ರಾಜ್ಯದಲ್ಲಿ ಅಶಾಂತಿಗೆ ಕಾರಣವಾಗಿರುವ ರೋಹಿತ್ ಚಕ್ರತೀರ್ಥ ಬಂಧಿಸಿ: ರಾಮಲಿಂಗಾರೆಡ್ಡಿ

Update: 2022-06-11 13:03 GMT

ಬೆಂಗಳೂರು, ಜೂ. 11: ‘ರಾಜ್ಯ ಸರಕಾರ ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿ ದಾರಿಯಲ್ಲಿ ಹೋಗುವ ದೆವ್ವವನ್ನು ಮೈಮೇಲೆ ಎಳೆದುಕೊಂಡಿದೆ. ರೋಹಿತ್ ಚಕ್ರತೀರ್ಥಗೆ ಪರಿಷ್ಕರಣೆ ಜವಾಬ್ದಾರಿ ನೀಡಿದ ಪರಿಣಾಮ ರಾಜ್ಯದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡಿದೆ. ಹೀಗಾಗಿ ಸರಕಾರ ಕೂಡಲೇ ಆ ವ್ಯಕ್ತಿಯನ್ನು ಬಂಧಿಸಬೇಕು' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆಗ್ರಹಿಸಿದ್ದಾರೆ.

ಶನಿವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಕ್ರತೀರ್ಥ ವಿವಾದಿತ ಮನುಷ್ಯ. ಈ ವ್ಯಕ್ತಿ ನಾಡಗೀತೆಗೆ ಅಪಮಾನ ಮಾಡಿ ಕೇಂದ್ರ ಸರಕಾರದ ಹಿಂದಿ ಹೇರಿಕೆ ನಿಲುವನ್ನು ಸಮರ್ಥಿಸಿಕೊಂಡಿದ್ದ. ಈತ ವಿಕೃತ ಮನಸ್ಸಿನ ಮನುಷ್ಯ ಇಂತಹವರನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿದರೆ ಏನಾಗುತ್ತದೆ ಎಂಬುದಕ್ಕೆ ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳೇ ಸಾಕ್ಷಿ' ಎಂದು ವಾಗ್ದಾಳಿ ನಡೆಸಿದರು.

‘ಬಿಜೆಪಿ ಸರಕಾರ ಪಠ್ಯಪುಸ್ತಕ ಪರಿಷ್ಕರಣೆ ಹೆಸರಲ್ಲಿ ಇತಿಹಾಸದ ಮೇಲೆ ಅತ್ಯಾಚಾರ ನಡೆಸುತ್ತಿದೆ. ಇದರ ವಿರುದ್ಧ ಮಠಾಧೀಶರು, ಸಾಹಿತಿಗಳು, ಚಿಂತಕರು ಎಲ್ಲರೂ ವಿರೋಧ ವ್ಯಕ್ತಪಡಿಸಿದರೂ ದಪ್ಪ ಚರ್ಮದ ಸರಕಾರಕ್ಕೆ ತಾಗುತ್ತಿಲ್ಲ. ಬಸವಣ್ಣನವರ ಬಗ್ಗೆ ಇತಿಹಾಸ ತಿರುಚಿ ಬರೆದರೂ, ಮುಖ್ಯಮಂತ್ರಿ ಬೊಮ್ಮಾಯಿ ಅವರು ಚಕಾರ ಎತ್ತುತ್ತಿಲ್ಲ. ಆ ಮೂಲಕ ತಮಗೆ ಅಧಿಕಾರವೇ ಮುಖ್ಯ ಉಳಿದೆಲ್ಲವೂ ಗೌಣ ಎಂಬಂತೆ ವರ್ತಿಸುತ್ತಿದ್ದಾರೆ' ಎಂದು ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು.

