ರಾಜ್ಯಸಭೆ ಚುನಾವಣೆ ಫಲಿತಾಂಶ; ಅಜಯ್ ಮಾಕೆನ್‍ಗೆ ಹರ್ಯಾಣದಲ್ಲಿ ಸೋಲು

Update: 2022-06-11 02:21 GMT

ಹೊಸದಿಲ್ಲಿ: ನಾಲ್ಕು ರಾಜ್ಯಗಳಿಂದ ರಾಜ್ಯಸಭೆಯ 16 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮಹಾರಾಷ್ಟ್ರದ ಎಲ್ಲ ಮೂರು ಸ್ಥಾನಗಳನ್ನು ಬಗಲಿಗೆ ಹಾಕಿಕೊಳ್ಳುವ ಮೂಲಕ ಆಡಳಿತಾರೂಢ ಶಿವಸೇನೆ-ಕಾಂಗ್ರೆಸ್-ಎನ್‍ಸಿಪಿಗೆ ಆಘಾತ ನೀಡಿದೆ.

ಹರ್ಯಾಣದಲ್ಲಿ ಕಾಂಗ್ರೆಸ್‍ನ ಅಜಯ್ ಮಾಕೆನ್ ಅವರನ್ನು ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸೋಲಿಸುವ ಮೂಲಕ ಕಾಂಗ್ರೆಸ್‍ಗೆ ಶಾಕ್ ನೀಡಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಮೂರು ಹಾಗೂ ಕಾಂಗ್ರೆಸ್ ಒಂದು ಸ್ಥಾನ ಗೆದ್ದರೆ ರಾಜಸ್ಥಾನದಲ್ಲಿ ಕಾಂಗ್ರೆಸ್ ಮೂರು ಹಾಗೂ ಬಿಜೆಪಿ ಒಂದು ಸ್ಥಾನ ಪಡೆದಿವೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ. ಆದರೆ ಕಾಂಗ್ರೆಸ್ ಹಾಗೂ ಬಿಜೆಪಿ ಕೆಸರೆರಚಾಟ ನಡೆಸಿದ್ದು, ಚುನಾವಣಾ ಆಯೋಗಕ್ಕೂ ದೂರು ನೀಡಿವೆ.

"ಚುನಾವಣೆಗೆ ಸ್ಪರ್ಧಿಸುವುದು ಹೋರಾಟಕ್ಕೆ ಮಾತ್ರವಲ್ಲ; ಗೆಲುವಿಗಾಗಿ, ಜೈ ಮಹಾರಾಷ್ಟ್ರ" ಎಂದು ಬಿಜೆಪಿಯ ದೇವೇಂದ್ರ ಫಡ್ನವೀಸ್ ಟ್ವೀಟ್ ಮಾಡಿದ್ದಾರೆ. ರಾಜ್ಯಸಭೆಗೆ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಅವರು ನಿರಾಕರಿಸಿದ್ದರಿಂದ 24 ವರ್ಷಗಳ ಬಳಿಕ ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಚುನಾವಣೆ ನಡೆದಿತ್ತು. ಈ ಆಘಾತಕಾರಿ ಸೋಲಿನ ಬಳಿಕ, ಮಹಾ ವಿಕಾಸ ಅಗಾಡಿಯಲ್ಲಿ ಸಮನ್ವಯದ ಕೊರತೆ ಇದೆ ಎಂದು ಕಾಂಗ್ರೆಸ್ ಒಪ್ಪಿಕೊಂಡಿದೆ. ಎಲ್ಲಿ ತಪ್ಪಾಗಿದೆ ಎನ್ನುವುದನ್ನು ಅಧ್ಯಯನ ಮಾಡಲಾಗುವುದು ಎಂದು ಮಹಾರಾಷ್ಟ್ರದ ಕಂದಾಯ ಸಚಿವ ಬಾಬಾಸಾಹೇಬ್ ಥೋರಟ್ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ಒಟ್ಟು ಮೂರು ಸ್ಥಾನ ಗೆದ್ದಿದ್ದು, ಶಿವಸೇನೆಯ ಸಂಜಯ ರಾವುತ್, ಎನ್‍ಸಿಪಿಯ ಪ್ರಫುಲ್ ಪಟೇಲ್ ಮತ್ತು ಕಾಂಗ್ರೆಸ್‍ನ ಇಮ್ರಾನ್ ಪ್ರತಾಪ್‍ ಗಾರ್ಹಿ ಗೆದ್ದ ಇತರರು. ಶಿವಸೇನೆ ಶಾಸಕ ಸುಹಾಸ್ ಖಾಂಡೆ ಅವರ ಮತವನ್ನು ತಿರಸ್ಕರಿಸಿದ ಆಯೋಗದ ಕ್ರಮವನ್ನು ಶಿವಸೇನೆ ಖಂಡಿಸಿದೆ. ಬಿಜೆಪಿ ಪರವಾಗಿ ಕೇಂದ್ರ ಸಚಿವ ಪಿಯೂಷ್ ಗೋಯೆಲ್, ಮಾಜಿ ಸಚಿವ ಅನಿಲ್ ಬೋಂಡೆ ಮತ್ತು ಧನಂಜಯ್ ಮಹಾಧಿಕ್ ಗೆಲುವು ಸಾಧಿಸಿದರು.

