ನಾಳೆ (ಜೂ.10) ರಾಜ್ಯಸಭೆ ಚುನಾವಣೆ; 4 ಸ್ಥಾನಗಳಿಗೆ 6 ಅಭ್ಯರ್ಥಿಗಳ ಸ್ಪರ್ಧೆ
ಬೆಂಗಳೂರು, ಜೂ.9: ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಶುಕ್ರವಾರ(ಜೂ.10) ನಡೆಯುವ ಚುನಾವಣೆಯಲ್ಲಿ ಆರು ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಈ ಪೈಕಿ ಆಡಳಿತರೂಢ ಬಿಜೆಪಿ 2, ಕಾಂಗ್ರೆಸ್ ಪಕ್ಷ 1 ಸ್ಥಾನವನ್ನು ಅನಾಯಾಸವಾಗಿ ಗೆಲ್ಲಲಿದ್ದು, ನಾಲ್ಕನೆ ಸ್ಥಾನಕ್ಕಾಗಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಪೈಪೋಟಿ ಎದುರಾಗಿದೆ.
ಬಿಜೆಪಿಯಿಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್, ವಿಧಾನಪರಿಷತ್ ಮಾಜಿ ಸದಸ್ಯ ಲಹೆರ್ ಸಿಂಗ್ ಸಿರೋಯಾ, ಕಾಂಗ್ರೆಸ್ ಪಕ್ಷದಿಂದ ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್, ಮನ್ಸೂರ್ ಅಲಿ ಖಾನ್ ಹಾಗೂ ಜೆಡಿಎಸ್ ಪಕ್ಷದಿಂದ ವಿಧಾನಪರಿಷತ್ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ವಿಧಾನಸಭೆಯಲ್ಲಿ ಬಿಜೆಪಿ ಪಕ್ಷವು 119 ಸ್ಥಾನವನ್ನು ಹೊಂದಿದೆ. ಅದರ ಜೊತೆ ಸ್ಪೀಕರ್, ಬಿಎಸ್ಪಿ ಶಾಸಕ ಮಹೇಶ್ ಹಾಗೂ ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ನಾಗೇಶ್ ಬೆಂಬಲದೊಂದಿಗೆ 122 ಸ್ಥಾನಗಳನ್ನು ಹೊಂದಿದೆ. ವಿರೋಧ ಪಕ್ಷ ಕಾಂಗ್ರೆಸ್ 69 ಸ್ಥಾನಗಳ ಜೊತೆಗೆ ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಬೆಂಬಲ ದೊಂದಿಗೆ 70 ಸ್ಥಾನಗಳನ್ನು ಹೊಂದಿದೆ. ಜೆಡಿಎಸ್ ಪಕ್ಷ 32 ಸ್ಥಾನಗಳನ್ನು ಹೊಂದಿದೆ.
ರಾಜ್ಯಸಭೆಯ ಚುನಾವಣೆಯ ಗೆಲುವಿಗಾಗಿ ಅಭ್ಯರ್ಥಿಗೆ ಕನಿಷ್ಠ 45 ಮತಗಳ ಅಗತ್ಯವಿದೆ. ವಿಧಾನಸಭೆಯಲ್ಲಿರುವ ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿ ಪಕ್ಷ ಇಬ್ಬರು ಹಾಗೂ ಕಾಂಗ್ರೆಸ್ ಪಕ್ಷ ಓರ್ವ ಸದಸ್ಯನನ್ನು ಅನಾಯಾಸವಾಗಿ ಗೆಲ್ಲಿಸಿಕೊಳ್ಳಲಿದೆ. ಅಭ್ಯರ್ಥಿಯ ಗೆಲುವಿಗೆ ಅಗತ್ಯವಿರುವ ಸಂಖ್ಯಾಬಲವನ್ನು ಹೊಂದಿಲ್ಲದಿದ್ದರೂ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಕುತೂಹಲ ಕೆರಳಿಸಿದೆ.