‘ಬಿಜೆಪಿಯವರು ತಾವು ಸುಸಂಸ್ಕೃತರು ಹಿಂದೂಧರ್ಮದ ರಕ್ಷಕರು ಎಂದು ಹೇಳಿಕೊಳ್ಳುತ್ತಾರೆ. ಆದರೆ ಇಷ್ಟೆಲ್ಲ ಅನ್ಯಾಯ ಆದರೂ ಅಧಿಕಾರದ ಆಸೆಗೆ ಮೌನ ವಹಿಸಿದ್ದಾರೆ. ಇವರಿಗೆ ಇದನ್ನೆಲ್ಲ ಕಲಿಸಿದವರು ಆರೆಸ್ಸೆಸಿನವರು. ಬಿಜೆಪಿ ನಾಯಕರು ಮಾತೆತ್ತಿದರೆ ಆರೆಸ್ಸೆಸ್ ಎಂದು ಹೇಳುತ್ತಾರೆ. ಪಠ್ಯಪುಸ್ತಕ ಪರಿಷ್ಕರಣೆಗೆ ಸರಕಾರ ಆದೇಶವಿಲ್ಲದಿದ್ದರೂ ಇವರು ಪಠ್ಯ ಪರಿಷ್ಕರಣೆ ಮಾಡಿದ್ದಾರೆ. ಇಷ್ಟೆಲ್ಲ ಅನಾಹುತಕ್ಕೆ ಶಿಕ್ಷಣ ಸಚಿವ ನಾಗೇಶ್ ಅವರೆ ಕಾರಣವಾಗಿದ್ದು, ಅವರು ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು' ಎಂದು ಆಗ್ರಹಿಸಿದರು.

‘ದೇಶಭಕ್ತಿಯ ಬಗ್ಗೆ ಮಾತನಾಡುವ ಆರೆಸ್ಸೆಸ್‍ನವರು ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲಿ ಹೋಗಿದ್ದರು? ಆರೆಸ್ಸೆಸ್‍ನ ಒಂದೇ ಒಂದು ನರಪಿಳ್ಳೆಯೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ. ಸಾವರ್ಕರ್ ಸ್ವಾತಂತ್ಯ್ರ ಹೋರಾಟದಲ್ಲಿ ಭಾಗವಹಿಸುವುದಿಲ್ಲ ಎಂದು ಬ್ರಿಟಿಷರಿಗೆ ಮುಚ್ಚಳಿಕೆ ಪತ್ರವನ್ನು ಬರೆದು ಕೊಟ್ಟಿದ್ದರು. ದೇಶದ ವಿರುದ್ಧವೇ ಬ್ರಿಟಿಷ್ ಸೈನ್ಯಕ್ಕೆ ಜನರನ್ನು ಸೇರಿಸುವ ಮೂಲಕ ಅವರನ್ನು ಮತ್ತಷ್ಟು ಗಟ್ಟಿ ಮಾಡಿದ್ದೇ ಇದೇ ಸಾವರ್ಕರ್ ಎಂದು ರಾಮಲಿಂಗಾರೆಡ್ಡಿ ಟೀಕಿಸಿದರು.

‘ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿ ಆರೆಸ್ಸೆಸ್, ಸಂಘ ಪರಿವಾರದ ವಿಚಾರಧಾರೆಗಳನ್ನು ಮಕ್ಕಳ ತಲೆಯಲ್ಲಿ ತುಂಬಲು ಮುಂದಾಗಿರುವ ಬಿಜೆಪಿ ಸರಕಾರದ ಕ್ರಮವನ್ನು ಖಂಡಿಸಿ ರಾಜ್ಯದ ಜನತೆ ಎದ್ದು ನಿಲ್ಲಬೇಕು' ಎಂದು ಕರೆ ನೀಡಿದ ರಾಮಲಿಂಗಾರೆಡ್ಡಿ, ‘ಜೆಡಿಎಸ್ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳದಿರಲು ಕಾಂಗ್ರೆಸ್ ತೀರ್ಮಾನಿಸಿದೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News