ಅಂಬೇಡ್ಕರ್ ಗೆ ಜನಿವಾರ ತೊಡಿಸುವ ದಿನ ದೂರವಿಲ್ಲ: ಡಾ.ಎಲ್.ಹನುಮಂತಯ್ಯ

Update: 2022-06-09 13:24 GMT

ಬೆಂಗಳೂರು, ಜೂ.9: ನಮಗಾಗಿ ಹೋರಾಟ ನಡೆಸಿದ ಮಹಾನ್ ನಾಯಕರ ವಿಚಾರಧಾರೆಗಳನ್ನು ನಾವು ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ, ಮುಂದೆ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಜನಿವಾರ ತೊಡಿಸುವ ದಿನವೂ ದೂರವಿಲ್ಲ ಎಂದು ಸಂಸದ ಡಾ.ಎಲ್.ಹನುಮಂತಯ್ಯ ತಿಳಿಸಿದರು.

ಗುರುವಾರ ನಗರದ ಗಾಂಧಿಭವನ ಸಭಾಂಗಣದಲ್ಲಿ ಭೀಮವಾದ ಪ್ರಕಾಶನ ಹಾಗೂ ಕಲಾ ಕುಸುಮ ಕ್ರಿಯೇಷನ್, ದಲಿತ ಸಂಘಟನೆಗಳ ಒಕ್ಕೂಟ ರಾಜ್ಯ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ದಲಿತ ಚೇತನ ಪ್ರೊ.ಬಿ.ಕೃಷ್ಣಪ್ಪ ಅವರ 84ನೆ ಜಯಂತಿ ಹಾಗೂ ಡಾ.ಸಿ.ಚಂದ್ರಪ್ಪ ಅವರ ‘ವೈಚಾರಿಕ ತಂದೆ ಪೆರಿಯಾರ್’ ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಸದ್ಯ ರಾಜ್ಯದಲ್ಲಿ ಪ್ರಜಾಪ್ರಭುತ್ವ ಸರಕಾರ ಇದೆ ಎಂದುಕೊಂಡಿದ್ದೆ. ಆದರೆ, ಪಠ್ಯ ಪರಿಷ್ಕರಣೆಯಿಂದ ಸರಕಾರದ ಉದ್ದೇಶ ಬೇರೆಯದ್ದೇ ಆಗಿದೆ ಎನ್ನುವುದು ಬಹಿರಂಗಗೊಂಡಿದೆ. ಈಗಾಗಲೇ ಅವರಿಗೆ ಬೇಕಾದ ರೀತಿಯಲ್ಲಿ ವಿಷಯ ತಿರುಚಿಸಲಾಗಿದೆ. ಮುಂದೆ ಅಂಬೇಡ್ಕರ್ ಅವರು ಜನಿವಾರ ಹಾಕುತ್ತಿದ್ದರು ಎಂದು ವಾದಿಸಿ, ಅದೇ ಸತ್ಯವೆಂದು ನಂಬಿಸುತ್ತಾರೆ ಎಂದು ಹೇಳಿದರು.

ಶಾಲಾ ಪಠ್ಯ ಪುಸ್ತಕಗಳಿಂದ ಸುಳ್ಳುಗಳನ್ನು ಪ್ರಚಾರ ಮಾಡಲು ಆರಂಭಿಸಿದ್ದಾರೆ. ಅಲ್ಲದೆ, ಈ ಹಿಂದೆ ಸತ್ಯವನ್ನು ಮಾತನಾಡಲು ಅವಕಾಶ ಇತ್ತು. ಆದರೆ, ಇದೀಗ ಈ ಅವಕಾಶವೂ ಇಲ್ಲದಂತೆ ಆಗಿದೆ ಎಂದ ಅವರು ಅಂಬೇಡ್ಕರ್, ಪೆರಿಯಾರ್, ಬಸವಣ್ಣ, ಕೃಷ್ಣಪ್ಪ ಅವರು ಬ್ರಾಹ್ಮಣ್ಯದ ವಿರುದ್ಧ ಹೋರಾಟ ಮಾಡಿದ್ದಾರೆ. ಆದರೂ, ಈಗ ನಾವು ಮನುಷ್ಯ ವಿರೋಧಿ ಬ್ರಾಹ್ಮಣ್ಯದ ವಿರುದ್ಧ ಮಾತನಾಡುವಂತಿಲ್ಲ ಎಂದರು.

ಲೇಖಕ ಡಾ.ಸಿ.ಚಂದ್ರಪ್ಪ ಮಾತನಾಡಿ, ಪೆರಿಯಾರ್ ಮತ್ತು ಅಂಬೇಡ್ಕರ್ ಅವರ ಚಿಂತನೆಗಳನ್ನು ಗಟ್ಟಿಗೊಳಿಸಬೇಕಾಗಿದೆ. ಈ ಹಿಂದೆ ಶೋಷಿತ ಸಮುದಾಯಗಳ ಪರ ಧ್ವನಿಗೂಡಿಸಿದ ಹೋರಾಟಗಾರರ ಕುರಿತು ಈಗಿನ ಯುವ ಪೀಳಿಗೆಗೆ ಹೇಳಬೇಕಾಗಿದೆ. ಜತೆಗೆ ಗುಣಮಟ್ಟ ಶಿಕ್ಷಣಕ್ಕಾಗಿಯೂ ನಾವು ಸಂಘರ್ಷ ನಡೆಸಬೇಕು ಎಂದು ನುಡಿದರು.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್, ದಲಿತ ನಾಯಕ ಆರ್.ಮೋಹನ್‍ರಾಜ್, ದಲಿತ ಮಾನವ ಹಕ್ಕುಗಳ ವೇದಿಕೆಯ ರಾಜ್ಯ ಸಂಚಾಲಕ ಬಸವರಾಜ್ ಕೌತಾಳ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News