ಬಿಜೆಪಿಯ ಮೊದಲ ಅಭ್ಯರ್ಥಿ ನಿರ್ಮಲಾ ಸೀತಾರಾಮನ್ ಹಾಗೂ ಎರಡನೆ ಅಭ್ಯರ್ಥಿ ಜಗ್ಗೇಶ್, ಕಾಂಗ್ರೆಸ್ ಪಕ್ಷದ ಮೊದಲ ಅಭ್ಯರ್ಥಿ ಜೈರಾಮ್ ರಮೇಶ್ ಗೆಲುವು ನಿರೀಕ್ಷಿತವಾಗಿದ್ದು, ನಾಲ್ಕನೆ ಸ್ಥಾನಕ್ಕಾಗಿ ಬಿಜೆಪಿಯ ಮೂರನೆ ಅಭ್ಯರ್ಥಿ ಲಹೆರ್ ಸಿಂಗ್ ಸಿರೋಯಾ, ಕಾಂಗ್ರೆಸ್ ಪಕ್ಷದ ಎರಡನೆ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಹಾಗೂ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ನಡುವೆ ತೀವ್ರ ಹಣಾಹಣಿ ನಡೆಯಲಿದೆ.
122 ಮತಗಳನ್ನು ಹೊಂದಿರುವ ಬಿಜೆಪಿ ತನ್ನ ಇಬ್ಬರು ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸಿದ ಬಳಿಕ 32 ಹೆಚ್ಚುವರಿ ಮತಗಳನ್ನು ಹೊಂದಿದೆ. ಅದೇ ರೀತಿ ಕಾಂಗ್ರೆಸ್ ಪಕ್ಷವು ತನ್ನ ಮೊದಲ ಅಭ್ಯರ್ಥಿ ಪರವಾಗಿ 45 ಮತಗಳನ್ನು ಚಲಾಯಿಸಿದ ಬಳಿಕ ಹೆಚ್ಚುವರಿ 25 ಮತಗಳನ್ನು ಹೊಂದಿದೆ. ಜೆಡಿಎಸ್ ಪಕ್ಷ 32 ಮತಗಳನ್ನು ಹೊಂದಿದೆ.
ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಪರವಾಗಿ ಜೆಡಿಎಸ್ ಪಕ್ಷದ ಎಲ್ಲ 32 ಶಾಸಕರು ಮತ ಚಲಾಯಿಸಿದರೂ ಅವರ ಗೆಲುವು ಕಷ್ಟ. ಅದೇ ರೀತಿ ಮನ್ಸೂರ್ ಅಲಿ ಖಾನ್ ಅವರಿಗೂ ಗೆಲುವಿಗೆ ಅಗತ್ಯವಿರುವಷ್ಟು ಸಂಖ್ಯಾ ಬಲ ಇಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಸರಳವಾಗಿ ನಾಲ್ಕನೆ ಸ್ಥಾನ ದಕ್ಕಿಸಿಕೊಳ್ಳುವುದು ಮೂರು ಪಕ್ಷಗಳಿಗೂ ಸವಾಲಿನ ಕೆಲಸವಾಗಿರುವ ಹಿನ್ನೆಲೆಯಲ್ಲಿ ಅಡ್ಡಮತದಾನ ಅಥವಾ ದ್ವಿತೀಯ ಪ್ರಾಶಸ್ತ್ಯದ ಮತಗಳ ಲೆಕ್ಕಾಚಾರದ ಮೇಲೆ ಬಿಜೆಪಿಯ ಲಹೆರ್ ಸಿಂಗ್, ಕಾಂಗ್ರೆಸ್‍ನ ಮನ್ಸೂರ್ ಅಲಿ ಖಾನ್ ಹಾಗೂ ಜೆಡಿಎಸ್‍ನ ಕುಪೇಂದ್ರ ರೆಡ್ಡಿ ಭವಿಷ್ಯ ನಿಂತಿದೆ.
