ದಲಿತ ಕವಿ ಇಲ್ಲದಿದ್ದರೆ, ಕಸ್ತೂರಿ ಮಾತ್ರೆ ಮಾರುತ್ತಿದ್ದೆ: ಸಚಿವ ವಿ.ಸೋಮಣ್ಣ

Update: 2022-06-11 15:55 GMT

ಬೆಂಗಳೂರು, ಜೂ.11: ಹಿರಿಯ ಡಾ.ಸಿದ್ದಲಿಂಗಯ್ಯ ಅವರು ಇಲ್ಲದೆ ಇದ್ದರೆ ನಾನು ಇಂದಿಗೂ ಕಸ್ತೂರಿ ಮಾತ್ರೆ ಮಾರಬೇಕಿತ್ತು ಎಂದು ಸಚಿವ ವಿ.ಸೋಮಣ್ಣ ನೆನಪು ಮಾಡಿಕೊಂಡರು.

ಶನಿವಾರ ನಗರದ ಕಲಾಗ್ರಾಮದಲ್ಲಿ ನಡೆದ ದಲಿತ ಕವಿ ಡಾ.ಸಿದ್ದಲಿಂಗಯ್ಯ ಅವರ ಮೊದಲನೆ ವರ್ಷದ ಪುಣ್ಯಸ್ಮರಣೆಯಲ್ಲಿ ಮಾತನಾಡಿದ ಅವರು, ನಾನು ಮೊದಲು ಬೆಂಗಳೂರಿಗೆ ಬಂದಾಗ ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಕಸ್ತೂರಿ ಮಾತ್ರೆ ಮಾರಾಟ ಮಾಡುತ್ತಿದ್ದೆ. ಆ ದಿನಗಳಲ್ಲಿ ನನಗೆ ಪರಿಚಯವಾದ ಸಿದ್ದಲಿಂಗಯ್ಯ ಅವರು, ನನ್ನನ್ನು ಒಬ್ಬ ವ್ಯಕ್ತಿಯ ಬಳಿಗೆ ಕರೆದೊಯ್ದರು. 

ಅವರ ನೆರವಿನಿಂದ ನಾನು ಈಗ ಎಲ್ಲವೂ ಆಗಿದ್ದೇನೆ. ನನ್ನ ಪ್ರಾಣ ಇರುವವರೆಗೆ ಸಿದ್ದಲಿಂಗಯ್ಯ ಅವರ ಕುಟುಂಬದ ನೆರವಿಗೆ, ಅವರ ಕನಸಿನ ಸಾಕಾರದ ಕ್ಷಣಗಳಿಗೆ ನಾನು ಸಾಕ್ಷಿಯಾಗುತ್ತೇನೆ ಎಂದು ನುಡಿದರು.

ಜನರ ಕಿವಿಯಾಗಿ ಗುರುತಿಸಿಕೊಂಡು, ಬಡವರ ಪರವಾಗಿ ತಮ್ಮ ಜೀವನದ ದಿನಗಳನ್ನು ಕಳೆದ ದಲಿತ ಕವಿ ಡಾ.ಸಿದ್ದಲಿಂಗಯ್ಯ ಅವರನ್ನು ನೆನಪಿಸಿಕೊಳ್ಳಲು ಒಂದು ಸ್ಮಾರಕ ನಿರ್ಮಾಣವಾಗಬೇಕಿದೆ. ಇದಕ್ಕಾಗಿ ಸರಕಾರದಿಂದ 1 ಕೋಟಿ ಅನುದಾನ ಕೊಡಿಸುವುದು ನಮ್ಮ ಜವಾಬ್ದಾರಿ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ಮುನಿರತ್ನ ಮಾತನಾಡಿ, ಸಿದ್ದಲಿಂಗಯ್ಯ ಅವರು ನನ್ನ ಅಣ್ಣನಂತಿದ್ದರು. ಅಂತಹವರಿಗೆ ಕೊನೆಯ ಕ್ಷಣದಲ್ಲಿ ಒಂದಷ್ಟು ಗೌರವ ಸಲ್ಲಿಸಿದ್ದೇವೆ ಎಂಬ ಹೆಮ್ಮೆಯಿದೆ. ಆದರೆ, ಮುಂದಿನ ದಿನಗಳಲ್ಲಿ ಅವರ ಸ್ಮಾರಕ ನಿರ್ಮಾಣ ಮತ್ತು ಸೋಮಣ್ಣ ಅವರು ಹೇಳಿದಂತೆ ಸ್ಟಡಿ ಸೆಂಟರ್ ನಿರ್ಮಾಣಕ್ಕೆ ನನ್ನ ಸಂಪೂರ್ಣ ಸಹಕಾರವಿದೆ ಎಂದರು.

ಕಾರ್ಯಕ್ರಮದಲ್ಲಿ ಸಿದ್ದಲಿಂಗಯ್ಯ ಅವರ ನೆನಪಿನಲ್ಲಿ ಡಾ. ಬ್ಯಾಡರಹಳ್ಳಿ ಶಿವರಾಜು ಮತ್ತು ಕವಿ ಮುದಲ್ ವಿಜಯ್ ಅವರ ಸಂಪಾದಕತ್ವದಲ್ಲಿ ಹೊರತಂದಿರುವ ಸಾವಿರಾರು ದನಿಗಳು ಪುಸ್ತಕ ಲೋಕಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕೊಂಡಜ್ಜಿ ಮೋಹನ್, ಸಾಹಿತಿ ಶೂದ್ರ ಶ್ರೀನಿವಾಸ್, ವಿಮರ್ಶಕ ಬೈರಮಂಗಲ ರಾಮೇಗೌಡ, ಗಾಯಕ ಜನ್ನಿ, ಕವಿ ಮುದಲ್ ವಿಜಯ್, ಬ್ಯಾಡರಹಳ್ಳಿ ಶಿವರಾಜ್, ಸಿದ್ದಲಿಂಗಯ್ಯ ಪುತ್ರಿ ಡಾ. ಮಾನಸಾ ಸಿದ್ದಲಿಂಗಯ್ಯ, ಸಹೋದರ ಶಿವಶಂಕರ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News