ಮತದಾನದ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಎಂವಿಎ ಹಾಗೂ ಬಿಜೆಪಿ ಪರಸ್ಪರ ದೋಷಾರೋಪ ಮಾಡಿಕೊಂಡಿವೆ.

ಹರ್ಯಾಣದಲ್ಲಿ ಫೋಟೊ ಫಿನಿಶ್ ಫಲಿತಾಂಶ ಕಾಂಗ್ರೆಸ್‍ಗೆ ಆಘಾತ ನೀಡಿದೆ. ಅಜಯ್ ಮಾಕೆನ್ ಗೆಲುವಿಗೆ ಅಗತ್ಯ ಮತಗಳನ್ನು ಪಡೆದಿಲ್ಲ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ. ಪಕ್ಷದ ಒಬ್ಬ ಶಾಸಕ ಅಡ್ಡ ಮತದಾನ ಮಾಡಿದ್ದು, ಒಬ್ಬ ಶಾಸಕನ ಮತವನ್ನು ಅಸಿಂಧು ಎಂದು ಘೋಷಿಸಲಾಗಿದೆ.

ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಶರ್ಮಾ 23 ಪ್ರಥಮ ಪ್ರಾಶಸ್ತ್ಯದ ಮತ ಪಡೆದರೆ, 6.6 ಮತಮೌಲ್ಯದ ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ಪಡೆದರು. ಕಾಂಗ್ರೆಸ್ ಅಭ್ಯರ್ಥಿ ಅಜಯ್ ಮಾಕೆನ್ 29 ಪ್ರಥಮ ಪ್ರಾಶಸ್ತ್ಯ ಮತ ಪಡೆದರು ಎಂದು ಆಯೋಗ ಸ್ಪಷ್ಟಪಡಿಸಿದೆ.

ಕಾಂಗ್ರೆಸ್‍ನ ಒಬ್ಬ ಶಾಸಕನ ಮತ ಅಸಿಂಧುವಾಗಿದ್ದು, ಮತ್ತೊಬ್ಬ ಶಾಸಕ ಕುಲದೀಪ್ ಬಿಷ್ಣೋಯಿ ಕಾರ್ತಿಕೇಯ ಶರ್ಮಾ ಪರ ಅಡ್ಡಮತದಾನ ಮಾಡಿದ್ದಾಗಿ ಕಾಂಗ್ರೆಸ್‍ನ ಚುನಾವಣಾ ಏಜೆಂಟ್ ಕೆ.ಕೆ.ಬಾತ್ರಾ ಹೇಳಿದ್ದಾರೆ. 31 ಶಾಸಕರನ್ನು ಹೊಂದಿದ್ದರೂ, ಕಾಂಗ್ರೆಸ್ ಆಘಾತಕಾರಿ ಸೋಲು ಅನುಭವಿಸಬೇಕಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News