BBMP ಚುನಾವಣೆ; ಮೂರು ಪಕ್ಷಗಳ ಮೈತ್ರಿಕೂಟ ರಚನೆ

Update: 2022-06-09 16:35 GMT

ಬೆಂಗಳೂರು, ಜೂ.9: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ರಾಷ್ಟ ಸಮಿತಿ ಪಕ್ಷ(ಕೆಆರ್ ಎಸ್) ಮತ್ತು ಸಂಯುಕ್ತ ಜನತಾದಳ ಪಕ್ಷಗಳು ಮುಂಬರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದವು.

ಗುರುವಾರ ಪ್ರೆಸ್‍ಕ್ಲಬ್‍ನಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೇನ್, ಕೆಆರ್‍ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಮತ್ತು ಜನತಾದಳ ಸಂಯುಕ್ತ ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಅವರು ಜಂಟಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಿ, ಮುಂಬರುವ ಚುನಾವಣೆಗಳಲ್ಲಿ ಮೈತ್ರಿಕೂಟದ ಮೂಲಕ ಸ್ಪರ್ಧಿಸಲಾಗುತ್ತದೆ ಎಂದು ತಿಳಿಸಿದರು.

ಈ ಕುರಿತು ಹಲವಾರು ಸುತ್ತಿನ ಮಾತುಕತೆಗಳು ನಡೆದಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹಲವು ಸಮಾನ ಮನಸ್ಕ ಪಕ್ಷಗಳನ್ನು ಈ ಮೈತ್ರಿಕೂಟಕ್ಕೆ ಸೇರಿಸಿಕೊಳ್ಳಲಾಗುವುದು. ಇತರ ಕೆಲವು ಪಕ್ಷಗಳೊಂದಿಗೆ ಮಾತುಕತೆ ಮುಂದುವರೆದಿದೆ. ಮುಂಬರುವ ಬಿಬಿಎಂಪಿ, ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳಲ್ಲಿ ಸ್ಥಾನ ಹೊಂದಾಣಿಕೆ, ಜಂಟಿ ಪ್ರಚಾರ ಹಾಗೂ ಕನಿಷ್ಠ ಸಾಮಾನ್ಯ ಕಾರ್ಯಕ್ರಮಗಳ ಮೂಲಕ ಈ ಮೈತ್ರಿಕೂಟವನ್ನು ಮುನ್ನಡೆಸಲಾಗುವುದು ಎಂದರು. 

ಈ ಮೈತ್ರಿಕೂಟವು ಮುಂಬರುವ ವಿಧಾನಸಭೆ ಮತ್ತು ತದನಂತರದ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ರಚಿಸಲಾಗಿದ್ದು, ರಾಜ್ಯದಲ್ಲಿ ಉತ್ತಮ ಆಡಳಿತವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎಂದು ಮೂರು ಪಕ್ಷದ ನಾಯಕರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News