ಈದ್ಗಾ ಮೈದಾನ ವಿವಾದ | ರಾಜ್ಯ ಸರಕಾರಕ್ಕೆ ದಾಖಲೆಗಳನ್ನು ಸಲ್ಲಿಸಲು ನಿರ್ಧಾರ: ಶಾಸಕ ಝಮೀರ್ ಅಹ್ಮದ್ ಖಾನ್

Update: 2022-06-11 16:01 GMT

ಬೆಂಗಳೂರು, ಜೂ.11: ಚಾಮರಾಜಪೇಟೆ ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ವಿವಾದವನ್ನು ಇತ್ಯರ್ಥಗೊಳಿಸಲು, ವಕ್ಫ್ ಆಸ್ತಿಯಾಗಿರುವ ಈ ಜಾಗದ ದಾಖಲಾತಿಗಳನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ತಿಳಿಸಿದರು.

‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರ ಮುಂದೆ ದಾಖಲಾತಿಗಳನ್ನು ಇಟ್ಟು, ಈ ಜಾಗ ವಕ್ಫ್ ಬೋರ್ಡ್‍ಗೆ ಸೇರಿದ್ದು, ಬಿಬಿಎಂಪಿಯ ಆಸ್ತಿಯಲ್ಲ ಎಂದು ಸಾಬೀತುಪಡಿಸಲು ಮುಸ್ಲಿಮ್ ಮುಖಂಡರ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.

ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ, ಸೆಂಟ್ರಲ್ ಮುಸ್ಲಿಮ್ ಅಸೋಸಿಯೇಷನ್(ಸಿಎಂಎ) ಕಾರ್ಯದರ್ಶಿ ಝಹೀರ್ ಅಹ್ಮದ್, ಉಪಾಧ್ಯಕ್ಷ ಜಾವೇದ್ ಅಹ್ಮದ್ ಖಾನ್, ಜಾಮಿಯಾ ಮಸ್ಜಿದ್‍ನ ಕಾರ್ಯದರ್ಶಿ ನೂರುಲ್ ಅಮೀನ್, ಮೌಲಾನ ಮಕ್ಸೂದ್ ಇಮ್ರಾನ್ ರಶಾದಿ, ಅಬ್ದುಲ್ ರಝಾಕ್ ಖಾನ್ ಸೇರಿದಂತೆ ಇನ್ನಿತರ ಮುಖಂಡರ ಜೊತೆ ಶುಕ್ರವಾರ ಜಾಮಿಯಾ ಮಸೀದಿಯಲ್ಲಿ ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಈದ್ಗಾ ವಿಚಾರದಲ್ಲಿ ಬಿಬಿಎಂಪಿ ಅಧಿಕಾರಿಗಳು ಪದೇ ಪದೇ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಅದರ ಬದಲಾಗಿ, ಸೆಂಟ್ರಲ್ ಮುಸ್ಲಿಮ್ ಅಸೋಸಿಯೇಷನ್(ಸಿಎಂಎ) ದಾಖಲಿಸಿದ್ದ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳು ನೀಡಿರುವ ತೀರ್ಪುಗಳನ್ನು ಪರಿಶೀಲಿಸಿ, ಕಾನೂನು ಚೌಕಟ್ಟಿನಲ್ಲಿ ತೀರ್ಮಾನ ತೆಗೆದುಕೊಳ್ಳಲಿ ಎಂದು ಅವರು ಹೇಳಿದರು.

ಪದೇ ಪದೇ ಚಾಮರಾಜಪೇಟೆ ಈದ್ಗಾ ಮೈದಾನವನ್ನು ವಿವಾದಕ್ಕೆ ಒಳಪಡಿಸುವ ಕೃತ್ಯಕ್ಕೆ ಕಡಿವಾಣ ಹಾಕಲು ಹಾಗೂ ತಪ್ಪು ಹೇಳಿಕೆಗಳನ್ನು ನೀಡುವ ಮೂಲಕ ಗೊಂದಲ ಸೃಷ್ಟಿಸುತ್ತಿರುವ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಯನ್ನು ಒತ್ತಾಯಿಸುತ್ತೇನೆ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News