ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಸಿಸಿಟಿವಿ ಅಳವಡಿಕೆ ವೇಳೆ ಬಿಜೆಪಿ ಮುಖಂಡನಿಂದ ಪೊಲೀಸರ ಕರ್ತವ್ಯಕ್ಕೆ ಅಡ್ಡಿ; ಆರೋಪ

Update: 2022-06-11 12:57 GMT

ಬೆಂಗಳೂರು, ಜೂ.11: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಸಂಬಂಧ ಕಾನೂನು ಬಾಹಿರ ಚಟುವಟಿಕೆಗಳಿಗೆ ಅಸ್ಪದ ನೀಡದೆ, ಎಚ್ಚರಿಕೆವಹಿಸುವ ಸಲುವಾಗಿ ಪೊಲೀಸರು ಸಿಸಿಟಿವಿ ಅಳವಡಿಕೆಗೆ ಮುಂದಾದ ವೇಳೆ ಬಿಜೆಪಿ ನಾಯಕ ಸೇರಿದಂತೆ ಸ್ಥಳೀಯರು ಅಡ್ಡಿಪಡಿಸಿದ ಗಂಭೀರ ಆರೋಪ ಕೇಳಿಬಂದಿದೆ.

ಶನಿವಾರ ಬೆಳಗ್ಗೆ ಇಲ್ಲಿನ ಈದ್ಗಾ ಮೈದಾನದ ಬಳಿ ಆಗಮಿಸಿದ ಪೊಲೀಸರು, ಖಾಸಗಿ ವ್ಯಕ್ತಿಗಳಿಂದ ಸಿಸಿ ಟಿವಿ ಅಳವಡಿಕೆಗೆ ಮುಂದಾದರು. ಇದಕ್ಕಾಗಿ ಜೆಸಿಬಿ ಮೂಲಕ ಮೈದಾನದಲ್ಲಿ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದರು.

ಆಗ ಮಧ್ಯ ಪ್ರವೇಶಿಸಿದ ಬಿಜೆಪಿ ನಾಯಕ ಬಿ.ವಿ.ಗಣೇಶ್ ಸೇರಿದಂತೆ ಸ್ಥಳೀಯರು, ಈಗಲೇ ಕಾಮಗಾರಿ ನಿಲ್ಲಿಸುವಂತೆ ಪಟ್ಟು ಹಿಡಿದರು. ಈ ವೇಳೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಅಷ್ಟೇ ಅಲ್ಲದೆ, ಯಾರ ಅನುಮತಿ ಪಡೆದು ಗುಂಡಿ ತೋಡಿದ್ದಿರಿ ಎಂದು ಪ್ರಶ್ನಿಸಿದಲ್ಲದೆ, ಇಷ್ಟು ದಿನ ಇಲ್ಲದ ಸಿಸಿ ಕ್ಯಾಮೆರಾ ಈಗ ಏಕೆ?. ಮುಸ್ಲಿಮರ ರಕ್ಷಣೆಗೆ ಜನಪ್ರತಿನಿಧಿಗಳು ಮುಂದಾಗಿದ್ದಾರೆಯೇ. ಈ ಕಾಮಗಾರಿಗೂ ಬಿಬಿಎಂಪಿಗೂ ಸಂಬಂಧಿ ಇಲ್ಲ ಎಂದು ಕೂಗಾಡಿದರು.

ಇದಕ್ಕೆ ಉತ್ತರಿಸಿದ ಪೊಲೀಸರು, ಯಾವುದೇ ಕಾನೂನು ಬಾಹಿರ ಚಟುವಟಿಕೆಗಳ ನಡೆಯದಂತೆ ಎಚ್ಚರಿಕೆವಹಿಸಲು ಸಿಸಿಟಿವಿ ಅಳವಡಿಕೆ ಮಾಡುತ್ತಿದ್ದೇವೆ.ಇದರಿಂದ ಸ್ಥಳೀಯರಿಗೆ ಅನುಕೂಲವಾಗಲಿದೆ. ಯಾವುದೇ ಘಟನೆಗಳು ನಡೆಯದಂತೆ ಎಚ್ಚರಿಕೆವಹಿಸಬೇಕು. ಇದಕ್ಕೆ ವಿರೋಧ ವ್ಯಕ್ತಪಡಿಸುವ ಕ್ರಮ ಸರಿಯಲ್ಲ ಎಂದರು.

ಆದರೂ, ಪಟ್ಟುಬಿಡದ ಸ್ಥಳೀಯರು ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಬರಲಿ ಎಂದರು. ಅಲ್ಲದೆ, ಇಲ್ಲಿ ಆಟವಾಡಲು ಭಯದ ವಾತಾವರಣ ಇದೆ. ವಾಹನಗಳನ್ನು ನಿಲ್ಲಿಸಲು ಸಮಸ್ಯೆ ಇದೆ. ಇನ್ನೂ, ಜಯ ಚಾಮರಾಜೇಂದ್ರ ನಿರ್ಮಿಸಿದ ಆಟದ ಮೈದಾನ ಇದಾಗಿದೆ ಎಂದು ಹೇಳಿದರು.

ಬಳಿಕ ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಅಧಿಕಾರಿಗಳು, ಮೇಲ್ಭಾಗದಿಂದಲೇ ಸಿಸಿಟಿವಿ ತಂತಿ ಅಳವಡಿಕೆ ಮಾಡಲಾಗುವುದು. ಮೈದಾನದಲ್ಲಿ ಹಳ್ಳ ಮಾಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ ಹಿನ್ನೆಲೆ ಸ್ಥಳೀಯರು ಜಾಗ ಖಾಲಿ ಮಾಡಿದ ಪ್ರಸಂಗ ಜರುಗಿತು.

ಮೈದಾನದಲ್ಲಿ ಕ್ಯಾಮೆರಾ: ಚಾಮರಾಜಪೇಟೆ ಈದ್ಗಾ ಮೈದಾನದ ವಿವಾದ ಇನ್ನೂ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಬಿಬಿಎಂಪಿ ಸಮನ್ವಯದೊಂದಿಗೆ ಪೊಲೀಸ್ ಇಲಾಖೆ ವಿವಾದಿತ ಸ್ಥಳದ ಸುತ್ತ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ವಿವಾದಿತ ಪ್ರದೇಶದ ಸುತ್ತಲೂ ಹನ್ನೆರಡು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಈ ಕ್ಯಾಮರಾಗಳು 4 ಎಂಪಿ ಜೂಮ್ ಮತ್ತು 4 ಕೆ ಸ್ಪಷ್ಟತೆ ವೈಶಿಷ್ಟ್ಯದೊಂದಿಗೆ ಇರಲಿದೆ. ಮೈದಾನದ ಆವರಣದಲ್ಲೇ ಮಾನಿಟರ್ ಗೆ ಸಂಪರ್ಕಗೊಳ್ಳುತ್ತದೆ. ಚಾಮರಾಜಪೇಟೆ ಪೊಲೀಸ್ ಠಾಣೆಯು ಸಿಸಿಟಿವಿ ದೃಶ್ಯಗಳಿಗೆ ಪ್ರವೇಶವನ್ನು ಹೊಂದಿರುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News