ಬೆಂಗಳೂರು | ಪೊಲೀಸರೊಂದಿಗೆ ಮುಸ್ಲಿಮ್ ಧರ್ಮಗುರುಗಳ ಸಭೆ: ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

Update: 2022-06-11 16:48 GMT

ಬೆಂಗಳೂರು, ಜೂ.11: ಪ್ರವಾದಿ ಮುಹಮ್ಮದರ ಕುರಿತು ವಿವಾದಿತ ಹೇಳಿಕೆ, ಮುಸ್ಲಿಮರ ಬಗ್ಗೆ ಪ್ರಚೋದನಕಾರಿ ಬಹಿರಂಗ ಹೇಳಿಕೆ ನೀಡುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳವಂತೆ ಮುಸ್ಲಿಮ್ ಧರ್ಮದ ಗುರುಗಳು, ವಿದ್ವಾಂಸರು ಸೇರಿದಂತೆ ಅಲ್ಪಸಂಖ್ಯಾತರ ಧಾರ್ಮಿಕ ಗುರುಗಳು ಆಗ್ರಹಿಸಿದರು.

ಶನಿವಾರ ನಗರದ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರೊಂದಿಗೆ ಸಭೆ ನಡೆಸಿ, ಪ್ರಸ್ತಾಪಿಸಿದ ಮುಸ್ಲಿಮ್ ಧರ್ಮಗುರುಗಳು, ಪ್ರವಾದಿ ಮುಹಮ್ಮದರ ಕುರಿತು ಬಿಜೆಪಿ ಇಬ್ಬರು ನಾಯಕರು ನೀಡಿರುವ ಹೇಳಿಕೆ ಖಂಡನೀಯ. ಇದನ್ನು ವಿರೋಧಿಸಿ ಎಲ್ಲರೂ ಸಂವಿಧಾನದಡಿ ಪ್ರತಿಭಟಿಸುವ ಹಕ್ಕು ಇದೆ. ಆದರೆ, ಕೆಲವರು ಇದನ್ನೆ ನೆಪ ಮಾಡಿಕೊಂಡು ಮುಸ್ಲಿಮರನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದಿಸುತ್ತಿದ್ದು, ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು.

ಜೊತೆಗೆ, ಮುಸ್ಲಿಮರ ಮೇಲೆ ಉದ್ದೇಶಪೂರ್ವಕವಾಗಿ ದಾಳಿ, ಹೇಳಿಕೆ ನೀಡುತ್ತಿರುವ ಗುಂಪುಗಳ ಮೇಲೂ ಕಾನೂನುರೀತ್ಯಾ ಕ್ರಮ ಜರುಗಿಸಿ, ಯಾವುದೇ ಘರ್ಷಣೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಬಳಿಕ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಿಟಿ ಮಾರುಕಟ್ಟೆಯ ಜಾಮಿಯಾ ಮಸೀದಿ ಮೌಲಾನ ಮಖ್ಸೂದ್ ಇಮ್ರಾನ್ ರಶಾದಿ, ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಕ್ಷುಲ್ಲಕ ಕಾರಣಗಳಿಗೆ ಹಾಗೂ ಉದ್ದೇಶಪೂರ್ವಕವಾಗಿ ನಡೆಸುತ್ತಿರುವ ದಾಳಿಗಳ ಕುರಿತು ಪೊಲೀಸರ ಗಮನಕ್ಕೆ ತರಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದೇವೆ ಎಂದು ಹೇಳಿದರು.

ಯಾರನ್ನು ಗುರಿಯಾಗಿಸಿಕೊಂಡು ದಾಳಿ, ಟೀಕೆ ಮಾಡುವುದು ಸರಿಯಲ್ಲ. ಇಲ್ಲಿ ಎಲ್ಲರಿಗೂ ಸಮಾನ ಹಕ್ಕು ಇದೆ. ಈ ಸಂಬಂಧ ವಿವಾದ ಎಬ್ಬಿಸಿ ಕೋಮುಗಲಭೆ, ಪ್ರಚೋದಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸರಲ್ಲಿ ಮನವಿ ಮಾಡಲಾಗಿದೆ ಎಂದರು.

ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದೆ. ಆದರೆ, ಕರ್ನಾಟಕದಲ್ಲಿ ಅಂತಹ ಯಾವುದೇ ಘಟನೆಗಳು ನಡೆದಿಲ್ಲ. ಜೊತೆಗೆ, ಯಾವುದೇ ರೀತಿಯಲ್ಲಿ ಕಾನೂನು ಸಹಕಾರ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ನಾವು ತಯಾರಿಗಿದ್ದೇವೆ.

-ಪ್ರತಾಪ್ ರೆಡ್ಡಿ, ನಗರ ಪೊಲೀಸ್ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News