ನ್ಯಾಯವಾದಿ ಕೆ.ಎನ್.ಜಗದೀಶ್ ಜನತಾ ಪಾರ್ಟಿ ಸೇರ್ಪಡೆ
Update: 2022-06-12 20:01 IST
ಬೆಂಗಳೂರು, ಜೂ.12: ಹಿರಿಯ ನ್ಯಾಯವಾದಿ, ಹೋರಾಟಗಾರ ಕೆ.ಎನ್.ಜಗದೀಶ್ ಕುಮಾರ್ ಅಧಿಕೃತವಾಗಿ ಜನತಾ ಪಾರ್ಟಿ ಕರ್ನಾಟಕ ರಾಜ್ಯ ಪಕ್ಷಕ್ಕೆ ಸೇರ್ಪಡೆಯಾದರು.
ರವಿವಾರ ಮಾಜಿ ಸಚಿವೆರೂ ಆದ ಪಾರ್ಟಿಯ ಅಧ್ಯಕ್ಷೆ ಬಿ.ಟಿ.ಲಲಿತಾ ನಾಯ್ಕ್ ಅವರ ಸಮ್ಮುಖದಲ್ಲಿ ಜನತಾ ಪಾರ್ಟಿಗೆ ಸೇರ್ಪಡೆಯಾಗಿ, ಅಧಿಕೃತ ದಾಖಲೆ ಪತ್ರ ಪ್ರದರ್ಶಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಪಕ್ಷದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಎನ್.ನಾಗೇಶ್, ಹೋರಾಟದ ಮೂಲಕವೇ ಬಂದಿರುವ ಜಗದೀಶ್ ಅವರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಸಂತಸದ ಸಂಗತಿ. ಅವರು ಈ ಪಕ್ಷದ ಕಾರ್ಯಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಮುಂಬರುವ ದಿನಗಳಲ್ಲಿ ಈ ಪಕ್ಷವನ್ನು ಅಧಿಕಾರಕ್ಕೆ ತರಲು ಸ್ಥಳೀಯ ಮಟ್ಟದಿಂದ ಸಂಘಟಿಸಲಾಗುವುದು. ಇನ್ನೂ, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಹೇಳಿದರು.