲ್ಲಿ ಕುಸಿತವನ್ನು ಕಂಡಿದೆ. ಈ ಗ್ರಹಿಕೆಯೊಂದಿಗೆ ಹೇಳುವುದಾದರೆ, ಗಾಂಧಿ ಹಾಗೂ ಸರ್ದಾರ್ ಪಟೇಲ್‌ರ ಕನಸಿನ ಭಾರತ ನಿರ್ಮಿಸಲು ತಾನು ಶ್ರಮಿಸುತ್ತಿದ್ದೇನೆಂಬ ಮೋದಿಯವರ ಹೇಳಿಕೆ ಪ್ರಶ್ನಾರ್ಹವಾಗಿದೆ.

ಸರ್ದಾರ್ ಪಟೇಲ್ ಅವರು ಮಹಾತ್ಮಾ ಗಾಂಧೀಜಿಯವರ ಕಟ್ಟಾ ಅನುಯಾಯಿಯಾಗಿದ್ದರು. ತಾನು ಹಾಗೂ ನೆಹರೂ, ತಮ್ಮ ಗುರುವಾದ ಗಾಂಧೀಜಿಯವರ ಪಾದತಲದ ಬಳಿ ಕುಳಿತುಕೊಂಡೇ ರಾಜಕೀಯವನ್ನು ಕಲಿತಿದ್ದಾಗಿ ಅವರು ಹೇಳಿದ್ದರು. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಅವಶ್ಯಕತೆಗಳು ಹಾಗೂ ಒಳಿತನ್ನು ಗಮನದಲ್ಲಿರಿಸಿಕೊಂಡು ನೀತಿಗಳನ್ನು ರೂಪಿಸುವುದು ಅತ್ಯಂತ ಮುಖ್ಯವಾಗಿದೆ ಎಂದು ಗಾಂಧೀಜಿಯವರ ಆದೇಶಗಳಲ್ಲೊಂದಾಗಿತ್ತು. ಆದರೆ ನಾವು ಈಗ ಕಾಣುತ್ತಿರುವುದು ಏನೆಂದರೆ, ಮೊದಲ ಸಾಲಿನಲ್ಲಿ ನಿಂತುಕೊಂಡ ವ್ಯಕ್ತಿಗಳು ಹೆಚ್ಚಿನ ಸಾಮಾಜಿಕ ಸಂಪನ್ಮೂಲಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಇದೇ ವೇಳೆ ಸಮಾಜದ ಕಟ್ಟಕಡೆಯ ಸಾಲಿನಲ್ಲಿರುವ ವ್ಯಕ್ತಿಗಳು ಅವಕಾಶ ವಂಚಿತರಾಗಿದ್ದಾರೆ.

ಹಲವಾರು ವಿಷಯಗಳಲ್ಲಿ ಭಾರತವು ಕುಸಿತವನ್ನು ಕಂಡಿದೆ. ಸ್ವಾತಂತ್ರಗಳು, ಅಭಿವ್ಯಕ್ತಿ ಸ್ವಾತಂತ್ರ ಸೇರಿದಂತೆ ಹಲವಾರು ಅಂಶಗಳು ಇವುಗಳಲ್ಲಿ ಒಳಗೊಂಡಿವೆ. ಹಲವಾರು ಚಿಂತಕರು ಹಾಗೂ ಹೋರಾಟಗಾರರನ್ನು ಜೈಲಿಗೆ ತಳ್ಳಲಾಗಿದ್ದರೆ, ದ್ವೇಷ ಭಾಷಣಗಳನ್ನು ಮಾಡುತ್ತಿರುವವರು (ಯತಿ ನರಸಿಂಗಾನಂದ, ಸುರೇಶ್ ಚಾವಂಕೆ ಹಾಗೂ ಅವರ ಕಂಪೆನಿ) ದ್ವೇಷದ ಬೃಹತ್ ಬ್ಯಾಗೇಜ್‌ನೊಂದಿಗೆ ಸ್ವಚ್ಛಂದವಾಗಿ ತಿರುಗುತ್ತಿದ್ದಾರೆ. ಅಸಹಾಯಕ ಅಲ್ಪಸಂಖ್ಯಾತರ ಕೊಲೆ, ನರಮೇಧಕ್ಕೆ ಕರೆ ನೀಡಿದ ಹೊರತಾಗಿಯೂ ತಾವು ಸುರಕ್ಷಿತವಾಗಿದ್ದೇವೆ ಎಂಬ ಆತ್ಮವಿಶ್ವಾಸವನ್ನು ಅವರು ಹೊಂದಿದ್ದಾರೆ. ಸಂತ್ರಸ್ತ ಸಮುದಾಯವನ್ನು ಅಪರಾಧಿಗಳೆಂಬಂತೆ ಬಿಂಬಿಸುವಂತಹ ಸಾಮಾಜಿಕ ಸಂರಚನೆಯನ್ನು ಸೃಷ್ಟಿಸಲಾಗುತ್ತಿರುವುದು ಈ ಸಂಪೂರ್ಣ ವಿದ್ಯಮಾನದ ಕುತೂಹಲಕರ ಭಾಗವಾಗಿದೆ.
 ಹಿಂದೂ ಹಾಗೂ ಮುಸ್ಲಿಮರ ನಡುವೆ ಒಗ್ಗಟ್ಟನ್ನು ಮೂಡಿಸುವುದೇ ಮಹಾತ್ಮಾ ಗಾಂಧಿಯವರ ಮಹಾನ್ ಪ್ರಯತ್ನಗಳ ಮುಖ್ಯ ಅಂಶವಾಗಿತ್ತು. ಅವರ ಬದುಕಿನ ಅಂತಿಮ ಅವಧಿಯಲ್ಲಿ ಇದು ಅತ್ಯಂತ ಗಂಭೀರವಾದ ವಿಚಾರವಾಗಿ ಪರಿಣಮಿಸಿತ್ತು. ಖಿಲಾಫತ್ ಚಳವಳಿಯಿಂದ ಹಿಡಿದು ಬಂಗಾಳದಲ್ಲಿ ಅದರಲ್ಲೂ ನೌಕಾಲಿಯಲ್ಲಿ ಆನಂತರ ದಿಲ್ಲಿಯಲ್ಲಿ ಅವರು ನಡೆಸಿದ ಪ್ರಯತ್ನಗಳು ವೈವಿಧ್ಯತೆ ಹಾಗೂ ಬಹುತ್ವವನ್ನು ಆಧರಿಸಿದ ಭಾರತವನ್ನು ನಿರ್ಮಿಸುವ ನಿಟ್ಟಿನಲ್ಲಿ ಅವರಿಗಿರುವ ಬದ್ಧತೆಯ ನಿದರ್ಶನವಾಗಿದೆ. ಹಿಂದೂ- ಮುಸ್ಲಿಮ್ ಏಕತೆಯು ಅವರ ಮುಖ್ಯ ಕಾಳಜಿಯಾಗಿತ್ತು. ದಿಲ್ಲಿಯಲ್ಲಿ ಅವರು ನಡೆಸಿದ ಆಮರಣಾಂತ ಉಪವಾಸ ಸತ್ಯಾಗ್ರಹದಲ್ಲಿ ಇದು ಪ್ರಮುಖ ಅಂಶವಾಗಿತ್ತು.

ಇದಕ್ಕೆ ವ್ಯತಿರಿಕ್ತವಾಗಿ ಎರಡೂ ಸಮುದಾಯಗಳ ನಡುವಿನ ಕಂದಕವು ವಿಸ್ತಾರವಾಗಿ ಹಾಗೂ ಆಳವಾಗಿ ಹೋಗುತ್ತಿರುವುದನ್ನು ಅವರು ಕಂಡರು. ಕಳೆದ ಎಂಟು ವರ್ಷಗಳಲ್ಲಿ ಅಯೋಧ್ಯಾ ಶ್ರೀರಾಮ ಮಂದಿರ ಚಳವಳಿಯು ಈ ಕಂದಕ ಸಹಿಸಲು ಅಸಾಧ್ಯವಾದ ಮಟ್ಟದಷ್ಟು ಅಳವಾಗಿ ಹೋಗಿದೆ.. ಎರಡೂ ಸಮುದಾಯಗಳಲ್ಲಿರುವ ಕೋಮುವಾದಿ ಶಕ್ತಿಗಳ ಬಗ್ಗೆ ಗಾಂಧಿ ಎಚ್ಚರಿಕೆ ನೀಡಿದ್ದರು ಹಾಗೂ ಸೌಹಾರ್ದ ಹಾಗೂ ಅಹಿಂಸೆಯ ಬಗ್ಗೆ ಬದ್ಧತೆಯನ್ನು ಕೋರಿದರು. ಇಂದು ನಡೆಯುತ್ತಿರುವ ಪ್ರಕ್ರಿಯೆಯು ಇದಕ್ಕೆ ವ್ಯತಿರಿಕ್ತವಾಗಿದೆ. ಧರ್ಮವು ರಾಜ್ಯದ ನೀತಿಗಳೊಂದಿಗೆ ಮಿಶ್ರಣಗೊಂಡಿದೆ. ಕಟ್ಟಾ ಸನಾತನಿ ಹಿಂದೂವಾಗಿದ್ದರೂ ಗಾಂಧೀಜಿಯವರು ಧಾರ್ಮಿಕ ನಿರ್ದೇಶನಗಳಿಂದ ಸರಕಾರದ ನೀತಿಗಳನ್ನು ದೂರವಿಡಲು ಬಯಸಿದ್ದರು. ‘‘ಭಾರತದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಆತನ/ಆಕೆಯ ಧರ್ಮ ಯಾವುದೇ ಇರಲಿ ಸಮಾನವಾದ ಸ್ಥಾನಮಾನವನ್ನು ಹೊಂದಿರಬೇಕೆಂಬ ಆಶಯದೊಂದಿಗೆ ನನ್ನ ಜೀವನಪೂರ್ತಿ ಶ್ರಮಿಸಿದ್ದೇನೆ. ದೇಶವು ಸಂಪೂರ್ಣವಾಗಿ ಜಾತ್ಯತೀತವಾಗಿರಬೇಕಾಗಿದೆ. ಧರ್ಮವು ರಾಷ್ಟ್ರೀಯತೆಯ ಪರೀಕ್ಷೆಯಾಗುವುದಿಲ್ಲ. ಆದರೆ ಅದು ದೇವರು ಹಾಗೂ ಮಾನವನ ನಡುವಿನ ವೈಯಕ್ತಿಕ ವಿಷಯವಾಗಿದೆ ಹಾಗೂ ಧರ್ಮವೆಂಬುದು ಪ್ರತಿಯೊಬ್ಬ ವ್ಯಕ್ತಿಯ ಖಾಸಗಿ ವಿಷಯವಾಗಿದೆ. ಅದನ್ನು ರಾಜಕೀಯ ಅಥವಾ ರಾಷ್ಟ್ರೀಯ ವ್ಯವಹಾರಗಳ ಜೊತೆ ಮಿಶ್ರಣಗೊಳಿಸಬಾರದು’’ (ಹರಿಜನ ಆಗಸ್ಟ್ 31,1947).

ಮೋದಿಯವರು ಸದಾ ಜಪಿಸುತ್ತಿರುವ ಸರ್ದಾರ್ ಪಟೇಲ್ ಅವರು ಸಮಾಜದಲ್ಲಿ ದ್ವೇಷ ಬೆಳೆಯುತ್ತಿರುವುದರ ಬಗ್ಗೆ ಆತಂಕಿತರಾಗಿದ್ದರು.ಗಾಂಧಿ ಹತ್ಯೆಯ ಆನಂತರ ಆರೆಸ್ಸೆಸ್‌ನ್ನು ಅವರು ನಿಷೇಧಿಸುವಂತಾಯಿತು. ಇಂಡಿಯನ್ ಎಕ್ಸ್‌ಪ್ರೆಸ್‌ನ ಮದ್ರಾಸ್ ಆವೃತ್ತಿಯು 1948ರ ಎಪ್ರಿಲ್ 5ರ ಸಂಚಿಕೆಯಲ್ಲಿ ‘‘ಭಾರತಾದ್ಯಂತ ಆರೆಸ್ಸೆಸ್ ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಲಾಗಿದೆ. ದ್ವೇಷ ಹಾಗೂ ಹಿಂಸಾಚಾರದ ಮೂಲೋತ್ಪಾಟನೆಯ ನಡೆ ಇದಾಗಿದೆ’’ ಎಂದು ವರದಿ ಮಾಡಿತ್ತು. ‘‘ಆರೆಸ್ಸೆಸ್‌ನವರ ಎಲ್ಲಾ ಭಾಷಣಗಳು ಕೋಮುವಾದಿ ವಿಷದಿಂದ ತುಂಬಿದ್ದವು. ಈ ವಿಷದ ಅಂತಿಮ ಪರಿಣಾಮವೆಂಬಂತೆ ದೇಶವು ಗಾಂಧೀಜಿಯವರನ್ನು ತ್ಯಾಗ ಮಾಡಬೇಕಾಯಿತು’’ ಎಂದು ಪಟೆೇಲ್ ಹೇಳಿದ್ದರು.

ಪ್ರಸಕ್ತ ದ್ವೇಷದ ಹರಡುವಿಕೆಯು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ‘‘ಒಂದು ವೇಳೆ ಔರಂಗಜೇಬನಿದ್ದಲ್ಲಿ ಶಿವಾಜಿಯೂ ಕೂಡಾ ಹೊರಹೊಮ್ಮುತ್ತಾನೆ’’ ಎಂಬಂತಹ ಮಾತುಗಳೊಂದಿಗೆ ದ್ವೇಷದ ಪ್ರಚಾರಕ್ಕೆ ಕುಮ್ಮಕ್ಕು ನೀಡುವ ಮೂಲಕ ತಂಡದ ನೇತೃತ್ವ ವಹಿಸಿದ್ದಾರೆ. ಅವರ ಈ ರಾಜಕೀಯ ಸಿದ್ಧಾಂತವನ್ನು ಅನುಸರಿಸುವವರು ಧರ್ಮಸಂಸದ್‌ಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ದ್ವೇಷದ ಪ್ರಚಾರವನ್ನು ಇನ್ನಷ್ಟು ಮುಂದಕ್ಕೊಯ್ಯುತ್ತಾರೆ ಹಾಗೂ ಅವರು ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳುತ್ತಾರೆ.

2021ರ ಡಿಸೆಂಬರ್‌ನಲ್ಲಿ ಧರ್ಮಸಂಸದ್‌ನಲ್ಲಿ ನಡೆದ ಮೂರು ದಿನಗಳ ಧರ್ಮ ಸಂಸದ್ ಸಮಾವೇಶ ಇದಕ್ಕೊಂದು ಕೇವಲ ಉದಾಹರಣೆಯಷ್ಟೇ. ಪ್ರಮುಖ ಬಿಜೆಪಿ ನಾಯಕರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾಷಣಕಾರರು ನರಮೇಧಕ್ಕೆ ಬಹಿರಂಗ ಕರೆ ನೀಡಿದ್ದರು. ಇದಕ್ಕೆ ಮುಕುಟವಿಟ್ಟಂತೆ ಮೋದಿ ಸಂಪೂರ್ಣ ವೌನ ತಾಳಿದ್ದರು. ಮುಸ್ಲಿಮರಲ್ಲಿ ಇಂತಹ ಅಭದ್ರತೆಯ ವಾತಾವರಣವುಂಟಾಗಿರುವುದರಲ್ಲಿ ಯಾವುದೇ ಅಚ್ಚರಿಯಿಲ್ಲ. ಒಂದೆಡೆ ಮುಸ್ಲಿಮ್ ಕೋಮುವಾದಿ ಶಕ್ತಿಗಳಿಗೆ ಇದರಿಂದ ಹೆಚ್ಚಿನ ಶಕ್ತಿ ದೊರೆತಂತಾಗುತ್ತದೆ. ಇದೇ ವೇಳೆ ಹೆಚ್ಚಿನ ಮುಸ್ಲಿಮರು ನೋವು ಹಾಗೂ ಅಭದ್ರತೆಯಿಂದ ನರಳುತ್ತಿದ್ದಾರೆ. ಜನಾಂಗೀಯ ನರಮೇಧದ ಸಂಭಾವ್ಯ ಭೀತಿಯಿರುವ 10 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಎಂಟನೇ ಸ್ಥಾನದಲ್ಲಿದೆಯೆಂದು ‘ಜೆನೊಸೈಡ್‌ವಾಚ್’ ಸಂಘಟನೆಯ ಅಧ್ಯಕ್ಷ ಗ್ರೆಗರಿ ಸ್ಟೆಂಟನ್ ಹೇಳಿದ್ದಾರೆ. ಇಂತಹ ಸನ್ನಿವೇಶದಲ್ಲಿ ಗಾಂಧೀಜಿ ಹಾಗೂ ಸರ್ದಾರ್ ಪಟೇಲ್ ಇರುತ್ತಿದ್ದಲ್ಲಿ ಅವರ ಪ್ರತಿಕ್ರಿಯೆ ಹೇಗಿರುತ್ತಿತ್ತು?. ಕೇವಲ ಹೆಸರುಗಳನ್ನು ಬಳಸಿಕೊಳ್ಳುವುದರಿಂದ ಸಮಾಜದಲ್ಲಿನ ಶಾಂತಿಯುತ ವಾಸ್ತವತೆಗಳನ್ನು ಬಚ್ಚಿಡಲು ಸಾಧ್ಯವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News