ಸಿಎಂ ಕೆಸಿಆರ್‌ಗೆ ಅವಮಾನ: ತೆಲಂಗಾಣ ಬಿಜೆಪಿ ವರಿಷ್ಠ, ಇತರರ ವಿರುದ್ಧ ಪ್ರಕರಣ ದಾಖಲು

Update: 2022-06-10 18:30 GMT

ಹೊಸದಿಲ್ಲಿ, ಜೂ. 10: ಜೂನ್ 2ರಂದು ನಡೆದ ತೆಲಂಗಾಣ ಸ್ಥಾಪನಾ ದಿನಾಚರಣೆಯಲ್ಲಿ ಕಿರುನಾಟಕ ಆಯೋಜಿಸಿ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಹಾಗೂ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಸರಕಾರಕ್ಕೆ ಅವಮಾನ ಮಾಡಿದ ಆರೋಪದಲ್ಲಿ ಬಿಜೆಪಿಯ ರಾಜ್ಯ ವರಿಷ್ಠ ಬಂಡಿ ಸಂಜಯ್ ಕುಮಾರ್ ಹಾಗೂ ಇತರರ ವಿರುದ್ಧ ತೆಲಂಗಾಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ರಾಜ್ಯ ಬಿಜೆಪಿ ನಾಯಕ ಜಿಟ್ಟಾ ಬಾಲಕೃಷ್ಣನ್ ರೆಡ್ಡಿ ಅವರು ಜೂನ್ 10ರಂದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಹೈದರಾಬಾದ್‌ನ ಹಯಾತ್‌ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾದ ದೂರಿನ ಆಧಾರದಲ್ಲಿ ಪೊಲೀಸರು ಕುಮಾರ್, ರೆಡ್ಡಿ, ರಾಣಿ ರುದ್ರಮ್ಮ, ದರುವು ಯೆಲ್ಲಮ್ಮ ಹಾಗೂ ಬಿಜೆಪಿಯ ಇತರ ನಾಯಕರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಟಿಆರ್‌ಎಸ್‌ನ ಸಾಮಾಜಿಕ ಮಾಧ್ಯಮದ ಸಂಚಾಲಕ ವೈ. ಸತೀಶ್ ರೆಡ್ಡಿ ಅವರು ಕಿರು ನಾಟಕದ ವೀಡಿಯೊ ದೃಶ್ಯಾವಳಿಯೊಂದಿಗೆ ಪೊಲೀಸರಿಗೆ ದೂರು ಸಲ್ಲಿಸಿದ್ದರು. ದೂರಿನಲ್ಲಿ ಅವರು ಮುಖ್ಯಮಂತ್ರಿ ಹಾಗೂ ಸರಕಾರದ ವಿರುದ್ಧ ಸುಳ್ಳು ಆರೋಪ ಮಾಡುವ ಮೂಲಕ ಸರಕಾರದ ಯೋಜನೆಗಳಿಗೆ ಮಸಿ ಬಳಿಯಲು ಸಂಘಟಕರು ಈ ವೇದಿಕೆಯನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಜನರನ್ನು ದಾರಿ ತಪ್ಪಿಸುವ ಹಾಗೂ ದ್ವೇಷವನ್ನು ಪ್ರಚೋದಿಸುವ ಉದ್ದೇಶವನ್ನು ಸಂಘಟಕರು ಹೊಂದಿದ್ದರು ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News