ಬಹಿರಂಗ ಮತದಾನ: ರಾಜ್ಯಸಭೆ ಚುನಾವಣೆಯ ಮತದಾನವು ಬ್ಯಾಲೆಟ್ ಪೇಪರ್‍ನಲ್ಲಿ ಹಾಕುವುದರಿಂದ, ಶಾಸಕರು ಯಾರ ಪರವಾಗಿ ಮತ ಚಲಾಯಿಸಿದ್ದಾರೆ ಎಂಬುದನ್ನು ಆಯಾ ಪಕ್ಷದ ಏಜೆಂಟರಿಗೆ ಮತ ಪತ್ರವನ್ನು ತೋರಿಸಿ ಮತ ಪೆಟ್ಟಿಗೆಯಲ್ಲಿ ಹಾಕಬೇಕು. ಇದರಿಂದ, ಯಾರಾದರೂ ಅಡ್ಡಮತದಾನ ಮಾಡಿದರೆ ಕೂಡಲೆ ಗೊತ್ತಾಗುತ್ತದೆ.
ಈಗಾಗಲೆ, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಶಾಸಕಾಂಗ ಪಕ್ಷದ ಸಭೆಗಳನ್ನು ನಡೆಸಿ, ಯಾವ ಯಾವ ಶಾಸಕರು ಯಾವ ಅಭ್ಯರ್ಥಿಗೆ ಮೊದಲ ಹಾಗೂ ಎರಡನೆ ಪ್ರಾಶಸ್ತ್ಯದ ಮತಗಳನ್ನು ನೀಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದೆ. ಅದರಂತೆ, ಶಾಸಕರು ನಾಳೆ ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ಮತ ಚಲಾಯಿಸಬೇಕಿದೆ.
ಮತದಾನಕ್ಕೆ ಸಿದ್ಧತೆ: ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಈಗಾಗಲೆ ಮತದಾನಕ್ಕೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಬ್ಯಾಲೆಟ್ ಪೇಪರ್ ಮೂಲಕ ನಡೆಯುವ ಈ ಮತದಾನದ ಪ್ರಕ್ರಿಯೆ ಕುರಿತು ಮತಗಟ್ಟೆಯ ಒಳಗೆ ಹಾಗೂ ಹೊರಗೆ ಸೂಚನಾ ಫಲಕದಲ್ಲಿ ಅಗತ್ಯ ಮಾಹಿತಿಗಳನ್ನು ಶಾಸಕರ ಅನುಕೂಲಕ್ಕಾಗಿ ಹಾಕಲಾಗಿದೆ. ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದ್ದು, ಸಂಜೆ 5ರ ಬಳಿಕ ಮತಗಳ ಎಣಿಕೆ ಕಾರ್ಯ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ.
ವಿಧಾನಸಭೆಯಲ್ಲಿ ಸಂಖ್ಯಾಬಲ ಹೀಗಿದೆ...
ವಿಧಾನಸಭೆಯಲ್ಲಿ ಒಟ್ಟು 225 ಸ್ಥಾನಗಳ ಪೈಕಿ ಬಿಜೆಪಿ-119, ಕಾಂಗ್ರೆಸ್-69, ಜೆಡಿಎಸ್-32, ಬಿಎಸ್ಪಿ-1, ಪಕ್ಷೇತರ-2, ಸ್ಪೀಕರ್-1 ಹಾಗೂ ನಾಮನಿರ್ದೇಶಿತ ಸದಸ್ಯ-1 ಸ್ಥಾನವಿದೆ. ಈ ಪೈಕಿ ನಾಮ ನಿರ್ದೇಶಿತ ಸದಸ್ಯರಿಗೆ ರಾಜ್ಯಸಭಾ ಚುನಾವಣೆಯಲ್ಲಿ ಮತದಾನದ ಹಕ್ಕು ಇಲ್ಲ.
ವಿಧಾನಸೌಧ ಪ್ರವೇಶ ನಿರ್ಬಂಧ
ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೂ.10ರಂದು ಸಚಿವರು, ಶಾಸಕರೊಂದಿಗೆ ಆಗಮಿಸುವ ಗನ್ ಮ್ಯಾನ್(ಭದ್ರತಾ ಸಿಬ್ಬಂದಿ), ಅವರ ಆಪ್ತ ಸಹಯಕರನ್ನು ಆ ದಿನದ ಮಟ್ಟಿಗೆ ವಿಧಾನಸೌಧ ಒಳಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಅದೇ ರೀತಿ, ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ.